ವಿದ್ಯುತ್ ಚಾಲಿತ ವಾಹನಗಳ ಗುಣಮಟ್ಟದ ಬಗ್ಗೆ…

ವಿದ್ಯುತ್ ಚಾಲಿತ ವಾಹನಗಳ ಗುಣಮಟ್ಟದ ಬಗ್ಗೆ…

ಚಾಲನೆ ವೇಳೆಯೇ ಒಲಾ ಎಲೆಕ್ಟ್ರಿಕ್ ಸ್ಕೂಟರ್ ನ ಮುಂಭಾಗ ಸಸ್ಪೆನ್ಷನ್ ಮುರಿದು ಹೋಗಿರುವುದಾಗಿ ಗ್ರಾಹಕ ಶ್ರೀನಂದ್ ಮೆನನ್ ಎಂಬುವವರು ಗುರುವಾರ (ಮೇ ೨೬) ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಒಲಾ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಹತ್ತಿಕೊಂಡ ಪ್ರಕರಣಗಳು ದೇಶದ ಹಲವೆಡೆ ವರದಿಯಾಗಿದ್ದವು. ಕೆಲವು ಘಟನೆಗಳಲ್ಲಿ ಜೀವಹಾನಿಯೂ ಆಗಿದೆ. ವಾಹನಗಳು ಚಾರ್ಚ್ ಆಗುತ್ತಿದ್ದ ಸಂದರ್ಭದಲ್ಲಿ ಬ್ಯಾಟರಿ ಸ್ಪೋಟಗೊಂಡಿದ್ದರಿಂದ ಹೀಗಾಗಿದೆ ಎಂದು ಹೇಳಲಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ವಾಹನ ಚಾರ್ಚ್ ಆಗುತ್ತಿಲ್ಲದಿದ್ದಾಗಲೂ ಬೆಂಕಿ ಹೊತ್ತಿಕೊಂಡಿದೆ. ಇದೀಗ ಇದ್ದಕ್ಕಿದ್ದಂತೆ ವಾಹನದ ಸಸ್ಪೆನ್ಷನ್ ಮುರಿದು ಹೋಗಿದೆ. ಹೀಗಾಗಿ ಭವಿಷ್ಯದ ವಾಹನಗಳು ಎಂದೇ ಕರೆಯಿಸಿಕೊಂಡಿರುವ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಜನ ಅನುಮಾನ ವ್ಯಕ್ತಪಡಿಸುವಂತಾಗಿದೆ. ವಾಹನ ತಯಾರಿಕೆ ವೇಳೆ ಕಳಪೆ ವಸ್ತುಗಳ ಬಳಕೆಯಿಂದಾಗಿಯೇ ಈ ರೀತಿ ಸಮಸ್ಯೆಗಳು ಎದುರಾಗುತ್ತಿವೆ ಎನ್ನಲಾಗಿದೆ. ಇನ್ನಷ್ಟೇ ರೆಕ್ಕೆ ಬಿಚ್ಚಿ ಹಾರಬೇಕಿರುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಉದ್ಯಮದ ಪಾಲಿಗೆ ಇಂತಹ ಘಟನೆಗಳು ದೊಡ್ಡ ಹಿನ್ನಡೆ. ಈ ಪ್ರಕರಣಗಳು ವಿದ್ಯುತ್ ಚಾಲಿತ ವಾಹನ ಕಂಪೆನಿಗಳಿಗೆ ಹಿನ್ನಡೆಯಷ್ಟೇ ಅಲ್ಲ, ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಿರುವ ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಗೂ ಇವು ದೊಡ್ಡ ಪೆಟ್ಟು ನೀಡಬಲ್ಲವು. ಈ ಸಾರಿಗೆ ವ್ಯವಸ್ಥೆಯು ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸುವ ವಿಚಾರವಾಗಿ ಭಾರತವು ಹಾಕಿಕೊಂಡಿರುವ ಗುರಿಗಳನ್ನು ತಲುಪಲು ಅಗತ್ಯ. ಕೆಲವು ಕಂಪೆನಿಗಳ ವಾಹನಗಳಿಗೆ ಮಾತ್ರ ಇದುವರೆಗೆ ಬೆಂಕಿ ಹತ್ತಿಕೊಂಡಿದೆಯಾದರೂ, ಜನರ ಮನಸ್ಸಿನಲ್ಲಿ ಮೂಡಬಹುದಾದ ನಕಾರಾತ್ಮಕ ಧೋರಣೆಯ ಕಾರಣದಿಂದಾಗಿ ಇಡೀ ಉದ್ಯಮಕ್ಕೆ ಪೆಟ್ಟು ಬೀಳಬಹುದು. ವಿದ್ಯುತ್ ಚಾಲಿತ ವಾಹನ ಉದ್ಯಮ ಮತ್ತು ಸರಕಾರ ಜತೆಯಾಗಿ ಕುಳಿತು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ವಾಹನಗಳಲ್ಲಿ ಬಳಕೆಯಾದ ಕಳಪೆ ವಸ್ತುಗಳ ಕುರಿತು ಬಹಿರಂಗಪಡಿಸಲು ಕೆಲವು ಕಂಪೆನಿಗಳಿಗೆ ಇಷ್ಟವಿಲ್ಲದಿರಬಹುದು. ಆದರೆ ಸರಕಾರವು ಮುತುವರ್ಜಿ ವಹಿಸಿ, ಕಾರಣಗಳನ್ನು ಬಹಿರಂಗಪಡಿಸಬೇಕು. ಆಗ ಮಾತ್ರ ಸಾರ್ವಜನಿಕರಿಗೆ ಇಂತಹ ವಾಹನಗಳ ಬಗ್ಗೆ ವಿಶ್ವಾಸ ಮೂಡುತ್ತದೆ. ಉದ್ಯಮ ಬೆಳೆಯುತ್ತದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೭-೦೫-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