ವಿಫಲ ಪ್ರಯತ್ನ

ವಿಫಲ ಪ್ರಯತ್ನ

ಬರಹ

ಕವಿತೆಯೆಂದರೆ ಏಕೆ,

ಯಾವಾಗಲೂ ಹೀಗೆ,

ಅರ್ಥವಾಗದು ಓದಿದರೆ ಒಮ್ಮೆ,

ಓದಲೇಬೇಕೆ ಇನ್ನೊಮ್ಮೆ, ಮತ್ತೊಮ್ಮೆ?

 

ಕವಿತೆಯಲಿ ಏಕೆ, ಕಠಿಣ ಪದಗಳ ಬಳಕೆ,

ಕವಿತೆ ಓದಲು, ಜೊತೆಗೆ ಕನ್ನಡ-ಕನ್ನಡ ನಿಘಂಟು ಬೇಕೆ?

ಕವಿತೆಯಲಿ ಏಕೆ, ಯಾವಾಗಲೂ ಹೀಗೆ,

ಎಂದೂ ಕೇಳದ ಪದಗಳ ಚರಣ,

ಸುತ್ತಿ-ಬಳಸಿ, ಮುಂದೆ-ಹಿಂದೆ ತಿರುಚಿ,

ಬರೆದ ಉದ್ದುದ್ದ ಸಾಲುಗಳ ತೋರಣ?

 

ಕವಿತೆಯಲಿ ಏಕೆ, ಇರಬಾರದೆ ಹೀಗೆ

ಸ್ವಲ್ಪ ನೀತಿ, ಲಘು ಹಾಸ್ಯ,

ಸರಳ ಪದಗಳ ಪ್ರಯೋಗ,

ಇರಲಿ ಬೇಕಾದರೆ ಛಂದಸ್ಸು, ಮಾತ್ರೆ, ಪ್ರಾಸ!

 

ಏಕಿರಬಾರದು ಕವಿತೆಯಲಿ,

ಓದುಗನ ಮನದಾಳದಲಿಳಿದು

ಹೆಪ್ಪುಗಟ್ಟಿರುವ ಸುಪ್ತಕಾಮನೆಗಳ ಬಡಿದೆಬ್ಬಿಸಿ,

ಭ್ರಮಿಸಿದಮತಿಯ ಬಂಧನವ ಬಿಡಿಸುವ ವಿ.ಚಾ..ರ...ಗ....ಳು..... .......!!!......!!!!

ಓಹ್..ಕ್ಷಮಿಸಿ! ನಾನೂ ಹಳೆಯ ಜಾಡು ಹಿಡಿದೆ,

ನನ್ನ ಪ್ರಯತ್ನದಲಿ ವಿಫಲನಾದೆ,

ಹೋಗಲಿ ಬಿಡಿ ನಮಗ್ಯಾಕೆ, ಇರಲಿ, ಕವಿತೆ ಹೇಗಿದೆಯೋ ಹಾಗೆ!!!