ವಿನಾಯಕನ ಇ-ಮೇಲ್!

ವಿನಾಯಕನ ಇ-ಮೇಲ್!

ಬರಹ

(ನಗೆ ನಗಾರಿ ವೈಯಕ್ತಿಕ ವಿಭಾಗ)

ಇದೀಗ ತಾನೆ ಬಂದ ಇ-ಮೇಲ್ ಸಂದೇಶವೊಂದರಿಂದ ನಗೆ ನಗಾರಿಯ ಇಡೀ ಕಛೇರಿ ವಿಸ್ಮಿತವಾಗಿದೆ. ನಗೆ ಸಾಮ್ರಾಟರು ತನ್ನ ಹೆಸರಿಸಲು ಇಚ್ಚಿಸದ ಮೂಲಗಳಿಂದ ಕಂಡು ಕೊಂಡ ಸಂಗತಿಯೆಂದರೆ ಈ ಇಮೇಲ್ ಸಂದೇಶವನ್ನು ನಾಡಿನ ಎಲ್ಲಾ ಮಾಧ್ಯಮಗಳ ಕಛೇರಿಗಳಿಗೂ ರವಾನಿಸಲಾಗಿದೆ. ಅದರಲ್ಲೂ ದಿನದ ಇಪ್ಪತ್‌ನಾಲ್ಕೂ ಗಂಟೆ ವಾರ್ತೆಯ ಹೆಸರಿನಲ್ಲಿ ಬೇರೇನೇನನ್ನೆಲ್ಲಾ ಪ್ರಸಾರ ಮಾಡುವ ಸುದ್ದಿ ಸಂಸ್ಥೆಗಳಿಗೆ ಮೊದಲ ಆದ್ಯತೆಯಲ್ಲಿ ಈ ಇ-ಮೇಲ್ ರವಾನೆಯಾಗಿದೆ. ನಗೆ ನಗಾರಿಯ ಕಛೇರಿಯನ್ನು ಕೊನೆಯ ಘಳಿಗೆಯಲ್ಲಿ ಈ ಇ-ಮೇಲ್ ತಲುಪಿದ್ದು ನಮ್ಮ ಸಂಸ್ಥೆಯ ಸರ್ವ ಸದಸ್ಯರಲ್ಲೂ ಏಕಕ್ಷಣದಲ್ಲಿ ಹೆಮ್ಮೆಯನ್ನೂ, ಸಂತೋಷವನ್ನೂ ಮೂಡಿಸಿದೆ. ಇದೇ ಖುಶಿಯಲ್ಲಿ ಒಂದೆರಡು ತಾಸು ಹೆಚ್ಚು ಕೆಲಸ ಮಾಡಲು ನಗೆ ಸಾಮ್ರಾಟರು ಅಪ್ಪಣೆ ಹೊರಡಿಸಿದ್ದು ಮಾತ್ರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ವಿಷಯಕ್ಕೆ ಬರುವುದಾದರೆ ಇಂದು ಸಂಜೆ ಐದು ಗಂಟೆಗೆ ನಗೆ ನಗಾರಿಯ ಕಛೇರಿಯ ಏಕೈಕ ಗಣಕ ಯಂತ್ರದ ಅಂಚೆ ಡಬ್ಬಿಯಲ್ಲಿ ಒಂದು ಸಂದೇಶಬಂದು ಬಿದ್ದಿತು. ಬಹಳ ದಿನಗಳ ಹೆವಿ ಕೆಲಸದಿಂದಾಗಿ ಇ-ಮೇಲ್ ಡಬ್ಬದೊಳಕ್ಕೆ ಕಟ್ಟಿಕೊಂಡಿದ್ದ ಜೇಡರ ಬಲೆಗಳನ್ನು ತೆಗೆದು ಸ್ವಚ್ಛಗೊಳಿಸಲು ಸಾಧ್ಯವಾಗಿರಲಿಲ್ಲ. ಹೇಗೋ ಸಾವರಿಸಿಕೊಂಡು ಇ-ಮೇಲನ್ನು ಬಿಚ್ಚಿದ್ದಾಯ್ತು. ಲಾರ್ಡ್ ವಿನಾಯಕ ಅಲಿಯಾಸ್ ವಿಘ್ನೇಶ್ನರ ಎಂಬ ವ್ಯಕ್ತಿಯಿಂದ ಈ ಮೇಲ್ ಬಂದಿರುವುದಾಗಿ ತಿಳಿಯಿತು. ಆತ ಯಾರು ಎಂದು ಉಪ-ಸಂಪಾದಕರು ತಮ್ಮ ಖಾಸಗಿ ಬಾತ್ಮೀದಾರರನ್ನೂ, ಪೊಲೀಸಿನಲ್ಲಿರುವ ಆತ್ಮೀಯರನ್ನೂ ಸಂಪರ್ಕಿಸಿದರು, ನಗೆ ಸಾಮ್ರಾಟರು ತಮ್ಮ ಗಣಕದಲ್ಲಿನ ನಾಲ್ಕು ಚಿಲ್ಲರೆ ರಹಸ್ಯ ಫೈಲುಗಳನ್ನು ತಡಕಾಡಿದರು. ಆದರೆ ಯಾವುದೇ ಫಲ ಸಿಕ್ಕಲಿಲ್ಲ. ಕಡೆಗೆ ಮೇಲನ್ನು ಬಿಚ್ಚಿ ಓದಿದಾಗ ಅದರಲ್ಲಿ ಇದ್ದ ಫೋಟೊದಿಂದ ಈ ವಿಘ್ನೇಶ ಯಾರು ಎಂಬುದು ಪತ್ತೆಯಾಯಿತು.

