ವಿದ್ಯಾವಂತ ವೇಶ್ಯೆಯ ಆತ್ಮಕಥೆ

ವಿದ್ಯಾವಂತ ವೇಶ್ಯೆಯ ಆತ್ಮಕಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಬಂಗಾಳಿ ಮೂಲ: ಮಾನದಾ ದೇವಿ ಪ್ರಣೀತ, ಕನ್ನಡಕ್ಕೆ: ಡಾ. ನಾಗ ಎಚ್ ಹುಬ್ಳಿ
ಪ್ರಕಾಶಕರು
ಛಂದ ಪುಸ್ತಕ, ಬಗ್ಗೇರುಘಟ್ಟ ರಸ್ತೆ, ಬೆಂಗಳೂರು-೫೬೦೦೭೯, ಮೊ: ೯೮೪೪೪೨೨೭೮೨
ಪುಸ್ತಕದ ಬೆಲೆ
ರೂ. ೨೪೦.೦೦, ಮುದ್ರಣ: ೨೦೨೩

‘ವೇಶ್ಯೆ’ ಎಂಬ ಪದವನ್ನು ಕೇಳಿದೊಡನೆಯೇ ಬಹಳಷ್ಟು ಮಂದಿ ಅಸಹ್ಯಕರ ಭಾವವನ್ನು ಮೂಡಿಸಿಕೊಳ್ಳುತ್ತಾರೆ. ಒಂದು ಹೆಣ್ಣು ವೇಶ್ಯೆಯಾಗಲು ನೂರಾರು ಕಾರಣಗಳು ಸಿಗುತ್ತವೆ. ಬಡತನ, ಅನಕ್ಷರತೆ, ಪ್ರೇಮ ವೈಫಲ್ಯ, ಬಲವಂತ, ಶೋಕಿ ಜೀವನದ ಆಸೆ, ಕಾಮದ ಹಂಬಲ, ಸುಲಭದಲ್ಲಿ ಸಿಗುವ ಹಣ, ದೊಡ್ದ ವ್ಯಕ್ತಿಗಳ ಸಂಪರ್ಕ ಹೀಗೆ ಹತ್ತು ಹಲವಾರು ಕಾರಣಗಳು ಸಿಕ್ಕೇ ಸಿಗುತ್ತವೆ. ನಮ್ಮ ಸಮಾಜ ವೇಶ್ಯಾವೃತ್ತಿಯನ್ನು ಅತ್ಯಂತ ಕೀಳು ಕೆಲಸವೆಂದು ಹೇಳಿಕೊಂಡರೂ, ಶತಶತಮಾನಗಳಿಂದಲೂ ಇದು ಇನ್ನೂ ನಿವಾರಣೆಯಾಗದೇ ಮುಂದುವರಿದುಕೊಂಡು ಬಂದಿದೆ. ಪುರುಷ ಪ್ರಧಾನ ಸಮಾಜವೇ ಇದಕ್ಕೆ ಮುಖ್ಯ ಕಾರಣವೆಂದು ಅನಿಸಿದರೂ ಇದರ ಹಿಂದಿನ ಕಥೆಗಳು ನೂರಾರು ಇವೆ. ಪ್ರತಿಯೊಬ್ಬ ವೇಶ್ಯೆ ತನ್ನ ಆತ್ಮಕಥೆ ಬರೆಯಲು ಹೊರಟರೆ ಹಲವಾರು ಪ್ರತಿಷ್ಟಿತರು ಎನಿಸಿಕೊಂಡಿರುವ ಜನರ ಬಾಳು ಬೀದಿಪಾಲಾಗುತ್ತದೆ. ಇದು ಖಂಡಿತ. ಸಮಾಜದಲ್ಲಿ ಗಣ್ಯವ್ಯಕ್ತಿಗಳು ಎಂದು ಎದೆಯುಬ್ಬಿಸಿ ತಿರುಗಾಡುತ್ತಿರುವ ಹಲವಾರು ಮಹನೀಯರು ರಾತ್ರಿಯ ಕತ್ತಲಿನಲ್ಲಿ ವೇಶ್ಯಾಗೃಹದ ಬೀದಿಗಳಲ್ಲಿ ಹೊರಳಾಡಿಕೊಂಡು ಬಂದವರೇ ಆಗಿರುತ್ತಾರೆ. 

