ವಿನಾಶದ ಅಂಚಿನಲ್ಲಿ ಕಡಲಾಮೆಗಳು

ಇಂದಿನ ಪೀಳಿಗೆಯ ಎಷ್ಟೋ ಮಕ್ಕಳು ಆಮೆ ಎಂಬ ಜೀವಿಯನ್ನು ನೋಡಿಲ್ಲವೆಂದರೆ ಅತಿಶಯೋಕ್ತಿಯಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಈ ಆಮೆಯೆಂಬ ಪ್ರಾಣಿ ವಿನಾಶದ ಅಂಚಿಗೆ ತೆರಳಲಿದೆ. ಮುಂದೊಂದು ದಿನ ಈ ಪ್ರಾಣಿಯನ್ನು ಕೇವಲ ಚಿತ್ರಗಳಲ್ಲಿ ಮಾತ್ರ ಗುರುತಿಸಬೇಕಾದ ಪರಿಸ್ಥಿತಿ ಬರಬಹುದು.
ಈ ಆಮೆ ಮುದ್ದು-ಮೊದ್ದು ಪ್ರಾಣಿ. ಜತೆಗೆ ಇದರಿಂದ ಯಾರಿಗೂ ಅಪಾಯವಿಲ್ಲ. ಇವು ಬೆನ್ನೆಲುಬನ್ನು ಹೊಂದಿದ್ದು ಗಟ್ಟಿಯಾದ ಚಿಪ್ಪಿನ ಹೊರಕವಚವನ್ನು ಹೊಂದಿದೆ. ಇದು ಬಹುಪಾಲು ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಒಂದು ತಂತ್ರಕ್ಕೆ ಸಹಕಾರಿಯಾಗಿದೆ. ಆಮೆಗಳನ್ನು ಪ್ರಮುಖವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಅವೆಂದರೆ ಭೂಮಿಯ ಮೇಲೆ ವಾಸಿಸುವ ಆಮೆಗಳು ಮತ್ತು ಸಮುದ್ರಗಳಲ್ಲಿ ವಾಸಿಸುವ ಆಮೆಗಳು. ಆದರೆ ಹೆಚ್ಚಿನ ಆಮೆಗಳು ಸಮುದ್ರವಾಸಿಗಳು. ಬನ್ನಿ, ಇಂಥ ಅಪರೂಪದ ಕಡಲಾಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
* ಈ ಆಮೆಗಳು “ಡೈನೋಸಾರಸ್" ಸಂತತಿಯ ಸಮಕಾಲೀನ ಪ್ರಾಣಿಗಳಾಗಿದ್ದು, ೧೫೦೦ ವರ್ಷಗಳ ಇತಿಹಾಸವನ್ನು ಹೊಂದಿವೆ.
* ಹೆಣ್ಣು ಆಮೆ ಒಂದು ಸಲಕ್ಕೆ ಅಬ್ಬಬ್ಬಾ ಅಂದರೆ ೩೦ ಮೊಟ್ಟೆಗಳನ್ನಿಡುತ್ತದೆ. ಆದರೆ, ಆಮೆಗಳು ನೀರಿನಲ್ಲಿ ಮೊಟ್ಟೆಗಳನ್ನು ಇಡುವುದಿಲ್ಲ. ಸಾಮಾನ್ಯವಾಗಿ ಆಮೆ ರಾತ್ರಿ ಹೊತ್ತೇ ಮೊಟ್ಟೆ ಇಡುತ್ತದೆ. ಮೊಟ್ಟೆಗಳನ್ನು ಸಮುದ್ರದ ದಂಡೆಯ ಮರಳಿನಲ್ಲಿ ಇಟ್ಟ ನಂತರ ಮರಳಿನಿಂದ ಮತ್ತು ಇತರೆ ಸಾವಯವ ವಸ್ತುಗಳಿಂದ ಮುಚ್ಚಿಬಿಡುತ್ತದೆ. ಆಮೆ ಇಟ್ಟ ಮೊಟ್ಟೆಗಳು ಮರಿಯಾಗಿ ಹೊರಬರಲು ಕನಿಷ್ಟ ಆರು ದಿನಗಳಿಂದ ಹಿಡಿದು ಗರಿಷ್ಟ ೧೨೦ ದಿನಗಳು ಹಿಡಿಯುತ್ತವೆ. ಈ ಕಡಲಾಮೆಗಳ ಮೊಟ್ಟೆಗಳು ಇಂದಿಗೂ ಅನೇಕ ದೇಶಗಳಲ್ಲಿ ಅತ್ಯಂತ ರುಚಿಕರ ಖಾದ್ಯ ! ಇದರಿಂದ ಇವುಗಳ ಲೂಟಿ ನಿರಂತರವಾಗಿ ನಡೆದಿದೆ.
