ವಿದ್ಯುತ್ ಉಳಿಸುವ ಸರಳ ಉಪಾಯಗಳು

ವಿದ್ಯುತ್ ಉಳಿಸುವ ಸರಳ ಉಪಾಯಗಳು

ನಾವು ಬಳಸುವ ಸಾಕಷ್ಟು ಉಪಕರಣಗಳು ಕೆಲಸ ಮಾಡಲು ಶಕ್ತಿಯನ್ನು ಪೂರೈಸಲೇ ಬೇಕಾಗುತ್ತದೆ. ಮನೆಯಲ್ಲಿ ಬಳಸುವ ಬಲ್ಬ್ ಗಳು, ಟ್ಯೂಬ್ ಲೈಟ್ ಗಳು, ಫ್ಯಾನ್ ಗಳು, ಏರ್ ಕೂಲರ್ ಗಳು ಮತ್ತು ಕಂಡೀಷನರ್ ಗಳು, ರೆಫ್ರಿಜರೇಟರ್, ಮಿಕ್ಸರ್ ಗ್ರೈಂಡರ್ ಗಳು, ಎಲೆಕ್ಟ್ರಿಕ್ ಓವನ್, ಹೀಟರ್, ಇಸ್ತ್ರಿ ಪೆಟ್ಟಿಗೆ, ವಾಷಿಂಗ್ ಮೆಷೀನ್, ಟಿ ವಿ ಮುಂತಾದುವುಗಳಿಗೆ ವಿದ್ಯುತ್ ಅತ್ಯಗತ್ಯ. ಇಂಥ ವಿದ್ಯುತ್ ಶಕ್ತಿ ಇವುಗಳ ಬಳಕೆಯಲ್ಲಿ ಇಂದು ಹೆಚ್ಚು ಅಪವ್ಯಯವಾಗುತ್ತಿದೆ. ಇಂತಹ ವಿದ್ಯುತ್ತನ್ನು ಹೇಗೆ ಉಳಿಸಬಹುದು? ಎನ್ನುವುದಕ್ಕೆ ಇಲ್ಲಿ ಕೆಲವು ಸೂಕ್ತ ಸಲಹೆಗಳನ್ನು ನೀಡಲಾಗಿದೆ. ಇವುಗಳನ್ನು ನೀವು ಪಾಲಿಸಿದರೆ ಖಂಡಿತ ಶಕ್ತಿಯ ಉಳಿತಾಯಕ್ಕೆ ನಿಮ್ಮ ಕೊಡುಗೆಯೂ ಅಮೂಲ್ಯವಾಗಬಲ್ಲದು.

ಇಂದು ಶೇಕಡಾ ೩೦ರಷ್ಟು ವಿದ್ಯುತ್ ಮನೆ ಬಳಕೆಗೇ ಬಳಸಲ್ಪಡುತ್ತಿದೆ. ಕೆಲವು ಸರಳ ಮಾರ್ಗೋಪಾಯಗಳಿಂದ ಇಂತಹ ಅಮೂಲ್ಯ ವಿದ್ಯುತ್ ಶಕ್ತಿಯನ್ನು ಉಳಿಸಬಹುದು. ನೆನಪಿಡಿ- ‘ಶಕ್ತಿಯ ಉಳಿತಾಯವು ಶಕ್ತಿಯ ಉತ್ಪಾದನೆಗೆ ಸಮ'.

ವಿದ್ಯುತ್ ಉಳಿತಾಯಕ್ಕೆ ಕೆಲವು ಸರಳ ಮಾರ್ಗೋಪಾಯಗಳಿವೆ. ಅವುಗಳನ್ನು ಇಲ್ಲಿ ವಿವರಿಸಲಾಗಿದೆ. 

ಬೆಳಕಿನ ವ್ಯವಸ್ಥೆಯಲ್ಲಿ: 

* ವಿದ್ಯುತ್ ದೀಪಗಳನ್ನು ಬಳಸದೇ ಇದ್ದಾಗ ಸ್ವಿಚ್ ಆಫ್ ಮಾಡಿ.

