*ವಿಧವೆಯ ಬದುಕು* (ಸಾಂಗತ್ಯ ಪದ್ಯ)

*ವಿಧವೆಯ ಬದುಕು* (ಸಾಂಗತ್ಯ ಪದ್ಯ)

ಕವನ

ವಿಧವೆಯ ಬದುಕದು ನೋವಲಿ ನರಳಿದೆ

ಕದನವ ಮಾಡದ ಮಹಿಳೆ

ನದಿಯಲಿ ತೇಲುವ ಹಡಗಿನ ತೆರದಲಿ

ತುದಿಯದ ತಲುಪಿತು ಕಹಳೆ

 

ಉಕ್ಕುತ ಹರಿದಿದೆ ಕಂಗಳ ಧಾರೆಯು

ದಕ್ಕದ ಗಂಡನ ಪ್ರೀತಿ

ಹಕ್ಕಿಯ ಹಾಗೆಯೆ ತೋಷವ ಪಡೆಯದೆ

ಹಕ್ಕದು ಜಾರಿದ ಭೀತಿ

 

ಕಂದನ ಭಾಗ್ಯವು ದೊರೆಯದೆ ಹೋಯಿತು

ನಂದದ ಬಾಳಿನ ದೀಪ

ಬೆಂದಳು ಬಾಣಲೆಯಲ್ಲಿಯೆ ಮೋನದಿ

ನೊಂದುತಾ ಬರುತಿದೆ ಕೋಪ

 

ಹರಿದಿಹ ಸೀರೆಯ ಹಾಗೆಯೆ ಜೀವನ

ಕರೆಯರು ಭಾಗ್ಯದ ಸಿರಿಗೆ

ಮರೆತರು ವಿಧವೆಯ ಸೌಭಾಗ್ಯ ಕಾರ್ಯಕೆ

ಮರುಗದೆ ಚುಚ್ಚುತಲೆದೆಗೆ

 

ಲೋಕದ ನೀತಿಯು ಹೆಣ್ಣಿನ ಮನವನು

ತೂಕಕೆ ಹಾಕುತ ನೋಡಿ

ನಾಕವ ಮಾಡಲು ಭಾಗ್ಯವು ದೊರೆಯಲು

ಸಾಕದು ನರಕದಿ ಹಾಡಿ

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್