ವಿಧಿ ಲಿಖಿತ(ಕಥೆ)

ವಿಧಿ ಲಿಖಿತ(ಕಥೆ)

ಮನಸ್ಸಿನ ತಾಕಲಾಟಕ್ಕೆ ಕೊನೆಯೆಂಬುದೆ ಇಲ್ಲ. ಆತಂಕದ ಮಡುವಿನಲ್ಲಿ ಮಿಂದೆದ್ದ ಹೃದಯದ ಬಡಿತ ಆಗಾಗ ಕಿವಿಗೆ ಕೇಳುವಷ್ಟು ಜೋರಾಗಿ ಬಡಿದುಕೊಂಡರೂ ಅದನ್ನು ಸಮಾಧಾನ ಮಾಡುವ ಮಾತು ಮರೆತು ಹೋಗಿದೆ. ದೂರದ ನದಿಯ ತೀರದ ಹೊಯ್ಗೆಯ ಗುಂಟ ನಡೆದಾಡುವ ಕಾಲುಗಳು ಸೋತು ಸುಣ್ಣವಾಗುವ ಅನುಭವ ಮನಸ್ಸು ತಟಸ್ತವಾಗಿ ನಿಸ್ತೇಜವಾಗುತ್ತಿದೆ ಉತ್ಸಾಹ ಕಳೆದುಕೊಂಡು. ಇನ್ನೆಲ್ಲಿಯ ಬದುಕು. ಹೀಗೆ ಎಷ್ಟು ದೂರ ಒಬ್ಬಳೆ ಸಾಗುವುದು. ಒಂಟಿ ಕೈ ಎಡತಾಕುತ್ತಿದೆ ಹತ್ತಿರಲ್ಲೆಲ್ಲೊ ಒಂದಿನಿತು ಆಸರೆ ಸಿಗಬಹುದೇ ಎನ್ನುವ ದೂರದ ಆಸೆಯ ಹೊತ್ತು. ಬರಿ ಬೃಮಾ ಲೋಕ ಕಣ್ಣು ಕುಕ್ಕುತ್ತಿದೆ ಎದೆಯ ಗೂಡನು ತಿವಿದು ಬದುಕು ಇನ್ನು ಸಾಕು ಎನ್ನುವ ಹತಾಶೆಯಲ್ಲಿ. ಭುವಿಯ ಕೆಲಸ ಮುಗಿಸಿ ಹೊರಡುವ ಭಾಗ೯ವನ ಕೆಂಪನೆಯ ಕೆಂಡವಾಗಿದೆ ಕಣ್ಣೆರಡು. ಹರಿಯುವ ಗಂಗೆಯ ತಟ ಬತ್ತಿ ಇಳಿದು ಹೋದ ಗುರುತು ಹಾಗೆಯೆ ಉಳಿದುಬಿಟ್ಟಿದೆ ಮುಖ ಕಮಲದಲ್ಲಿ. ಒರೆಸುವ ಕೈ ಬಲಹೀನವಾಗಿ ಜೋತು ಬಿದ್ದಿದೆ ಬೀಳಲು ಬಿಟ್ಟ ಬೇರುಗಳಂತೆ.
ಏನಾದರೇನು ಕಳೆದು ಹೋದ ಮುತ್ತಿನ ಮಣಿ ಮತ್ತೆ ಸಿಗಲಾರದು. ಗಳಿಗೆ ನಿಮಿಷ ಪ್ರತಿ ಕ್ಷಣಗಳ ನೆನಪು ಮನಃಪಟಲದಲ್ಲಿ ಅಚ್ಚೊತ್ತಿದಂತೆ ಕಲೆಯಾಗಿ ಉಳಿದು ಹೋಗಿದೆ. ಎಲ್ಲಿಯ ಕಾಲ, ಎಲ್ಲಿಯ ದಿನ. ಅದೊಂದು ಕಾಲ್ಪನಿಕ. ಈಗ ನಿಸ್ತೇಜವಾದ ಅದರದಲ್ಲಿ ಬಗೆದು ಹುಡುಕಿದರೂ ಸಿಗಲಾರದು ಒಂದಿನಿತು ಮುಗುಳ್ನಗು‌.
ಈಗ ಅವಳೆದೆಯ ತುಂಬ ತಾಂಡವವಾಡುತ್ತಿದೆ ಬರಿ ನೆನಪುಗಳ ನತ೯ನ.
ನೆನಪಿಸಿಕೊಳ್ಳುವುದಿಲ್ಲ
ಜೀವನ ಪಯ೯೦ತ
ಹೀಗೆ ಇರಬೇಕೆನ್ನುವ
ವಿಧಿ ನಿಯಮ.
ನೆನಪಿಸಿಕೊಂಡಾಗಲೆಲ್ಲ
ಹೊತ್ತಿ ಉರಿಯುವುದು
ಬೆಂಕಿಯ ಜ್ವಾಲೆ
ಅಡಿಯಿಂದ ಮುಡಿಯವರೆಗೆ.
ಬತ್ತಲಾರದು ಬಯಕೆ
ನಿನ್ನೊಂದಿಗೆ ಇರಬೇಕೆನ್ನುವ
ದಿನಗಳು ಕತ್ತಲಾಗುವುದು
ಕಣ್ಣು ನೆನೆದಾಗಲೆಲ್ಲ.
ಉಸಿರುಗಟ್ಟುವ ದುಃಖ
ಮುಕ್ಕಿ ಮುಕ್ಕಿ ಗಂಟಲು ಕಟ್ಟಿ
ಉಕ್ಕಿಬರುವುದು ನೆತ್ತರು
ನರನಾಡಿಗಳಲೆಲ್ಲ.
ಅಂತ್ಯ ಕಾಣುವ ದಾರಿ
ಕೈ ಬೀಸಿ ಕರೆಯುವುದು
ನಿನ್ನ ಬಿಟ್ಟಿರಲೇಬೇಕೆನ್ನುವ
ದುಃಖ ಉಮ್ಮಳಿಸಿದಾಗಲೆಲ್ಲ.