ಆ ಮೇಲನ್ನು ಯಥಾವತ್ತಾಗಿ ನಗೆ ನಗಾರಿ ಡಾಟ್ ಕಾಮ್ ಓದುಗರಿಗಾಗಿ ಕೊಡಮಾಡುತ್ತಲಿದೆ.

ನಮಸ್ಕಾರ, ನಮಸ್ಕಾರ, ನಮಸ್ಕಾರ...



ನಾನು ಗಣೇಶ ಅಂದು ಬಿಟ್ರೆ ಮುಂಗಾರು ಮಳೆ ಹೀರೋ ಅಂದುಕೊಂಡು ಬಿಡ್ತೀರಿ ಅಂತ ಭಯವಾಗಿ ನನ್ನ ಹೆಸರನ್ನು ವಿನಾಯಕ ಅಲಿಯಾಸ್ ವಿಘ್ನೇಶ ಎಂದು ಕೊಟ್ಟಿರುವೆ. ಇಲ್ಲೇ ಮೇಲಿರುವ ನನ್ನ ಫೋಟೊ ನೋಡಿದರೆ ನಾನು ಯಾರು ಎಂಬುದು ನಿಮಗೆ ತಿಳಿದುಹೋಗುತ್ತದೆ.

ಮಾಧ್ಯಮ ಮಿತ್ರರಾದ ನಿಮ್ಮೆಲ್ಲರಿಗೆ ನಾನು ಕೆಲವು ವಿಜ್ಞಾಪನೆಗಳನ್ನು ಮಾಡಬೇಕು. ದಯೆ ಇಟ್ಟು ಆಲಿಸಿ...

೧. ಈ ಬಾರಿಯ ಗಣೇಶ ಚೌತಿಯಂದು ನಾನು ಭೂಮಿಗೆ ಬರಲಿದ್ದೇನೆ. ಫ್ಲೈಟ್ ಬುಕ್ಕಿಂಗ್ ಆಗಿದೆ. ನಮ್ಮಮ್ಮ ಇವತ್ತೇ ಬಂದು ಬಿಟ್ಟಿದ್ದಾಳೆ. ನಾನು ನಾಳೆ ಬರುವವನಿದ್ದೇನೆ.