* ಹಗಲಿನಲ್ಲಿ ಸೂರ್ಯನ ಬೆಳಕನ್ನು ಹೆಚ್ಚು ಬಳಸಿರಿ. ಹೆಚ್ಚು ಪಾರದರ್ಶಕ ಕರ್ಟನ್ ಬಟ್ಟೆಗಳನ್ನು ಕಿಟಕಿಗಳಿಗೆ ಬಳಸಿ. ಕೊಠಡಿಯ ಕೋಣೆಗಳಿಗೆ ಆದಷ್ಟೂ ಲಘು ಬಣ್ಣಗಳನ್ನು ಬಳಸಿ. ಇವು ಬೆಳಕನ್ನು ಹೆಚ್ಚು ಪ್ರತಿಫಲಿಸುತ್ತವೆ.

* ಇಡೀ ಕೋಣೆಯನ್ನು ಪ್ರಖರ ಬೆಳಕಿನಿಂದ ವೈಭವೀಕರಿಸುವ ಬದಲು ನಿಮಗೆ ಬೇಕಾದ ಜಾಗಕ್ಕೆ ಮಾತ್ರ ಬೆಳಕನ್ನು ಕೇಂದ್ರೀಕರಿಸುವ ವ್ಯವಸ್ಥೆಯನ್ನು ರೂಪಿಸಿ.

* ಸಾಮಾನ್ಯ ಬಲ್ಬ್ ನ ಬದಲು ಎಲ್ ಇ ಡಿ ಬಲ್ಬ್ ಗಳನ್ನು ಬಳಸಿ.

* ಹಳೆಯ ಸಾಂಪ್ರದಾಯಿಕ ತಾಮ್ರದ ಚೋಕ್ ಗಳ ಬದಲು ಹೊಸ ಇಲೆಕ್ಟ್ರಾನಿಕ್ ಚಾಕ್ ಗಳನ್ನು ಬಳಸಿ. ಎಲ್ ಇ ಡಿ ಟ್ಯೂಬ್ ಲೈಟ್ ಗಳನ್ನು ಬಳಸಿ.

ಫ್ಯಾನುಗಳ ಬಳಕೆಯಲ್ಲಿ…

* ಫ್ಯಾನ್ ಗಳಲ್ಲಿ ಹೊಸ ಇಲೆಕ್ಟ್ರಾನಿಕ್ ರೆಗ್ಯೂಲೇಟರ್ ಗಳನ್ನು ಬಳಸಿ.

* ತೀರಾ ಬೇಕೆನಿಸಿದಾಗ ಮಾತ್ರ ಫ್ಯಾನ್ ಬಳಸಿ.

* ಕೊಠಡಿಗಳ ಕಿಟಕಿ ಬಾಗಿಲುಗಳನ್ನು ತೆರೆದು, ಗಾಳಿಯಾಡಲು ಬಿಡಿ.

* ನಿಮ್ಮ ಮನೆಯ ಎಗ್ಸಾಸ್ಟ್ ಫ್ಯಾನ್ ಸದಾ ಸೀಲಿಂಗ್ ಫ್ಯಾನ್ ಗಿಂತ ಮೇಲಿರಲಿ.

ಇಸ್ತ್ರಿಪೆಟ್ಟಿಗೆಯ ಬಳಕೆಯಲ್ಲಿ…

* ತಾವಾಗಿಯೇ ಆನ್ ಮತ್ತು ಆಫ್ ಆಗುವ ಇಸ್ತ್ರಿ ಪೆಟ್ಟಿಗೆಯನ್ನೇ ಬಳಸಿ.

* ಸೂಕ್ತ ಬಟ್ಟೆಗಳಿಗೆ ಸೂಕ್ತ ಮಟ್ಟದ ಬಿಸಿಯ ಮಟ್ಟವನ್ನು ಕಾಯ್ದುಕೊಂಡಿರಿ.

* ಬಟ್ಟೆಗಳಿಗೆ ಹೆಚ್ಚು ಪ್ರಮಾಣದ ನೀರನ್ನು ಬಳಸಬೇಡಿ.

