ವಿನಾಶದ ಹಾದಿಯಲ್ಲಿ ಬಣ್ಣದ ಕೊಕ್ಕರೆ !
ಇವತ್ತಿನ ಹಕ್ಕಿ ಕಥೆಯಲ್ಲಿ ಒಂದು ವಿಶಿಷ್ಟವಾದ ಹಕ್ಕಿಯ ಪರಿಚಯ ಮಾಡಿಕೊಳ್ಳೋಣ. ಕಳೆದವರ್ಷ ಸುಮಾರು ಇದೇ ಸಮಯಕ್ಕೆ ನಾನೊಂದು ಕಡೆ ಪ್ರವಾಸ ಹೋಗಿದ್ದೆ. ನಾನು ಹೋದ ಹಳ್ಳಿಯ ಹೆಸರು ಅಂಕಸಮುದ್ರ. ಅರಬ್ಬೀ ಸಮುದ್ರದ ಹತ್ತಿರ ವಾಸಿಸುವ ನನಗೆ ಅಂಕಸಮುದ್ರ ಎಂಬ ಹೆಸರು ಬಹಳ ಕುತೂಹಲ ಮೂಡಿಸಿತ್ತು. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಈ ಪುಟ್ಟ ಹಳ್ಳಿಯಲ್ಲಿರುವ ಅಂಕಸಮುದ್ರ ಪಕ್ಷಿಧಾಮಕ್ಕೆ ನನ್ನನ್ನು ಕರೆದುಕೊಂಡು ಹೋದವರು ಶಿಕ್ಷಕ ಮಿತ್ರ ರಂಗನಾಥ ಸರ್.
ತುಂಗಭದ್ರಾ ನದಿಗೆ ಹೊಸಪೇಟೆಯ ಹತ್ತಿರ ಒಂದು ಅಣೆಕಟ್ಟು ಕಟ್ಟಲಾಗಿದೆ. ಅದರಿಂದಾಗಿ ಉಂಟಾದ ಹಿನ್ನೀರಿನ ಬದಿಯಲ್ಲಿ ಅಂಕಸಮುದ್ರ ಎಂಬ ಪುಟ್ಟ ಹಳ್ಳಿ ಇದೆ. ಅಲ್ಲೊಂದು ದೊಡ್ಡ ಕೆರೆ ಇದೆ. ಕೆರೆ ಎಷ್ಟು ದೊಡ್ಡದು ಎಂದರೆ ಇದಕ್ಕೆ ಒಂದು ಸುತ್ತು ಹಾಕಬೇಕಾದರೆ ಕನಿಷ್ಟ ನಾಲ್ಕು ಕಿಲೋಮೀಟರ್ ನಡೆಯಬೇಕು. ಮಳೆಗಾಲದಲ್ಲಿ ನೀರಿನಿಂದ ತುಂಬುವ ಈ ಕೆರೆಯಲ್ಲಿ ಹಲವಾರು ದೊಡ್ಡ ದೊಡ್ಡ ಮರಗಳಿವೆ. ಆ ಮರದಮೇಲೆ ಕಟ್ಟಿಗೆ, ಒಣಕಡ್ಡಿ, ಹುಲ್ಲು, ಎಲೆಗಳನ್ನು ಬಳಸಿ ಮಾಡಿದ ಅಟ್ಟಳಿಗೆ. ಅದರಲ್ಲಿ ಮರಿಹಕ್ಕಿಗಳು. ಒಂದೇ ಮರದ ಮೇಲೆ ಹತ್ತಾರು ಇಂತಹ ಗೂಡುಗಳು. ಉದ್ದನೆಯ ಕಾಲುಗಳು, ಬಿಳೀ ಬಣ್ಣದ ದೇಹ, ದೇಹದ ಅಂದವನ್ನು ಹೆಚ್ಚಿಸುವ ಕಪ್ಪು ಬಣ್ಣದ ಪಟ್ಟಿಗಳು. ತಲೆ, ಮುಖ ಮತ್ತು ಕಾಲಿನ ಮೇಲಿನ ಕೆಂಪು ಬಣ್ಣ, ಹಳದಿ ಕೊಕ್ಕು. ನಿಂತರೆ ಮೂರಡಿ ಎತ್ತರದ ದೇಹ ಇದು ಬಣ್ಣದ ಕೊಕ್ಕರೆ ಇರಬೇಕು ಎಂದು ನೀವೇನಾದರೂ ಅನುಮಾನ ಪಡ್ತಾ ಇದ್ದೀರಿ ಎಂದಾದರೆ ನಿಮ್ಮ ಊಹೆ ಖಂಡಿತಾ ಸರಿ. ದಾಸ ಕೊಕ್ಕರೆ ಎಂದೂ ಕರೆಯಲಾಗುವ ಈ ಕೊಕ್ಕರೆ ಕರ್ನಾಟಕದ ಹಲವಾರು ಪಕ್ಷಿಧಾಮಗಳಲ್ಲಿ ಕಾಣಲುಸಿಗುತ್ತದೆ. ದೊಡ್ಡದಾದ ಕೆರೆ ಅಥವಾ ನದಿಯ ಮಧ್ಯೆ ಅಥವಾ ಆಸುಪಾಸಿನ ಮರಗಳ ಮೇಲೆ ಆಗಸ್ಟ್ ನಿಂದ ಜನವರಿ ತಿಂಗಳ ನಡುವೆ ಅಟ್ಟಳಿಗೆಯಂತಹ ಗೂಡು ಮಾಡುವ ಈ ಹಕ್ಕಿ ಕೊಕ್ಕರೆ ಬೆಳ್ಳೂರು, ರಂಗನತಿಟ್ಟು ಮೊದಲಾದ ಹಲವಾರು ಪಕ್ಷಿಧಾಮಗಳ ಮುಖ್ಯ ಆಕರ್ಷಣೆ. ಬಯಲುಸೀಮೆಯ ಕೆರೆಗಳು, ಜೌಗು ಪ್ರದೇಶಗಳಲ್ಲಿ, ನದೀತೀರಗಳಲ್ಲಿ ಮೀನು, ಕಪ್ಪೆ, ಹಾವು, ಏಡಿ ಮೊದಲಾದ ಜೀವಿಗಳನ್ನು ತಿಂದು ಬದುಕುವ ಈ ಹಕ್ಕಿ ನೀರಿನ ಮೂಲಗಳ ಹತ್ತಿರ ಮರದಮೇಲೆ ಗುಂಪುಗುಂಪಾಗಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸುತ್ತದೆ. ನೀರಿನ ಮೂಲದಿಂದಲೇ ಇದರ ಆಹಾರ ಸಿಗುವುದರಿಂದ ಇದು ಅನುಕೂಲವೂ ಹೌದು. ಕರಾವಳಿ ಭಾಗದಲ್ಲಿ ದೊಡ್ಡ ಕೆರೆಗಳು ಅಪರೂಪವಾದ್ದರಿಂದ ಈ ಹಕ್ಕಿ ಕರಾವಳಿ ಭಾಗದಲ್ಲಿ ತೀರಾ ಅಪರೂಪ.
ಮಾಂಸದ ರುಚಿ ಮತ್ತು ಬೇಟೆಯ ಹವ್ಯಾಸಕ್ಕಾಗಿ ಅನೇಕ ಕಡೆ ಇವುಗಳನ್ನು ಬೇಟೆಯಾಡುತ್ತಿದ್ದರು. ಅದಕ್ಕಾಗಿಯೇ ಇಂದು ಕರ್ನಾಟಕದ ಹಲವಾರು ಊರುಗಳಲ್ಲಿ ಇಂತಹ ಪಕ್ಷಿಧಾಮಗಳನ್ನು ಬಣ್ಣದ ಕೊಕ್ಕರೆಗಳಿಗಾಗಿಯೇ ಮೀಸಲು ಇಡಲಾಗಿದೆ. ಇನ್ನೂ ಅನೇಕ ಜಾತಿಯ ಹಕ್ಕಿಗಳನ್ನು ಇಂತಹ ಪಕ್ಷಿಧಾಮಗಳಲ್ಲಿ ನೋಡಬಹುದು.
ಕನ್ನಡ ಹೆಸರು: ಬಣ್ಣದ ಕೊಕ್ಕರೆ, ದಾಸ ಕೊಕ್ಕರೆ
ಇಂಗ್ಲೀಷ್ ಹೆಸರು: Painted Stork
ವೈಜ್ಞಾನಿಕ ಹೆಸರು: Mycteria leucocephala
-ಅರವಿಂದ ಕುಡ್ಲ, ಬಂಟ್ವಾಳ