ಹೇಳು ಹೇಗಿರಲಿ ನಾನು
ನನ್ನ ಕನಸಿನ ಕನಸುಗಾರ ನೀನು
ಯಾಕೆ ನೀ ಕನ್ನಡಿಯೊಳಗಿನ
ಗಂಟಾಗಿಬಿಟ್ಟೆ!
ಅದೊಂದು ಸಂಜೆ. ಹಾಯ್ ಅನ್ನುವ ಕಾಣದ ಕರೆಗೆ ಓ ಗೊಟ್ಟು ನಡೆದು ಬಂದ ಸಂಭಾಷಣೆ ಸುಂದರ ಸಂಜೆಯಾಗಬಹುದೆಂದು ಅಂದುಕೊಂಡಿರಲಿಲ್ಲ. ಎಲ್ಲವೂ ಅನಿರೀಕ್ಷಿತ. ಕಾಲನ ಪರಿವೆಯೇ ಇಲ್ಲದೆ ಶಬ್ದಗಳ ವಿನಿಮಯ. ಸಾಕು ಅನ್ನುವ ಮಾತೇ ಇರಲಿಲ್ಲ. ರಿಂಗಣಿಸುವ ಶಬ್ದಕ್ಕಾಗಿ ಜಾತಕ ಪಕ್ಷಿಯಂತೆ ಕಿವಿಗೊಟ್ಟು ಆಲಿಸುತ್ತಿತ್ತು ಮನಸ್ಸು ಸದಾ ಹೇಳಬೇಕಾದ ಕೇಳಬೇಕಾದ ಮಾತುಗಳ ನೆನಪಿನಲ್ಲಿ. ಮುಸಿ ಮುಸಿ ನಗುವ ಕ್ಷಣಕ್ಕಾಗಿ. ಅದರದ ತುಂಬ ಅವನಾಡಿದ ಮಾತುಗಳ ವಿನಿಮಯ ನೆನಪಿಸಿಕೊಂಡು ತನ್ನಷ್ಟಕ್ಕೆ ನಗುತ್ತ ಸದಾ ಹಸನ್ಮುಖಿಯಾಗಿ ಇರುತ್ತಿದ್ದ ಆ ದಿನಗಳೆಲ್ಲಿ; ಈಗ ಆ ನೆನಪುಗಳೆ ಹೃದಯ ಹಿಂಡುತ್ತಿದೆ. ಪ್ರೀತಿಯ ನೆನಪುಗಳು ಸುಃಖವನ್ನೂ ಕೊಡಬಲ್ಲವು, ದುಃಖವನ್ನೂ ಕೊಡಬಲ್ಲವು.
ಆ ದಿನ ಅದೊಂದು ದುಘ೯ಟನೆ ನಡೆಯದೇ ಇದ್ದಿದ್ದರೆ ಬಹುಶಃ ನನ್ನದೂ ಒಂದು ಸುಂದರ ಜೀವನವಾಗಿರುತ್ತಿತ್ತು. ಆದರೆ ವಿಧಿ ನಿಯಮವೇ ಬೇರೆ. ಅದು ಎಲ್ಲರ ಜೀವನದಲ್ಲೂ ಯಾವಾಗ ಏನೇನು ನಡೆಸಬೇಕೊ ಅದನ್ನು ತಪ್ಪದೆ ತನ್ನ ಕಾರ್ಯ ಮುಗಿಸಿ ಮರೆಯಾಗಿಬಿಡುತ್ತದೆ. ಬದುಕುಳಿದವರು ಹೇಣಗಾಡಬೇಕು.
ಅಕ್ಕನಿಗೆ ಮದುವೆ ಪ್ರಯತ್ನ ವಿಫಲವಾದಾಗ ನನಗೊದಗಿ ಬಂದ ಸಂಬಂಧ ಹಲವಾರು. ಅಕಸ್ಮಾತಾಗಿ ದೂರವಾಣಿಯ ಮೂಲಕ ಪರಿಚಿತನಾದವನು. ನನ್ನ ಅರಸಿ ಬಂದ ಹೇಮಂತ ಯಾವತ್ತೂ ನನ್ನಿಂದ ದೂರ ಹೋಗುವ ಮನಸ್ಥಿತಿಯವನಾಗಿರಲಿಲ್ಲ‌. ನನ್ನ ದೌಬ೯ಲ್ಯವನ್ನೂ ಲೆಕ್ಕಿಸದ ನನ್ನನ್ನು ಪ್ರೀತಿಯಿಂದ ಸ್ವೀಕರಿಸಿದ ನನ್ನೊಳಗಿನ ವ್ಯಕ್ತಿ ಅವನು.
ಹಿಂದೆಂದೂ ಕಂಡರಿಯದ
ಭೂಮಿ ತೂಕದಷ್ಟು
ಪ್ರೀತಿ ಕೊಟ್ಟೆ
ಲೋಕವನ್ನೇ ಮರೆತು
ನನ್ನಲ್ಲಿ ಸೇರಿಕೊಂಡೆ
ಸಾವಿರ ಹಗಲು
ಕನಸುಗಳ ಹೊತ್ತು
ನನ್ನೊಂದಿಗೆ ಹೆಜ್ಜೆ ಇಟ್ಟೆ
ಹಗಲು ರಾತ್ರಿ
ನನ್ನಲ್ಲೆ ಲೀನವಾದೆ
ಇದೇ ಪ್ರೀತಿಯ ಮೊದಲು
ಕೊನೆಯೆಂಬುದಿಲ್ಲ ಎಂಬ
ಭರವಸೆಯ ಅಚ್ಚೊತ್ತಿ
ನಂಬಿಕೆಯ ಕೈಗೊಳ ತೊಡಿಸಿ
ನಿರಾಳ ಬದುಕಿಗೆ ನಾಂದಿಯಾದೆ
ನಾ ಏನ ಕೊಡಬಲ್ಲೆ
ಈ ನಿನ್ನ ಗೆಳೆತನಕೆ!