* ಆಶ್ಚರ್ಯವೆಂದರೆ ಇವು ಚಿಕ್ಕ ಮರಿಗಳಾಗಿದ್ದಾಗ ಸಸ್ಯಾಹಾರಿಗಳಾಗಿದ್ದು ಪ್ರಾಯಕ್ಕೆ ಬಂದ ನಂತರ ಮಾಂಸಹಾರಿಗಳಾಗುತ್ತವೆ. ಇವುಗಳ ಆಹಾರವೆಂದರೆ ಹುಳುಹುಪ್ಪಟೆ, ಲಾರ್ವಾ ಇತ್ಯಾದಿ.
* ಈ ಆಮೆಗಳ ಜೀವಿತಾವಧಿ ಸುಮಾರು ಮನುಷ್ಯನ ಜೀವಿತಾವಧಿಗೆ ಸರಿ ಹೊಂದುತ್ತದೆ. ಅಂದರೆ ಇವು ಸುಮಾರು ೧೦೦ ರಿಂದ ೧೫೦ ವರ್ಷ ಬದುಕಬಲ್ಲವು.
* ನೆಲದ ಮೇಲಿನ ಕೆಲವು ಬೃಹತ್ ಆಮೆಗಳು ೩೦೦ ಕೆಜಿ ತೂಕ ಇರುವುದೂ ಉಂಟು. ಇವುಗಳ ಚಲನೆ ಕೇವಲ ಗಂಟೆಗೆ ೦.೨೭ ಕಿಲೋ ಮೀಟರ್ ಮಾತ್ರ !
* ಆಮೆಗಳು ಇಟ್ಟ ಸುಮಾರು ೧೦೦೦ ಮೊಟ್ಟೆಗಳಲ್ಲಿ ಕೇವಲ ಒಂದು ಅಥವಾ ಎರಡು ಮಾತ್ರ ಮರಿಗಳಾಗಿ ಪ್ರಾಯದ ಹಂತವನ್ನು ತಲುಪುತ್ತವೆ. ಉಳಿದವು ಶಾರ್ಕ್, ಸಮುದ್ರ ಮೀನುಗಳಿಗೆ ಆಹಾರವಾಗಿ ಬಿಡುತ್ತವೆ.
* ಕಡಲಾಮೆಗಳು ಒಮ್ಮೆ ಹೊರಬಂದು ಗಾಳಿಯನ್ನು ಸೇವಿಸಿ ಬಿಟ್ಟರೆ ಸುಮಾರು ಐದು ಗಂಟೆಗಳ ಕಾಲ ಸಾಗರದಲ್ಲಿ ಸಂಚರಿಸುತ್ತಾ ಇರಬಲ್ಲವು !
