ವಿಪರ್ಯಾಸ

ವಿಪರ್ಯಾಸ

 

"ಲೋ ಲಿಂಗ....ಏನೋ  ಹಾಗೆ ನಿಂತ್  ಬಿಟ್ಟೆ ? ಮುಂದಿನ್ ಚೀಲ ಯಾರು ನಿಮ್ಮಪ್ಪ ತರ್ತಾನೇನೋ ? ನಾನು ಸ್ವಲ್ಪ ಆ ಕಡೆ ತಲೆ ಹಾಕಿದ್ರೆ ಸಾಕು...ನನ್  ಮಕ್ಳ ನಿಮಗೆ ಸೋಂಬೇರಿತನ ಬಂದು ಬಿಡುತ್ತೆ.... ಬೇಗ ಬೇಗ ಕೆಲಸ ನೋಡು ಹೋಗೋ..." ಎಂದು ಮ್ಯಾನೇಜರ್ ಮುಕುಂದಪ್ಪ,ಲಿಂಗ ತನ್ನ ಅಂಗೈಯನ್ನು ನೋಡುತ್ತಾ ನಿಂತುದನ್ನು ಕಂಡು ಅಸಮಾಧಾನದಿಂದ ಕೂಗಿದನು.ಅಸಲಿಗೆ ಲಿಂಗ ತನ್ನ ಸೋಂಬೇರಿತನದಿಂದಾಗಲಿ ಅಥವಾ ಕೆಲಸವನ್ನು ತಪ್ಪಿಸಲೆಂದಾಗಲಿ ಹಾಗೆ ನಿಂತಿರಲಿಲ್ಲ.ಅವನು ತನ್ನ ಅಂಗೈಯಲ್ಲಿ ಸಣ್ಣಗೆ ಒಸರುತ್ತಿದ್ದ ರಕ್ತವನ್ನು ನೋಡಲು,ಅಂಗೈಯಲ್ಲಿ ಆದ ಗಾಯಗಳ ಆಳವನ್ನು ತಿಳಿಯಲು ಹಾಗೆ ನಿಂತಿದ್ದುದು. ಹೌದು ಲಿಂಗನ ಕೈ ಗಾಯಗಳಿಂದ ಸಣ್ಣಗೆ ರಕ್ತ ಒಸರುತ್ತಿತ್ತು. ಅವು ಅಂತಿಂಥ ಗಾಯಗಳಲ್ಲ. ಬೆಳಗಿನಿಂದ ಸಂಜೆಯ ವರೆಗೆ ಗಾಣದೆತ್ತಿನಂತೆ ದುಡಿದುದರ ಫಲವಾಗಿ ದೊರೆತ ಉಡುಗೊರೆಗಳು.  ಆದರೂ ಲಿಂಗ ಇನ್ನೂ ದುಡಿಯುತ್ತಿದ್ದ. ಅವನಿಗೆ ಹಾಗೆ ದುಡಿಯುವ ಅನಿವಾರ್ಯತೆ ಇತ್ತು. ಯಾಕಂದರೆ ಲಾರಿಯಲ್ಲಿರುವ ಎಲ್ಲಾ ಸಿಮೆಂಟು ಚೀಲಗಳನ್ನು ಲಿಂಗ ಒಬ್ಬನೇ ಇಳಿಸಿದಲ್ಲಿ ಅವನಿಗೆ ಆ ದಿನದ ಕೂಲಿಯ ಜೊತೆ ಇನ್ನೂ ೫೦ ರೂಪಾಯಿ ಹೆಚ್ಚಿಗೆ ಕೂಲಿ ಸಿಗುತ್ತದೆಂದು,ಮ್ಯಾನೇಜರ್ ಮುಕುಂದಪ್ಪ,ನಾಯಿಗೆ ಮೂಳೆಯ ಆಸೆ ತೋರಿಸುವಂತೆ ಲಿಂಗನಿಗೆ ಹಣದ ಆಸೆ ತೋರಿಸಿದ್ದನು. ಲಿಂಗನಿಗೆ ಆ ಹಣದಲ್ಲಿ, ತನ್ನ ಓರಗೆಯ ಮಕ್ಕಳಂತೆ ಶಾಲೆಗೆ ಹೋಗಲು ಆಸೆ ಪಡುತ್ತಿದ್ದ ತನ್ನ ಮಗನ ಭವಿಷ್ಯ ಸುಸ್ಪಷ್ಟವಾಗಿ ಕಂಡಿತು. ಅವನಿಗೆ ತನ್ನ ಮಗ ತನ್ನ ಹಾಗೆಯೇ ಕಷ್ಟಪಡುವದು ಬೇಕಿರಲಿಲ್ಲ. ತನ್ನ ಮಗ ಒಬ್ಬ ದೊಡ್ಡ ಮನುಷ್ಯ ಆಗಬೇಕೆಂಬುದು ಲಿಂಗನ ಏಕೈಕ ಆಸೆಯಾಗಿತ್ತು. ಆದರೆ ಲಿಂಗನ ಮಗನನ್ನು ಶಾಲೆಗೆ ಸೇರಿಸಲು ಅವನಿಗೆ ಸುಮಾರು ೫೦೦೦ ರೂಪಾಯಿಗಳ ಅವಶ್ಯಕತೆ ಇತ್ತು. ಅದಕ್ಕಾಗಿಯೇ ಅವನು ಹಗಲು ರಾತ್ರಿಯೆನ್ನದೆ ದುಡಿದು ಸುಮಾರು ೪೯೦೦ ರೂಪಾಯಿಗಳನ್ನು ಕೂಡಿಸಿದ್ದನು . ಅದಕ್ಕೆ ಇಂದಿನ ದುಡಿಮೆ ಸೇರಿದರೆ ನಾಳೆಯೇ ತನ್ನ ಮಗನನ್ನು ಶಾಲೆಗೆ ಸೇರಿಸಬಹುದು.ಅದಕ್ಕಾಗಿಯೇ ಅವನು ತನ್ನ ಅಂಗೈ ನೋವನ್ನು ಮರೆತು ಈ ಕೆಲಸವನ್ನು ಒಪ್ಪಿಕೊಂಡಿದ್ದನು ಮುಕುಂದಪ್ಪ ಕೂಗಿದ್ದನ್ನು ಕೇಳಿ ಲಿಂಗ ಲಗುಬಗೆಯಿಂದ ಮುಂದಿನ ಸಿಮೆಂಟು ಚೀಲವನ್ನು ತರಲು ಓಡಿದನು. ಹಾಗೆಯೇ ಅವನು ಎಲ್ಲ ಚೀಲಗಳನ್ನು ತೀರಿಸಿ ತನ್ನ ಕೆಲಸ ಮುಗಿಸಿದಾಗ ಸಮಯ ರಾತ್ರಿ ಒಂಭತ್ತು ಗಂಟೆಯಾಗಿತ್ತು. ನಂತರ ಅವನು ಮುಕುಂದಪ್ಪನಿಂದ ಆ ದಿನದ ಸಂಬಳ ನೂರು ರೂಪಾಯಿಗಳನ್ನು ತೆಗೆದುಕೊಂಡು ಖುಷಿಯಿಂದ ಮನೆಯ ಕಡೆ ಹೆಜ್ಜೆ ಹಾಕಿದನು. ಹಾಗೆಯೇ ದಾರಿಯಲ್ಲಿ ಸಾಗಿದಾಗ ಅವನ ತಲೆಯಲ್ಲಿ ನೂರೆಂಟು ಆಲೋಚನೆಗಳು. ತನ್ನ ಮಗನಿಗೆ ಶಾಲೆಗೆ ಸೇರಿಸುವ ಸುದ್ದಿ ತಿಳಿದರೆ ಎಷ್ಟು ಖುಷಿ ಪಡುವನು ಎಂದು ನೆನಸಿಕೊಂಡು ಲಿಂಗ ಮನದಲ್ಲೇ ಹಿಗ್ಗತೊಡಗಿದನು. ಹಾಗೆಯೇ ಮನಸ್ಸಿನಲ್ಲೇ ಮಂಡಿಗೆ  ತಿನ್ನುತ್ತ ಲಿಂಗ ಮನೆ ಸಮೀಪಿಸಿದಾಗ ಅವನ ಮನೆಯ ಮುಂದೆ ಜನ ಜಂಗುಳಿಯೇ ನೆರೆದಿತ್ತು.  