ಹಿಂದಿನಿಂದ ಬಂದ ಯಮನಂತಿರುವ ವಾಹನ ನಮ್ಮನ್ನು ದೂರ ಎಸೆದು ಇಬ್ಬರೂ ಪ್ರಜ್ಞೆ ತಪ್ಪಿ ಬಿದ್ದಾಗ ಯಾರೊ ಪುಣ್ಯಾತ್ಮರು ಆಸ್ಪತ್ರೆಗೆ ಸೇರಿಸಿ ಮನೆಗೆ ಸುದ್ದಿ ಮುಟ್ಟಿಸಿದ್ದಾರೆ. ಮದುವೆಗೆ ಹೊರಟ ನಮ್ಮ ಪಯಣ ನನ್ನವನನ್ನು ವಿಧಿ ಮಸಣಕ್ಕೆ ಕಳಿಸಿತು. ಮಗ ನಮ್ಮೊಂದಿಗೆ ಇರದೆ ಇರುವುದರಿಂದ ಅವನ ಪ್ರತಿರೂಪ ನನ್ನೊಂದಿಗೆ ಇದೆ ಈಗ‌. ಜ್ಞಾಪಿಸಿಕೊಂಡಾಗಲೆಲ್ಲ ಮೈ ನಡುಗುತ್ತದೆ‌. ದುಃಖ ಉಮ್ಮಳಿಸಿ ಬರುತ್ತದೆ. ಎಲ್ಲವೂ ವಿಧಿ ಲಿಖಿತ ನನ್ನ ಹಣೆ ಬರಿದಾಗಿತ್ತು.
ನಿನ್ನೊಂದಿಗಿನ ಸುಂದರ
ಬದುಕು ಕಸಿದುಕೊಂಡ
ಆ ದೇವನನ್ನು ಶಪಿಸಲೆ?
ಅಥವಾ
ನನ್ನ ದುರಾದೃಷ್ಟ ನೆನೆದು
ಜೀವನ ಪಯ೯೦ತ
ಕಣ್ಣೀರಿಡಲೆ?
ಅರಗಿಸಿಕೊಳ್ಳಲಾರೆ
ಅನುಭವಿಸಲಾರೆ
ಜೀವ ಹಿಂಡುವ ಸತ್ಯ!
ಮತ್ತದೆ ಆಫೀಸು. ರಿಂಗಣಿಸುವ ಕರೆಗೆ ಕಿವಿಗೊಟ್ಟು ಹಲೊ ಅನ್ನುವ ಅಪರಿಚಿತ ಕರೆಗೆ ಪರಿಚಯದ ಮುಖವಾಡ ಧರಿಸಿ ಮೆಲು ದನಿಯ ಇಂಪಾದ ಕಂಠದ ಶೋಷಣೆ ಮಾಮೂಲು‌. ತಲೆಯ ಮೇಲಿನ ಹೆಡ್ ಫೋನು ತನ್ನ ಗಾಂಭೀಯ೯ತೆ ಎತ್ತಿ ತೋರಿಸುವ ಗತ್ತಿಗೆ ಮಣಿಯಲೆ ಬೇಕು ಈ ಕೆಲಸಕ್ಕೆ ಸೇರಿದವರು.
ಮೊದ ಮೊದಲು ಅವನ ಕಳೆದುಕೊಂಡ ಆ ದಿನಗಳು ಯಮ ಯಾತನೆ. ಬೇಡವೆಂದರೂ ನೆನಪಾಗುವ ವ್ಯಕ್ತಿ ಅವನಾಗಿದ್ದರೆ ಕೆಲಸದ ಒತ್ತಡದಲ್ಲಿ ಮರೆಯುವ ಪ್ರಯತ್ನ ಮಾಡಬಹುದಿತ್ತೇನೊ. ಆದರೆ ಮನಸ್ಸಿನ ಭಾವನೆಗಳಿಗೆ ಸರಿ ಹೊಂದುವ ವ್ಯಕ್ತಿ; ತನ್ನಷ್ಟಕ್ಕೆ ನನ್ನೆದೆಯ ಗೂಡಲ್ಲಿ ಪ್ರತಿಷ್ಟಾಪನೆಗೊಂಡವನು. ನನ್ನ ಕನಸುಗಳ ರಾಜನವನು. ತನ್ನ ನೆನಪಿನ ಕುಡಿಯ ಕಾಣಿಕೆ ಇತ್ತವನು. ಇರುವಷ್ಟೂ ದಿನ ಪ್ರತೀ ಕ್ಷಣವನ್ನು ಸುಂದರಗೊಳಿಸಿದವನು. ಹೇಗೆ ಮರೆಯಲು ಸಾಧ್ಯ?
ಅದೇ ಮನೆ
ಅದೇ ಚೇರು
ಅದೇ ಮಾತು
ಅದೇ ಮೌನ
ಅದೇ ಪ್ರೀತಿ
ಅದೇ ನೆನಪು
ಕುಳಿತಲ್ಲಿ ನಿಂತಲ್ಲಿ
ಎಲ್ಲೆಂದರಲ್ಲಿ ನನ್ನ
ಜೊತೆಯಾಗಿದ್ದೆ ನೀನು
ಈಗ ಬರಿ ನೆನಪು
ಖುಷಿಯಿಂದ
ಅನುಭವಿಸಿದ ಕ್ಷಣಗಳೆಲ್ಲ
ಎಲ್ಲೊ ಮಟಾ ಮಾಯ
ನೆನಪುಗಳೇ ಹಿಂಡುವುವು
ನಖಶಿಕಾಂತ
ಉರಿ ಜ್ವಾಲೆ
ಉಮ್ಮಳಿಸಿ ಬರುವ ದುಃಖ
ಕೊನೆಯಿಲ್ಲದ ಕಣ್ಣೀರು
ಅನುಭವಿಸಲಾರೆ
ಜಿನುಗುವ ನೆತ್ತರು!
