ವಿನಾಶದ ಅಂಚಿನಲ್ಲಿರುವ ಟಿಟ್ಟಿಭ ಹಕ್ಕಿ
ಸಾಮಾನ್ಯ ಕೆರೆ, ನದಿಗಳ ಹತ್ರ ಬಯಲು ಪ್ರದೇಶಗಳಲ್ಲಿ ಕಾಣಲಿಕ್ಕೆ ಸಿಗೋ ಈ ಹಕ್ಕೀನ ಬಹಳಷ್ಟುಜನ ನೋಡಿರ್ತೀರಿ. ಮಾರ್ಚ್ ನಿಂದ ಆಗಸ್ಟ್ ತಿಂಗಳ ಮಧ್ಯೆ ಇದರ ಸಂತಾನಾಭಿವೃದ್ಧಿ ಕಾಲ. ಈ ಸಮಯದಲ್ಲಿ ಇವುಗಳು ಕೂಗೋದು ಜಾಸ್ತಿ.. ಇವು ಗೂಡನ್ನೇ ಮಾಡೋದಿಲ್ಲ. ನೆಲದ ಮೇಲೆ ದುಂಡಗಿನ ಕಲ್ಲುಗಳ ಜೊತೆ ಮಬ್ಬು ಬಣ್ಣದ ತಕ್ಷಣ ಗುರುತಿಸಲು ಸಾಧ್ಯವಾಗದ 3-4 ಮೊಟ್ಟೆಗಳನ್ನು ಇಡ್ತದೆ. ಮೊಟ್ಟೆಗಳ ಗಾತ್ರ ಸುಮಾರು 4cm ಅಂದ್ರೆ ಕೋಳಿಮೊಟ್ಟೆಯ ಅರ್ಧಗಾತ್ರದ್ದು. ನೆಲದ ಮೇಲೆ ಮೊಟ್ಟೆಗಳು ಯಾವುದು ಕಲ್ಲು ಯಾವುದು ಅಂತ ಗುರುತುಹಿಡಿಯೋದು ಭಾರೀ ಕಷ್ಟದ ಕೆಲಸ. ಸಿಟಿಗಳಲ್ಲಿ ಕಟ್ಟಡದ ಮೇಲೆ ಟೆರೇಸ್ ಗಳಲ್ಲಿ ಮಾತ್ರ ಅಲ್ಲ ರೈಲ್ವೇ ಹಳಿಗಳ ಮಧ್ಯೆ ಮೊಟ್ಟೆ ಇಟ್ಟು ಮರಿಮಾಡಿದ ಉದಾಹರಣೆಗಳೂ ಇದೆ. ಮೊಟ್ಟೆ ಇಟ್ಟಮೇಲೂ ಏನಾದ್ರೂ ಅಪಾಯ ಅನ್ಸಿದ್ರೆ ನಿಧಾನವಾಗಿ ಮೊಟ್ಟೆಗಳನ್ನು ಉರುಳಿಸಿಕೊಂಡು ಹೋಗಿ ಗೂಡಿನ ಜಾಗ ಬದಲಾಯಿಸಿದ್ದೂ ಇದೆ ಅಂತ ಹೇಳ್ತಾರೆ.
