ವಿದ್ಯಾರ್ಥಿ ಸಮುದಾಯಕ್ಕೆ ಗೂಗಲ್ ಕೊಡುಗೆ

ವಿದ್ಯಾರ್ಥಿ ಸಮುದಾಯಕ್ಕೆ ಗೂಗಲ್ ಕೊಡುಗೆ

ಬರಹ



ವಿದ್ಯಾರ್ಥಿ ಸಮುದಾಯಕ್ಕೆ ಗೂಗಲ್ ಕೊಡುಗೆ
ಗೂಗಲ್
ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಸಿಕೊಂಡು ಹಲವು ಸೇವೆಗಳನ್ನು ನೀಡುತ್ತಿದೆ. ತನ್ನ
ನವೀನ ಸೇವೆಗಳು ವಿದ್ಯಾರ್ಥಿ ಸಮುದಾಯವನ್ನು ತಲುಪಬೇಕೆಂದು ಕಂಪೆನಿಯ ಬಯಕೆ. ಅದಕ್ಕೀಗ
ಟ್ವಿಟರ್ ಸೇವೆಯ ಪ್ರಯೋಜನವನ್ನು ಪಡೆಯಲದು
ಆರಂಭಿಸಿದೆ.http://twitter.com/googlestudents ಇದು ವಿದ್ಯಾರ್ಥಿ ಸಮುದಾಯವನ್ನು
ನೇರವಾಗಿ ತಲುಪಲು ಗೂಗಲ್ ಆರಂಭಿಸಿರುವ ಟ್ವಿಟರ್ ಖಾತೆ. ಈ ಖಾತೆಯನ್ನು
ಹಿಂಬಾಲಿಸುವವರಿಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಬಿಸಿಬಿಸಿ ಸುದ್ದಿಗಳು ತಲುಪುತ್ತವೆ.
ಈಗಾಗಲೇ
ಹಲವು ಪ್ರತ್ಯೇಕ ಚಾನೆಲ್‌ಗಳು ವಿದ್ಯಾರ್ಥಿಗಳಿಗಾಗಿಯೇ ಲಭ್ಯವಿವೆ. ತಂತ್ರಾಂಶ
ಅಭಿವೃದ್ಧಿಯಲ್ಲಿ ತೊಡಗಿರುವವರಿಗಾಗಿ, ತಂತ್ರಾಂಶದ ಪಾಠಗಳು, ತಂತ್ರಾಂಶದ ಸಾಲುಗಳು
ಇಲ್ಲಿ ಲಭ್ಯ.code.google.com ಇದಕ್ಕೇ ಮೀಸಲಾಗಿದೆ.ಸಂಶೋಧನಾ ಬರಹಗಳು ಬೇಕಾದರೆ
scholar.google.com ಮೂಲಕ ಶೋಧ ನಡೆಸುವುದೇ ಒಳಿತು. ಪ್ರಖ್ಯಾತ ಸಂಶೋಧನಾ ಬರಹಗಳಿಂದ
ನಿಮ್ಮ ವಿಷಯಕ್ಕೆ ಸಂಬಂಧಿಸಿದ ಪ್ರಬಂಧಗಳು ಪಟ್ಟಿ ಮಾಡಿ ನೀಡುವ ಸೇವೆಯನ್ನು ಗೂಗಲ್
ನೀಡುತ್ತದೆ.http://www.googleforstudents.blogspot.com/ ಮೂಲಕ ಗೂಗಲ್
ವಿದ್ಯಾರ್ಥಿ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳನ್ನು ಒದಗಿಸುತ್ತದೆ.ವಿದ್ಯಾರ್ಥಿಗಳಿಗೆ
ಸಂಬಂಧಿಸಿದ ಸ್ಪರ್ಧೆಗಳು, ಸವಾಲುಗಳ ಬಗ್ಗೆಯೂ ಒಂದು ಪ್ರತ್ಯೇಕ ಪುಟವಿದೆ.ಇನ್ನು
ವಿದ್ಯಾರ್ಥಿ ವೇತನಗಳು, ಉದ್ಯೋಗಕ್ಕೆ ಸಂಬಂಧಿಸಿದ ಪ್ರತ್ಯೇಕ ಪುಟವನ್ನೂ ಗೂಗಲ್
ವಿದ್ಯಾರ್ಥಿಗಳಿಗಾಗಿ ಒದಗಿಸುತ್ತಿದೆ.