* ಕಡಲಾಮೆಗಳು ನೀರಿನಲ್ಲಿ ‘ಡೈವಿಂಗ್' ಮಾಡುವಾಗ ತಮ್ಮ ಹೃದಯದ ಬಡಿತವನ್ನು ಸುಮಾರು ನಿಮಿಷಗಳ ಹಾಗೆಯೇ ಹಿಡಿದುಕೊಳ್ಳಬಲ್ಲವು. ಜತೆಗೆ ಸಾಗರದಲ್ಲಿ ಸಾವಿರಾರು ಕಿಲೋ ಮೀಟರ್ ದೂರ ವಿಹಾರ ನಡೆಸಬಲ್ಲವು. ಹೆಣ್ಣು ಕಡಲಾಮೆಗಳು ಸಾವಿರಾರು ಮೈಲಿಗಳವರೆಗೆ ತಮ್ಮ ವಿನೋದ-ವಿಚಾರಗಳನ್ನು ನಡೆಸಿ ಕೊನೆಗೆ ತಮ್ಮ ಸ್ವಸ್ಥಾನ ತಲುಪಿ ಅಲ್ಲಿ ಮೊಟ್ಟೆಗಳನ್ನು ಇಡುತ್ತವೆ.
* ಇತ್ತೀಚಿನ ಸಂಶೋಧನೆಗಳ ಪ್ರಕಾರ, ೩೦ ವರ್ಷಗಳ ಹಿಂದೆ ಇಂಡೋನೇಷ್ಯಾ ಕಡಲ ತೀರದಲ್ಲಿ ಒಂದು ರಾತ್ರಿಯಲ್ಲಿ ಸುಮಾರು ಒಂದು ಸಾವಿರ ಕಡಲಾಮೆಗಳು ಬಂದು ಮೊಟ್ಟೆಗಳನ್ನು ಇಡುತ್ತಿದ್ದವು. ಐದು ವರ್ಷಗಳ ಹಿಂದೆ ಈ ಸಂಖ್ಯೆ ೫೦ಕ್ಕೆ ಇಳಿದಿದ್ದು, ಇಂದು ಈ ಸಂಖ್ಯೆ ಕೇವಲ ೧೦-೨೦ಕ್ಕೆ ಸೀಮಿತಗೊಂಡಿದೆ !
* ಇನ್ನೊಂದು ಸಮೀಕ್ಷೆಯ ಪ್ರಕಾರ ೧೯೪೭ರಲ್ಲಿ ೪೦ ಸಾವಿರ ಹೆಣ್ಣಾಮೆಗಳು ಮೆಕ್ಸಿಕೋ ಗಲ್ಫ್ ತೀರಕ್ಕೆ ಬಂದು ಮೊಟ್ಟೆಗಳನ್ನಿಡುತ್ತಿದ್ದವು. ೧೯೬೦ರಲ್ಲಿ ಈ ಸಂಖ್ಯೆ ೫೦೦೦ಕ್ಕೆ ಇಳಿದಿದ್ದು, ೧೯೮೯ರಲ್ಲಿ ಈ ಸಂಖ್ಯೆ ಕೇವಲ ೭೦೦ಕ್ಕೆ ಕುಸಿದಿದೆ. ನಾವಿಂದು ಕೇವಲ ಒಂದೊಂದು ಮೊಟ್ಟೆಯನ್ನು ಸಂರಕ್ಷಿಸಿ ಅದನ್ನು ಮರಿ ಮಾಡಲು ಅನುವು ಮಾಡಿಕೊಟ್ಟರೆ, ಕೆಲವೇ ವರ್ಷಗಳಲ್ಲಿ ಆಮೆಗಳ ಸಂತತಿಯನ್ನು ಅಭಿವೃದ್ಧಿಗೊಳಿಸಬಹುದು.
* ಹಿಂದೂ ಪುರಾಣಗಳ ನಂಬಿಕೆಯಂತೆ, ಆಮೆಯು ವಿಷ್ಣುವಿನ ದಶಾವತಾರಗಳಲ್ಲಿ ಎರಡನೆಯದು. ಅದೇ ಕೂರ್ಮಾವತಾರ. ಇಂತಹ ನಂಬಿಕೆಗಳ ಹಿಂದೆ ಇಂತಹ ಸಂತತಿಗಳ ಸಂರಕ್ಷಣೆಯ ಕಳಕಳಿ ಇರಬಹುದೇನೋ?!
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