ಎರಡು ವಷ೯ಕ್ಕೇ ಜೀವನ ಪಯ೯೦ತ ನೆನಪಿಸಿಕೊಳ್ಳುವಷ್ಟು ಪ್ರೀತಿ, ಸುಃಖ, ಸಂತೋಷ ಧಾರೆ ಎರೆದವನ ನೆನೆದು ಅವಳ ಕಣ್ಣಲ್ಲಿ ಕಣ್ಣೀರ ಧಾರೆ ಕಂಡ ಅಕ್ಕ “ಸುಮಂಗಲ ನೀನಿನ್ನೂ ಯೋಚನೆ ಮಾಡೋದು ಬಿಟ್ಟಿಲ್ಲ. ಎಷ್ಟು ಸಾರಿ ಹೇಳೋದು‌ ಮತ್ತೆ ಬರೋದಿಲ್ಲ ಅವನು‌. ಬಾರದೂರಿಗೆ ಎಂದೊ ಪಯಣ ಬೆಳೆಸಿ ಆಗಿದೆ‌. ನಾವೂ ಒಂದಿನ ಹೋಗೋದೆ. ಅವನ ಮಗನಲ್ಲಿ ನೀ ಅವನ ರೂಪ ಕಾಣು. ಎದ್ದೇಳು‌. ಮಾಡೊ ಕೆಲಸ ಬೇಕಾದಷ್ಟಿದೆ‌.”
ಅಕ್ಕನ ಸಮಾಧಾನದ ನುಡಿ ನಗು ತರಿಸುತ್ತಿದೆ‌. ಅದೆಷ್ಟು ತಾಳ್ಮೆ ಇವಳಿಗೆ. ಕನಸಿನ ಸಾಮ್ರಾಜ್ಯ ಮನಸ್ಸಿನಲ್ಲಿ ತುಂಬಿಕೊಂಡು ಮುಖವಾಡ ಧರಿಸಿ ಎಲ್ಲ ಮರೆತಂತೆ ನನ್ನನ್ನು ಮಾತಾಡಿಸುತ್ತಾಳೆ‌. ಮದುವೆಗೆ ಈ ರೂಪ ಅನ್ನೋದು ಮುಖ್ಯವಾಗಿ ಹೋಯ್ತಲ್ಲ ಇವಳ ಬದುಕಲ್ಲಿ‌. ಮನಸ್ಸನ್ನು ಅರಿತು ಕೈ ಹಿಡಿದು ಮುನ್ನಡೆಸುವ ವ್ಯಕ್ತಿ ವಷ೯ ನಲವತ್ತಾದರೂ ಬರಲೆ ಇಲ್ವಲ್ಲ. ಕೇಂದ್ರ ಸಕಾ೯ರಿ ನೌಕರಿ ನಮ್ಮಿಬ್ಬರದೂ. ಆದರೆ ಇಬ್ಬರ ಹಣೆ ಬರೆಹ!
ನಮ್ಮ ಪರಿಸ್ಥಿತಿ ನೆನಪಿಸಿಕೊಂಡು ನಾವೆ ಅಳಬೇಕು. ಅಮ್ಮನ ನೆನಪು ನಮ್ಮೊಳಗಿನ ದುಃಖಕ್ಕೆ ಇನ್ನಷ್ಟು ಅಳುವಂತೆ ಮಾಡುತ್ತದೆ. ಇವತ್ತು ಅವಳಿದ್ದಿದ್ದರೆ ಅವಳ ಮಡಿಲಲ್ಲಿ ಗೋಳೊ ಎಂದು ದುಃಖ ಒತ್ತರಿಸಿದಾಗಲೆಲ್ಲ ಅತ್ತುಬಿಡಬಹುದಿತ್ತು. ಆಗ ಮನಸ್ಸಿಗೂ ಸಮಾಧಾನ ಆಗುತ್ತಿತ್ತೋ ಏನೊ. ಆದರೆ ಆ ಭಾಗ್ಯ ನಮಗಿಬ್ಬರಿಗೂ ಇಲ್ಲ. ಅಮ್ಮನ ಮುಖ ನೆನಪಿಲ್ಲ. ಅಪ್ಪನೆ ಎಲ್ಲ. ಕಿತ್ತು ತಿನ್ನುವ ಬಡತನದಲ್ಲಿ ನಮ್ಮನ್ನು ಬೆಳೆಸಲು ಹೆಣಗಾಟ. ಇರುವ ಮಾಸ್ತರ ಕೆಲಸ ಇನ್ನೆಷ್ಟು ಸಂಬಳ ಬರಲು ಸಾಧ್ಯ….? ಹೆಚ್ಚಿನ ಚಾಣಾಕ್ಷತನ ತಿಳಿಯದ ನಮ್ಮಪ್ಪ ಇದ್ದಿದ್ದರಲ್ಲೆ ಬದುಕುವ ಕಲೆ ನಮಗೂ ರೂಢಿಸಿದ ಆದಶ೯ ತಂದೆ. ಅಕ್ಕನ ಓದು ಹತ್ತನೆ ತರಗತಿಗೆ ಮುಗಿದು ಮನೆಯಲ್ಲಿ ಕೂತಾಗ ಅಪ್ಪನ ಗೆಳೆಯ ನಮಗೆ ಓದಿಸುವ ಆಸಕ್ತಿ ತೋರಿಸಿ ಜೀವನದಲ್ಲಿ ನೆಲೆ ನಿಲ್ಲಲು ದಾರಿ ಮಾಡಿಕೊಟ್ಟವರು.
ಓದಿನಲ್ಲಿ ನಾವಿಬ್ಬರೂ ಮುಂದು. ಅಕ್ಕ ಟೈಪಿಂಗ, ಶಾಟ೯ಹ್ಯಾಂಡ ಕಲಿತು ಕೇಂದ್ರ ಸಕಾ೯ರಿ ಕೆಲಸ ಸಿಕ್ಕಾಗ ನಮ್ಮದೆ ಗೂಡು ಪರ ಊರಿನಲ್ಲಿ. ಅಕ್ಕನೆ ನನ್ನ ಓದಿಸಿ ನಾನು ಬಿ‌.ಎಸ್. ಎನ್. ಎಲ್ ನಲ್ಲಿ ಕೆಲಸಕ್ಕೆ ಸೇರಿದಾಗ ಅವಳಿಗೂ ಮದುವೆ ವಯಸ್ಸು ದಾಟುವ ಹಂತ. ಪರಿಸ್ಥಿತಿಯ ಕೈಗೊಂಬೆ ಪಾಪ ಅವಳು.
ಆಗಿನ್ನೂ ಹೆಣ್ಣಿಗೇನು ಕೊರತೆ ಇರಲಿಲ್ಲ ಈಗಿನಂತೆ. ಬರುವ ಗಂಡುಗಳದೆ ಮೇಲುಗೈ. ಎಲ್ಲವನ್ನೂ ಕೂಲಂಕುಶವಾಗಿ ವಿಚಾರಿಸಿ ಅಳೆದೂ ಸುರಿದೂ ಹೆಣ್ಣಿನ ವಧು ಪರೀಕ್ಷೆ. ಹಾಡು ಬರುತ್ತ, ಶೇಡಿ ಬರುತ್ತ ಮತ್ತೊಂದು ಬರುತ್ತ, ಮಗದೊಂದು ಬರುತ್ತ ಅಂತ ಹೆಣ್ಣು ಹೆತ್ತವರನ್ನು ಗೋಳು ಹೊಯ್ದುಕೊಳ್ಳುವ ಕಾಲವದು.
ನನ್ನ ಅಕ್ಕನಿಗೆ ಬಂದಿರೊ ಗಂಡುಗಳಿಗೆ ಅವಳ ರೂಪ ಇಷ್ಟ ಆಗದೆ ವಾಪಸ್ಸಾದವರೆ ಜಾಸ್ತಿ. ಕುಳ್ಳಿ ಬೇರೆ. ಇದರ ಮುಂದೆ ಅವಳ ಗುಣ ಯಾರು ಗಣನೆನೇ ಮಾಡಲಲಿಲ್ಲ. ಲೋಕದ ರೂಢಿಯೆ ಹಾಗೆ. ರೂಪಕ್ಕೆ ಮಣೆ ಹಾಕುವವರೆ ಜಾಸ್ತಿ.
ನಮ್ಮಿಬ್ಬರ ಒಂಟಿ ಜೀವನ ಮತ್ತೆ ಒಂದೇ ಗೂಡು ಸೇರಿತು. ಆದರೆ ನಮ್ಮೊಂದಿಗೆ ಹೇಮಂತನ ಪ್ರತಿರೂಪ. ಅವನ ಆಟ ಕೆ ಕೆ ನಗು ಹಗಲಲ್ಲಿಯ ಕೆಲಸಗಳ ಒತ್ತಡದಲ್ಲಿ ದಿನ ಕಳೆಯುತ್ತಿತ್ತು. ಆದರೆ ಒಂಟಿ ದೇಹ, ಮನಸ್ಸು ಹೇಮಂತನನ್ನು ಬಯಸುತ್ತಿತ್ತು. ನಿದ್ದೆ ಇಲ್ಲದ ರಾತ್ರಿಗಳು ಕಣ್ಣಿಗೆ ರೂಢಿಯಾಗಿತ್ತು.
ಗೆಳೆಯಾ
ನಿನ್ನ ನೆನಪಾದಾಗಲೆಲ್ಲ
ನನ್ನ ಕಣ್ಣಿಗೆಲ್ಲಿ ನಿದ್ದೆ.
ಬರುವುದು
ಎಲ್ಲಿಂದಲೊ
ಕಂಡ ಕನಸುಗಳ
ಮೆರವಣಿಗೆ.
ಧುತ್ತೆಂದು.ಮೈ
ಮನವೆಲ್ಲ ಹರಿದಾಡಿ
ಆಗ ನಾನಾಗುವೆ
ನಿನ್ನೊಳಗಿನ ನಾನು.
ಕಣ್ಣ ಕೊಳದಲ್ಲಿ
ಮಂಜು
ಕತ್ತಲೆಯ ಗೂಡಲ್ಲಿ
ನಾ ಪತಂಗ.
ಮನದ ಚಿಂತೆ ಆರೋಗ್ಯದಲ್ಲಿ ಏರು ಪೇರು ದೇಹ ಕೃಷವಾಗತೊಡಗಿತು. ಕಂಡವರು ಆರೋಗ್ಯ ವಿಚಾರಿಸುವ ಮಟ್ಟ ತಲುಪಿದಾಗ ನನಗೇ ದಿಗಿಲಾಗಿದ್ದೂ ಇದೆ. ಆದರೆ ಪರಿಸ್ಥಿತಿ ಕೈ ಮೀರಿದ ಜೀವನ ನನ್ನದು. ಎಲ್ಲ ಆ ದೇವರ ಆಟ.