೨. ಭಕ್ತಾದಿಗಳಲ್ಲಿ ಗೊಂದಲವಾಗಬಾರದು ಎಂದು ನಾನು ಕೆಲವು ಸ್ಪಷ್ಟನೆಗಳನ್ನು ನೀಡಲು ಇಚ್ಚಿಸುತ್ತೇನೆ. ನಾನು ಭೂಮಿಗೆ ಬಂದಾಗ ಯಾರ ಮನೆಯಲ್ಲೂ ಕಡುಬು, ಹೋಳಿಗೆ, ಮೋದಕಗಳನ್ನು ತಿನ್ನುವುದಿಲ್ಲ. ನನಗೆ ನೈವೇದ್ಯ ಮಾಡಿದ ಬಳಿಕ ಅದನ್ನು ಏನಾದರೂ ಮಾಡಿಕೊಳ್ಳಿ ಆದರೆ ನಾನು ನಿಮ್ಮ ಭಕ್ತಿಯ ಮೋದಕ, ಭಾವದ ಕಡುಬುಗಳನ್ನು ನುಂಗುವೆನೇ ಹೊರತು ಬೇರೇನನ್ನೂ ತಿನ್ನುವುದಿಲ್ಲ.

೩.ಹಾಗೆಯೇ ನಾನು ಹಾಲು, ಮೊಸರು, ಜೇನು ತುಪ್ಪ ಇತ್ಯಾದಿ ಏನನ್ನೂ ಕುಡಿಯುವುದಿಲ್ಲ. ಹಿಂದೆ ಕೆಲವು ಕಿಡಿಗೇಡಿಗಳು ನಾನು ಹಾಲು ಕುಡಿದೆ ಎಂದು ಗುಲ್ಲೆಬ್ಬಿಸಿದ್ದನ್ನು ನೀವು ಬಲ್ಲಿರಿ. ಹೀಗೇ ಬಿಟ್ಟರೆ ನಾಳೆ ನಾನು ಆಲ್ಕೋಹಾಲು ಕುಡಿದೆ ಎಂದು ಈ ದುಷ್ಟ ಜಂತುಗಳು ವದಂತಿ ಹಬ್ಬಿಸುತ್ತಾರೆ. ಯಾರ್ಯಾರೋ ಏನೇನನ್ನೋ ಕುಡಿದು ನನ್ನ ಮೇಲೆ ಆರೋಪ ಹೊರಿಸಿದರೆ ಕಡೆಗೆ ನಾನು ವಿಷವನ್ನು ಕುಡಿಯಬೇಕಾಗುತ್ತದೆ ಅಷ್ಟೇ!

೪. ನಾನು ಏನನ್ನೂ ತಿನ್ನುವುದಿಲ್ಲ, ಕುಡಿಯುವುದಿಲ್ಲ ಎಂದು ಹೇಳಿದ್ದನ್ನು ಕೇಳಿ ನೀವು ನಾನು ಡಯಟ್ ಮಾಡುತ್ತಿದ್ದೇನೆ ಎಂದು ತಿಳಿಯಬೇಡಿ. ಕೆಲವು ನರಪೇತಲ ದೇಹದ ಡಯಟ್ ಸ್ಪೆಶಲಿಸ್ಟುಗಳು ನಿಮ್ಮ ಟಿವಿ ಚಾನೆಲ್ಲುಗಳಲ್ಲಿ ಇಂಥ ಸುಳ್ಳುಗಳನ್ನು ಹೇಳಬಹುದು. ಎಚ್ಚರವಾಗಿರಿ.

೫. ರಸ್ತೆಯ ಮೇಲೆ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ, ಬೀದಿಯಲ್ಲಿರುವ ಮನೆಗಳೆಲ್ಲವುಗಳಿಂದ ಸಿಕ್ಕಷ್ಟು ಕಾಸು ಪೀಕಿ, ಮಧ್ಯ ರಾತ್ರಿಯವರೆಗೆ ಎದೆ ಹರಿಯುವಂತೆ ಲೌಡ್ ಸ್ಪೀಕರ್ ಹಚ್ಚಿ, ದೊಡ್ಡ ದೊಡ್ಡ ದೊಂಬಿ ಕಟ್ಟಿಕೊಂಡು ಜಾತ್ರೆ ಎಬ್ಬಿಸುತ್ತಾ, ಅಮಾಯಕರಿಗೆ ಪೀಡನೆ ಕೊಡುತ್ತಾ, ಅನ್ಯ ಕೋಮಿನವರನ್ನು ಕೆಣಕಿ, ತದುಕುವ ಕಿಡಿಗೇಡಿಗಳು ನನ್ನ ಭಕ್ತರಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತೇನೆ. ಅವರು ಮಾಡುವ ಯಾವುದೇ ದುಷ್ಕ್ರತ್ಯಕ್ಕೆ ನಾನು ಹಾಗೂ ನನ್ನ ಪರಿವಾರ ಜವಾಬ್ದಾರರಲ್ಲ.