ಲಿಂಗ ಹಾಗೆಯೇ ಜನರನ್ನು ತಳ್ಳಿಕೊಂಡು ನೋಡಿದಾಗ ಅವನಿಗೆ ಅವನ ಮನೆಯೇ ಕಾಣಲಿಲ್ಲ. ಎಲ್ಲಿತ್ತು ಅವನ ಮನೆ ? ಎಲ್ಲ ನೆಲಸಮವಾಗಿತ್ತು. ಅವನ   ಮನೆಯಿದ್ದ ಜಾಗದಲ್ಲಿ ಬರಿ ಕಲ್ಲು ಮಣ್ಣು ತುಂಬಿಕೊಂಡಿತ್ತು. ಅವನ ಮನೆಯ ಹಿಂದಿದ್ದ ದೇವಸ್ಥಾನದ ಕಂಪೌಂಡ್ ಕುಸಿದು ಅವನ ಮನೆಯೇ ಸರ್ವನಾಶವಾಗಿತ್ತು. ಜೊತೆಗೆ ಅವನ ಹೆಂಡತಿ,ಅವನ ಮಗ ಕೂಡ ಅದರಡಿ ಸಿಕ್ಕು ಹೆಣವಾಗಿದ್ದರು. ಲಿಂಗನಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯ್ತು. ಅವನು ತನ್ನ ಜೇಬಲ್ಲಿದ್ದ ನೂರು ರೂಪಾಯಿಗಳು ಮತ್ತು ತನ್ನ ಅಂಗೈ ಗಾಯಗಳನ್ನು ನೋಡಿಕೊಂಡನು.ಲಿಂಗನ ಕಣ್ಣಿಂದ ಕಣ್ಣೀರು ಅಂಗೈ ಮೇಲೆ ಉದುರಿ ಅವನ ಗಾಯಗಳನ್ನು ಮತ್ತಷ್ಟು ನೋಯಿಸಿದವು.  ಸ್ವಲ್ಪ ಸಮಯದಲ್ಲೇ ನೂರಾರು ಮಾಧ್ಯಮದವರು ಆ ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದರು. ಅದಲ್ಲದೆ ಅಲ್ಲಿನ ಸ್ಥಳೀಯ ಶಾಸಕರೂ,ಮಂತ್ರಿಗಳು ಆ ಸ್ಥಳಕ್ಕೆ ಬಂದು ತಮಗೆ ಏನಾದರೂ ರಾಜಕೀಯ ಲಾಭವಿದೆಯೆ ಎಂದು ಯೋಚಿಸತೊಡಗಿದರು. ಅಲ್ಲಿದ್ದ ಪುಢಾರಿ ಯೊಬ್ಬ ನಿಂತ ನಿಂತಲ್ಲಿಯೇ ಲಿಂಗನಿಗೆ ೫೦ ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಿದನು. ಅದನ್ನು ಕೇಳಿ ಲಿಂಗ ಅವನ ಮುಖವನ್ನೊಮ್ಮೆ ನೋಡಿ "ನನ್ನ ಹೆಂಡತಿ.... ನನ್ನ ಮಗ.... ೫೦ ಸಾವಿರ....." ಎಂದು ಗಹ ಗಹಿಸಿ ನಗತೊಡಗಿದನು....ಅದನ್ನು ನೋಡಿ ಅಲ್ಲಿದ್ದವರು ಲಿಂಗನಿಗೆ ಹುಚ್ಚು ಹಿಡಿದಿದೆ ಎಂದುಕೊಂಡರು!!!!