ಗಂಡು ಹೆಣ್ಣು ಎರಡೂ ಹಕ್ಕಿಗಳು ಸರದಿ ಪ್ರಕಾರ ಮೊಟ್ಟೆಗಳಿಗೆ ಕಾವು ಕೊಡ್ತವೆ. ತಮ್ಮ ಗೂಡಿನ ಹತ್ರ ಯಾವುದಾದರೂ ಪ್ರಾಣಿ ಸುಳಿದರೂ ಸಾಕು ಜೋರಾಗಿ ಬೊಬ್ಬೆ ಹಾಕುತ್ತಾ ಅವುಗಳ ದಿಕ್ಕು ತಪ್ಪಿಸುತ್ತದೆ. ಏಲ್ಲಾದರೂ ಹಾವು,ಉಡ, ಮುಂಗುಸಿ ಹೇಗೋ ಗೂಡಿನ ಹತ್ರ ಬಂದ್ರೆ ಅರಚಾಡಿ ರೆಕ್ಕೆ ಎತ್ತಿ ಹೆದರಿಸಿ ಓಡಿಸಿಬಿಡ್ತವೆ. ಅಗತ್ಯ ಬಿದ್ರೆ ವೈರಿಗಳ ಮೇಲೆ ಆಕಾಶದಿಂದ ಮಿಸೈಲ್ ಥರ ಧಾಳಿ ಮಾಡಿ ಶತ್ರುಗಳನ್ನ ಓಡಿಸುತ್ತವೆ. ಸುಮಾರು 28- 30 ದಿನಗಳಲ್ಲಿ ಮೊಟ್ಟೆ ಒಡೆದು ಮರಿಗಳು ಹೊರಗಡೆ ಬರ್ತವೆ. ಹೊರಗಡೆ ಬಂದ ಕ್ಷಣದಿಂದಲೇ ನಡೆದಾಡುವ ಸಾಮರ್ಥ್ಯ ಈ ಮರಿಗಳಿಗೆ ಇರ್ತದೆ, ಅವಾಗಿಂದಲೇ ತಮ್ಮ ತಂದೆ ತಾಯಿಗಳನ್ನು ಇವು ಹಿಂಬಾಲಿಸುತ್ತವೆ. ಏನಾದರೂ ಆಪತ್ತಿನ ಸೂಚನೆ ಸಿಕ್ಕಿದ ತಕ್ಷಣ ನೆಲದಲ್ಲಿ ಅಥವಾ ಹುಲ್ಲುಗಳ ಎಡೆಯಲ್ಲಿ ಅಡಗಿಕೊಳ್ಳುತ್ತವೆ.
ನೆಲದ ಮೇಲೆ ಸಿಗುವ ಕೀಟಗಳೇ ಇವುಗಳ ಮುಖ್ಯ ಆಹಾರ. ಜೊತೆಗೆ ಶಂಕುಹುಳದಂತಹ ಜೀವಿಗಳನ್ನೂ, ಕೆಲವೊಮ್ಮೆ ಕಾಳುಗಳನ್ನೂ ತಿನ್ನುತ್ತದೆ. ಬಿರುಬೇಸಗೆಯ ದಿನಗಳಲ್ಲಿ ತನ್ನ ಹೊಟ್ಟೆಯನ್ನು ನೀರಿನಲ್ಲಿ ಒದ್ದೆಮಾಡಿಕೊಂಡು ಬಂದು ಮರಿಗಳಿಗೆ ನೀರು ಉಣಿಸುತ್ತದೆಯಂತೆ. ಇದರ ಉದ್ದವಾದ ಕಾಲುಗಳು ಮತ್ತು ಬೆರಳುಗಳು ಮಣ್ಣು, ಕೆಸರು, ಮರಳು ಎಲ್ಲದರ ಮೇಲೂ ನಡೆಯೋದಕ್ಕೆ ಅನುಕೂಲಕರ. ಹಾರಲಿಕ್ಕೆ ಸಾಧ್ಯ ಆದ್ರೂ ಇವುಗಳು ಮರದಮೇಲೆ ಕೂತ್ಕೊಳ್ಲೋಕ್ಕೆ ಸಾದ್ಯ ಆಗಲ್ಲ. ಬಲಿಷ್ಟವಾದ ರೆಕ್ಕೆ ಇರೋದ್ರಿಂದ ತಕ್ಷಣ ಹಾರುವ ಮತ್ತು ಅಗತ್ಯ ಬಿದ್ರೆ ಡೈವ್ ಮಾಡುವ ಸಾಮರ್ಥ್ಯ ಇವಕ್ಕಿದೆ. ಸುಸ್ತಾದಾಗ ನೆಲದಮೇಲೆ ಕೂತುಕೊಳ್ಳುತವೆ ಅಥವಾ ಒಂಟಿಕಾಲಿನಲ್ಲಿ ನಿಂತು ಆಯಾಸ ಪರಿಹಾರ ಮಾಡಿಕೊಳ್ತವೆ.
