ವಿದ್ಯಾರ್ಥಿಗಳೆಂಬ ಮರುಜವಣಿಗಳು



ವಿದ್ಯಾರ್ಥಿಗಳೆಂಬ ಮರುಜವಣಿಗಳು
ಒಬ್ಬ ಅಧ್ಯಾಪಕನಾಗಿ ಖಾಲಿಯಾದ ಕಾಲೇಜು ಆವರಣಗಳು, ವಿದ್ಯಾರ್ಥಿಗಳ ಕಲರವವಿರದ ನೀರವ ಮೊಗಸಾಲೆಗಳು, ಧೂಳು ತಿನ್ನುತ್ತಿರುವ ಬೆಂಚು-ಡೆಸ್ಕ್ ಗಳನ್ನು ನೋಡುವ ಸಂದರ್ಭ ಮತ್ತೆ ಯಾವತ್ತಿಗೂ ಬಾರದಿರಲಿ ಎಂದು ಆಶಿಸುತ್ತೇನೆ. ಈಗ ಕಾಲೇಜು ಕೇವಲ ನಿಸ್ತೇಜ ಕಟ್ಟಡವಾಗಿದೆ, ಅದಕ್ಕೆ ಜೀವ ಸಂಚಾರವಾಗುವುದು ವಿದ್ಯಾರ್ಥಿಗಳೆಂಬ ಮರುಜವಣಿಗಳ ಪ್ರವೇಶವಾದಾಗ ಮಾತ್ರ.
ಈ ಸಂದರ್ಭದಲ್ಲಿ ಶ್ರೀಪಾದರಾಯರ "ಕಂಗಳಿದ್ಯಾತಕೋ ಕಾವೇರಿರಂಗನ ನೋಡದ" ಗೀತೆಯನ್ನು ಅವರ ಕ್ಷಮೆಕೋರಿ ಬದಲಾಯಿಸಿಕೊಂಡು
"ಕಾಲೇಜಿದ್ಯಾತಕೋ ವಿದ್ಯಾರ್ಥಿಗಳೇ ಇರದ|
ಶಿಕ್ಷಣದೊಳಗೆ ಮುಖ್ಯ ಮೂರುತಿ ವಿದ್ಯಾರ್ಥಿ ಕಾಣದಾ ಕಾಲೇಜಿದ್ಯಾತಕೋ.." ಎಂದು ಹಾಡುವಂತಾಗಿದೆ.
ನಿಜವಾಗಿಯೂ We miss you ಸ್ಟೂಡೆಂಟ್ಸ್, ನನ್ನ ಹನ್ನೆರಡು ವರ್ಷಗಳ ಅಧ್ಯಾಪನದಲ್ಲಿ ಇಂತಹ ಸ್ಥಿತಿ ಮೊದಲ ಬಾರಿಗೆ ಬಂದೆರಗಿತು. ಇದು ಕೇವಲ ನನ್ನೊಬ್ಬನ ಅನುಭವವಲ್ಲ, ಇಡೀ ಶೈಕ್ಷಣಿಕ ಕ್ಷೇತ್ರ ಮೊದಲ ಬಾರಿಗೆ ಈ ದುಸ್ಥಿತಿಯನ್ನು ಎದುರಿಸುವಂತಾಗಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಸತತ ಏಳು ತಿಂಗಳುಗಳ ಕಾಲ ವಿದ್ಯಾರ್ಥಿಗಳಿಲ್ಲದೇ ಕಾಲೇಜುಗಳು ಭಣಗುಟ್ಟಿದವು ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಮೂರು ತಿಂಗಳು ವಿದ್ಯಾರ್ಥಿಗಳಿಲ್ಲದ ಸ್ಥಿತಿ ಮುಂದುವರಿದಿದೆ ಇನ್ನೂ ಎಷ್ಟು ದಿವಸ ಈ ಅನಿಶ್ಚಿತತೆ ಮುಂದುವರಿಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ.
ಶಿಕ್ಷಣ ಪ್ರಕ್ರಿಯೆಯು, ವಿದ್ಯಾರ್ಥಿಗಳು, ಅಧ್ಯಾಪಕರು, ಪಠ್ಯಕ್ರಮ ಮತ್ತು ಸಮಾಜ ಎಂಬ ನಾಲ್ಕು ಅಂಶಗಳನ್ನು ಆಧರಿಸಿದೆ. ಇವುಗಳಲ್ಲಿ ವಿದ್ಯಾರ್ಥಿಗಳೇ ಪ್ರಮುಖರಾದವರು. ವಿದ್ಯಾರ್ಥಿಗಳಿಲ್ಲದ ಪ್ರಸ್ತುತದ ಶಿಕ್ಷಣ ಪ್ರಕ್ರಿಯೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಸ್ಥಿತಿ ವಿವರಿಸಲಸಾಧ್ಯ.