ಬೆಂಗಳೂರಿನ ಛಂದ ಪುಸ್ತಕ ಪ್ರಕಾಶನದಿಂದ ಹೊರ ಬಂದಿರುವ ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ' ಎನ್ನುವ ಕೃತಿಯು ಕುಮಾರಿ/ಶ್ರೀಮತಿ ಮಾನದಾ ದೇವಿ ಪ್ರಣೀತ ಎನ್ನುವ ವೇಶ್ಯೆಯ ಆತ್ಮಕಥೆಯಾಗಿದೆ. ಬಂಗಾಳಿ ಮೂಲದ ಈ ಕೃತಿಯನ್ನು ಆ ಭಾಷೆಯಿಂದ ನೇರವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಪ್ರಾಧ್ಯಾಪಕರಾದ ಡಾ. ನಾಗ ಎಚ್ ಹುಬ್ಳಿ. ಈ ಕೃತಿ ಏಕೆ ಪ್ರಾಮುಖ್ಯತೆ ಪಡೆಯುತ್ತದೆ ಎಂದರೆ ಮಾನದಾ ದೇವಿ ಬದುಕಿ ಬಾಳಿದ ಸಮಯ ಬರೋಬ್ಬರಿ ಒಂದು ಶತಮಾನದ ಹಿಂದೆ. ಆ ಸಮಯದಲ್ಲಿ ವೇಶ್ಯಾವೃತ್ತಿ ಪ್ರಚಲಿತದಲ್ಲಿದ್ದರೂ ವಿದ್ಯಾವಂತ, ಕುಲೀನ ಮನೆತನದ ಹೆಣ್ಣು ಮಗಳೊಬ್ಬಳು ಈ ವೃತ್ತಿಗೆ ಇಳಿಯುವುದು ಬಹಳ ಅಪರೂಪದ ಘಟನೆಯೇ ಆಗಿತ್ತು. ಮಾನದಾ ದೇವಿ ಬಂಗಾಳಿಯಲ್ಲಿ ಬರೆದ “ಶಿಕ್ಷಿತಾ ಪತಿತಾರ್ ಆತ್ಮಚರಿತ" ಎನ್ನುವ ಪುಸ್ತಕದ ಕನ್ನಡ ಅನುವಾದ "ವಿದ್ಯಾವಂತ ವೇಶ್ಯೆಯ ಆತ್ಮಕಥೆ". ಈ ಕೃತಿಯಲ್ಲಿ ಲೇಖಕಿ ಎಲ್ಲೂ ತನ್ನ ಹಾಗೂ ತನ್ನ ಕುಟುಂಬದವರ ನೈಜ ಹಿನ್ನಲೆಯನ್ನು ಬಯಲು ಮಾಡಿಲ್ಲ. ಮಾನದಾ ದೇವಿ ಎನ್ನುವುದು ಆಕೆಯ ನಿಜವಾದ ಹೆಸರಲ್ಲ. ಬರೋಬ್ಬರಿ ಒಂದು ಶತಮಾನದ ಹಿಂದಿನ ಈ ಘಟನೆಗಳು ಅಂದಿನ ಸಮಾಜದಲ್ಲಿ ವೇಶ್ಯೆಗೆ ಇದ್ದ ಸ್ಥಾನಮಾನಗಳ ಬಗ್ಗೆ ಮಹತ್ತರವಾದ ಕಥೆಯನ್ನು ಹೇಳುತ್ತದೆ. 

ಅನುವಾದಕರಾದ ಡಾ. ನಾಗ ಎಚ್ ಹುಬ್ಳಿ ಇವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ..." ಈ ಕೃತಿಯು (ಮೂಲ) ಪ್ರಕಟವಾದ ಕೇವಲ ಒಂದೂವರೆ ತಿಂಗಳಿನ ಅವಧಿಯಲ್ಲಿ ನಾಲ್ಕು ಸಾವಿರ ಪ್ರತಿಗಳ ನಾಲ್ಕು ಮುದ್ರಣ (ಅಂದರೆ ಹದಿನಾರು ಸಾವಿರ ಪ್ರತಿಗಳು) ಗಳನ್ನು ಕಂಡಿತು ! ಆ ಸಂದರ್ಭದಲ್ಲಿ ಈ ಪುಸ್ತಕದ ಬೆಲೆ ಕೇವಲ ಒಂದೂವರೆ ರೂಪಾಯಿ ! ಇದರ ಎಪ್ಪತ್ತೈದು ಸಾವಿರಕ್ಕೂ ಅಧಿಕ ಪ್ರತಿಗಳು ಬಂಗಾಳಿಯಲ್ಲಿ ಮಾರಾಟವಾಗಿದೆ ಎನ್ನುವುದು ಒಂದು ವಿಶಿಷ್ಟ ದಾಖಲೆಯಾಗಿಯೇ ಉಳಿದಿದೆ. ಅಷ್ಟೇ ಅಲ್ಲ, ಒಂದೇ ವರ್ಷದೊಳಗೆ ಇದು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೆ ಅನುವಾದಗೊಂಡಿತು. ಕಾಲಾನಂತರದಲ್ಲಿ ಭಾರತದ ಇತರ ಕೆಲವು ಭಾಷೆಗಳಿಗೂ ಅನುವಾದಗೊಂಡಿದೆ. ಎಲ್ಲಾ ಭಾಷೆಗಳಲ್ಲಿಯೂ ದಾಖಲೆಯ ಮಾರಾಟವನ್ನು ಕಂಡಿದೆ.

“ಹಾಗಿದ್ದರೆ ಈ ಕೃತಿಯಲ್ಲಿ ಅಂತಹ ವಿಶೇಷ ಏನಿದೆ?” ಎನ್ನುವ ಪ್ರಶ್ನೆ ಸಹಜ. ಇದು ವೇಶ್ಯೆಯೊಬ್ಬಳ ಆತ್ಮಕಥೆ ! ಅಷ್ಟೇ ಅಲ್ಲ, ವಿದ್ಯಾವಂತ ವೇಶ್ಯೆಯೊಬ್ಬಳ ಆತ್ಮಕಥೆ! ಸಮಾಜದ ದೃಷ್ಟಿಯಲ್ಲಿ ವೇಶ್ಯೆಯ ಜೀವನ ಅಸಹ್ಯಕರವಾದದು. ಆಕೆಯನ್ನು ಮುಟ್ಟಿಸಿಕೊಳ್ಳುವುದು ಕೆಲವರ ದೃಷ್ಟಿಯಿಂದ ಅತ್ಯಂತ ಹೀನ ಕಾರ್ಯ ! ಆಕೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದಂತೂ ಅವಮಾನಕರ! ಅಷ್ಟೇ ಅಲ್ಲ, ಅನೇಕ ರೋಗ-ರುಜಿನಗಳಿಗೆ ಹೆದ್ದಾರಿ. ಇಷ್ಟೆಲ್ಲಾ ಗೊತ್ತಿರುವ ಸಮಾಜ ಮತ್ತು ಸಮಾಜದಲ್ಲಿನ ಗೌರವಾನ್ವಿತ ಪುರುಷರು ಆಕೆಯಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆಯೇ? ಒಂದು ವೇಳೆ ಪುರುಷರು ವೇಶ್ಯೆಯ ಮನೆಯ ಬಾಗಿಲನ್ನು ಬಡಿಯದೇ ಹೊಗಿದ್ದಿದ್ದರೆ ಆಕೆ ಜೀವನ ನಡೆಸುತ್ತಿದ್ದುದು ಅಥವಾ ನಡೆಸುತ್ತಿರುವುದು ಹೇಗೆ? ಅಷ್ಟೇ ಅಲ್ಲ, ಆ ವೃತ್ತಿಯಲ್ಲಿರುವ ಮಹಿಳೆಯರ ಸಂಖ್ಯೆ ವೃದ್ಧಿಯಾಗುತ್ತಲೇ ಹೋಗುವುದು ಹೇಗೆ ಸಾಧ್ಯವಾಗುತ್ತಿತ್ತು? ಈ ವೃತ್ತಿಯಲ್ಲಿರುವ ಕೆಲವು ಮಹಿಳೆಯರ ಮನೆಗಳು ರಾಜ-ಮಹಾರಾಜರ ಅರಮನೆಯನ್ನು ಹೋಲುತ್ತವೆ ಎನ್ನುವ ಸತ್ಯವು ಅವರ ‘ಉದ್ಯೋಗ' ಲಾಭದಾಯಕ ಎನ್ನುವುದನ್ನು ತಿಳಿಸುತ್ತದೆ. ಹಾಗೆಂದ ಮಾತ್ರಕ್ಕೆ ವೇಶ್ಯಾವೃತ್ತಿಯಲ್ಲಿರುವ ಎಲ್ಲಾ ಮಹಿಳೆಯರೂ ಶ್ರೀಮಂತರು ಎಂದು ಅರ್ಥವಲ್ಲ! ಈ ಕೃತಿಯ ಲೇಖಕಿ ಮಾನದಾ ದೇವಿಯೇ ಹೇಳುವಂತೆ ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡಿರುವವಳ ದುಡಿಮೆ ಆಕೆಯ ‘ಕೌಶಲ್ಯ'ವನ್ನು ಅವಲಂಬಿಸಿರುತ್ತದೆ.” 

ಈ ಕೃತಿಯಲ್ಲಿನ ಕಥೆ ಪ್ರಾರಂಭವಾಗುವುದು ೧೯೦೦ರಲ್ಲಿ. ಕಲ್ಕತ್ತಾದ ಒಂದು ಗೌರವಾನ್ವಿತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಮಾನದಾ ದೇವಿ (ಹೆಸರು ಬದಲಾಯಿಸಲಾಗಿದೆ) ಬಾಲ್ಯದಲ್ಲೇ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ವಕೀಲ ವೃತ್ತಿಯನ್ನು ಮಾಡುತ್ತಿದ್ದ ತನ್ನ ತಂದೆಯ ಎರಡನೇ ವಿವಾಹದ ಬಳಿಕ ಮನದಾ ದೇವಿಯ ಜೀವನದಲ್ಲಿ ಒಂದೊಂದೇ ಬದಲಾವಣೆಗಳು ಕಾಣಲು ಪ್ರಾರಂಭವಾಗುತ್ತದೆ. ಆಕೆಯ ಸಂಬಂಧಿಕನೇ ಆದ ರಮೇಶ್ ಜೊತೆ ಪ್ರೇಮ ಸಂಬಂಧ ಬೆಳೆದು ಆತನಿಂದ ಗರ್ಭಿಣಿಯಾಗಿ, ಮನೆಯವರಿಗೆ ಹೆದರಿ ಊರು ಬಿಡುತ್ತಾಳೆ ಮಾನದಾ. ಮನೆಯಿಂದ ಹೊರಬಿದ್ದ ಮಾನದಾಳ ಬದುಕು ದುಸ್ತರವಾಗಿ ಹೋಗಿ ಬಿಡುತ್ತದೆ. ಕೆಲಸಕ್ಕೆ ಹೋಗದ, ಮೊದಲು ಕೆಲಸ ಮಾಡುತ್ತಿದ್ದ ಕಡೆ ಹಣವನ್ನು ಕಳ್ಳತನ ಮಾಡಿ ಬಂದಿದ್ದ ರಮೇಶ ಒಂದು ದಿನ ಆಕೆಯನ್ನು ತ್ಯಜಿಸಿ ಹೋಗಿ ಬಿಡುತ್ತಾನೆ. ಹೊಟ್ಟೆಯಲ್ಲಿದ್ದ ಮಗು ಸತ್ತು ಹೋಗುತ್ತದೆ. ಇಂತಹ ಭೀಕರ ಸ್ಥಿತಿಯಲ್ಲಿ ಮರಳಿ ಮನೆಗೂ ಹೋಗಲಾರದೇ ಅನಿವಾರ್ಯವಾಗಿ ವೇಶ್ಯಾವೃತ್ತಿಯನ್ನು ಅಪ್ಪಿಕೊಳ್ಳುವ ಮಾನದಾ ದೇವಿಯ ನಂತರದ ಬದುಕಿನ ಬಗ್ಗೆ ಪುಸ್ತಕವನ್ನು ಓದಿ ತಿಳಿದುಕೊಳ್ಳುವುದೇ ಸ್ವಾರಸ್ಯಕರ. ಪುಸ್ತಕದ ಎಲ್ಲೂ ಅಶ್ಲೀಲತೆಯ ಸುಳಿವು ಕಂಡುಬರುವುದಿಲ್ಲವಾದುದರಿಂದ ಯಾರು ಬೇಕಾದರೂ ಈ ಪುಸ್ತಕವನ್ನು ನಿಸ್ಸಂಕೋಚದಿಂದ ಓದಿಕೊಳ್ಳಬಹುದು. ವೇಶ್ಯೆಯ ಆತ್ಮಚರಿತ್ರೆ, ಬಿಸಿ ಬಿಸಿ ಘಟನೆಗಳು, ಕಥೆಗಳು ಇರುತ್ತವೆ ಎಂದು ಯಾರಾದರೂ ಅಂದುಕೊಂಡರೆ ಆ ಭಾವನೆ ತಪ್ಪು. ಮಾನದಾ ದೇವಿ ತನ್ನ ಆತ್ಮಕಥೆಯನ್ನು ಬಹಳ ನಿರ್ವಂಚನೆಯಿಂದ ವರ್ಣಿಸುತ್ತಾ ಹೋಗಿದ್ದಾಳೆ. ಪ್ರಥಮಾರ್ಧ ಬಹಳ ವೇಗವಾಗಿ ಸಾಗುತ್ತದೆ, ನಂತರದ ಕಥೆ ಸ್ವಲ್ಪ ನಿಧಾನವಾಗಿದೆ ಎಂದು ಭಾಸವಾಗುತ್ತದೆ. ಅಂದಿನ ಸಮಯದ ಸಾಮಾಜಿಕ ವ್ಯವಸ್ಥೆಗಳನ್ನು ಬಹಳ ಸೊಗಸಾಗಿ ಕಣ್ಣಿಗೆ ಕಾಣುವಂತೆ ಕಟ್ಟಿಕೊಟ್ಟಿದ್ದಾರೆ ಲೇಖಕಿ. ಆಕೆಯು ವಿದ್ಯಾವಂತೆಯಾಗಿದ್ದುದೇ ಇದಕ್ಕೆ ಕಾರಣವಿರಬಹುದು ಎಂದು ಅನಿಸುತ್ತದೆ. 

ಈ ಕನ್ನಡ ಅನುವಾದಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕರಾದ ಡಾ. ರಹಮತ್ ತರೀಕೆರೆ ಇವರು. ಇವರು ಬೆನ್ನುಡಿಯ ಒಂದೆಡೆ ಬರೆದಿರುವುದು ಹೀಗೆ “ ಮಾನದಾಳ ವೈಯಕ್ತಿಕ ಬಾಳಿನ ಜತೆಗೆ ಹಲವು ಚಾರಿತ್ರಿಕ ಕಥನಗಳೂ ಹೆಣಿಗೆಗೊಂಡಿವೆ. ಆಕೆ ಟ್ಯಾಗೋರ್, ಗಾಂಧಿ, ಚಿತ್ತರಂಜನ್ ದಾಸ್ ಮುಂತಾದ ರಾಷ್ಟ್ರನಾಯಕರ ಜತೆ ಪರೋಕ್ಷ ಒಡನಾಟವಿದ್ದ ಮಹಿಳೆ. ಇಲ್ಲಿ ೨೦ನೇ ಶತಮಾನದ ಮೊದಲ ಘಟ್ಟದ ಬಂಗಾಳಿ ಕುಲೀನರ ಜೀವನಕ್ರಮ, ಅವರ ಪಾಶ್ಚಿಮಾತ್ಯ ಜೀವನಶೈಲಿಯ ಚಿತ್ರಣಗಳಿವೆ. ವೇಶ್ಯಾವೃತ್ತಿ, ಪಾನನಿಷೇಧ ಮುಂತಾದ ಸಮಾಜ ಸುಧಾರಣ ಚಳುವಳಿಗಳ ಚಿತ್ರಗಳಿವೆ. ಭಾರತದ ಸ್ವಾತಂತ್ರ್ಯ ಹೋರಾಟದ ಚಿತ್ರಗಳಿವೆ. ಈ ಎರಡೂ ಆಂದೋಲನಗಳು ಎಂತೆಂತಹ ಅಜ್ಞಾತ ಮತ್ತು ವೈರುಧ್ಯಕರ ಧಾರೆಗಳನ್ನು ಒಳಗೊಂಡಿದ್ದವು ಎಂಬುದರ ಚಿತ್ರಣವು ದಂಗುಬಡಿಸುತ್ತದೆ.” 

ಖುದ್ದು ಮಾನದಾ ದೇವಿ ತನ್ನ ಆತ್ಮ ಕಥೆಯ ಪ್ರತಿಯೊಂದು ಮುದ್ರಣಕ್ಕೂ ಮುನ್ನುಡಿಯನ್ನು ನಿವೇದನೆಯ ರೂಪದಲ್ಲಿ ಬರೆದಿದ್ದಾರೆ. ಮೊದಲ ಮುದ್ರಣದ ಬಳಿಕ ಆಕೆಗೆ ಬಂದ ವಕೀಲರ ನೋಟೀಸ್, ಕೆಲವು ಓದುಗರ ಕೀಳು ಅಭಿಪ್ರಾಯಗಳ ಬಗ್ಗೆಯೂ ಆಕೆ ಬರೆದಿದ್ದಾರೆ. ಸುಮಾರು ೧೮೦ ಪುಟಗಳ ಈ ಪುಸ್ತಕವು ೨೦ ನೇ ಶತಮಾನದ ಆದಿಯಲ್ಲಿ ವೇಶ್ಯೆಯೊಬ್ಬಳಿಗೆ ಅಂದಿನ ಸಮಾಜದಲ್ಲಿ ಇದ್ದ ಸ್ಥಾನಮಾನದ ಬಗ್ಗೆ ತಿಳಿಸುತ್ತದೆ. ಸೊಗಸಾದ ಕನ್ನಡ ಅನುವಾದದ ಕಾರಣ ಪುಸ್ತಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.