ವಿಧೇಯ ವಿದ್ಯಾರ್ಥಿ

ವಿಧೇಯ ವಿದ್ಯಾರ್ಥಿ

ಅಂದು ಶಾಲಾವಾರ್ಷಿಕೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಿನ ಅವಧಿಯಲ್ಲಿ ಮಕ್ಕಳಿಗೆ ಪಾಠ ಮಧ್ಯಾಹ್ನದ ಅವಧಿಯಲ್ಲಿ ಯಥಾಪ್ರಕಾರ ನೃತ್ಯ ತರಬೇತಿ ನಡೆಸಲಾಗುತಿತ್ತು. ಬೆಳಗಿನ ಶಾಲಾ ತರಗತಿ ಅವಧಿಯಲ್ಲಿ ಎಂದಿನಂತೆ ನಾನು ತರಗತಿಗೆ ಹೋದೆ. ಆ ದಿನ ಮಕ್ಕಳಿಗೆ ನಾಳೆಯ ತರಗತಿಗೆ ಉತ್ತರ ಲೇಖನ ಕೊಡುವಂತೆ ಕೊಟ್ಟಿರುವ ೧೦ ಪದಗಳನ್ನು ಪಠ್ಯ ಪುಸ್ತಕದಲ್ಲಿ ಅಡಿಗೆರೆ ಹಾಕಿಸಿದೆನು. ಹಾಗೆಯೇ ಪ್ರತಿದಿನ ಬರೆಯುತ್ತಿರುವ ಕಾಪಿ ಪುಸ್ತಕದಲ್ಲಿ ಪಾಠ ಬರೆಯುವ ಬದಲು ಈ ದಿನ ಮಾತ್ರ ಈ ಪದಗಳನ್ನೇ ಬರೆಯಿರಿ ಎಂದು ತಿಳಿಸಿದೆ.

ಮಾರನೆಯ ದಿನ ಯಥಾಪ್ರಕಾರ ತರಗತಿಗೆ ಹೋದಾಗ ಮಕ್ಕಳು ಬರೆದಿರುವ ಕಾಪಿ ಪುಸ್ತಕವನ್ನು ತಿದ್ದಲು ತೆಗೆದುಕೊಂಡೆನು. ಅದರಲ್ಲೂ ಒಬ್ಬ ವಿದ್ಯಾರ್ಥಿ ಪ್ರತಿನಿತ್ಯ ಅರ್ಧ ಪುಟ ಬರೆಯೋ ಕಾಪಿ ಯನ್ನು ಒಂದು ಪುಟ ಬರೆದಿರುವುದು ಗಮನಿಸಿದೆ. ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕರೆದು ವಿಚಾರಿಸಿದೆ.

"ಯಾಕಪ್ಪಾ!.. ನೀನು ಪ್ರತಿನಿತ್ಯ ನಾನು ಹೇಳಿರುವ ಅರ್ಧಪುಟ ಕಾಪಿ ಬರೆಯೋ ಬದಲು ಒಂದು ಪುಟ ಕಾಪಿ ಬರೆದಿದ್ದೆ ಅಲ್ಲವೇ ?" ಎಂದು ವಿಚಾರಿಸಿದೆ.

ವಿದ್ಯಾರ್ಥಿ ಒಂದು ಕ್ಷಣ ಸುಮ್ಮನಿದ್ದು ತಡವರಿಸಿ "ಅದು ಮಾತಾಜಿ.... ಮೊದಲಿಗೆ ನೀವು ಹೇಳಿದಂತೆ ಕೊಟ್ಟಿರುವ ಉತ್ತರ ಲೇಖನ ಪದಗಳನ್ನು ಬರೆಯಲು ಮರೆತಿದ್ದೆ, ಆಮೇಲೆ ನೆನಪಾಗಿ ಉತ್ತರ ಲೇಖನ ಪದಗಳನ್ನೇ ಬರೆದೆ. ಹಾಗಾಗಿ ಈ ದಿನದ ಕಾಪಿ ಅರ್ಧ ಪುಟದ ಬದಲಿಗೆ ಒಂದು ಪುಟ ಆಯಿತು." ಎಂದು ಬಹಳ ಮುಗ್ದತೆಯಲ್ಲಿ ತಿಳಿಸಿದ. 

ವಿದ್ಯಾರ್ಥಿಯ ಮಾತನ್ನು ಕೇಳಿ ಒಮ್ಮೆ ನಾನು ಮಂತ್ರ ಮುಗ್ಧಳಾದೆ. ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಮಾಡಿಕೊಂಡು ಬರುವ ವಿದ್ಯಾರ್ಥಿಗಳ ಸಂಖ್ಯೆ ವಿರಳ. ಮೊಬೈಲ್, ಟಿವಿ, ಹಾವಳಿಯಲ್ಲಿ ಶಾಲಾ ದೈನಂದಿನ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಮಗ್ನರಾಗುವುದು ಬಹಳ ಕಡಿಮೆ. ಬರೆಯುವ ಕೆಲಸವಂತು ತಪ್ಪಿಸುವವರೇ ಜಾಸ್ತಿ. ಅಂತಹುದರಲ್ಲಿ ವಿಧೇಯ ವಿದ್ಯಾರ್ಥಿಗೆ ಉದಾಹರಣೆ ನೀನೇ ಕಣಪ್ಪಾ ಎಂದು ಹೇಳಿ ಬೆನ್ನು ತಟ್ಟಿ , ಪುರಾಣ ಕಾಲದ ಕಥೆ ವಿಧೇಯ ವಿದ್ಯಾರ್ಥಿಗೆ ಹೆಸರಾದ ಅರುಣಿ ಕತೆಯನ್ನು ಮಕ್ಕಳಿಗೆ ತಿಳಿಸಿದೆನು. ಮಕ್ಕಳೆಲ್ಲ ಸಂತೋಷದಿಂದ ಆ ಕಥೆಯನ್ನು ಕೇಳಿ ಖುಷಿ ಪಟ್ಟರು. ಹಾಗೂ ಇಂದಿಗೂ ಈಗಿನ ಆಧುನಿಕ ಕಾಲದಲ್ಲಿ ಈ ತರಹದ ವಿಧೇಯ ವಿದ್ಯಾರ್ಥಿಗಳು ಸಿಗುವುದು ಬಹಳ ಅಪರೂಪ ಎನ್ನುವುದೇ ನನ್ನ ಅನಿಸಿಕೆ.

-ಸುಮನ ಜೋಗಿ, ಕುಂದಾಪುರ

ಚಿತ್ರ ಕೃಪೆ: ಇಂಟರ್ನೆಟ್ ತಾಣ