* ಹಸಿ ಬಟ್ಟೆಗಳನ್ನು ಯಾವ ಕಾರಣಕ್ಕೂ ಇಸ್ತ್ರಿ ಮಾಡಬೇಡಿ.

ಮಿಕ್ಸರ್ ಗ್ರೈಂಡರ್ ಬಳಸುವಾಗ…

* ಸಾಧ್ಯವಾದಷ್ಟೂ ನೀರನ್ನು ಬಳಸಿ ಗ್ರೈಂಡ್ ಮಾಡಿ. ಒಣಗಿದ ವಸ್ತುಗಳ ಗ್ರೈಂಡಿಂಗ್ ಹೆಚ್ಚು ಕಾಲವನ್ನು ತೆಗೆದುಕೊಳ್ಳುತ್ತದೆ.

* ಅಗತ್ಯಕ್ಕಿಂತ ಹೆಚ್ಚು ಲೋಡ್ ಹಾಕಬೇಡಿ.

ವಿದ್ಯುತ್ ಒಲೆಯ ಬಳಕೆಯಲ್ಲಿ…

* ವಿದ್ಯುತ್ ಒಲೆ ಅಥವಾ ಸ್ಟೌವ್ ಅನ್ನು ನಿಗದಿತ ವೇಳೆಗೆ ಮುಂಚಿತವಾಗಿಯೇ ಆಫ್ ಮಾಡಿಬಿಡಿ. ಏಕೆಂದರೆ ಆಫ್ ಮಾಡಿದ ಮೇಲೂ ಇರುವ ಬಿಸಿಯಲ್ಲೇ ಮಿಕ್ಕ ಅಲ್ಪಸ್ವಲ್ಪ ಕೆಲಸ ಆಗುತ್ತದೆ.

* ಸಮತಟ್ಟಾದ ಪಾತ್ರೆಗಳನ್ನು ಬಳಸಿ.

ಗ್ಯಾಸ್ ಸ್ಟವ್ ಬಳಕೆಯಲ್ಲಿ…

* ಉತ್ತಮ ಗುಣಮಟ್ಟದ ಗ್ಯಾಸ್ ಸ್ಟೌವ್ ಬಳಸಿ.

* ಆಹಾರವನ್ನು ಬೇಯಿಸಲು ಆದಷ್ಟೂ ಪ್ರೆಷರ್ ಕುಕ್ಕರ್ ಗಳನ್ನೇ ಬಳಸಿ.

* ಗ್ಯಾಸ್ ಸ್ಟೌವ್ ನಲ್ಲಿ ಆದಷ್ಟೂ ನೀಲಿ ಬಣ್ಣದ ಜ್ವಾಲೆ ಬರುವಂತೆ ನೋಡಿ. ಏಕೆಂದರೆ ಹಳದಿ ಬಣ್ಣದ ಜ್ವಾಲೆಗಿಂತ ನೀಲಿ ಬಣ್ಣದ ಜ್ವಾಲೆ ಅಧಿಕ ಶಾಖ ಕೊಡುತ್ತದೆ. 

* ನಿಮ್ಮ ಗ್ಯಾಸ್ ಸ್ಟೌವ್ ನಲ್ಲಿ ಹಳದಿ ಬಣ್ಣದ ಜ್ವಾಲೆ ಬರುತ್ತಿದೆಯೆಂದರೆ ಅದನ್ನು ಕ್ಲೀನ್ ಮಾಡಿಸಬೇಕೆಂದೇ ಅರ್ಥ.

ರೆಫ್ರಿಜರೇಟರ್ ಗಳನ್ನು ಬಳಸುವಾಗ…

* ಸೂಕ್ತ ಕಾಲಮಾನಕ್ಕೆ ಸೂಕ್ತ ಮಟ್ಟದ ಶೈತ್ಯವನ್ನು ಕಾಪಾಡಿ.

* ಹಿಂಭಾಗದಲ್ಲಿ ಗೋಡೆಯ ಮಧ್ಯೆ ಸಾಕಷ್ಟು ಜಾಗವಿರುವಂತೆ ನೋಡಿ.