-----------------------------------------------------------------
ಬಾಡಿಗೆಗೆ ತಂದ ಡಿವಿಡಿಯಿಂದ ಸಿನೆಮಾ ನಕಲಿ ಮಾಡಿ!
ರಿಯಲ್
ನೆಟ್ವರ್ಕ್ಸ್ ಕಂಪೆನಿಯ ರಿಯಲ್‌ಡಿವಿಡಿ ತಂತ್ರಾಂಶ ಬಹು ಅಗ್ಗ. ಇದರ ಬೆಲೆ ಮೂವತ್ತು
ಡಾಲರು ಮಾತ್ರ. ಆದರಿದು ಹಾಲಿವುಡ್‌ನ್ನು ನಡುಗಿಸಿದೆ. ಈ ತಂತ್ರಾಂಶದ ಮೂಲಕ
ಡಿವಿಡಿಯಲ್ಲಿರುವ ಚಲನಚಿತ್ರವನ್ನು ಕಂಪ್ಯೂಟರಿಗೆ ನಕಲಿ ಮಾಡಿಕೊಳ್ಳಬಹುದು. ಮುಂದೆ
ಚಿತ್ರ ವೀಕ್ಷಿಸಲು ಡಿವಿಡಿಯ ಬದಲು ನಕಲು ಪ್ರತಿಯನ್ನೇ ಬಳಸಬಹುದು. ಒಬ್ಬರಿಗೊಬ್ಬರು
ಇದನ್ನು ವಿನಿಮಯ ಮಾಡಿಕೊಳ್ಳಲೂ ಸಾಧ್ಯ.ನಕಲು ತಡೆ ತಂತ್ರ ಬಳಸಿದ ಡಿವಿಡಿಯನ್ನೂ
ತಂತ್ರಾಂಶ ಕಾಪಿ ಮಾಡಿಕೊಳ್ಳಬಲ್ಲುದು! ಇಂತಹ ಅನರ್ಥಕಾರಿ ತಂತ್ರಾಂಶ ಕಷ್ಟದಲ್ಲಿರುವ
ಸಿನೆಮಾ ಉದ್ಯಮಕ್ಕೆ ಇನ್ನೊಂದು ಪೆಟ್ಟು ನೀಡುವುದು ಖಾತರಿ. ಹಾಗಾಗಿ ಈ ತಂತ್ರಾಂಶದ
ಪ್ರಸರಣ ತಡೆಯುವಂತೆ ಉದ್ಯಮ ರಿಯಲ್ ನೆಟ್ವರ್ಕ್ಸ್ ಕಂಪೆನಿಗೆ ದುಂಬಾಲು ಬಿದ್ದಿದೆ.
ಸದ್ಯಕ್ಕಂತೂ ಕಂಪೆನಿ ಈ ಮನವಿಗೆ ಸ್ಪಂದಿಸಿಲ್ಲ.
