ವಿಭೂತಿ ಮಹಿಮೆಯ ಕಥೆ

Submitted by Kavitha Mahesh on Mon, 09/14/2020 - 13:13

ಈಶ್ವರನ ಪತ್ನಿಯಾದ ಪಾರ್ವತಿ ದೇವಿಗೆ ಒಮ್ಮೆ ಒಂದು ಯೋಚನೆ ಬಂತು. ‘ಬ್ರಹ್ಮನ ಪತ್ನಿ ಸರಸ್ವತಿ, ವಿಷ್ಣುವಿನ ಪತ್ನಿ ಲಕ್ಷ್ಮಿ ಈರ್ವರೂ ಮೈತುಂಬಾ ಬಂಗಾರ ಹಾಕಿಕೊಂಡಿದ್ದಾರೆ. ನಾನು ಮಾತ್ರ ನಿರಾಭರಣ ಸುಂದರಿಯಂತೆ ಬಂಗಾರವಿಲ್ಲದೇ ಇದ್ದೇನಲ್ಲಾ’. ತ್ರಿಮೂರ್ತಿಯಲ್ಲಿ ಒಬ್ಬರಾದ ಈಶ್ವರನ ಪತ್ನಿಯಾದ ತಾನು ಯಾಕೆ ಬಂಗಾರದ ಆಭರಣಗಳನ್ನು ಹಾಕಿಕೊಳ್ಳಬಾರದೆಂದು ಪಾರ್ವತಿ ಸ್ವತಃ ಈಶ್ವರನಲ್ಲಿ  ‘ಸ್ವಾಮಿ ನನಗೆ ಬಂಗಾರ ಹಾಕಿಕೊಳ್ಳುವ ಬಯಕೆಯಾಗಿದೆ. ನನಗೆ ಅನುಗ್ರಹಿಸಿ' ಎಂದು ಕೇಳಿಕೊಂಡಾಗ ಈಶ್ವರ ಒಂದು ಚಿಟಿಕೆ ಭಸ್ಮ (ವಿಭೂತಿ) ವನ್ನು ತೆಗೆದು ಪಾರ್ವತಿ ಕೈಗೆ ಕೊಡುತ್ತಾನೆ.

‘ಇದೇನು ಸ್ವಾಮಿ ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ?’ ಎಂದು ಪಾರ್ವತಿ ಹೇಳಿದಾಗ,

‘ನನ್ನಲ್ಲಿರುವುದು ಇದೇ. ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ ಕೇಳು ಇದರ ತೂಕದ ಬಂಗಾರ ಕೊಡುತ್ತಾನೆ’ ಎಂದ ಈಶ್ವರ.

ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ) ತೆಗೆದುಕೊಂಡು ಹೋಗಿ ‘ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು’ ಎಂದು ಕುಬೇರನಲ್ಲಿ ಕೇಳಿದಳು. 

ಆಗ ಕುಬೇರ ವ್ಯಂಗ್ಯದಿಂದ ನಗುತ್ತಾ ‘ಇದಕ್ಕೆ ಏನು ತೂಕದ ಬಂಗಾರ ಕೊಡಲಾಗುತ್ತದೆ. ನಿಮಗೆಷ್ಟು ಬೇಕು ತೆಗೆದುಕೊಳ್ಳಿ’ ಎನ್ನುತ್ತಾನೆ

‘ಇಲ್ಲ ನನಗೆ ಇದರ ತೂಕಕ್ಕೆ ಸರಿಯಾದ ಬಂಗಾರವೇ ಬೇಕು’ ಎಂದು ಪಾರ್ವತಿ ಕೇಳಿದಾಗ ಕುಬೇರನು ಒಲ್ಲದ ಮನಸ್ಸಿನಿಂದ ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ. ಮತ್ತೊಂದೆಡೆಗೆ ಬಂಗಾರ ಹಾಕಿದ. ಎಷ್ಟು ಬಂಗಾರ ಹಾಕಿದರೂ ಭಸ್ಮದ ತೂಕದ ತಟ್ಟೆ ಮೇಲೆಳಲಿಲ್ಲ. ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ.

ಕುಬೇರನಿಗೆ ನನಗಿಂತ ಶ್ರೀಮಂತರು ಯಾರೂ ಇಲ್ಲ ಎಂಬ  ಅಹಂಭಾವವಿತ್ತು. ಅದನ್ನು ಅವನಿಗೆ ಮನದಟ್ಟು ಮಾಡಲು ಶಿವನು ಈ ರೀತಿ ಮಾಡಿದ್ದ. ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ ಹಾಕಿದ ಆಗ ಇನ್ನೊಂದು ಕಡೆಯ ತಕ್ಕಡಿಯ ತಟ್ಟೆ ಸ್ವಲ್ಪವೇ ಮೇಲೇರಿತು.

ಆಗ ಕುಬೇರನು ‘ತಾಯಿ ನಾನು ಅಹಂಕಾರದಿಂದ ಭಸ್ಮವೆಂದು ಕೇವಲವಾಗಿ ಮಾತನಾಡಿದೆ, ಕ್ಷಮಿಸಿ. ಈ ಚಿಟಿಕೆ ಭಸ್ಮಕ್ಕೆ ಎಷ್ಟು ಬಂಗಾರ ಹಾಕಿದರೂ, ಸರಿದೂಗಲಾರದು ಎಂದು ಕೈ ಮುಗಿದ. 

ಪಾರ್ವತಿ ದೇವಿಗೂ ತನ್ನ ಪತಿಯು ನೀಡಿದ ಭಸ್ಮದ ಮಹತ್ವ ಮನದಟ್ಟಾಗಿ, ನನಗೆ ಬಂಗಾರ ಬೇಡ  "ಶಿವ ಕೊಟ್ಟ ಭಸ್ಮವೇ ಬಂಗಾರ" ಎಂದು ಧರಿಸಿಕೊಂಡಳು.

ಈಗಲೂ ನಾವು ಧರಿಸುವ ವಿಭೂತಿ ಅಥವಾ ಭಸ್ಮವು ಅತ್ಯಂತ ಮೌಲ್ಯಯುತವಾದ ಆಭರಣವೇ ಆಗಿದೆ.

*ಓಂ ನಮಃ ‌ಶಿವಾಯ*

ವಾಟ್ಸಾಪ್ ನಿಂದ ಸಂಗ್ರಹಿತ ಪುರಾಣದ ನೀತಿ ಕಥೆ. 

ಚಿತ್ರ ಕೃಪೆ: ಇಂಟರ್ನೆಟ್ ಸಂಗ್ರಹಿತ