ವಿಧಾನಮಂಡಲದ ಸಂಪೂರ್ಣ ಕಲಾಪ ಗದ್ದಲಕ್ಕೆ ವ್ಯರ್ಥವೇ?

ವಿಧಾನಮಂಡಲದ ಸಂಪೂರ್ಣ ಕಲಾಪ ಗದ್ದಲಕ್ಕೆ ವ್ಯರ್ಥವೇ?

ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಮೊದಲ ವಾರ ಪೂರ್ತಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ೧೮೭ ಕೋಟಿ ರೂಪಾಯಿ ಅವ್ಯವಹಾರದ ಗದ್ದಲಕ್ಕೆ ವ್ಯರ್ಥವಾಗಿದೆ. ಪ್ರತಿಪಕ್ಷಗಳು ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಕಲಾಪ ಆರಂಭವಾದ ದಿನದಿಂದಲೂ ಪ್ರತಿಭಟನೆ ನಡೆಯುತ್ತಿವೆ. ಅದಕ್ಕೆ ಪ್ರತ್ಯಸ್ತ್ರವಾಗಿ ರಾಜ್ಯ ಸರ್ಕಾರ ಹಾಗೂ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು (ಇ.ಡಿ.) ಬಳಸಿಕೊಂಡು ಕರ್ನಾಟಕ ಸರ್ಕಾರವನ್ನು ಕೆಡವಲು ಯತ್ನಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈಗಾಗಲೇ ಈ ಪ್ರಕರಣದ ಎಸ್ ಐ ಟಿ ಹಾಗೂ ಇ.ಡಿ. ತನಿಖೆ ಪ್ರತ್ಯೇಕವಾಗಿ ನಡೆಯುತ್ತಿದೆ. ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿ ಬಂಧನಕ್ಕೊಳಗಾಗಿದ್ದಾರೆ. ಇನ್ನೂ ಹಲವು ಆರೋಪಿಗಳ ಬಂಧನವಾಗಿದೆ. ಆದರೂ ವಿಧಾನ ಮಂಡಲದ ಒಂದಿಡೀ ವಾರದ ಕಲಾಪವನ್ನು ಇದಕ್ಕೆ ಬಲಿಕೊಡಲಾಗಿದೆ. ಕೊನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ೨೧ ಹಗರಣಗಳ ಪಟ್ಟಿಯನ್ನು ಸದನದಲ್ಲೇ ಪ್ರಕಟಿಸಿದ್ದಾರೆ. ಅದು ಇನ್ನೊಂದು ಗದ್ದಲಕ್ಕೆ ನಾಂದಿ ಹಾಡಿದೆ.

ಮಳೆಗಾಲದ ಅಧಿವೇಶನ ಮುಂದಿನ ವಾರಾಂತ್ಯಕ್ಕೆ ಮುಗಿಯಲಿದೆ. ವಿಪಕ್ಷಗಳ ಬತ್ತಳಿಕೆಯಲ್ಲಿರುವ ಮೂಡಾ ಹಗರಣದ ಅಸ್ತ್ರ ಇನ್ನೂ ಪೂರ್ತಿ ಹೊರಗೆ ಬಂದಿಲ್ಲ. ಮುಖ್ಯಮಂತ್ರಿಗಳ ಪತ್ನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪದ ಈ ಹಗರಣ ಚರ್ಚೆ ಸೋಮವಾರದಿಂದ ನಡೆಯುವ ಸಾಧ್ಯತೆಗಳಿವೆ. ಅದು ಒಂದು ವಾರ ನಡೆದರೆ ಇಡೀ ಮಳೆಗಾಲದ ಅಧಿವೇಶನವೇ ಎರಡು ಹಗರಣಗಳಿಗೆ ಬಲಿಯಾದಂತಾಗುತ್ತದೆ. ಬಿಜೆಪಿಯ ೨೧ ಹಗರಣಗಳು ಪ್ರಸ್ತಾಪವಾಗಿರುವ ಕಾರಣ ಅದಕ್ಕೆ ಸಂಬಂಧಪಟ್ಟ ವಾಗ್ವಾದಗಳೂ ನಿರೀಕ್ಷಿತ. ಹಾಗಿದ್ದರೆ ಮಳೆಗಾಲದ ಅಧಿವೇಶನ ಕರೆದಿರುವುದು ಯಾತಕ್ಕಾಗಿ? ಮಹತ್ವದ ಜಿ ಎಸ್ ಟಿ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಮಸೂದೆಗಳು ಮಂಡನೆ ಹಾಗೂ ಚರ್ಚೆಗೆ ಕಾಯುತ್ತಿವೆ. ಕಳೆದ ಬರಗಾಲದ ಪರಿಹಾರ ಕಾಮಗಾರಿಗಳ ಲೋಪ ಹಾಗೂ ಇನ್ನೂ ಆಗದಿರುವ ಕಾರ್ಯಗಳ ಬಗ್ಗೆ ಚರ್ಚೆಯಾಗಿಲ್ಲ. ರಾಜ್ಯಾದ್ಯಂತ ಡೆಂಘೀ ಜ್ವರ ಅಬ್ಬರಿಸುತ್ತಿದೆ. ಈಗ ಮಳೆಯಿಂದಲೂ ಅಪಾರ ಹಾನಿಯಾಗುತ್ತಿದೆ. ಇವ್ಯಾವುದರ ಚರ್ಚೆಯೂ ಆಗುತ್ತಿಲ್ಲ. ಕೇವಲ ರಾಜಕೀಯ ಸಮರಕ್ಕಾಗಿ ವಿಧಾನಮಂಡಲದ ಅಮೂಲ್ಯ ಕಲಾಪ ಹಾಗೂ ಅದಕ್ಕೆ ಬಳಕೆಯಾಗುವ ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುವುದು ಸರಿಯಲ್ಲ. ಸೋಮವಾರದಿಂದಾದರೂ ಕಲಾಪವನ್ನು ಸರಿದಾರಿಗೆ ತರಲು ಆಡಳಿತ ಹಾಗೂ ವಿಪಕ್ಷಗಳು ಸಹಕರಿಸಬೇಕಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೦-೦೭-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