ಒಂದಿನ ಇದ್ದಕ್ಕಿದ್ದಂತೆ ಅಪ್ಪನ ಗೆಳೆಯ ಮತ್ತು ಅವರ ಹೆಂಡತಿಯ ಆಗಮನ. ನಮ್ಮದೊ ಅತ್ಯಂತ ಚಿಕ್ಕ ಮನೆ. ಆದರೆ ಅಕ್ಕ ಅದನ್ನೇ ಎಷ್ಟು ನೀಟಾಗಿ ಇಟ್ಟಿದ್ದಳು. ರುಚಿಕಟ್ಟಾದ ಅಡಿಗೆ ಮಾಡುವುದರಲ್ಲಿ ಎತ್ತಿದ ಕೈ. ಎಲ್ಲರೂ ಊಟ ಮುಗಿಸಿ ಕುಳಿತಾಗ ತಾವು ಬಂದ ಕಾರಣ ಅಕ್ಕನನ್ನು ಕರೆದು ಕೂಡಿಸಿಕೊಂಡು ಹೇಳುತ್ತಿದ್ದರು. ನಾನು ಮನೆ ಮುಂದೆ ಮಗನ ಜೊತೆ ಕುಳಿತಿದ್ದೆ. ಅವರಾಡುವ ಮಾತು ಅಸ್ಪಷ್ಟವಾಗಿ ಕೇಳುತ್ತಿತ್ತು. ಅಕ್ಕ ಯಾಕೊ ನನಗೆ ಬೇಡ ಅನಿಸುತ್ತಿದೆ ಎಂದು ಹೇಳುವುದು ಕೇಳಿ ಮನಸ್ಸಿಗೆ ಕಸಿವಿಸಿ ಆಯಿತು.
ಸರಿ ಅವರೊಂದಿಗೆ ನಾನೂ ಸೇರಿಕೊಂಡೆ. ವಿಷಯ ಗಂಭೀರವಾಗಿತ್ತು. ಅಕ್ಕನಿಗಿಂತ ಎರಡು ವಷ೯ ದೊಡ್ಡವನಾದ ಒಬ್ಬ ಮದುವೆ ಗಂಡಿನ ಪ್ರಸ್ತಾಪವದು. ಎಲ್ಲ ರೀತಿಯಿಂದ ಯೋಗ್ಯನಾದ ವರನನ್ನೆ ಆರಿಸಿದ್ದರು ಅವರು. ಆದರೆ ಅಕ್ಕ ನನಗ್ಯಾಕೆ ಈ ವಯಸ್ಸಿನಲ್ಲಿ ಬೇಡಾ. ಆದರೆ ನನಗೆ ಇವಳ ತೀಮಾ೯ನ ಸರಿ ಅನಿಸಲಿಲ್ಲ.
ಬಂದವರು ಟೀ ಕುಡಿದು ಸಾಯಂಕಾಲ ಬರ್ತೀವಿ ಇಬ್ಬರೂ ಮಾತಾಡಿ ಒಂದು ತೀಮಾ೯ನಕ್ಕೆ ಬನ್ನಿ ಅಂತ ಹೇಳಿ ಹೊರಟರು.
ಅಪ್ಪ ಎಲ್ಲೊ ಹೊರಗಡೆ ಹೋದವರು ಅವರು ಬರುವುದು ಇನ್ನು ಸಾಯಂಕಾಲವೆ. ಅದರಲ್ಲೂ ಇತ್ತೀಚೆಗೆ ಆಶ್ರಮದ ಕಡೆ ಅವರ ಮನ ಜಾಸ್ತಿ ವಾಲುತ್ತಿದೆ. ಮಾತು ಕಡಿಮೆ ಮಾಡಿದ್ದಾರೆ. ಸದಾ ಯೋಚಿಸುತ್ತ ತಮ್ಮಲ್ಲೆ ಗೊಣಗಿಕೊಂಡು ನಿಟ್ಟುಸಿರು ಬಿಡುತ್ತಾರೆ. ಸಂತೋಷದ ದಿನಗಳನ್ನು ಸವಿಯಬೇಕು, ಹೆಣ್ಣು ಮಕ್ಕಳು ತಮ್ಮ ಸಂಸಾರ ಕಟ್ಟಿಕೊಂಡಾಗ.ಮಕ್ಕಳು ಮೊಮ್ಮಕ್ಕಳು, ಅಳಿಯಂದಿರ ಒಡನಾಟದಲ್ಲಿ ಹಾಯಾಗಿ ಜೀವನ ಸಾಗಿಸುವ ಕನಸು ಕಂಡವರು. ನಾನೆ ಒಮ್ಮೆ ಕೇಳಿದ್ದೆ “ಅಪ್ಪ, ಅಮ್ಮನನ್ನು ಕಳೆದುಕೊಂಡ ಮೇಲೆ ಯಾಕೆ ನೀನು ಬೇರೆ ಮದುವೆ ಆಗಿಲ್ಲ?” ಇದು ಕೇಳಬೇಕೊ ಬೇಡವೊ ಗೊತ್ತಿಲ್ಲ, ಆದರೆ ಅಕ್ಕನ ಹತ್ತಿರ ಚೆನ್ನಾಗಿ ಬೈಸಿಕೊಂಡೆ. ಅದಕೆ ಅಪ್ಪ. “ನೀವಿಬ್ಬರು ನನ್ನ ಎರಡು ಕಣ್ಣಿದ್ದ ಹಾಗೆ. ಈ ಎರಡು ಕಣ್ಣುಗಳು ಚೆನ್ನಾಗಿ ಇದ್ದರೆ ಸಾಕು. ನಿಮ್ಮಮ್ಮ ನನ್ನ ಕಣ್ಣೆದುರು ಇಲ್ಲದೆ ಇರಬಹುದು, ಆದರೆ ನನ್ನ ಮನಸ್ಸಿನಿಂದ ಮರೆಯಾಗಲಿಲ್ಲ.”. ಹಾಗೆ ದಿಗಂತದ ಕಡೆ ಮುಖ ಮಾಡಿ ಕಣ್ಣೊರೆಸಿಕೊಂಡಿದ್ರು. ಆದರೆ ಅವರ ಕನಸೆಲ್ಲ ……‌.