ಇವು ರಾತ್ರಿಯೆಲ್ಲ ಕೂಗ್ತಾ ಇರ್ತವಲ್ಲಾ ಹಾಗಾದ್ರೆ ಇವು ನಿದ್ರೆ ಮಾಡೋದಿಲ್ವಾ ಅಂತ ಕೆಲವರು ಕೇಳ್ತಾರೆ. ಸಂತಾನಾಭಿವೃದ್ಧಿ ಕಾಲದಲ್ಲಿ ಅಗತ್ಯ ಬಿದ್ರೆ ಇವು ರಾತ್ರೆಯೂ ಎಚ್ಚರವಾಗಿ ಇರ್ತವೆ. ಈ ಹಕ್ಕಿ ನದಿಗಿಂತಾ ತುಂಬ ಎತ್ತರ ಪ್ರದೇಶದಲ್ಲಿ ಗೂಡು ಮಾಡಿದ್ರೆ ಭಾರೀ ಮಳೆಗಾಲ ಬರುತ್ತೆ, ಒಣಗಿದ ನದಿಯ ಮದ್ಯದಲ್ಲಿ ಗೂಡು ಮಾಡಿದ್ರೆ ಮಳೆಗಾಲ ಬರೋದು ತಡ ಆಗುತ್ತೆ, ನದಿಬದಿಯಲ್ಲೇ ಮೊಟ್ಟೆ ಇಟ್ರೆ ಮಳೆಗಾಲ ಸರಿಯಾದ ಸಮಯಕ್ಕೆ ಬರುತ್ತೆ ಅಂತ ಕೆಲವುಕಡೆ ಜನ ನಂಬ್ತಾರಂತೆ. ಪ್ರಾಣಿ ಪಕ್ಷಿಗಳು ನಮಗಿಂತ ಬೇಗ ಪರಿಸರದ ಬದಲವಣೆಗಳನ್ನು ಗ್ರಹಿಸುತ್ತವೆ, ಅವುಗಳನ್ನು ನೋಡಿ ಪ್ರಕೃತಿಗೆ ಹತ್ತಿರವಾಗಿ ಬದುಕೋದನ್ನು ನಾವು ಕಲೀಬೇಕು ಅಲ್ವಾ..
ಏನು ಇಷ್ಟೆಲ್ಲಾ ಕತೆ ಹೇಳಿ ಈ ಹಕ್ಕಿ ಹೆಸರೇ ಹೇಳ್ಲಿಲ್ಲ ಅಂತಿದೀರಾ.. ಅಷ್ಟಾಂಗ ಯೋಗದಲ್ಲಿ ಒಂದು ಆಸನ ಇದೆ. ಎರಡೂ ಕಾಲುಗಳನ್ನು ಭುಜದ ಹಿಂಬಾಗದಿಂದ ಮೇಲ್ಮುಖವಾಗಿ ಎತ್ತಿ ಕೈಗಳ ಆಧಾರದಲ್ಲಿ ನಿಲ್ಲುವ ಭಂಗಿ, ಅದೇ ಟಿಟ್ಟಿಭಾಸನ... ಹಕ್ಕಿಯಿಂದಾಗಿ ಆಸನಕ್ಕೆ ಈ ಹೆಸರು ಬಂತು ಅಂತ ಹೇಳ್ತಾರೆ.. Yes you are right..
ಈ ಹಕ್ಕಿಯ ಕನ್ನಡ ಹೆಸರು ಟಿಟ್ಟಿಭ. ಮಲೆನಾಡಿನ ಕಡೆ ತೇನೆಹಕ್ಕಿ ಅಂತ ಕರೀತಾರೆ, ಕುಂದಗನ್ನಡದಲ್ಲಿ ಟ್ಯಾಂಟ್ರಕ್ಕಿ ಅಂತಾನೂ, ಇನ್ನು ಕೆಲವರು ಟವಕ್ಕಿ ಅಂತನೂ, ತುಳುವಿನಲ್ಲಿ ಟಿರಿಂ ಟಿರಿ ಪಕ್ಕಿ ಅಂತಾನೂ ಕರೀತಾರೆ...
ಇದರ English ಹೆಸರು Red Wattled Lapwing..
ವೈಜ್ಞಾನಿಕ ಹೆಸರು ( Vanellus indicus )
ಚಿತ್ರ ಬರಹ : ಅರವಿಂದ ಕುಡ್ಲ, ಬಂಟ್ವಾಳ