ವಿದ್ಯೆಯ ಉಪಯೋಗ

ಒಂದು ರಾಜ್ಯದ ರಾಜ ವಿಹಾರಾರ್ಥವಾಗಿ ಮಲೆನಾಡಿನ ಕಡೆಗೆ ಹೊರಟಿದ್ದ. ಪರಿವಾರದಲ್ಲಿ ರಾಜನೊಂದಿಗೆ ಆತನ ಮಗ, ಅವನ ಗುರುಗಳು, ರಾಜಭಟರು, ಆಗಷ್ಟೇ ಸೇನೆಗೆ ಸೇರಿದ್ದ ಕೆಲವು ಸೈನಿಕರು, ಸೇವಕರು ಇದ್ದರು.
ಮಲೆನಾಡೆಂದರೆ ಕೇಳಬೇಕೇ.. ಬೆಟ್ಟ-ಗುಡ್ಡಗಳು, ಕಣಿವೆಗಳು, ದಟ್ಟ ಅರಣ್ಯ, ಅಲ್ಲಲ್ಲಿ ಹರಿಯುವ ನದಿಗಳು, ಝರಿ-ತೊರೆಗಳು ಇತ್ಯಾದಿಗಳನ್ನು ಕಣ್ತುಂಬಿಕೊಳ್ಳುತ್ತಾ ನಡೆಯುತ್ತಿದ್ದರು. ಆ ಗುರುಗಳಿಗೆ ರಾಜನದೊಂದು ಕರಾರಿತ್ತು. ತನ್ನ ಮಗನಿಗೆ ಈ ಪ್ರವಾಸದ ಕೊನೆಯವರೆಗೂ ಯಾವುದೇ ವಿಚಾರಗಳ ಬಗ್ಗೆ ಹೇಳಿಕೊಡುವಂತಿಲ್ಲ..! ಗುರುಗಳು ಕೇವಲ ತಾನು ಕಲಿಸಿರುವ ವಿದ್ಯೆ ಆ ವಿಹಾರದಲ್ಲಿ ಹೇಗೆ ಬಳಸುತ್ತಾನೆಂಬುದನ್ನಷ್ಟೇ ಗಮನಿಸಬೇಕಾಗಿತ್ತು.
ಹೀಗೇ ನಡೆದಿತ್ತು. ಒಂದು ಕಡೆ ಕಣಿವೆ ಇಳಿಯುತ್ತಿದ್ದರು, ರಾಜ ಮುಂದಿದ್ದ, ಅವನ ಹಿಂದೆ ಹೊಸ ಸೈನಿಕರಿದ್ದರು, ಅವರ ಕಾರ್ಯವೈಖರಿ ನೋಡಲು ತನ್ನ ಹಿಂದೆ ಬರುವಂತೆ ಆಜ್ಞೆ ಮಾಡಿದ್ದ. ಅವರ ಹಿಂದೆ ಗುರುಗಳು, ರಾಜಪುತ್ರ ಇದ್ದರು. ಇವರೆಲ್ಲರ ಹಿಂದೆ ರಾಜ ಭಟರು ಇದ್ದರು. ಆ ಕಣಿವೆಯಲ್ಲಿ ಮುಂದುವರೆಯುತ್ತಿರುವಂತೆಯೇ ರಾಜನ ಹಿಂದೆಯೇ ಇದ್ದ ಸೈನಿಕರ ಗುಜುಗುಜು ಮಾತು ಗುರುಗಳ ಕಿವಿಗೆ ಬೀಳುತ್ತಿತ್ತು. ಪದೇ ಪದೇ ಅವರ ನಡವಳಿಕೆ ಗುರುಗಳಿಗೆ ಅನುಮಾನ ತಂದಿತ್ತು.
