ವಿಮಾನದ ರೆಕ್ಕೆಯ ಮೇಲೆ ಕುಳಿತು ಪ್ರಯಾಣ ಸಾಧ್ಯವೇ?

ವಿಮಾನದ ರೆಕ್ಕೆಯ ಮೇಲೆ ಕುಳಿತು ಪ್ರಯಾಣ ಸಾಧ್ಯವೇ?

ಹೀಗೊಂದು ಪ್ರಶ್ನೆ ನಿಮ್ಮೆಲ್ಲರ ಮನಸ್ಸಿನಲ್ಲೂ ಮೂಡಿರಬಹುದಲ್ಲವೇ? ಈ ರೀತಿಯ ಕೆಲವು ದೃಶ್ಯಗಳನ್ನು ನೀವು ಸ್ವಲ್ಪ ಸಮಯದ ಹಿಂದೆ ಅಫ್ಘಾನಿಸ್ತಾನದಲ್ಲಿ ನೋಡಿರಲೂ ಬಹುದು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಘಟನೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳುವ ಸಮಯದಲ್ಲಿ ಬಹಳಷ್ಟು ಜನ ದೇಶವನ್ನೇ ಬಿಟ್ಟು ಹೋಗಲು ಮನಸ್ಸು ಮಾಡಿದ್ದರು. ದೇಶದಿಂದ ಹೊರ ಹೋಗುತ್ತಿದ್ದ ವಿಮಾನದಲ್ಲಿ ಸೀಟು ಸಿಗದೇ ಕೆಲವು ಮಂದಿ ಅದರ ರೆಕ್ಕೆಯ ಮೇಲೆ ಕುಳಿತು ಕೊಂಡು ಪ್ರಯಾಣ ಮಾಡಲು ಪ್ರಯತ್ನ ಪಟ್ಟಿದ್ದರು. ಈ ದೃಶ್ಯವನ್ನು ನೀವು ಮಾಧ್ಯಮಗಳಲ್ಲಿ ಗಮನಿಸಿರಬಹುದು. 

ನಿಜವಾಗಿಯೂ ಮೇಲಕ್ಕೆ ವೇಗದಲ್ಲಿ ಸಾಗುತ್ತಿರುವ ವಿಮಾನದ ರೆಕ್ಕೆಯ ಮೇಲೆ ಕುಳಿತು ಪ್ರಯಾಣ ಸಾಧ್ಯವೇ? ಈ ಬಗ್ಗೆ ಬೆಂಗಳೂರಿನ ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಡಾ. ಎಚ್ ಎಸ್ ನಾಗರಾಜ ಇವರು ಮಾಹಿತಿ ಪೂರ್ಣ ಲೇಖನ ಬರೆದಿದ್ದಾರೆ. ಅದನ್ನು ಓದುವ ಬನ್ನಿ…

