ವಿದ್ಯುತ್ ಚಾಲಿತ ಆಟೋರಿಕ್ಷಾ ಜಾಗತಿಕ ದಾಖಲೆಯ ಪ್ರಯಾಣದ ಸಂದೇಶ
ಸಮಾಜಕ್ಕೆ ಉತ್ತಮ ಸಂದೇಶವೊಂದನ್ನು ನೀಡಲು ಆಟೋರಿಕ್ಷಾವನ್ನು ಬಳಸಲು ಸಾಧ್ಯವೇ? ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಜ್ಯೋತಿ ವಿಕ್ನೇಶ್. ಅವರು ಪಸರಿಸುತ್ತಿರುವ ಸಂದೇಶ ಅದೇನದು? "ಮಾಲಿನ್ಯಮುಕ್ತ ಭಾರತ”
“ಹೋಪ್" (ಅಂದರೆ “ಆಶಯ") ಎಂಬ ಹೆಸರಿನ ಮಹೇಂದ್ರ ಇಲೆಕ್ಟ್ರಿಕ್ ಕಂಪೆನಿಯ "ಟ್ರಿಯೋ" ವಿದ್ಯುತ್ ಚಾಲಿತ ಆಟೋರಿಕ್ಷಾದಲ್ಲಿ ದೇಶವನ್ನೆಲ್ಲ ಸುತ್ತುತ್ತಾ ಸಂದೇಶ ನೀಡುತ್ತಿದ್ದಾರೆ ಜ್ಯೋತಿ ವಿಕ್ನೇಶ್. ಇದೆಲ್ಲ ಶುರುವಾದದ್ದು 5 ಡಿಸೆಂಬರ್ 2021ರಂದು ಬೆಂಗಳೂರಿನಿಂದ (ಫೋಟೋ 1).
ಯಾವ ಆಶಯ ನಿಮ್ಮದು? ಎಂದು ಕೇಳಿದರೆ ವಿಕ್ನೇಶ್ ಅವರು ಉತ್ತರ: ವಿದ್ಯುತ್ ಚಾಲಿತ ಆಟೋರಿಕ್ಷಾದಲ್ಲಿ ಅತ್ಯಂತ ದೀರ್ಘ ಪ್ರಯಾಣದ ಜಾಗತಿಕ ದಾಖಲೆ ನಿರ್ಮಿಸುವುದು. ಹತ್ತು ತಿಂಗಳುಗಳಲ್ಲಿ 23,500 ಕಿಮೀ ನಿರಂತರ ಪ್ರಯಾಣದ ನಂತರ 2 ಅಕ್ಟೋಬರ್ 2022ರಂದು ಗುಜರಾತಿನ “ಏಕತಾ ಪ್ರತಿಮೆ” (ಸರ್ದಾರ್ ವಲ್ಲಭ ಭಾಯಿ ಪಟೇಲರ ಸ್ಮಾರಕ) ತಲಪಿದ ವಿಕ್ನೇಶ್, ಆ ಜಾಗತಿಕ ಗಿನ್ನೆಸ್ ದಾಖಲೆ ಸಾಧಿಸಿದರು (ಫೋಟೋ 2).
ಅವರ ಈ ಪ್ರಯಾಣದ ಸಾಹಸಗಳೆಲ್ಲ "ಇಂಡಿಯಾ ಆನ್ ತ್ರೀ ವೀಲ್ಸ್” ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಲಭ್ಯ. ಮುಂಚೆಯೂ ತನ್ನ ಪ್ರಯಾಣಗಳ ಅನುಭವಗಳನ್ನು ಅವರು ಹೀಗೆಯೇ ದಾಖಲಿಸಿದ್ದರು: 2016ರಲ್ಲಿ ಮೋಟರ್ ಬೈಕಿನ ಪ್ರಯಾಣವನ್ನು; ಅನಂತರ ಎಂಟು-ತಿಂಗಳ ಅವಧಿಯ ಪ್ರಯಾಣದಲ್ಲಿ ಕರ್ನಾಟಕದ ಜಾನಪದ ಕಲೆಗಳನ್ನು ದಾಖಲಿಸಿದ್ದರು.