೬. ಕಡೆಯದಾಗಿ ಮಾಧ್ಯಮದ ಮಿತ್ರರಾದ ನಿಮ್ಮಲ್ಲಿ ನಾನು ಕಳಕಳಿಯಿಂದ ಬೇಡಿಕೊಳ್ಳುವುದು ಇಷ್ಟೇ. ನಾನು ವಿದ್ಯಾಗಣಪತಿ. ವಿದ್ಯೆ-ಬುದ್ಧಿಗೆ ಒಡೆಯ. ನಿಮಗೆ ಅರ್ಥವಾಗುವ ಹಾಗೆ ಹೇಳಬೇಕೆಂದರೆ ನನ್ನದು ಮಾಹಿತಿ, ತಂತ್ರಜ್ಞಾನ, ವಿಜ್ಞಾನದ ಡಿಪಾರ್ಟ್‌ಮೆಂಟು. ಹೀಗಾಗಿ ನನ್ನ ಹಬ್ಬದ ದಿನದಂದಾದರೂ ಜನರಲ್ಲಿ ಅರಿವನ್ನು ಹೆಚ್ಚಿಸುವ, ಮಾಹಿತಿ ನೀಡುವ, ವೈಜ್ಞಾನಿಕ ಮನೋಭಾವನೆಯನ್ನು ಬೆಳೇಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ. ಮೂಢನಂಬಿಕೆಗಳನ್ನು ಪೋಷಿಸುವ, ಮೌಢ್ಯ ಆಚರಣೆಗಳನ್ನು ವೈಭವೀಕರಿಸುವ, ಕಂದಾಚಾರ, ಶೋಷಣೆಗಳನ್ನು ಬೆಂಬಲಿಸುವ, ಜನರನ್ನು ತಪ್ಪು ದಾರಿಗೆಳೆಯುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿಕ್ಕೆ ಇಡೀ ವರ್ಷವೇ ಇದೆ. ಏನಂತೀರಿ? ಇದರ ಬಗ್ಗೆ ಸ್ವಲ್ಪ ಆಲೋಚಿಸಿ. ಆ ಜೋತಿಷಿಗಳನ್ನು ಆ ದಿನ ಸ್ವಲ್ಪ ದೂರವಿರುವುದಕ್ಕೆ ಹೇಳಿ...

ಮತ್ತೇನೂ ಇಲ್ಲ. ಹಬ್ಬಕ್ಕೆ ಬಂದಾಗ ಉಳಿದದ್ದನ್ನು ಮಾತಾಡೋಣ. ಸಾಧ್ಯವಾದರೆ ಆಯ್ದ ಕೆಲವು ಸುದ್ದಿ ಸಂಸ್ಥೆಗಳಿಗೆ ಸಂದರ್ಶನವನ್ನು ನೀಡುತ್ತೇನೆ. ನಿಮ್ಮಲ್ಲರ ಪ್ರೀತಿ ಹೀಗೇ ಇರಲಿ.

ಇಂತಿ,
ನಿಮ್ಮ ವಿನಾಯಕ (vnk.gaja@gmail.com)

[ಈ ಇ-ಮೇಲ್‌ನ್ನು ಓದಿದ ನಗೆ ಸಾಮ್ರಾಟರು ವಿನಾಯಕನೊಂದಿಗೆ ಸಂದರ್ಶನಕ್ಕೆ ಏರ್ಪಾಟು ಮಾಡಲು ಓಡಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇವೆ]