ವಿದ್ಯಾಸಂಸ್ಥೆಗಳಲ್ಲಿ ಮಳೆನೀರಿಂಗಿಸಿ ಜಲಜಾಗೃತಿ

ವಿದ್ಯಾಸಂಸ್ಥೆಗಳಲ್ಲಿ ಮಳೆನೀರಿಂಗಿಸಿ ಜಲಜಾಗೃತಿ

ಕರ್ನಾಟಕದ ಕರಾವಳಿಯ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿರುವ ಪದವಿಪೂರ್ವ ಕಾಲೇಜುಗಳು ೧೫೦. ಈ ಕಾಲೇಜುಗಳು ಮಳೆಕೊಯ್ಲಿನ ಹಾಗೂ ಮಳೆನೀರಿಂಗಿಸುವ ರಚನೆಗಳನ್ನು ನಿರ್ಮಿಸಿದರೆ ಅದುವೇ ಜಲಜಾಗೃತಿ ಹಬ್ಬಿಸಬಲ್ಲ ಅಭಿಯಾನ.
ಯಾಕೆಂದರೆ ಅಲ್ಲಿ ಪಿ.ಯು.ಸಿ. ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೩೦,೦೦೦. ತಮ್ಮ ಕಾಲೇಜಿನಲ್ಲಿ ಮಳೆಕೊಯ್ಲು ಹಾಗೂ ಮಳೆನೀರು ಇಂಗಿಸುವುದನ್ನು ಅವರು ಕಣ್ಣಾರೆ ಕಾಣುವಂತಾದರೆ, ಆ ಸಂದೇಶ ಕನಿಷ್ಠ ೩೦,೦೦೦ ಮನೆಗಳನ್ನು ತಲಪುತ್ತದೆ.

ಇದೆಲ್ಲ ಸಾಧ್ಯವೇ? ಖಂಡಿತ ಸಾಧ್ಯವಿದೆ. ಇದು ನನ್ನ ಅನುಭವ. ೨೦೦೪ರಲ್ಲಿ ಚಿಕ್ಕಮಗಳೂರಿನ ಕಾಬ್‍ಸೆಟ್ ಸಂಸ್ಥೆಯ ನಿರ್ದೇಶಕನಾಗಿ ನನ್ನ ನೇಮಕ. ಆ ವರುಷ ಸ್ವ-ಉದ್ಯೋಗ ತರಬೇತಿ ಸಂಸ್ಥೆಗೆ ಸ್ವಂತ ಕಟ್ಟಡ ಕಟ್ಟಿಸಬೇಕೆಂದು ಕಾರ್ಪೊರೇಷನ್ ಬ್ಯಾಂಕಿನ ನಿರ್ಧಾರ. ಕಟ್ಟಡ ನಿರ್ಮಿಸುವಾಗಲೇ ಮಳೆಕೊಯ್ಲು ಹಾಗೂ ಮಳೆನೀರಿಂಗಿಸುವ ವ್ಯವಸ್ಥೆ ಮಾಡಬೇಕೆಂದು ನನ್ನ ಆಗ್ರಹ. ಆ ಮೂಲಕ ಪ್ರತಿ ವರುಷ ಅಲ್ಲಿ ತರಬೇತಿಗೆ ಬರುವ ಒಂದು ಸಾವಿರ ಅಭ್ಯರ್ಥಿಗಳ ಮನೆಗಳಿಗೆ ಜಲಜಾಗೃತಿಯ ಸಂದೇಶ ರವಾನಿಸುವ ಯೋಜನೆ.

ಅದರಂತೆ ಸುಮಾರು ೨,೩೦೦ ಚದರಡಿ ಚಾವಣಿಯಿಂದ ಮಳೆನೀರು ಇಳಿಸಲು ಪೈಪ್‍ಗಳ ಜೋಡಣೆ. ಹಿಂಭಾಗದ ಚಾವಣಿಯಿಂದ ಇಳಿಯುವ ಮಳೆನೀರು ಎರಡು ಫಿಲ್ಟರುಗಳ ಮೂಲಕ ಶುದ್ಧೀಕರಣ. ಸಂಪಿನಲ್ಲಿ ಆ ನೀರಿನ ಸಂಗ್ರಹ. ಸಂಪ್‍ನಿಂದ ನೀರೆತ್ತಲು ಪಂಪ್. ಆ ಸಂಪ್ (ನೆಲದಡಿಯ ಟ್ಯಾಂಕ್) ತುಂಬಿದಾಗ ಹೆಚ್ಚಾದ ನೀರು ಕೊಳವೆಬಾವಿಗೆ ಹರಿದುಹೋಗಲು ಪೈಪ್ ಜೋಡಣೆ (ಫೋಟೋ ನೋಡಿ).

ಹಿಂಭಾಗದ ಇಳಿಪೈಪಿಗೆ ತಗಲಿಸಿದ್ದು ಎರಡು ವಿಶಿಷ್ಟ ವಿನ್ಯಾಸದ ಫಿಲ್ಟರುಗಳನ್ನು. ಅವುಗಳ ತಳದಲ್ಲಿ ತೂತು. ಹಾಗಾದರೆ ಚಾವಣಿಯಿಂದ ರಭಸದಲ್ಲಿ ಇಳಿಯುವ ಮಳೆನೀರು ಈ ಫಿಲ್ಟರುಗಳ ತೂತಿನಲ್ಲಿ ನೆಲಕ್ಕೆ ಸುರಿಯುತ್ತದೆ ಅಂದುಕೊಂಡಿರಾ? ಹಾಗೆ ಆಗೋದಿಲ್ಲ. ಫಿಲ್ಟರ್ ಪ್ರವೇಶಿಸುವ ಮಳೆನೀರು ಅದರೊಳಗೆ ಬುಗರಿಯಂತೆ ತಿರುಗುತ್ತದೆ. ಆಗ ಅದರಲ್ಲಿರುವ ಕಸವೆಲ್ಲ ಬೇರ್ಪಟ್ಟು ತೂತಿನಲ್ಲಿ ಕೆಳಕ್ಕೆ ಬೀಳುತ್ತದೆ; ಶುದ್ಧವಾದ ಮಳೆನೀರು ಮಾತ್ರ ಪೈಪಿನಲ್ಲಿ ಇಳಿದು ಕೊಳವೆಬಾವಿಗೆ ಹರಿಯುತ್ತದೆ.

ಕಟ್ಟಡದ ಮುಂಭಾಗದ ಚಾವಣಿಯ ಮಳೆನೀರು ಇಳಿಪೈಪ್‍ಗಳಲ್ಲಿ ಇಳಿದು ನೇರವಾಗಿ ಕೊಳವೆಬಾವಿಗೆ ಹರಿದುಹೋಗಲು ಪೈಪ್‍ಗಳ ಜೋಡಣೆ. ಕೊಳವೆಬಾವಿಗೆ ಈ ಮಳೆನೀರಿನ ಮರುಪೂರಣಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ. ಕೊಳವೆಬಾವಿಯ ಸುತ್ತಲೂ ಐದಡಿ ವ್ಯಾಸದಲ್ಲಿ, ೧೦ ಅಡಿ ಆಳಕ್ಕೆ ಮಣ್ಣು ಅಗೆದು ತೆಗೆಸಿದ್ದು. ಅನಂತರ ಅಲ್ಲಿ ಇಳಿಸಿದ್ದು (ತಲಾ ಐದಡಿ ವ್ಯಾಸದ ಮತ್ತು ಒಂದಡಿ ಎತ್ತರದ) ೧೦ ಕಾಂಕ್ರೀಟ್ ರಿಂಗ್‍ಗಳನ್ನು. ಇದರಿಂದಾಗಿ ೧೦ ಅಡಿ ಆಳದ ಬಾವಿಯ ಮಧ್ಯದಲ್ಲಿ ಕೊಳವೆಬಾವಿಯ ಕೇಸಿಂಗ್ ಪೈಪ್.

ತಳದಿಂದ ಎರಡನೇ ಕಾಂಕ್ರೀಟ್ ರಿಂಗಿಗೆ ಸಮಾಂತರವಾಗಿ ಕೇಸಿಂಗ್ ಪೈಪನ್ನು ಒಂದಡಿ ಉದ್ದಕ್ಕೆ ಕತ್ತರಿಸಿ ತೆಗೆದು, ಆ ಸ್ಥಾನದಲ್ಲಿ "ವಿ" ಫಿಲ್ಟರಿನ ಜೋಡಣೆ (ಕಪ್‍ಲಿಂಗ್ ಮೂಲಕ).  ಈ ಫಿಲ್ಟರಿನಲ್ಲಿ ಮರಳಿನ ಕಣಗಳು ಒಳತೂರುವುದಿಲ್ಲ; ಹಾಗಾಗಿ, ಕೇಸಿಂಗ್ ಪೈಪ್ ಬ್ಲಾಕ್ ಆಗುವ ಸಾಧ್ಯತೆಯಿಲ್ಲ. ತಳದಿಂದ ಎಂಟನೇ ರಿಂಗಿನ ಮೇಲೆ ಕಾಂಕ್ರೀಟ್ ಮುಚ್ಚಳ (ಸ್ಲ್ಯಾಬ್) ಇರಿಸಿದ್ದು. ಅದರಲ್ಲಿ ಒಂದಿಂಚು ವ್ಯಾಸದ ತೂತುಗಳು. ಆ ಮುಚ್ಚಳದ ಮೇಲೆ ೯ನೇ ಮತ್ತು ೧೦ನೇ ರಿಂಗ್ ಇರಿಸಿದ್ದು. ಆ ರಿಂಗ್‍ಗಳ ಒಳಕ್ಕೆ (ತಲಾ ೬ ಇಂಚು ಎತ್ತರಕ್ಕೆ) ದೊಡ್ಡ ಜಲ್ಲಿ, ಸಣ್ಣ ಜಲ್ಲಿ ಮತ್ತು ಮರಳು (ಮೇಲ್ಗಡೆ) ತುಂಬಿದ್ದು.  ಇದು (ಫೋಟೋದಲ್ಲಿ ಕಾಣುತ್ತಿರುವ) ಮಳೆನೀರಿನ ಫಿಲ್ಟರ್.

ಮಳೆ ಬಂದಾಗ ಏನಾಗುತ್ತದೆ? ಈ ಫಿಲ್ಟರಿನಲ್ಲಿ ಮಳೆನೀರು ಸೋಸಿ, ಕಾಂಕ್ರೀಟ್ ಮುಚ್ಚಳದ ತೂತುಗಳ ಮೂಲಕ ಕೆಳಕ್ಕೆ ಇಳಿಯುತ್ತದೆ. ಹಾಗೆ ಇಳಿದ ನೀರು, ಕೇಸಿಂಗ್ ಪೈಪಿನ ಸುತ್ತಲೂ ಕಾಂಕ್ರೀಟ್ ಬಾವಿಯಲ್ಲಿ ತುಂಬಿಕೊಳ್ಳುತ್ತದೆ. ಈ ನೀರಿನ ಸ್ತಂಭದ ಒತ್ತಡದಿಂದಾಗಿ, ಮಳೆನೀರು "ವಿ" ಫಿಲ್ಟರಿನ ಮೂಲಕ ಕೇಸಿಂಗ್ ಪೈಪಿನೊಳಗೆ ನುಗ್ಗಿ, ಕೊಳವೆಬಾವಿಯ ಆಳಕ್ಕೆ ಇಳಿದು, ಮರುಪೂರಣ. ಇವೆರಡೂ ವಿನೂತನ ವ್ಯವಸ್ಥೆಗಳಿಗೆ ಆದ ವೆಚ್ಚ ರೂಪಾಯಿ ೨೨,೦೦೦. ಇವನ್ನು ರೂಪಿಸಿದವರು ಹಾಗೂ ಜೋಡಿಸಿಕೊಟ್ಟವರು ಬೆಂಗಳೂರಿನ ಫಾರ್ಮ್ ಲ್ಯಾಂಡ್ ರೈನ್‍ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂನ ಮೈಕಲ್ ಬಾಪ್ಟಿಸ್ಟ್ (೯೪೪೮೦೭೬೫೯೫) ಮತ್ತು ವಿಜಯರಾಜ್ (೯೪೪೮೧೩೦೫೨೪).

ಪಶ್ಚಿಮಘಟ್ಟಗಳ ಆ ಬದಿಯ ಚಿಕ್ಕಮಗಳೂರಿನಲ್ಲಿ ಮಳೆನೀರಕೊಯ್ಲಿನ ಈ ಪ್ರಯತ್ನ ಯಶಸ್ವಿಯಾಗಿದೆ. ಹಾಗಿರುವಾಗ, ಕರಾವಳಿಯ ದಕ್ಷಿಣ ಕನ್ನಡದಲ್ಲಿ ಮಳೆಕೊಯ್ಲು ಯಶಸ್ವಿ ಆಗಲೇ ಬೇಕು.  ಈ ಭರವಸೆಯಿಂದಲೇ  ಮಂಗಳೂರಿನ ಹತ್ತಿರದ ಸುರತ್ಕಲಿನ ಗೋವಿಂದದಾಸ ಕಾಲೇಜಿನಲ್ಲಿ ಮಳೆಕೊಯ್ಲಿನ ವ್ಯವಸ್ಥೆಗೆ ಚಾಲನೆ (೧೯ ಜುಲಾಯಿ ೨೦೦೯ರಂದು). ಅಲ್ಲಿ ಮಳೆನೀರ ಸಂಗ್ರಹಕ್ಕಾಗಿ ೧೫,೦೦೦ ಲೀಟರಿನ ಸಂಪ್ ನಿರ್ಮಾಣ. ಆ ನೀರನ್ನು ಓವರ್-ಹೆಡ್ ಟ್ಯಾಂಕಿಗೆ ಎತ್ತಲಿಕ್ಕಾಗಿ ಪಂಪ್. ರೂಪಾಯಿ ೪೫,೦೦೦ ವೆಚ್ಚದ ಈ ಯೋಜನೆಗೆ ಸುರತ್ಕಲಿನ ರೋಟರಿ ಕ್ಲಬ್‍ನ ನೆರವು. ಇದರಿಂದಾಗಿ ಪ್ರತಿ ವರುಷ ೪.೫ ಲಕ್ಷ ಲೀಟರ್ ಮಳೆನೀರಿನ ಕೊಯ್ಲು. ಮಾತ್ರವಲ್ಲ,  ಈ ಕಾಲೇಜಿನ ೨.೫ ಎಕ್ರೆ ಜಮೀನಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಜುಲಾಯಿ ತಿಂಗಳಿನಲ್ಲಿ ಇಂಗುಗುಂಡಿಗಳ ರಚನೆ.

ಇವೆಲ್ಲ ಶುಭಸೂಚನೆಗಳು. ವಾರ್ಷಿಕ ೪,೪೦೦  ಮಿಮೀ  ಮಳೆ ಸುರಿಯುವ ನಮ್ಮ ಕರಾವಳಿಯ ಹೆಚ್ಚೆಚ್ಚು ವಿದ್ಯಾಸಂಸ್ಥೆಗಳಲ್ಲಿ ಮಳೆಕೊಯ್ಲು ಆರಂಭವಾಗಲಿ. ಸಂಗ್ರಹಿಸಿದ  ಮಳೆನೀರನ್ನು ಎಲ್ಲ ವಿದ್ಯಾರ್ಥಿಗಳು ಬಳಸುವಂತಾಗಲಿ. ಆ ಮೂಲಕ ಜಲಜಾಗೃತಿಯ ಸಂದೇಶ ಎಲ್ಲೆಡೆ ಹಬ್ಬಲಿ.