ನನ್ನ ಯೋಚನೆಯಲ್ಲಿ ಅಕ್ಕ ಎದ್ದು ಹೋಗಿದ್ದೆ ಗೊತ್ತಾಗಲಿಲ್ಲ. ಅವಳಾಗಲೆ ಅಡಿಗೆ ಮನೆಯಲ್ಲಿ ಎನೊ ಸಿಹಿ ತಿಂಡಿ ಮಾಡೊ ತಯಾರಿ ನಡೆಸುತ್ತಿದ್ದಾಳೆ. ಬಂದವರು ತಂದೆ ತಾಯಿ ಸಮಾನರು. ಅವರು ಅಪರೂಪಕ್ಕೆ ಬಂದಿದ್ದಾರೆ ಏನಾದರೂ ಸಿಹಿ ಅಡಿಗೆ ರಾತ್ರಿಗೆ ಮಾಡಿ ಬಡಿಸಬೇಕು, ಅಕ್ಕ ತನ್ನ ಮನದಿಂಗಿತ ಹೇಳಿಕೊಂಡಿದ್ದಳು. ಸರಿ ನಾನೂ ಅವಳಿಗೆ ಸಹಾಯ ಮಾಡಲು ಅಡಿಗೆ ಮನೆ ಸೇರಿಕೊಂಡೆ.
“ಏನೇ ಆಗಲಿ ಅಕ್ಕ ನೀನು ಈ ಸಂಬಂಧ ಒಪ್ಪಿಕೊ. ಅಪ್ಪ ಕೊನೆಗಾಲದಲ್ಲಾದರೂ ನೆಮ್ಮದಿಯಿಂದ ಇರುವಂತಾಗಲಿ. ನೀನು ನಿನ್ನ ಗಂಡನ ಜೊತೆ ಹಾಯಾಗಿರು. ಅಪ್ಪ ನನ್ನೊಟ್ಟಿಗೆ ಇರುತ್ತಾರೆ. ಅಪ್ಪ ಬರಲಿ ನಾನೆ ಎಲ್ಲ ಹೇಳುತ್ತೇನೆ. ಆಮೇಲೆ ಅವರಿಗೆ ಹೇಳಿದರಾಯಿತು. ಬೇಡ ಹೇಳಬೇಡ. ನನ್ನ ಮೇಲೆ ಆಣೆ”
“ಅದು ಹಾಗಲ್ಲ. ನನಗ್ಯಾಕೆ ಈ ವಯಸ್ಸಿನಲ್ಲಿ ಮದುವೆ.”
“ಹಾಗೂ ಇಲ್ಲ ಹೀಗೂ ಇಲ್ಲ. ಇಳಿ ವಯಸ್ಸಿನಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ ಇರಬೇಕು. ಆಗಲೆ ಸಂಗಾತಿಯ ಅಗತ್ಯ ಇರೋದು. ನನಗಾದರೆ ನನ್ನ ಮಗ ಇದ್ದಾನೆ. ಆದರೆ ನಿನಗೆ. ಸುಮ್ಮನೆ ಹಠ ಮಾಡಬೇಡ.”
ಅಂತೂ ಇಂತೂ ಎಲ್ಲರ ಒತ್ತಾಯದ ಮೇರೆಗೆ ಒಪ್ಪಿದ ಅಕ್ಕ ಹುಡುಗನ ಭೇಟಿಯಾಗಿ ಮಾತನಾಡಿ ಬಂದ ಮೇಲೆ ಅಕ್ಕನೂ ಖುಷಿಯಾಗೆ ಇದ್ದಳು. ಹಾಗೆ ಎರಡು ತಿಂಗಳಲ್ಲಿ ಮದುವೆಯಾಗಿ ಗಂಡನ ಮನೆ ಸೇರಿಕೊಂಡಳು. ಅಪ್ಪ ಸ್ವಲ್ಪ ನಿರಾಳರಾದರು.
ದಿನಗಳು ಎಷ್ಟು ಬೇಗ ಉರುಳುತ್ತಿವೆ. ಅಕ್ಕನ ಮನೆ ದೂರವಾದರು ಯಾವಾಗಲಾದರೂ ಬಂದು ಹೋಗಿ ಮಾಡಿಕೊಂಡು ಜೀವನ ಸಂತೋಷವಾಗಿತ್ತು. ಮಗನನ್ನು ಹತ್ತಿರದಲ್ಲಿರುವ ಬೇಬಿ ಕೇರ್ಗೆ ಸೇರಿಸಿ ನಾನೂ ಆಫೀಸಿನ ಕೆಲಸಕ್ಕೆ ಹೋಗುತ್ತಿದ್ದೆ. ಅಪ್ಪ ಅವರದೆ ಸಾಮ್ರಾಜ್ಯದಲ್ಲಿ ತಲ್ಲೀನ.
ಒಂದೆರಡು ವಷ೯ ಆಗುವಷ್ಟರಲ್ಲಿ ಅಪ್ಪನ ಆರೋಗ್ಯ ಹದಗೆಟ್ಟು ದೂರವಾದಾಗ ನಿಜವಾಗಲೂ ನಾನು ಅಧೀರಳಾದೆ. ಮಗನ ಸ್ಕೂಲು, ಆಫೀಸು ಎಲ್ಲ ನಿಭಾಯಿಸುವಷ್ಟರಲ್ಲಿ ಹೈರಾಣಾಗಿ ಹೋಗುತ್ತಿದ್ದೆ.
ರಾತ್ರಿ ಎರಡು ಗಂಟೆ. ಅಕ್ಕನ ಫೋನು. ಜೋರಾಗಿ ಬಿಕ್ಕಳಿಸುತ್ತಿದ್ದಾಳೆ. “ಯಾಕೆ ಏನಾಯಿತೆ. ಹೇಳೆ ವಿಷಯ. ಅಳಬೇಡಾ.”