ಮೊದಲನೆಯದಾಗಿ ವಿಮಾನವೊಂದು ನೆಲದಿಂದ ಆಕಾಶಕ್ಕೆ ಚಿಮ್ಮಬೇಕಾದರೆ ತನ್ನ ವೇಗವನ್ನು ಅಲ್ಪಕಾಲದಲ್ಲೇ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಆಕಾಶಕ್ಕೆ ನೆಗೆಯಲು ವಿಮಾನಕ್ಕೆ ಬೇಕಾಗುವ ಆ ಅತ್ಯಗತ್ಯ ವೇಗವನ್ನು  'ವಿ-ರೋಟೇಟ್ ಸ್ಪೀಡ್' ಎನ್ನುತ್ತಾರೆ. ಸಣ್ಣ ವಿಮಾನಗಳಿಗೆ ಇದು ೧೦೦ ಕಿಮೀ /ಗಂಟೆ ಅಂದರೆ ದೊಡ್ಡ ವಾಣಿಜ್ಯ ಬಳಕೆಯ ವಿಮಾನಗಳಿಗೆ ೩೦೦ ಕಿಮೀ/ ಗಂಟೆ. ಈ ವೇಗದಲ್ಲಿ ವಿಮಾನವು ಆಕಾಶಕ್ಕೆ ನೆಗೆಯುವಾಗ ಅದೆಷ್ಟೇ ಗಟ್ಟಿಯಾಗಿ ಅದರ ರೆಕ್ಕೆಗಳನ್ನು ಹಿಡಿದುಕೊಂಡಿದ್ದರೂ ನೀವು ಫಟೀರನೆ ದೂರಕ್ಕೆ ಚಿಮ್ಮಿಹೋಗುತ್ತೀರಿ. ಇನ್ನು ರೆಕ್ಕೆಯ ಮೇಲೆ ಕೂತವರಂತೂ ಬಿಲ್ಲಿನಿಂದ ಚಿಮ್ಮಿದ ಬಾಣದಂತೆ ಕೆಳಕ್ಕೆ ಬೀಳುತ್ತಾರೆ. ನಿಮ್ಮನ್ನು ನೀವು ಅತ್ಯಂತ ಗಟ್ಟಿಯಾಗಿ ರೆಕ್ಕೆಗೆ ಹಗ್ಗದಿಂದ ಬಿಗಿದುಕೊಂಡು ಪ್ರಯಾಣಕ್ಕೆ ತಯಾರಿ ಮಾಡಿರುವಿರೆಂದು ಭಾವಿಸೋಣ. ಆಗ ಏನಾಗುತ್ತದೆ?

ವಿಮಾನವು ಸಾಧಾರಣವಾಗಿ ಸಮುದ್ರಮಟ್ಟದಿಂದ ೩೫,೦೦೦ ಅಡಿಗಳಷ್ಟು (ಸುಮಾರು ೧೦-೧೧ ಕಿಮೀ) ಎತ್ತರಕ್ಕೆ ಹಾರುತ್ತದೆ. ಈ ಎತ್ತರದಲ್ಲಿರುವ ವಾತಾವರಣವು ಭೂಮಿಯ ಮೇಲಿನ (ಸಮುದ್ರಮಟ್ಟದ) ವಾತಾವರಣಕ್ಕಿಂತ ಬಹಳಷ್ಟು ಭಿನ್ನವಾದದ್ದು. ಮೊದಲನೆಯದಾಗಿ ಅಲ್ಲಿ ಗಾಳಿ ವಿರಳ. ಆಮ್ಲಜನಕದ ಪ್ರಮಾಣ ಹೆಚ್ಚು ಕಡಿಮೆ ಶೇ ೬ ಮಾತ್ರ. ಅದರರ್ಥ ನಾವು ಎಷ್ಟೇ ಉಸಿರಾಡಿದರೂ ನಮಗೆ ಬೇಕಾದ ಆಮ್ಲಜನಕದ ಪ್ರಮಾಣ ಅಲ್ಲಿ ಸಿಗುವುದಿಲ್ಲ. ಇದರಿಂದಾಗಿ ಮನುಷ್ಯನಿಗೆ ಉಸಿರುಗಟ್ಟುವುದು. ಎದುರುಸಿರು ಬರುವುದು, ಕಣ್ಣುಕತ್ತಲೆ ಬರುವುದು ಪ್ರಾರಂಭವಾಗುತ್ತದೆ. ಮಿದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಜೀವಕೋಶಗಳು ನಿಧಾನವಾಗಿ ಸಾಯಲು ಪ್ರಾರಂಭವಾಗುತ್ತವೆ. 