ನಮಗೆಲ್ಲ ತಿಳಿದಿರುವ ಹಾಗೆ ಭಾರತೀಯ ಜ್ಞಾನ ಪರಂಪರೆಯಲ್ಲಿ 'ಉಪನಿಷತ್'ಗಳು ಒಂದು ಉನ್ನತ ಸ್ಥಾನಮಾನ ಪಡೆದಿವೆ. ಉಪನಿಷತ್ ಪದವು 'ಹತ್ತಿರ ಕುಳಿತುಕೋ' ಅಥವಾ 'ಸಮೀಪದಲ್ಲಿ ಕುಳಿತುಕೊ' ಎಂಬ ಅರ್ಥವನ್ನು ಕೊಡುತ್ತದೆ. ಅಂದರೆ ಜ್ಞಾನಿಯಾದ ಗುರುವಿನ ಬಳಿ ಕುಳಿತು ಜ್ಞಾನವನ್ನು ಹೊಂದು ಎಂಬುದಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಜರುಗುತ್ತಿರುವ ಶಿಕ್ಷಣವು ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಮೊಬೈಲ್ ಮುಂದೆ ಕುಳಿತುಕೋ, ಕುಳಿತು ಕೇವಲ ಕೇಳಿಸಿಕೋ ಎನ್ನುವಂತಾಗಿದೆ.
ಗುರು-ಶಿಷ್ಯರ ಸಂಬಂಧವನ್ನು ಅತ್ಯುತ್ತಮವಾಗಿ ನಿರ್ವಾಚಿಸಿರುವ ಯಜುರ್ವೇದದ ಶಾಂತಿ ಮಂತ್ರವನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು,
"ಸಹನಾವವತು, ಸಹನೌಭುನಕ್ತು
ಸಹವೀರ್ಯಂ ಕರವಾವ ಹೈ,
ತೇಜಸ್ವಿನಾವಧೀತಮಸ್ತು
ಮಾ ವಿದ್ವಿವಿಷಾವ ಹೈ
ಓಂ ಶಾಂತಿಃ ಶಾಂತಿಃ ಶಾಂತಿಃ"
ಅರ್ಥ:-ಇಬ್ಬರಿಗೂ ರಕ್ಷಣೆ ಸಿಗಲಿ, ನಾವು ಒಟ್ಟಾಗಿ ಭುಂಜಿಸುವಂತಾಗಲಿ, ಶೌರ್ಯ ಶಕ್ತಿ ಧೈರ್ಯ ಕೆಲಸ ಮಾಡುವಂತಾಗಲಿ, ನಾವು ಮೇಧಾವಿಗಳಾಗುವಂತಾಗಲಿ ನಮ್ಮ ನಡುವೆ ದ್ವೇಷವು ಬಾರದಿರಲಿ, ನಮ್ಮಲ್ಲಿ ನಮ್ಮ ಪರಿಸರದಲ್ಲಿ ಶಾಂತಿ ನೆಲೆಸಿರಲಿ ಎಂದಾಗುತ್ತದೆ. ಎಂತಹ ಉತ್ಕೃಷ್ಟ ಅರ್ಥವನ್ನು ಒಳಗೊಂಡಿರುವ ನಲ್ನುಡಿ. ಇದನ್ನೇ ವರಕವಿ ಬೇಂದ್ರೆಯವರು ಅಷ್ಟೇ ನಲುಮೆಯಿಂದ ಕನ್ನಡೀಕರಿಸಿದ್ದಾರೆ.
