ವಿತ್ತೀಯ ಶಿಸ್ತು ಮುಖ್ಯ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ (ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ, ಯುವಾನಿಧಿ) ಯೋಜನೆಗಳ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಯಾವುದೇ 'ಉಚಿತ' ಯೋಜನೆಗಳು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಬಾರದು, ಆರ್ಥಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿಲ್ಲ, ಶಾಸಕರ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ ಎಂಬ ಆಕ್ಷೇಪಗಳು ದೊಡ್ಡದನಿಯಲ್ಲೇ ಕೇಳಿಬಂದವು ಮತ್ತು ಸರ್ಕಾರ ಕಾಲಕಾಲಕ್ಕೆ ಇದಕ್ಕೆ ಸಮಜಾಯಿಷಿ ನೀಡುತ್ತಲೇ ಬಂದಿದೆ ಮತ್ತು ಗ್ಯಾರಂಟಿ ಯೋಜನೆಗಳಿಂದಾಗಿ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಪ್ರತಿಪಾದಿಸಿದೆ.
ಮಹಾಲೇಖಪಾಲರ (ಸಿಎಜಿ) ವರದಿ ಪಂಚ ಗ್ಯಾರಂಟಿಗಳನ್ನು ತರ್ಕಬದ್ಧಗೊಳಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದು, ಸಂಪನ್ಮೂಲಗಳ ಮೇಲೆ ಒತ್ತಡ ಉಂಟಾಗುವ ಎಚ್ಚರಿಕೆಯನ್ನೂ ನೀಡಿದೆ. ಉಚಿತ ಕೊಡುಗೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳ ಮೇಲಿನ ವೆಚ್ಚ ಗಣನೀಯವಾಗಿ ಕಡಿಮೆಯಾಗಿದೆ, ಆರ್ಥಿಕ ಅಭಿವೃದ್ಧಿಯ ವೇಗ ತಗ್ಗಿದೆ ಎಂದು ಹೇಳಿರುವ ಸಿಎಜಿ ವರದಿ ಹಲವು ಗಂಭೀರ ಸಂಗತಿಗಳತ್ತ ಬೊಟ್ಟು ಮಾಡಿದೆ. ಮುಖ್ಯವಾಗಿ, ರಾಜ್ಯದ ವಿತ್ತೀಯ ಕೊರತೆ ೨೦೨೨-೨೩ ರಲ್ಲಿ ೪೬,೬೨೩ ಕೋಟಿ ರೂಪಾಯಿ ಇದ್ದದ್ದು ೨೦೧೩-೨೪ರಲ್ಲಿ ೬೫,೫೨೨ ಕೋಟಿ ರೂ.ಗೆ ಏರಿಕೆಯಾಗಿದೆ. ಖಾತರಿ ಯೋಜನೆಗಳು ಮತ್ತು ಅದರಿಂದ ಉಂಟಾಗುವ ಕೊರತೆಗಳನ್ನು ನೀಗಿಸಲು ರಾಜ್ಯವು ೬೩ ಸಾವಿರ ಕೋಟಿ ರೂ. ಸಾಲ ಪಡೆದುಕೊಂಡಿತ್ತು. ಇದು ಮುಂದಿನ ದಿನಗಳಲ್ಲಿ ಮರುಪಾವತಿ ಹೊರೆಯನ್ನು ಹೆಚ್ಚಿಸಲಿದೆ. ಜತೆಗೆ, ಬಡ್ಡಿ ಹೊರೆಯು ಅಗಾಧವಾಗಿ ಹೆಚ್ಚುತ್ತಿದೆ. ಇದೆಲ್ಲವೂ ಸಂಪನ್ಮೂಲಗಳ ಮೇಲೆ ಒತ್ತಡ ಸೃಷ್ಟಿಸುತ್ತಿದೆ ಎಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಿಎಜಿ ಸಲಹೆಗಳನ್ನು ಗಂಭೀರವಾಗಿ ಪರಾಮರ್ಶಿಸುವುದು ಸೂಕ್ತ. ಅಸ್ತಿತ್ವದಲ್ಲಿರುವ ಸಹಾಯಧನಗಳನ್ನು ಇನ್ನಷ್ಟು ತರ್ಕಬದ್ಧಗೊಳಿಸುವ ಅಗತ್ಯವೂ ಇದೆ.
ಯಾವುದೇ ಯೋಜನೆಗಳು ರಾಜ್ಯದ ವಿತ್ತೀಯ ವ್ಯವಸ್ಥೆಯನ್ನು ಕದಡಬಾರದು. ಜನಸಾಮಾನ್ಯರಿಗೆ ಸೌಲಭ್ಯಗಳನ್ನು ತಲುಪಿಸಬೇಕು ಮತ್ತು ಅನುಕೂಲಗಳನ್ನು ಒದಗಿಸಬೇಕು ಎಂಬ ಆಶಯ ಉತ್ತಮವಾದದ್ದೇ. ಆದರೆ, ಇದರ ಜಾರಿಯ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು. ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣವನ್ನು ಹೆಚ್ಚಿಸುತ್ತ, ಮತ್ತೊಂದೆಡೆ ಅಭಿವೃದ್ಧಿ ಕಾರ್ಯಗಳನ್ನು ಮೊಟಕುಗೊಳಿಸುತ್ತ ಉಚಿತ ಕೊಡುಗೆಗಳನ್ನು ನೀಡಿದರೆ ಮತ್ತೆ ಅದರ ಹೊರೆ ಬೊಕ್ಕಸದ ಮೇಲೆ, ಆ ಮೂಲಕ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ ಎಂಬುದು ಸಾಮಾನ್ಯ ವಿವೇಚನೆ. ಉಚಿತ ಕೊಡುಗೆಗಳಿಂದಾಗಿ ಇತರ ರಾಜ್ಯಗಳಲ್ಲಿ ಸ್ಥಿತಿ ಏನಾಗಿದೆ ಎಂಬುದರ ಸ್ಪಷ್ಟ ನಿದರ್ಶನವೂ ಕಣ್ಮುಂದೆ ಇದೆ. ಪಂಜಾಬ್ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ, ಹಿಮಾಚಲ ಪ್ರದೇಶ ಸರ್ಕಾರಿ ನೌಕರರಿಗೆ ವೇತನ ನೀಡಲು ಪರದಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮತಗಳಿಕೆಗಾಗಿ ಇಂಥ ಯೋಜನೆಗಳ ಘೋಷಣೆ ಹೆಚ್ಚಾಗಿದೆ. ಆದರೆ, ಅವು ಬೊಕ್ಕಸದ ಮೇಲೆ ಬೀರುವ ಪರಿಣಾಮವನ್ನು ಅವಲೋಕಿಸದೆ ತರಾತುರಿಯಲ್ಲಿ ಜಾರಿಗೆ ತಂದರೆ ಹಲವು ಅಪಸವ್ಯಗಳು ಸೃಷ್ಟಿಯಾಗುತ್ತವೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳಲು ಇದು ಸೂಕ್ತ ಸಮಯ. ಸಿಎಜಿ ವರದಿ ವ್ಯಕ್ತಪಡಿಸಿರುವ ಕಳವಳಗಳ ಬಗ್ಗೆ ಸೂಕ್ತ ವಿಶ್ಲೇಷಣೆ ನಡೆಸಿ, ಯೋಜನೆಗಳನ್ನು ಸರಿಪಡಿಸಲಿ ಎಂಬುದೇ ಆಶಯ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೧-೦೮-೨೦೨೫
ಚಿತ್ರ ಕೃಪೆ: ಅಂತರ್ಜಾಲತಾಣ