ಅದೆಲ್ಲ ಸರಿ. ಈ ದೀರ್ಘ ಪ್ರಯಾಣದ ವೆಚ್ಚವನ್ನು ಅವರು ಹೇಗೆ ಸರಿದೂಗಿಸುತ್ತಾರೆ? ದೇಹ ಸ್ವಾಸ್ಥ್ಯ ಮತ್ತು ಜುಂಬಾ ನೃತ್ಯದ ತರಬೇತಿದಾರರಾದ ಜ್ಯೋತಿ ವಿಕ್ನೇಶ್ ಪ್ರಯಾಣದ ನಡುನಡುವೆ ಉಚಿತ ತರಬೇತಿಗಳನ್ನು ನಡೆಸುತ್ತಾರೆ. "ನನ್ನ ತರಬೇತಿಗೆ ಹಾಜರಾಗುವ ಆಸಕ್ತರು ನೀಡುವ ಸ್ವಯಂಪ್ರೇರಿತ ಹಣದ ಕೊಡುಗೆಗಳು ಪ್ರಯಾಣದ ವೆಚ್ಚ ಭರಿಸಲು ಸಹಾಯಕ" ಎನ್ನುತ್ತಾರೆ.
ಕಳೆದ ಸಲ ಕರ್ನಾಟಕದಲ್ಲಿ ಪ್ರಯಾಣ ಹೊರಟಾಗ ನನ್ನ ಕೈಯಲ್ಲಿದ್ದದ್ದು ಕೇವಲ 20,000 ರೂಪಾಯಿ; ಪ್ರಯಾಣ ಮಾಡುತ್ತಾ ಮಾಡುತ್ತಾ 6.5 ಲಕ್ಷ ರೂಪಾಯಿಗಳನ್ನು ಗಳಿಸಲು ಸಾಧ್ಯವಾಯಿತೆಂದು ಮಾಹಿತಿ ನೀಡುತ್ತಾರೆ.
"ನಾನು ಶಾಲೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತೇನೆ. ನಾನು ದಾಖಲಿಸಿದ ಕರ್ನಾಟಕದ ಜಾನಪದ ಕಲೆಗಳನ್ನು ಅಲ್ಲಿ ತೋರಿಸುತ್ತೇನೆ. ಮಕ್ಕಳಿಗೆ ನೃತ್ಯವನ್ನೂ ಕಲಿಸುತ್ತೇನೆ. ಜನರು ನನ್ನನ್ನು ಪ್ರೋತ್ಸಾಹಿಸುತ್ತಾರೆ. ಹಲವರು ನನ್ನನ್ನು ಅವರ ಮನೆಗೆ ಊಟಕ್ಕಾಗಿ ಆಹ್ವಾನಿಸುತ್ತಾರೆ” ಎನ್ನುತ್ತಾರೆ ವಿಕ್ನೇಶ್. ಜೊತೆಗೆ, ಉಚಿತ ವಾಸ, ಆಹಾರ ಮತ್ತು ರಿಯಾಯ್ತಿಗಳ ಬಗ್ಗೆ ಮಾಹಿತಿ ಪಡೆಯಲು ಅವರು ಸಮರ್ಥವಾಗಿ ಬಳಸುವುದು ಗೂಗಲ್ ಮ್ಯಾಪ್ಸ್ ಅನ್ನು. ಅದಲ್ಲದೆ, ಅವರು ಫೇಸ್-ಬುಕ್ನ ಅನೇಕ “ಪ್ರಯಾಣ ತಂಡ”ಗಳ ಸಂಪರ್ಕದಲ್ಲಿರುವ ಕಾರಣ ಆ ತಂಡಗಳ ಸದಸ್ಯರು ವಿಕ್ನೇಶರಿಗೆ ಹತ್ತುಹಲವು ರೀತಿಗಳಲ್ಲಿ ಸಹಾಯ ಮಾಡುತ್ತಾರೆ.
ವಿಕ್ನೇಶ್ ಮೂಲತಃ ತಮಿಳ್ನಾಡಿನವರು. ಅವರ ತಂದೆ ಕೇಂದ್ರ ಪೊಲೀಸ್ ದಳದಲ್ಲಿ ಉದ್ಯೋಗದಲ್ಲಿದ್ದ ಕಾರಣ, ಬಾಲ್ಯದಲ್ಲಿ ತಂದೆಯೊಂದಿಗೆ ಹಲವಾರು ಸ್ಥಳಗಳನ್ನು ಸುತ್ತಿದ ಅನುಭವ ಅವರದು. ಈಗ ಅವರ ಹೆತ್ತವರ ವಾಸ ಚೆನ್ನೈಯಲ್ಲಿ. ವಿಕ್ನೇಶ್ 12 ವರುಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಂದ ಹಾಗೆ, ಅವರು ಇಮ್ಯುನಾಲಜಿ ಮತ್ತು ಮೈಕ್ರೋಬಯಾಲಜಿಯ ಸ್ನಾತಕೋತ್ತರ ಪದವೀಧರ.
