ವಿಧಾನ ಸಭೆಯಲ್ಲಿ ವಿವಿಗಳ ಅವ್ಯವಸ್ಥೆ ಅನಾವರಣ
ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥನಾರಾಯಣ ಅವರು ೨೦೨೨ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಶಾಸಕರು ಪಕ್ಷಬೇಧವಿಲ್ಲದೆ ಪ್ರಸ್ತಾಪಿಸಿದ ವಿಷಯಗಳು ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳ ದುಸ್ಥಿತಿಗೆ ಹಿಡಿದ ಕನ್ನಡಿಯಂತಿದ್ದವು. ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂಬ ಉದ್ದೇಶದಿಂದ ಸರ್ಕಾರ ಮಂಡಿಸಿದ ಈ ವಿಧೇಯಕಕ್ಕೆ ಧ್ವನಿಮತದ ಅಂಗೀಕಾರ ನೀಡುವ ಮೊದಲು ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳು ಉನ್ನತ ಶಿಕ್ಷಣದ ದೇಗುಲಗಳೆಂದು ಪರಿಗಣಿಸುವ ವಿಶ್ವವಿದ್ಯಾನಿಲಯಗಳಲ್ಲಿನ ಅವ್ಯವಹಾರಗಳನ್ನು ಸಾರ್ವಜನಿಕವಾಗಿ ತೆರೆದಿಟ್ಟವು. ವಿಶ್ವವಿದ್ಯಾಲಯಗಳು ಶಿಕ್ಷಣದ ವ್ಯಾಪಾರ ಕೇಂದ್ರಗಳಾಗಿವೆ. ಉಪ ಕುಲಪತಿ ಹುದ್ದೆಗಳು ೫-೨೦ ಕೋಟಿ ರೂ. ಗೆ ಡೀಲ್ ಆಗುತ್ತಿವೆ. ಲಾಬಿ ಮಾಡಿ ಹುದ್ದೆ ಪಡೆದವರು ದುಡ್ಡು ಮಾಡುವ ದಂಧೆಗಿಳಿದಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದ ಸದಸ್ಯರು ಮಾತ್ರವಲ್ಲದೆ, ಆಡಳಿತ ಪಕ್ಷದ ಸದಸ್ಯರ ಜತೆಗೆ ವಿಧಾನಸಭಾಧ್ಯಕ್ಷರೂ ದನಿಗೂಡಿಸಿದ್ದು ವಿಶೇಷ. ಹೊಸದಾಗಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಬದಲು ಅಸ್ತಿತ್ವದಲ್ಲಿರುವ ವಿಶ್ವವಿದ್ಯಾನಿಲಯಗಳಿಗೆ ಸೂಕ್ತ ಮೂಲ ಸೌಕರ್ಯ ಕಲ್ಪಿಸಿ, ಗುಣಮಟ್ಟ ಹೆಚ್ಚಿಸಲು ಗಮನ ನೀಡಬೇಕು ಎಂಬ ಒತ್ತಾಸೆಯೂ ಸದಸ್ಯರಿಂದ ಕೇಳಿಬಂದಿದ್ದು, ರಾಜ್ಯದಲ್ಲಿ ಹೊಸದಾಗಿ ಎಂಟು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಮುಂದಾಗಿರುವ ಸರ್ಕಾರವನ್ನು ಚಿಂತನೆಗೆ ಹಚ್ಚಿತ್ತೆನ್ನಬೇಕು. ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿ ನೇಮಕ ಹಾಗೂ ನಿರ್ಮಾಣ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಯುಜಿಸಿ ನಿಯಮಾವಳಿ ಉಲ್ಲಂಘಿಸಿ ಅನರ್ಹರು, ಅನನುಭವಿಗಳು, ಅರ್ಹತೆ ಇಲ್ಲದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೀಗಾಗಿ, ನೇಮಕಾತಿ ಹಾಗೂ ನಿರ್ಮಾಣ ಕಾಮಗಾರಿಗಳನ್ನು ಉಪಕುಲಪತಿ ಮತ್ತು ಸಿಂಡಿಕೇಟ್ ವ್ಯಾಪ್ತಿಯಿಂದ ಹೊರಗಿಡಬೇಕು. ಸಂಗೀತ, ಜಾನಪದ ಮುಂತಾದ ಕಲೆ-ಸಂಸ್ಕೃತಿಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳನ್ನು ಒಂದುಗೂಡಿಸಬೇಕು ಎಂದು ಕೆಲ ಸದಸ್ಯರು ನೀಡಿದ ಸಲಹೆಗಳು ಗಮನಾರ್ಹ. ಈಗಾಗಲೇ ಕೆಲವು ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾನಿಲಯದ ಮಾನ್ಯತೆಯಿತ್ತು ಸ್ವಾಯತ್ತತೆ ನೀಡಲಾಗಿದೆ. ವಿಶ್ವವಿದ್ಯಾಲಯದ ಎಷ್ಟೋ ಕೋರ್ಸ್ ಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ. ಹೀಗಿರುವಾಗ, ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸುವ ಅಗತ್ಯ ಏನಿದೆ? ಅದರಿಂದ ಪ್ರಯೋಜನವಾದೀತೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಮೂಲಕ ಇಲ್ಲಿ ಕಲಿತವರನ್ನು ಉತ್ತಮ ಪ್ರಜೆಗಳಾಗಿಸುವ ಜತೆಗೆ, ಅವರಿಗೆ ಸೂಕ್ತ ಉದ್ಯೋಗ ಲಭಿಸುವಂತಹ ವಾತಾವರಣವನ್ನು ಸೃಷ್ಟಿಸಿದಲ್ಲಿ ಈ ಉಪಕ್ರಮ ಸಾರ್ಥಕವಾಗಬಲ್ಲದು. ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್ ನೇಮಕಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಈಗ ಮುಂದಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ತಜ್ಞರನ್ನು ಬೋಧಕರಾಗಿ, ನಿರ್ದಿಷ್ಟ ಕಾಲಾವಧಿಯವರೆಗೆ ನೇಮಕ ಮಾಡಿಕೊಳ್ಳುವುದರಿಂದ ವಾಸ್ತವ ಜಗತ್ತಿನ ಪ್ರಾಯೋಗಿಕ ಜ್ಞಾನದ ಹರಿವು ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಅಲ್ಲದೆ, ಕೈಗಾರಿಕೆಗಳು ಹಾಗೂ ಉದ್ಯಮಗಳ ಅಗತ್ಯತೆಗೆ ಅನುಸಾರವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಅಗತ್ಯವಿರುವ ಪರಿಣತಿ ಲಭಿಸುತ್ತದೆ. ಶೈಕ್ಷಣಿಕ ಗುಣಮಟ್ಟ ವರ್ಧನೆಯ ಇಂತಹ ಕ್ರಮಗಳನ್ನು ಸೂಕ್ತವಾಗಿ ಜಾರಿಗೊಳಿಸುವತ್ತ ಸರ್ಕಾರ ಗಮನ ನೀಡಬೇಕಾಗಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೩-೦೯-೨೦೨೨
ಚಿತ್ರ ಕೃಪೆ: ಇಂಟರ್ನೆಟ್ ತಾಣ