ವಿದೇಶದಲ್ಲಿನ ವಾಸ ಹೆತ್ತವರಿಂದ ಹಾಗೂ ಬಂದು ಮಿತ್ರರಿಂದ ದೂರವಿರೋ ವನವಾಸ!!

ವಿದೇಶದಲ್ಲಿನ ವಾಸ ಹೆತ್ತವರಿಂದ ಹಾಗೂ ಬಂದು ಮಿತ್ರರಿಂದ ದೂರವಿರೋ ವನವಾಸ!!

ಬರಹ

ನನ್ನ ಸ್ನೇಹಿತೆಯೊಬ್ಬಳಿಗೆ ೬ ತಿಂಗಳು ತುಂಬಿದಾಗ, ಮನೆಯವರೆಲ್ಲ ಸಂತೋಷದಿಂದ ಮುಂಬರೋ ಮಗುವಿನ ಕನಸು ಕಾಣೋ ಹೊತ್ತು. ಪ್ರತೀ ದಿನ ಮನೆಯವರೊಂದಿಗೆ ಇಂಟರ್‌ನೆಟ್ ಮುಖಾಂತರ ಮಾತು, ಅಮ್ಮ ಭಾರತದಿಂದ ಮಗಳಿಗೆ ಅದು ತಿನ್ನು, ಇದು ತಿನ್ನು, ಹೀಗೆ ಮಾಡು, ಹಾಗೆ ಮಾಡು ಅಂತ ಪ್ರತೀ ದಿನ ಸಲಹೆ ನೀಡುತ್ತಿದ್ದರು. ಸ್ನೇಹಿತೆಗೆ ೯ನೇ ತಿಂಗಳು ಪ್ರಾರಂಭವಾದಾಗ, ನಮ್ಮ ಅಕ್ಕ-ಪಕ್ಕದ ಸ್ನೇಹಿತರೆಲ್ಲಾ ಸೇರಿ ಸೀಮಂತ ಮಾಡೋಣ ಅಂತ ನಿರ್ಧಾರ ಮಾಡಿ ಒಂದು ಶನಿವಾರ ಗುರುತಿಸಿದ್ವಿ.

ಆ ಸಮಯದಲ್ಲಿ, ಸ್ನೇಹಿತೆ ಗಂಡನಿಗೆ ಹೆಂಡತಿಯ ಮನೆಯವ್ರಿನ್ದ ಸುದ್ದಿ ಮುಟ್ಟತ್ತೆ, ಹೆಂಡತಿ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಅಂತ. ಗಂಡ ಗಾಬರಿ ಆಗ್ತಾನೆ. ಈ ಪರಿಸ್ಥಿತಿ ನಲ್ಲಿ ಹೆಂಡತಿಗೆ ಈ ವಿಷಯ ತಿಳಿಸಿದ್ರೆ ಆಘಾತ ಆಗ ಬಹುದೆಂದು, ಹೆಂಡತಿಗೆ ಅವಳ ತಂದೆ ಆರೋಗ್ಯದ ಸ್ಥಿತಿ ತಿಳಿಸದೇ, ಅವಳಿಂದ ಮುಚ್ಚಿಡುತ್ತಾನೆ.

ನಮಗೆ ವಿಷಯ ತಿಳಿದರೂ, ಅವಳಿಗೆ ಹೇಳುವಂತಿಲ್ಲ. ಸೀಮಂತದ ದಿನ ಬಂದೆ ಬಿಟ್ತು. ಅಪ್ಪ ಅಲ್ಲಿ ಐ.ಸೀ.ಯು ನಲ್ಲಿ, ಅದನ್ನು ತಿಳಿಯದ ಮಗಳು ಇಲ್ಲಿ ಸೀಮಂತಕ್ಕೆ ತಯಾರಾಗ್ತಾ ಇದ್ದಾಳೆ. ಆ ದಿನ ನನಗೆ ಮನಸ್ಸಿಗೆ ತುಂಬಾ ನೋವಾಗ್ತಿತ್ತು, ನನ್ನ ಜೀವನದ ಒಂದು ಕಹಿ ಘಟನೆ ನೆನೆಸಿ ಇನ್ನೂ ನೋವು. ಸೀಮಂತದ ಸಂಭ್ರಮ-ಸಡಗರ ಮುಗಿದ ಮಾರನೆ ದಿನ ಗಂಡನಿಗೆ ತನ್ನ ಹೆಂಡತಿಯ ತಂದೆ ಸಾವಿನ ಸುದ್ದಿ ಮುಟ್ಟತ್ತೆ. ಈ ವಿಷಯವನ್ನ ಮಗಳಿಗೆ ತಿಳಿಸದೇ ಇದ್ರೆ ಹೇಗೆ ಹೇಳಿ? ಗಂಡ ಧೈರ್ಯ ಮಾಡಿ ಅವಳಿಗೆ ಈ ಘೋರ ಸಂದೇಶ ತಿಳಿಸ್ತಾನೆ.