"ಕೂಡಿ ಓದಿ ಕೂಡಾಡಿ ಕೂಡಿ ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು ಕೂಡುಂಡು ಕುಡಿದು ದುಡಿಯೋಣ ಕೂಡಿ ಕೂಡಿ
ಕೂಡಿ ನಡೆದು ಒಡಗೂಡಿ ಪಡೆದು ನುಡಿ ಹೇಳಿಕೇಳಿ ಕೂಡಿ
ಕೂಡಿ ಬೆಳೆದು ಬೆಳಗೋಣ ದೇವರಲು ಕೂಡಿ ಕೂಡಿ ಕೂಡಿ"
ಎಲ್ಲವೂ ಕೂಡಿ ಆಗಬೇಕಾದುದೇ ಶಿಕ್ಷಣ ಮತ್ತು ಕೂಡಿ ಆದಾಗ ಮಾತ್ರ ಶಿಕ್ಷಣ. ಪ್ರಸ್ತುತ ಬೇರ್ಪಡಿಸುವ, ಬೇರ್ಪಟ್ಟು ಕಲಿಯುವ ಪರಿಸ್ಥಿತಿಗೆ ಬಂದಿದೆ. ಪ್ರಶ್ನೆಗಳನ್ನು ಕೇಳಿ, ಕೇಳಿಸಿ, ಚರ್ಚಿಸಿ ಬೋಧನೆಯ ಪ್ರಕ್ರಿಯೆಯಲ್ಲಿ ತೊಡಗಿದ್ದ ನಾನು, ಈಗ ನಿರ್ಜೀವಿ ಗಣಕಯಂತ್ರದ ಮುಂದೆಯೋ ಅಥವಾ ಮೊಬೈಲ್ ಮುಂದೆಯೋ ಕುಳಿತು ಆಕಡೆಯಿಂದ ಚಕಾರವೆತ್ತದ ವಿದ್ಯಾರ್ಥಿಗಳಿಗೆ ಒಮ್ಮುಖವಾಗಿ ಬೋಧಿಸುತಿದ್ದೇನೆ. ಬಹಳ ಕ್ರಿಯಾಶೀಲ ಮತ್ತು ಆಹ್ಲಾದಕರವಾಗಬೇಕಾದ ಬೋಧನಾ ಪಕ್ರಿಯೆಯು ನನ್ನಲ್ಲಿ ಏಕತಾನತೆಯನ್ನು ತಂದಿಟ್ಟಿದೆ.
ಮೊದಲು ಬೇಸಿಗೆ ರಜೆಯಲ್ಲಿ ಆಡಳಿತಾತ್ಮಕ ಕರ್ತವ್ಯಗಳಿಗೆ ಕಾಲೇಜುಗಳಿಗೆ ಹಾಜರಾಗುವಾಗ ಕಾಲೇಜುಗಳು ಹಳೆಯ ಇಮಾರತುಗಳಂತೆ ಕಾಣುತಿದ್ದವು ಆದರೆ ಅದು ತಾತ್ಕಾಲಿಕ ಮಾತ್ರವಾಗಿತ್ತು ಮುಂದೆ ವಿದ್ಯಾರ್ಥಿಗಳಿಂದ ಜೀವಂತಿಕೆ ತುಂಬುತಿತ್ತು. ಅಂತು ಕಂಡು ಕೇಳರಿಯದ ಕಣ್ಣಿಗೂ ಕಾಣದ ಕೋವಿಡ್-19 ಎಂಬ ಕ್ರಿಮಿಯೊಂದು ವಿದ್ಯಾರ್ಥಿಗಳಿಂದ ಲಭ್ಯವಾಗುತ್ತಿದ್ದ ಜೀವಂತಿಕೆಯನ್ನು ಮುಂದೂಡುತ್ತಲೇ ಇದೆ.
ಆನ್ಲೈನ್ ತರಗತಿಗಳಿಗೆ ಹಾಜರಾಗಲು ನಮ್ಮ ವಿದ್ಯಾರ್ಥಿಗಳು ಅನುಭಸುತ್ತಿರುವ ಪಾಡು ಹೇಳತೀರದು. ಅದರಲ್ಲೂ ಈ ಮಳೆಗಾಲದಲ್ಲಿ ಅವರ ಕಷ್ಟ ವಿವರಿಸಲು ಕೇವಲ ಪದಗಳಿಂದ ಅಸಾಧ್ಯ. ಯಾವಾಗ ಭೌತಿಕ ತರಗತಿಳು ಆರಂಭವಾಗುವುದೋ ಎಂದು ಚಾತಕ ಪಕ್ಷಿಗಳ ಹಾಗೆ ಎಲ್ಲಾ ಅಧ್ಯಾಪಕರು ಕಾಯುವಂತಾಗಿದೆ.
ಜನಪದರ ತಾಯಿ ತನ್ನ ಕೂಸಿಗೆ ಹಾಡುತಿದ್ದ ಗೀತೆ,
"ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಕೆಲಸ| ಕಂದನಂತ
ಮಕ್ಕಳಿರಲವ್ವ ಮನೆತುಂಬ"
ನೆನಪಾಗಿ ಕಾಡುತ್ತದೆ ಅದನ್ನು ಪ್ರಸ್ತುತ ನಮ್ಮ ವಿದ್ಯಾರ್ಥಿಗಳಿಗಾಗಿ ಬದಲಾಯಿಸಿ
"ಆದದ್ದು ಆಗಲವ್ವ ವಿದ್ಯಾರ್ಥಿಗಳು ನಮಗಿರಲಿ
ಬಂದರೆ ಬರಲಿ ಕಡುಕಷ್ಟ| ನಮ್ಮ ವಿದ್ಯಾರ್ಥಿಗಳಂತಹ
ವಿದ್ಯಾರ್ಥಿಗಳಿರಲಿ ಕಾಲೇಜು ತುಂಬ" ಎಂದು ಹಾಡಬೇಕಾಗಿದೆ.