ಕಂಪೆನಿಯು ತಂತ್ರಾಂಶವನ್ನು
ಫ್ಯಾಸೆಟ್ ಎಂಬ ಹೆಸರಿನಿಂದಲೂ ಕರೆಯುತ್ತಿದೆ. ಸೋನಿ, ಸ್ಯಾಮ್‍ಸಂಗ್,ಟೊಶಿಬಾ ಅಂತಹ
ಕಂಪೆನಿಗಳು ಡಿವಿಡಿ ಪ್ಲೇಯರ್ ತಯಾರಿಕೆಯಲ್ಲಿ ಮುಂದಿವೆ. ಈ ಕಂಪೆನಿಗಳು
ತಂತ್ರಾಂಶವನ್ನು ಬಳಸಿಕೊಂಡು, ಡಿವಿಡಿ ಪ್ಲೇಯರಿನಲ್ಲಿ ಹಾಕಿದ ಡಿವಿಡಿಯ ನಕಲಿ
ಮಾಡಿಟ್ಟುಕೊಳ್ಳುವ ತಂತ್ರ ರೂಪಿಸಲು ಅನುವು ಮಾಡುತ್ತದೆ. ರಿಯಲ್ ನೆಟ್ವರ್ಕ್ ಕಂಪೆನಿಯೂ
ಪ್ರಾಯೋಗಿಕವಾಗಿ ಎಪ್ಪತ್ತು ಚಿತ್ರಗಳನ್ನು ನಕಲಿ ಮಾಡಿಟ್ಟು ಕೊಳ್ಳುವ ಸಾಮರ್ಥ್ಯವಿರುವ
ಸಾಧನವನ್ನು ತಯಾರಿಸಿದೆ.ಇಂತಹ ತಂತ್ರಾಂಶ ಚಿತ್ರ,ಹಾಡುಗಳನ್ನು ಡೌನ್‌ಲೋಡ್ ಮಾಡುವ ಸೇವೆ
ನೀಡುವ ಹುಲು.ಕಾಮ್, ಐಟ್ಯೂನ್ಸ್ ಅಂತಹ ಸೇವೆಗಳ ಮೇಲೂ ಅಡ್ಡ ಪರಿಣಾಮ ಬೀರಬಲ್ಲುದು.
ಈಗ
ತಂತ್ರಾಂಶದ ವಿರುದ್ಧ ಹಾಲಿವುಡ್ ಕೋರ್ಟು ಕಟಕಟೆ ಹತ್ತಿದೆ. ಹಕ್ಕುಸ್ವಾಮ್ಯ
ಕಾಯಿದೆಯನ್ನು ತಂತ್ರಾಂಶ ಉಲ್ಲಂಘಿಸುತ್ತದೆ ಎಂದು ಹಾಲಿವುಡ್ ವಾದಿಸಿದೆ. ಹಿಂದೆ ಸಂಗೀತ
ಕಂಪೆನಿಗಳಿಗೆ ತಲೆನೋವು ತಂದಿದ್ದ ಕಡತ ವಿನಿಮಯ ತಂತ್ರಾಂಶ ನ್ಯಾಪ‌ಸ್ಟರ್ ಎಂಬ
ತಂತ್ರಾಂಶದ ವಿರುದ್ಧ ತೀರ್ಪು ನೀಡಿದ್ದ ನ್ಯಾಯಾಧೀಶರ ಮುಂದೆ ಪ್ರಕರಣ ವಿಚಾರಣೆಗೆ
ಬರಲಿದೆ.
---------------------------------------------------------------------

ಯಾಹೂ ಜಿಯೋಸಿಟೀಸ್ ಸೇವೆಗೆ ಮಂಗಳ

ಯಾಹೂ
ಕಂಪೆನಿಯು ಜನರ ಅಂತರ್ಜಾಲ ತಾಣಗಳನ್ನು ರೂಪಿಸಿ,ಅವನ್ನು ಕಾಯ್ದುಕೊಳ್ಳಲು ಯಾಹೂ
ಜಿಯೋಸಿಟೀಸ್ ಎಂಬ ಸೇವೆಯನ್ನು ನೀಡುತ್ತಿದೆ. ಒಂಭತ್ತು ವರ್ಷಗಳ ಹಿಂದೆ ಈ ಕಂಪೆನಿಯನ್ನು
