ವಿಧಿಯಾಟ (ವಿರೋಧಾಭಾಸ)
ಮಾಗಿಯ ಛಳಿಯ ಹೊದಿಕೆಯ ಆಪ್ಯಾಯಮಾನತೆ
ಅಲಾರಾಂ ಹೊಡೆತವ ನಿಲಿಸ ಹೋಗೆ ತಣ್ಣನೆ ಅನುಭವ
ತೆರೆದ ಕಿಟಕಿಯ ಹೊರಗೆ ಮಂಜಿನ ಮುಸುಕು
ಮಡದಿ ಇತ್ತ ಸುಡು ಬಿಸಿ ಕಾಫಿಯ ಹಬೆ
ತಣ್ಣನೆಯ ಕಲ್ಲಿನ ಬಚ್ಚಲಲಿ
ಸುಡು ಬಿಸಿ ನೀರಿನ ಅಭಿಷೇಕ
ತಣ್ಣಗೆ ಕುಳಿತಿಹ ಸಾಲಿಗ್ರಾಮಕೆ
ಬಿಸಿ ಬಿಸಿ ಧೂಪ ದೀಪಗಳಾರತಿ
ಬೆಚ್ಚನೆಯ ಕೈ ತಯಾರಿಸಿ
ತಣ್ಣನೆ ಡಬ್ಬಿಗೆ ಹಾಕಿದ
ಬಿಸಿ ಬಿಸಿ ಅವರೆಕಾಳು ಉಪ್ಪಿಟ್ಟು
ಮನೆ ಬಿಡಲು ಮನದಲೇಕೋ ತಣ್ಣನೆ ಅನುಭವ
ದೂರದಿ ಸ್ನೇಹಿತನ ಕರೆ ಕೇಳಿಯೇ
ಮನದಲಿ ಬಿಸಿ ಬಿಸಿ ಅನುಭವ
ಛಳಿಯ ಲೆಕ್ಕಿಸದೆ ಅವನೆಡೆಗೆ ಓಡೆ
ಮುಂದಿಹ ವ್ಯಕ್ತಿಗೆ ಪಕ್ಕದವಗೆ ಢಿಕ್ಕಿ ಹೊಡೆಯೆ
ಆತ ಕೆಳಗೆ ಬೀಳಲು ಹಿಡಿದ
ತಣ್ಣನೆ ಮಂಜಿನಂತಿಹ ರೈಲ್ವೇ ಹಳಿ
ಎದುರು ಕಂಡೆ ವಿಧಿಯ ದೂತನಾಗಮನ
ಹೊರ ಚಿಮ್ಮಿತ್ತು ಬಿಸಿ ಬಿಸಿ ಹಬೆ ನೆತ್ತರ
ಆ ಬಿಸಿ ಹಬೆಯ ನೋಡುತಿರೆ
ನನ್ನ ತಣ್ಣನೆಯ ಮೈಯೂ ಬೆವರಿತ್ತು
ಇದು ನಿನ್ನೆ ಬೆಳಗ್ಗೆ ನಾ ಕಂಡ ದೃಶ್ಯ
ಇಂದು ಬರೆಯುವ ಮುನ್ನ ದಿನಪತ್ರಿಕೆಯಲಿ ಇದರದೇ ಸುದ್ದಿ
ಮರಣ ಹೊಂದಿದ ವ್ಯಕ್ತಿ ಮರಾಠಿ ಚಲನಚಿತ್ರ
ಜಗತ್ತಿನ ಪ್ರಸಿದ್ಧ ಅತಿಥಿ ನಟ, ಅರವಿಂದ ಸಾಮಂತ್.
ಆತನ ಆತ್ಮಕ್ಕೆ ಚಿರಶಾಂತಿಯನು ಕೋರುವೆ.
ಇದರಲ್ಲಿ ನನ್ನ ತಪ್ಪಿದೆಯೇ? ಅಥವಾ ಆ ವಿಧಿ
ತಾನಾಡುವ ಆಟದಲ್ಲಿ ನಮ್ಮೆಲ್ಲರನ್ನೂ ಉಪಯೋಗಿಸಿಕೊಂಡು ಆಡುವ ಆಟವೇ?
ಅಥವಾ ಜೀವನದ ಕ್ಷಣಿಕತೆಯನ್ನು ನಮಗೆ ಮನವರಿಕೆ ಮಾಡುತ್ತಿರುವುದೇ?