ವಿದ್ಯೆ ವಿನಯ‌ ಅರ್ಹತೆ

ವಿದ್ಯೆ ವಿನಯ‌ ಅರ್ಹತೆ

ವಿದ್ಯೆ ವಿನಯ‌ ಅರ್ಹತೆ 
ಇಂದು ನಾವು ಅನೇಕರನ್ನು ನೋಡಿರುತ್ತೇವೆ. ಅವರಿಗೆ ಒಳ್ಳೆಯ ವಿದ್ಯೆ ಒಲಿದಿರುತ್ತದೆ, ಬುದ್ಧಿವಂತರೂ ಸಹ. ಆದರೆ, ಅವರು ಮಾತನಾಡುವ ರೀತಿ, ಅವರ ಮಾತಿನಲ್ಲಿರುವ ಅಹಂಕಾರ ಇವೆಲ್ಲವನ್ನೂ ನೋಡಿದರೆ ವಾಕರಿಕೆ ಬರುತ್ತದೆ. ಅಂದರೆ ಏನರ್ಥ? "ಕೇವಲ ವಿದ್ಯೆ ಇದ್ದಾರೆ ಸಾಲದು, ಅದರೊಂದಿಗೆ ವಿನಯವೂ ಇರಬೇಕು" ಎಂದಲ್ಲವೇ?? 
ಕೆಲವರು ತುಂಬಾ ಚುರುಕಾಗಿರುತ್ತಾರೆ. ಅವರು ಮಾತನಾಡುವ ರೀತಿ ನೋಡಿದರೆ ಅವರಿಗೆ ಎಷ್ಟು ಗೊತ್ತಪ್ಪಾ  ಅನ್ನಿಸಿಬಿಡುತ್ತದೆ. ಅವರ ಒಂದೊಂದು ಮಾತಿನಲ್ಲೂ ನನಗೆ ನಿನಗಿಂತಲೂ ಚೆನ್ನಾಗಿ ಗೊತ್ತು ಎಂಬ ಇಂಗಿತವೇ ಅಡಗಿರುತ್ತದೆ. ವಿದ್ಯೆಯನ್ನು ಅರ್ಹರಿಗೆ ಕಲಿಸಬೇಕು. ಮೂರ್ಖರಿಗೆ, ಅಹಂಕಾರಿಗಳಿಗೆ ಕಲಿಸಿದರೆ ಅನರ್ಥವಾಗಿ ಬಿಡುತ್ತದೆ. ಹಿಂದಿನ ರಾಕ್ಷಸ ಪ್ರವೃತ್ತಿಯ ಭಸ್ಮಾಸುರ, ರಾವಣ, ಮಾರೀಚ ಮೊದಲಾದವರಿಗೆ ವಿದ್ಯೆ ಒಲಿದಿತ್ತು. ಆದರೆ ಅವರು ಅರ್ಹರಾಗಿರಿಲ್ಲ. ಅವರು ವಿದ್ಯೆ ಕಲಿತದ್ದೇ ಒಂದು ಕೆಟ್ಟ ಉದ್ದೇಶದಿಂದ. ಇಲ್ಲಿ ನಾವು ಆರ್ಯರು, ದ್ರಾವಿಡರು ಎಂದು ತಾರತಮ್ಯ ಮಾಡದೇ ಕಥೆಯ ಹಿಂದಿನ ಉದ್ದೇಶವೇನು ಎಂದು ಯೋಚಿಸಿದರೆ ಸಾಕು. ಅಂದರೆ ವಿದ್ಯೆಯುಳ್ಳವರು ಅದಕ್ಕೆ ಅರ್ಹರಾಗಿರಲೂ ಬೇಕು. 
ಅಂದರೆ ವಿದ್ಯೆಯೊಂದಿಗೆ ವಿನಯವೂ ಅರ್ಹತೆಯೂ ಜೊತೆಗೂಡಿರಬೇಕು. ಅದಕ್ಕೆ ನಮಗೆ ಒಬ್ಬ ಉತ್ತಮ ಗುರುಗಳ ಸಹಕಾರ, ಮಾರ್ಗದರ್ಶನ ಬೇಕೇ ಬೇಕು. ಅಲ್ಲದೆ ವಿದ್ಯೆಗಳಿಗೆ ದೇವತೆಗಳಾದ ಸರಸ್ವತಿ ಹಾಗೂ ಗಣೇಶನ ಆಶೀರ್ವಾದವೂ ನಮಗಿರಲಿ  ಎಂಬ ವಿನಮ್ರತೆಯು ಇರಬೇಕು. ದೇವರನ್ನು ಕೆಲವರು ನಂಬದಿರಬಹುದು, ಹಿಂದೂ ಧರ್ಮವನ್ನು ಕೆಲವರು ನಂಬದಿರಬಹುದು, ಆದರೆ ನಮಗೆಲ್ಲರಿಗೂ ಧರ್ಮಬೇಧವಿಲ್ಲದೇ ವಿದ್ಯೆ ಬೇಕೇ ಬೇಕು. ಅದಕ್ಕಾಗಿ ಸಾಂಕೇತಿಕವಾಗಿ ವಿದ್ಯೆ ನೀಡುವ ತಾಯಿ, ದೇವರು ಎಂದು  ನಂಬಿದರೆ ತಪ್ಪೇನೂ ಅಲ್ಲ ಅಲ್ಲವೇ. ಹಿಂದೂಗಳು ಗಣೇಶ, ಸರಸ್ವತಿ ಎನ್ನಲಿ, ಬೇರೆಯವರು "ವಿದ್ಯಾ ದೇವತೆ" ಅಂದುಕೊಳ್ಳಲಿ. ಸಂಕುಚಿತ ಮನೋಭಾವ ಬಿಟ್ಟು ವಿಶಾಲ ಮನೋಭಾವದಿಂದ ನೋಡಿದರೆ ಅದರಲ್ಲಿ ತಪ್ಪೇನು ಇಲ್ಲ ಎನಿಸುತ್ತದೆ. 
ಈ ಮೇಲಿನ  ಭಾವವನ್ನು ಒಂದು ಸುಭಾಷಿತ ಕವಿತೆಯ ಮೂಲಕ ಬರೆದಿದ್ದೇನೆ. ಇದನ್ನು ಪ್ರಾರ್ಥನಾ ಗೀತೆಯಂತೆ ಸುಶ್ರಾವ್ಯ ವಾಗಿ ಹಾಡಬಹುದು. 
 
 
ವಿದ್ಯೆ ವಿನಯ ಅರ್ಹತೆ
 
ವಿದ್ಯೆ ನಮಗೆ ಸಿದ್ದಿಸಲು 
ವಿನಯದಾ ಜೊತೆಗೂಡಲಿ 
ವಿದ್ಯಾರ್ಹತೆಯನ್ನು  ಗಳಿಸಲು 
ವಿನಯವೇ ನೆರವಾಗಲಿ 
ಗಣಪನೆಮ್ಮನು ಹರಸಲಿ 

ವಿದ್ಯೆ ನೀಡುವ ದೇವತೆ 
ಸಿರಿ ವಾಣಿಯೆಮ್ಮನು ಪೊರೆಯಲಿ 
ಬುದ್ಧಿ ಕಲಿಸುವ ಗುರುಗಳೂ 
ನಮ್ಮನೆಲ್ಲರ ಹರಸಲಿ 
ನಮ್ಮನೆಲ್ಲರ ಸಲಹಲಿ  
 

ಜಗದೀಶ ಚಂದ್ರ 

 

Comments