ಯಾಹೂ ಸುಮಾರು ಮೂರೂವರೆ ಬಿಲಿಯನ್ ಡಾಲರು ತೆತ್ತುಖರೀದಿಸಿತ್ತು. ಉಚಿತವಾಗಿ ಅಂತರ್ಜಾಲ
ಪುಟಗಳನ್ನು ರಚಿಸಿ,ಅವನ್ನು ಕಾಯ್ದುಕೊಂಡು ಬರುವ ಸೇವೆಯನ್ನು ನೀಡಿ ಯಾಹೂ ಬಹು
ಜನಪ್ರಿಯವಾಯಿತಾದರೂ, ಈ ಸೇವೆಯ ಮೂಲಕ ಆದಾಯವನ್ನು ನಿರೀಕ್ಷಿಸಿದ ಕಂಪೆನಿಯ ಲೆಕ್ಕಾಚಾರ
ಹುಸಿಯಾಯಿತು.ಪರಿಣಾಮ, ಜಿಯೋಸಿಟೀಸನ್ನು ಮುಂದುವರಿಸಿಕೊಂಡು ಬರುವುದು ಯಾಹೂ ಕಂಪೆನಿಗೆ
ಬಿಳಿ ಆನೆಯನ್ನು ಸಾಕುವಷ್ಟೇ ಕಠಿನವಾಗಿದೆ. ಈಗ ಯಾಹೂ, ಈ ಸೇವೆಯನ್ನು ನಿಲ್ಲಿಸಲು
ನಿರ್ಧರಿಸಿದೆ. ಇನ್ನು ಮುಂದೆ ಹೊಸ ಚಂದಾದಾರರನ್ನು ಸೇರಿಸಿಕೊಳ್ಳದಿರಲು ಕಂಪೆನಿ
ತೀರ್ಮಾನಿಸಿದೆ.ಆದರೆ ಈಗಿರುವ ಚಂದಾದಾರರಿಗೆ ಸ್ವಲ್ಪ ಸಮಯದ ಮಟ್ಟಿಗೆ ಸೇವೆಯನ್ನು
ಮುಂದುವರಿಸಿ,ನಂತರ ಅವರನ್ನು ತನ್ನ ಪಾವತಿ ಸೇವೆಗೆ ನೋಂದಾಯಿಸಿಕೊಳ್ಳುವ ಹಂಚಿಕೆ
ಕಂಪೆನಿಯದ್ದು. ಇತ್ತೀಚೆಗೆ ಯಾಹೂ ತನ್ನ "ಬ್ರೀಫ್‌ಕೇಸ್" ಎನ್ನುವ ಸೇವೆಯನ್ನೂ
ನಿಲ್ಲಿಸಿತ್ತು. ಈ ಸೇವೆಯ ಮೂಲಕ ಅಂತರ್ಜಾಲದಲ್ಲಿ ಕಡತಗಳನ್ನು ಉಳಿಸಲು
ಸ್ಮರಣಸಾಮರ್ಥ್ಯವನ್ನು ಒದಗಿಸುವ ಸೇವೆ ಲಭ್ಯವಾಗುತ್ತಿತ್ತು.
------------------------------------------------------------------------
ಅಪರೂಪಕ್ಕೆ ಮೈಕ್ರೋಸಾಫ್ಟ್ ಲಾಭಾಂಶದಲ್ಲಿ ಇಳಿಕೆ
ಮೈಕ್ರೋಸಾಫ್ಟ್
ಕಂಪೆನಿಯನ್ನೂ ಆರ್ಥಿಕ ಹಿಂಜರಿತ ಕಾಡದೆ ಬಿಟ್ಟಿಲ್ಲ. ಇಪ್ಪತ್ತಮೂರು ವರ್ಷಗಳಲ್ಲೇ ಮೊದಲ
ಬಾರಿಗೆ ಕಂಪೆನಿಯ ಲಾಭಾಂಶದಲ್ಲಿ ಶೇಕಡಾ ಮೂವತ್ತೆರಡು ಇಳಿಕೆಯಾಗಿದೆ. ಪ್ರಸಕ್ತ ವರ್ಷದ
ನಾಲ್ಕನೇ ಪಾದದಲ್ಲಿ ಕಂಪೆನಿಯ ನಿವ್ವಳ ಲಾಭ ಹತ್ತಿರ ಹತ್ತಿರ ಮೂರು ಬಿಲಿಯನ್ ಡಾಲರು.