* ರೆಫ್ರಿಜರೇಟರ್ ನ ಬಾಗಿಲು ಪದೇ ಪದೇ ತೆರೆಯಬೇಡಿ.

* ಇಡುವ ಆಹಾರ ಪದಾರ್ಥಗಳ ಪಾತ್ರೆಗಳಿಗೆ ಕಡ್ಡಾಯವಾಗಿ ಮುಚ್ಚಳಗಳನ್ನು ಬಳಸಿ.

* ಬಿಸಿಯಾದ ಆಹಾರ ಪದಾರ್ಥಗಳನ್ನು ತಕ್ಷಣ ರೆಫ್ರಿಜರೇಟರ್ ನ ಒಳಭಾಗದಲ್ಲಿ ಇಡಬೇಡಿ.

ಮೈಕ್ರೋವೇವ್ ಓವನ್ ಬಳಕೆಯಲ್ಲಿ…

* ಇದಕ್ಕೆ ಇಲೆಕ್ಟ್ರಾನಿಕ್ /ಗ್ಯಾಸ್ ಸ್ಟೌವ್ ಗಿಂತ ಅರ್ಧಕ್ಕರ್ಧ ವಿದ್ಯುತ್ ಸಾಕು.

* ಇದರಲ್ಲಿ ವಿಪರೀತ ಎನಿಸುವಷ್ಟು ಆಹಾರವನ್ನು ಬೇಯಿಸಬೇಡಿ.

* ಓವನ್ ಅನ್ನು ಮೊದಲೇ ಯಾವ ಕಾರಣಕ್ಕೂ ಬಿಸಿ ಮಾಡಲು ಬಳಸಿಕೊಳ್ಳಬೇಡಿ.

* ಆಹಾರ ಬೆಂದಿದೆಯೆಂದು ನೋಡಲು ಪದೇ ಪದೇ ಓವನ್ ನ ಬಾಗಿಲು ತೆಗೆಯಬೇಡಿ. ಮಿತವಾಗಿ ಬಳಸಿ.

ವಾಷಿಂಗ್ ಮೆಶೀನ್ ಬಳಸುವಾಗ…

* ತುಂಬಾ ಬಟ್ಟೆಗಳು ಒಗೆಯಲು ಇದ್ದಾಗ ಮಾತ್ರ ವಾಷಿಂಗ್ ಮೆಶೀನ್ ಗೆ ಹಾಕಿ.

* ನೀರನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿ

* ಟೈಮರ್ ಅನ್ನು ಬಳಸಿ, ವಿದ್ಯುತ್ ಉಳಿಸಿ.

* ಸರಿಯಾದ ಪ್ರಮಾಣದಲ್ಲಿ ಡಿಟರ್ಜೆಂಟ್ ಪೌಡರನ್ನು ಬಳಸಿ.

* ತುಂಬಾ ಕೊಳೆಯಾದ ಬಟ್ಟೆಗಳಿಗೆ ಬಿಸಿನೀರು ಬಳಸಿ.

* ಬಟ್ಟೆಗಳನ್ನು ಹಿಂಡಲು ತಣ್ಣೀರನ್ನೇ ಬಳಸಿ.

* ಬಟ್ಟೆಗಳನ್ನು ಒಣಗಿಸಲು ಸ್ವಾಭಾವಿಕ ಬಿಸಿಲನ್ನೇ ಬಳಸಿ.

ಎಲೆಕ್ಟ್ರಾನ್ ಉಪಕರಣಗಳ ಬಳಕೆ..

* ಟಿ.ವಿ. ರೇಡಿಯೋ, ಟೇಪ್ ರೆಕಾರ್ಡರ್ ಗಳನ್ನು ಅವಶ್ಯಕತೆ ಇದ್ದಾಗ ಮಾತ್ರ ಬಳಸಿ.

* ಇವುಗಳಲ್ಲಿ ಸಾಧ್ಯವಾದಷ್ಟು ಕಡಿಮೆ ಮಟ್ಟದ ಶಬ್ಧವನ್ನು ಇಡಿ. ಆಗ ಇದು ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