ವಿದ್ಯುತ್ ಚಾಲಿತ ವಾಹನಗಳ ಸವಾಲು
ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳು 2022ರ ಆರಂಭದಿಂದ ರಸ್ತೆಗಿಳಿಯುತ್ತಿವೆ. ಆದ್ದರಿಂದ, ಈ ವಾಹನಗಳ ಬ್ಯಾಟರಿ ಚಾರ್ಚ್ ಮಾಡುವ ಘಟಕಗಳನ್ನು ಪತ್ತೆ ಮಾಡುವುದು ಮತ್ತು ಕಷ್ಟಕರವಾದ ರಸ್ತೆಗಳಲ್ಲಿ ಪ್ರಯಾಣಿಸುವುದು ಸವಾಲು ಎನ್ನುವುದು ವಿಕ್ನೇಶರ ಅಭಿಪ್ರಾಯ. ನಲುವತ್ತು ವರುಷಗಳ ಮುಂಚೆ, ಯಾವುದೇ ಪ್ರಯಾಣ ಸೌಲಭ್ಯಗಳು ಹಾಗೂ ತಂತ್ರಜ್ನಾನ ಇಲ್ಲದ ಕಾಲದಲ್ಲಿಯೂ ಜನರು ದೂರದೂರ ಪ್ರಯಾಣಿಸುತ್ತಿದ್ದರು ಎಂಬುದೇ ನನಗೆ ಪ್ರೇರಣೆ ಎನ್ನುತ್ತಾರೆ.
“ವಿದ್ಯುತ್ ಚಾಲಿತ ವಾಹನದಲ್ಲಿ ಪ್ರಯಾಣ ಹೊರಟದ್ದರಿಂದ ನನಗೆ ತೊಂದರೆಯಾಗಿದೆ. ಕಳೆದ ಎಂಟು ತಿಂಗಳ ಪ್ರಯಾಣದಲ್ಲಿ ಒಮ್ಮೆಯೂ ಅಧಿಕೃತ “ಚಾರ್ಚಿಂಗ್ ಪಾಯಿಂಟಿ”ನಲ್ಲಿ ನನ್ನ ಆಟೋರಿಕ್ಷಾದ ಬ್ಯಾಟರಿ ಚಾರ್ಚ್ ಮಾಡಿಲ್ಲ. ನಾನು ಅದನ್ನು ಚಾರ್ಚ್ ಮಾಡಿದ್ದು ಮನೆಗಳಲ್ಲಿ, ರೆಸ್ಟೋರೆಂಟ್ಗಳಲ್ಲಿ, ಪೆಟ್ರೋಲ್ ಬಂಕ್ಗಳಲ್ಲಿ ಮತ್ತು ಪಾನ್ ಷಾಪ್ಗಳಲ್ಲಿ. ಇದರ ಬ್ಯಾಟರಿ ಚಾರ್ಜ್ ಮಾಡಲು 16 ಆಂಪ್ ಥ್ರೀ-ಪಿನ್ ಪ್ಲಗ್ ಇದ್ದರೆ ಸಾಕು” ಎನ್ನುತ್ತಾರೆ ವಿಕ್ನೇಶ್.
ಆಟೋರಿಕ್ಷಾದ ಬ್ಯಾಟರಿ ಚಾರ್ಜ್ ಮಾಡಲು ನಾಲ್ಕು ಗಂಟೆ ತಗಲುತ್ತದೆ. ಸಮತಟ್ಟಾದ ಪ್ರದೇಶದಲ್ಲಿ 120 ಕಿಮೀ - 130 ಕಿಮೀ ಮೈಲೇಜ್ ನೀಡುವ ಆಟೋರಿಕ್ಷಾ ಬೆಟ್ಟಗುಡ್ಡಗಳ ರಸ್ತೆಗಳಲ್ಲಿ 70 ಕಿಮೀ - 80 ಕಿಮೀ ಮೈಲೇಜ್ ನೀಡುತ್ತದೆ.
"ನಾನು ಆಹಾರ ಮತ್ತು ನೀರು ಕೇಳಿದಾಗ ಜನರು ಸ್ಪಂದಿಸುತ್ತಾರೆ. ಆದರೆ, ನಾನು ಚಾರ್ಜಿಂಗ್ ಪಾಯಿಂಟ್ ಕೇಳಿದಾಗ ಅದು ಮೊಬೈಲ್ ಫೋನಿಗಾಗಿ ಎಂದು ಭಾವಿಸುತ್ತಾರೆ. ಅದು ನನ್ನ ಆಟೋರಿಕ್ಷಾದ ಬ್ಯಾಟರಿ ಚಾರ್ಜ್ ಮಾಡಲಿಕ್ಕಾಗಿ ಎಂದು ಹೇಳಿದಾಗ ಅವರು ಹಿಂಜರಿಯುತ್ತಾರೆ" ಎಂದು ತನ್ನ ಅನುಭವ ಹಂಚಿಕೊಳ್ಳುತ್ತಾರೆ ವಿಕ್ನೇಶ್. ಒಂದೂರಿನಲ್ಲಿ ಅದಕ್ಕಾಗಿ ಮೂವತ್ತು ಸ್ಥಳಗಳಲ್ಲಿ ಸುತ್ತಾಡಿ ಪರದಾಡಬೇಕಾಯಿತು ಎಂದು ನೆನಪಿಸಿಕೊಳ್ಳುತ್ತಾರೆ.