ಮುಂದೆ ಹೋದಂತೆ ಚಿಕ್ಕ ತೊರೆ ಎದುರಾಯಿತು, ಅಲ್ಲಿ ವಿಪರೀತ ಜಿಗಣಿಗಳ ಹಾವಳಿಯಿರುವುದು ಗುರುಗಳಿಗೆ ತಿಳಿದಿತ್ತು. ಆದರೆ ಆ ಬಗ್ಗೆ ಶಿಷ್ಯನಿಗೆ ಸೂಚನೆ ನೀಡುವಂತಿಲ್ಲ. ಆದರೆ ಎಚ್ಚರಿಕೆ ನೀಡದಿದ್ದರೆ ಹುಡುಗ ಕಷ್ಟಕ್ಕೆ ಸಿಲುಕುತ್ತಾನೆ..! ಏನು ಮಾಡುವುದು.? ತಮ್ಮಷ್ಟಕ್ಕೇ ಗುರುಗಳು ರಾಜನಿಗೆ ಕೇಳುವಂತೆ ಏನೋ ಗೊಣಗಿದರು. ರಾಜನ ಕಿವಿಗೆ ಆ ಗೊಣಗಾಟ ಕೇಳಿಸಿದೊಡನೆಯೇ ಎಚ್ಚೆತ್ತುಕೊಂಡು ಹಿಂದೆ ನೋಡುತ್ತಾನೆ ಅದೆಂತಹಾ ದೃಶ್ಯ..?! ಒಮ್ಮೆಗೇ ದಿಗಿಲಾಯಿತು, ಏಕೆಂದರೆ ರಾಜನ ಹಿಂದೆಯಿದ್ದ ಹೊಸ ಸೈನಿಕರು ತಮ್ಮ ಬಾಣವನ್ನು ರಾಜನತ್ತ ಗುರಿಯಿರಿಸಿದ್ದರು, ರಾಜನನ್ನು ಕೊಲ್ಲಲು ಮುನ್ನುಗ್ಗಿದರು. ಭಟರನ್ನು ಕರೆದು ಅವರನ್ನು ಬಂಧಿಸಿ, ಅರಣ್ಯದ ನಡುವೆ ಮರವೊಂದಕ್ಕೆ ಕಟ್ಟಿ ವಿಚಾರಿಸಲು ಆಜ್ಞಾಪಿಸಿ ಮುಂದೆ ಹೊರಟ. ಆ ಸೈನಿಕರು ಪಕ್ಕದ ರಾಜ್ಯದ ಮಂತ್ರಿಯಿಂದ ನೇಮಿಸಲ್ಪಟ್ಟ ಹಂತಕರೆಂದು, ರಾಜನನ್ನು ಕೊಲ್ಲಲು ಕಳಿಸಿದ್ದನೆಂದೂ ತಿಳಿಯಿತು.
ಇತ್ತ ರಾಜಪುತ್ರನೂ ಗುರುಗಳ ಗೊಣಗುವಿಕೆಯಿಂದ ಎಚ್ಚೆತ್ತುಕೊಂಡು ಜತನದಿಂದ ಮುನ್ನಡೆಯ ತೊಡಗಿದ, ಜಿಗಣಿಗಳೂ ಶಿಷ್ಯನಿಗೆ ಹತ್ತದಿದ್ದುದರಿಂದ ಗುರುಗಳಿಗೆ ಸಮಾಧಾನವಾಯಿತು. ಅಂದ ಹಾಗೆ ಆ ರಾಜನೂ ಇದೇ ಗುರುಗಳ ಶಿಷ್ಯನಾಗಿದ್ದವನು, ಗುರುಗಳ ಗೊಣಗಾಟ ಗ್ರಹಿಸಲು ಆತನಿಗೂ ಗೊತ್ತಿತ್ತು. ಗುರುಗಳು ಗುಪ್ತ ಭಾಷೆಯಲ್ಲಿ “ಡಿನೋಯೋಡೆನರ್ ದೂಹಾಬ” ಎಂದಿದ್ದರು. ಅದನ್ನು ಆ ಬಾಷೆ ಇಬ್ಬರಿಗೂ ತಿಳಿದಿದ್ದರಿಂದ ಆಗುತ್ತಿದ್ದ ಅನಾಹುತ ತಪ್ಪಿತ್ತು. ಆ ಗುಪ್ತ ಮಾತಿನ ಅರ್ಥ ಹೀಗಿತ್ತು “ನೋಡಿ ನಡೆಯೋ ಬಹಾದೂರ್” ಅಂತಾ, ಅಂತೂ ಕಲಿತಿದ್ದ ವಿದ್ಯೆ ಎಂದಿಗೂ ಕೈಬಿಡದೆಂಬುದು ಆ ರಾಜನಿಗೆ ಮತ್ತೊಮ್ಮೆ ಮನವರಿಕೆಯಾಯಿತು. ಅರಮನೆಗೆ ಮರಳಿದೊಡನೆಯೇ ಹುಸಿ ಸೈನಿಕರಿಗೆ ಕಾರಾಗೃಹ ಶಿಕ್ಷೆ ನೀಡಿದನು. ಗುರುಗಳಿಗೆ ವಿಶೇಷವಾದ ರಾಜ ಮರ್ಯಾದೆಯನ್ನು ಮಾಡಿ ಗುರುಕುಲಕ್ಕೆ ತನ್ನ ಭಟರೊಂದಿಗೆ ಕಳಿಸಿಕೊಟ್ಟನು.
-ಸತ್ಯ ಹರಿಹಳ್ಳಿ,
ಚಿತ್ರ ಕೃಪೆ: ಇಂಟರ್ನೆಟ್ ತಾಣ