ಪಾಪ, ಆ ಹೆಣ್ಣು ಮಗಳು ತನ್ನ ದುಃಖ ತಡೆಯಲಾರದೇ ತುಂಬಾ ಅತ್ತು, ಸಮಾಧಾನ ಮಾಡಿಕೊಳ್ತಾಳೆ. ಆದರೆ ಈ ಪರಿಸ್ಥಿತಿನಲ್ಲಿ ತಾನು ಇಲ್ಲಿಂದ ಹೊರಡೋ ಆಗಿಲ್ಲ, ತುಂಬು ಗರ್ಭಿಣಿ ಅಲ್ವೇ ಪ್ರಯಾಣಕ್ಕೆ ಕಾನೂನು ಒಪ್ಪೋದಿಲ್ಲ. ಅದರಿಂದ, ಮನಸ್ಸಿಗೆ ಸಮಾಧಾನ ತಂದುಕೊಂಡು, ಮನೆಯವರೊಂದಿಗೆ ಮಾತಾಡ್ತಾಳೆ. ಹಾಗೆ ದಿನ ಕಳೆದಂತೆ, ಮಗು ಡೆಲಿವರೀನೂ ಸುಸೂತ್ರವಾಗಿ ಮುಗಿಯತ್ತೆ. ತಾಯಿ-ಮಗು ಇಬ್ಬರು ಆರೋಗ್ಯದಿಂದ ಇದ್ದಾರೆ.

ಇನ್ನೊಂದು ನೋವಿನ ಸಂಗತಿ ಏನಂದ್ರೆ, ಈ ಪರಿಸ್ಥಿತಿಯಲ್ಲಿ ಅವಳ ತಾಯಿ ಮಗಳನ್ನು ಮತ್ತು ಮೊಮ್ಮಗಳನ್ನು ನೋಡಿ ಕೊಳ್ಳಲು, ಅಮೆರಿಕಾಕ್ಕೆ ೬ ತಿಂಗಳ ಮಟ್ಟಿಗೆ ಬರಬೇಕಾಯ್ತು . ಆ ತಾಯಿಗೆ ನನ್ನ ವಂದನೆ, ತನ್ನ ಮನಸ್ಸಿನ ನೋವನ್ನು ಸಹಿಸಿಕೊಂಡು ಇಲ್ಲಿಗೆ ಬಂದು ತನ್ನ ಮಗಳು-ಮೊಮ್ಮಗಳ ಆರೈಕೆ ಮಾಡಿದ್ದಕ್ಕೆ. ಎಷ್ಟಾದ್ರೂ, ತಾಯಿ ಕರುಳಲ್ವೇ?

ಕಳೆದ ತಿಂಗಳು, ನನ್ನ ಸ್ನೇಹಿತೆ ಮಗುವಿನೊಂದಿಗೆ ಭಾರತಕ್ಕೆ ಭೇಟಿ ನೀಡಿ, ಒಂದು ತಿಂಗಳ ನಂತರ ಮರಳಿ ಬಂದಿದ್ದಾಳೆ.

ದೇವರು ಯಾರಿಗೂ ಈ ಪರಿಸ್ಥಿತಿ ಕೊಡದಿರಲಿ ಅಂತ ಬೇಡಿಕೊಳ್ಳುತ್ತಾ....

ಲಕ್ಷ್ಮಿ