ಪ್ರಯಾಣ ಮಾಡುವಾಗ ಅತ್ಯಂತ ಕಡಿಮೆ ವಸ್ತುಗಳನ್ನು ಒಯ್ಯುವುದು ಪ್ರಯಾಣ ಸುಖಕರವಾಗಲು ಸಹಾಯಕ ಎನ್ನುತ್ತಾರೆ ವಿಕ್ನೇಶ್. ಅವರು ಒಯ್ಯುವುದು 15 ಜೊತೆ ಉಡುಪುಗಳು, ಟೆಂಟ್, ಸ್ಲೀಪಿಂಗ್ ಬ್ಯಾಗ್, ಎಮರ್ಜೆನ್ಸಿ-ಸ್ಟವ್, ಕೆಮರಾಗಳು, ಡ್ರೋನ್ ಮತ್ತು ಅತ್ಯಂತ ಅವಶ್ಯಕ ವಸ್ತುಗಳನ್ನು.
ಇಂತಹ ದೀರ್ಘ ಪ್ರಯಾಣದ ಅವಧಿಯಲ್ಲಿ ಆರೋಗ್ಯದಿಂದ ಇರುವುದು ದೊಡ್ಡ ಸವಾಲು. “ಸರಿಯಾದ ಆಹಾರ ತಿನ್ನದಿದ್ದರೆ, ಆರೋಗ್ಯ ಕೆಟ್ಟೀತು” ಎನ್ನುವ ವಿಕ್ನೇಶ್, ಇತರರ ಮನೆಗಳಲ್ಲೇ ಊಟ ಮಾಡುವುದು ಒಳ್ಳೆಯದು ಎನ್ನುತ್ತಾರೆ. ಕಳೆದ ಎಂಟು ತಿಂಗಳುಗಳಲ್ಲಿ, ವಿಕ್ನೇಶ್ ಎರಡು ಸಲ ಅಜೀರ್ಣದಿಂದ, ಎರಡು ಸಲ ಜ್ವರದಿಂದ ಮತ್ತು ಒಮ್ಮೆ (ಸಿಲಿಗುರಿಯಲ್ಲಿ) ಸ್ಲಿಪ್ ಡಿಸ್ಕಿನಿಂದ ಬಳಲಿದ್ದಾರೆ. ಅಲ್ಲಿ ಫಿಸಿಯೋಥೆರಪಿ ಮತ್ತು ಇಲೆಕ್ಟ್ರೋಥೆರಪಿ ಚಿಕಿತ್ಸೆಗಾಗಿ ಅವರು ಒಂದು ವಾರ ಉಳಿಯಬೇಕಾಯಿತು. ಅನಂತರ, ವೈದ್ಯರು ಪ್ರಯಾಣಿಸಬೇಡಿ ಎಂದಿದ್ದರೂ ಕಾಶ್ಮೀರಕ್ಕೆ ಹೊರಟರು!
ಭಾರತದ ಉದ್ದಗಲದಲ್ಲಿ ಸಂಚರಿಸಿರುವ ಜ್ಯೋತಿ ವಿಕ್ನೇಶ್, “ಭಾರತದ ಪ್ರತಿಯೊಂದು ಪ್ರದೇಶ ಮತ್ತು ಜನವರ್ಗದ ಜೀವನಕ್ರಮ ವಿಭಿನ್ನ" ಎಂಬುದನ್ನು ಗಮನಿಸಿದ್ದಾರೆ. ಇಂತಹ ಜೀವನಪಾಠಗಳೇ ನಮ್ಮ ಬದುಕನ್ನು ಸಂಪನ್ನವಾಗಿಸುತ್ತವೆ, ಅಲ್ಲವೇ?
ಫೋಟೋ 1 ಮತ್ತು 2: ಜ್ಯೋತಿ ವಿಕ್ನೇಶ್ ಜಾಗತಿಕ ದಾಖಲೆಯ ವಿದ್ಯುತ್-ಆಟೋರಿಕ್ಷಾ ಪ್ರಯಾಣದ ಆರಂಭ ಮತ್ತು ಮುಕ್ತಾಯದಲ್ಲಿ.