ಕಳೆದ ವರ್ಷವಿದು ನಾಲ್ಕೂವರೆ ಬಿಲಿಯನ್ ಡಾಲರು ಸಮೀಪವಿತ್ತು. ಕಂಪೆನಿಯ ಆದಾಯದಲ್ಲೂ
ಇಳಿಕೆಯಾಗಿದೆ. ಆರ್ಥಿಕ ಹಿನ್ನಡೆಯ ಕಾರಣ ಕಂಪೆನಿಗಳು ಮತ್ತು ಜನರು ತಮ್ಮ ಐಟಿ
ಖರ್ಚನ್ನು ಕಡಿತ ಮಾಡಿದುದರ ನೇರ ಪರಿಣಾಮವಿದು ಎನ್ನಲಾಗಿದೆ. ಭಾರತದಲ್ಲೂ ಇನ್ಫೋಸಿಸ್,
ಟಿಸಿಎಸ್ ಸೇರಿದಂತೆ ಐಟಿ ಕಂಪೆನಿಗಳು ಹಿನ್ನಡೆ ಕಂಡಿರುವ ಸುದ್ದಿ ಈಗ ಹಳತಾಗಿದೆ.
-------------------------------------------------------------------
ಭೂಮಿಯ ಹವಾಮಾನವನ್ನು ನಾವು ನಿಯಂತ್ರಿಸಬಹುದೇ?
ಭೂಮಿಯ
ತಾಪಮಾನದಲ್ಲಿ ಆಗುತ್ತಿರುವ ಏರಿಕೆಗೆ ಮಾನವನ ಚಟುವಟಿಕೆಗಳು ಕಾರಣ
ಎನ್ನುವುದಾದರೆ,ಭೂಮಿಯ ಹವಾಮಾನವನ್ನು ನಾವು ನಿಯಂತ್ರಿಸಬಹುದು ಎನ್ನಬಹುದಲ್ಲವೇ? ನಮ್ಮ
ಕೈಗಾರಿಕೆಗಳು,ವಾಹನಗಳು ಉಗುಳುವ ಅನಿಲಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಿದ
ಸೂರ್ಯರಶ್ಮಿಯನ್ನು ಪ್ರತಿಫಲಿಸಿ, ಪರಿಣಾಮವಾಗಿ ಭೂಮಿಯ ಶಾಖ ಏರುತ್ತದೆ ಎನ್ನಲಾಗಿದೆ.
ಹಾಗಾದರೆ, ಗಂಧಕದ ಹೊಗೆಯಂತದ್ದನ್ನು ಹಬ್ಬಿಸಿ, ವಾತಾವರಣವನ್ನು ಮಬ್ಬುಗೊಳಿಸಿ
ಸೂರ್ಯರಶ್ಮಿಯನ್ನು ತಡೆಯುವ ವಿಧಾನವನ್ನು ಬಳಸಿ, ಭೂಮಿಯನ್ನು ತಂಪು ಮಾಡುವಂತಹ ತಂತ್ರ
ಬಳಸಬಾರದೇಕೆ ಎಂದು ಯೋಚಿಸುವ ವಿಜ್ಞಾನಿಗಳಿದ್ದಾರೆ.ಹಾಗೆಯೇ ಚಂಡಮಾರುತವನ್ನುಂಟು ಮಾಡುವ
ವಾಯುಭಾರ ಒತ್ತಡದ ವ್ಯತ್ಯಾಸವನ್ನು ಮೈಕ್ರೋವೇವ್ ಶಕ್ತಿ ಬಳಸಿ, ಬದಲಾಯಿಸಿ, ಚಂಡಮಾರುತದ
ಪರಿಣಾಮ ಕಡಿಮೆ ಮಾಡುವ ತಂತ್ರದ ಬಳಕೆ ಬಗ್ಗೆಯೂ ಯೋಚನೆ ಸಾಗಿದೆ.
udayavani
*ಅಶೋಕ್‌ಕುಮಾರ್ ಎ