“ಇಲ್ಲ ಕಣೆ, ಬಾವನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಡಾಕ್ಟರ್ ಉಳಿಯೋದೆ ಕಷ್ಟ ಅಂತಿದ್ದಾರೆ. ಏನ್ ಮಾಡಲೆ? ಅವರಿಗೆ ಹೆಪಿಟೈಟೀಸ್ ಬಿ” ಉಳಿಯೋದಿಲ್ಲ, ಮನೆಗೆ ಕರೆದುಕೊಂಡು ಹೋಗಿ ಅಂತಿದ್ದಾರೆ.” ಮತ್ತೆ ಬಿಕ್ಕಳಿಕೆ.
ಜಂಗಾಲವೆ ಉಡುಗಿಹೋದಂತಾಯಿತು. ಲಗುಬಗೆಯಿಂದ ಮಗನನ್ನು ಎಬ್ಬಿಸಿ ಟ್ಯಾಕ್ಸಿ ಬುಕ್ ಮಾಡಿ ದೌಡಾಯಿಸಿ ಅಕ್ಕನಲ್ಲಿಗೆ ಬಂದೆ. ಆಗಲೆ ಮನೆ ಮುಂದೆ ಜನ ಜಮಾಯಿಸಿದ್ದರು.
ಮಿಲಿಟರಿಯಲ್ಲಿ ಹದಿನೆಂಟು ವಷ೯ ನಸ೯ ಕೆಲಸ ಮುಗಿಸಿ ರಿಟೈಡ್ ಆದ ಮೇಲೆ ಸಿಟಿಯಿಂದ ಸ್ವಲ್ಪ ದೂರದ ಚಿಕ್ಕ ಹಳ್ಳಿಯಲ್ಲಿ ತಮ್ಮದೆ ಆದ ಚಿಕ್ಕ ಕ್ಲಿನಿಕ್ ತೆರೆದು ಜನರ ಪ್ರೀತಿ ವಿಶ್ವಾಸ ಗಳಿಸಿ ಸುತ್ತ ಮುತ್ತಲಿನ ಜನಕ್ಕೆ ಔಷಧ ನೀಡುತ್ತಿದ್ದ ಬಾವ ಯಾಕೆ ತಮ್ಮ ಆರೋಗ್ಯದ ಕಡೆ ಲಕ್ಷ ಕೊಡಲಿಲ್ಲ. ಇದಕ್ಕಿರುವ ಮೂರು ಇಂಜಕ್ಷನ್ ಕಾಲ ಕಾಲಕ್ಕೆ ತೆಗೆದುಕೊಂಡಿದ್ದರೆ ಹೀಗಾಗುತ್ತಿತ್ತೇ? ಛೆ! ಎಂಥಾ ಕೆಲಸ ಮಾಡಿಕೊಂಡರು. ಆಸ್ಪತ್ರೆಯ ಡಾಕ್ಟರ್ ಕೂಡಾ ಇದೆ ಮಾತಾಡಿದರಂತೆ ಅಕ್ಕ ಪಕ್ಕದವರು ಮಾತಾಡಿಕೊಂಡರು. ಸದಾ ಸಮಾಜೋದ್ಧಾರದ ಮಾತು ಅವರ ಬಾಯಲ್ಲಿ. ಕರುಣೆಯ ಮೂತಿ೯ ಅವರಾಗಿದ್ದರು. ಅಕ್ಕನನ್ನು ಇರುವಷ್ಟು ವಷ೯ ಒಂದಿನವೂ ನೋಯಿಸಿಲ್ಲ. ಇಂಥ ಗಂಡನನ್ನು ಕಳೆದುಕೊಂಡ ಅಕ್ಕನ ಪರಿಸ್ಥಿತಿ…… ಛೆ, ಎಂಥಾ ದುಃಖದ ಸಂಗತಿ ಎಲ್ಲರ ಬಾಯಲ್ಲಿ, ಜನ ಸುದ್ದಿ ತಿಳಿದು ಬರ್ತಾನೆ ಇದ್ದರು.
ದಿನ ಕಾಯ೯ ಮುಗಿಸಿ ಅವಳನ್ನೂ ಕರೆದುಕೊಂಡು ವಾಪಸ್ಸು ಬಂದೆ. ಅವಳನ್ನು ಒಬ್ಬಳೇ ದೂರ ಕಳಿಸುವ ಮನಸ್ಸಾಗಲಿಲ್ಲ‌. ಅಪ್ಪನ ಗೆಳೆಯರೆ ಮುಂದೆ ನಿಂತು ಕಂಡವರ ಕಾಲಿಡಿದು ಟ್ರಾನ್ಸಫರ್ ಮಾಡಿಸಿಕೊಟ್ಟರು ನಾನಿರುವಲ್ಲಿಗೆ. ಸ್ವಲ್ಪ ದಿನ ಸುಧಾರಿಸಿಕೊಂಡು ಕೆಲಸಕ್ಕೆ ಹೋಗುವಂತಾದಳು.
ನನ್ನದು ಹೆತ್ತೊಡಲು. ಅಕ್ಕನದು ಬರಿದಾದ ಒಡಲು. ಆಸರೆಯಾಗಿ ಇರಬೇಕಾದ ಬಾಳಿನ ಕೊಂಡಿ ವಿಧಿ ಕಸಿದುಕೊಂಡ ನಮ್ಮಿಬ್ಬರ ಜೀವನಕ್ಕೆ ವಿಧಿ ಲಿಖಿತ ಹೇಳಲೆ ಅಥವ ಮಾಡಿದ ಖಮ೯ದ ಪ್ರತಿಫಲ ಹೇಳಲೆ?
ಮತ್ತದೆ ಮೌನ, ಮತ್ತದೆ ನಿರಾಸೆ, ಮತ್ತದೆ ದುಃಖ, ಮತ್ತದೆ ಗೂಡು, ಮತ್ತದೆ ಜೀವನ, ಇಬ್ಬರ ಬದುಕು ನಿಂತ ನೀರು.