ಎರಡನೆಯ ಅಂಶ ಅಲ್ಲಿನ ತಾಪಮಾನದ್ದು. ಅದು -೫೦ ಡಿಗ್ರಿಯಷ್ಟು ಕಡಿಮೆಯಿರುತ್ತದೆ. ಈ ತಾಪಮಾನದಲ್ಲಿ ಸಾಮಾನ್ಯ ಸ್ಥಿತಿಯಲ್ಲೂ ಮನುಷ್ಯ ಬದುಕುಳಿಯುವುದು ಅಸಾಧ್ಯ. ಅದರಲ್ಲೂ ವಿಮಾನದ ರೆಕ್ಕೆಯಲ್ಲಿ ಕುಳಿತುಕೊಂಡು ಜೀವ ಉಳಿಸಿಕೊಳ್ಳುವುದು ಪವಾಡವೇ ಸರಿ. ಆ ಸಮಯದಲ್ಲಿ ಮನುಷ್ಯನ ಚಯಾಪಚಯ ಕ್ರಿಯೆಗಳು ಕುಂಠಿತವಾಗುತ್ತವೆ. ದೇಹ ಮರಗಟ್ಟುತ್ತದೆ. ದೇಹದ ಉಷ್ಣತೆಯನ್ನು ಹೊಂದಿಸಿಕೊಳ್ಳಲು ನಮ್ಮ ಅವಯವಗಳು ಸಾಕಷ್ಟು ಶ್ರಮ ವಹಿಸುತ್ತವೆ. ಇದರ ಪರಿಣಾಮವಾಗಿ ಆ ವ್ಯಕ್ತಿ ಹೈಪೋಥರ್ಮಿಯಾ ಸ್ಥಿತಿಗೆ ಹೋಗಿ ಕೊನೆಗೆ ಸಾವನ್ನಪ್ಪುವ ಸಾಧ್ಯತೆ ಇದೆ.

ಮೂರನೇಯ ಅಂಶವೆಂದರೆ ೩೫,೦೦೦ ಅಡಿಗಳಷ್ಟು ಎತ್ತರದಲ್ಲಿ ವಾಯುವಿನ ಸಾಂದ್ರತೆ ಅತೀ ಕಡಿಮೆ. ಈ ಸಾಂದ್ರತೆಯಲ್ಲಿ ಮನುಷ್ಯನ ಅವಯವಗಳು ಒಂದೊಂದಾಗಿಯೇ ತಮ್ಮ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸತೊಡಗುತ್ತದೆ. ಇಷ್ಟೊಂದು ಎತ್ತರದಲ್ಲಿ ಮನುಷ್ಯ ಹೆಚ್ಚೆಂದರೆ ೧ ನಿಮಿಷ ಬದುಕಿರಬಹುದಷ್ಟೇ! ಹಾಗಾಗಿ ವಿಜ್ಞಾನದ ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡರೆ ಯಾರೂ ವಿಮಾನದ ರೆಕ್ಕೆಗೆ ಕಟ್ಟಿಕೊಂಡು ಹಾರಾಡಿಕೊಂಡು ಹೋಗಲು ಸಾಧ್ಯವೇ ಇಲ್ಲ. 

ವಿಜ್ಞಾನದ ಅಂಶವನ್ನು ಹೊರಗಿಟ್ಟು ನೋಡಿದರೂ ಒಬ್ಬ ಸಾಮಾನ್ಯ ವ್ಯಕ್ತಿ ಅಷ್ಟೊಂದು ಎತ್ತರಕ್ಕೆ ಹೋದಾಗ ಆತನಿಗೆ ಹೆದರಿಕೆಯಾಗಬಹುದು,ಅದರಿಂದಲೇ ಹೃದಯಾಘಾತವಾಗಿ ಸಾಯಲೂ ಬಹುದು. ಈ ಕಾರಣದಿಂದಲೇ ಯಾರೂ ವಿಮಾನದ ರೆಕ್ಕೆಯ ಮೇಲೆ ಪ್ರಯಾಣ ಮಾಡಲಾರರು. ಬಸ್ ನ ಟಾಪ್ ಮೇಲೆ ಪ್ರಯಾಣ ಮಾಡಿದಷ್ಟು ಸುಲಭವಲ್ಲ ಈ ಕೆಲಸ. ಜೀವದ ಹಂಗು ತೊರೆದು ಈ ಸಾಹಸ ಮಾಡಬಹುದಷ್ಟೇ. 

(ಮಾಹಿತಿ ಕೃಪೆ: ಸೂತ್ರ ಪತ್ರಿಕೆ)

ಚಿತ್ರ ಕೃಪೆ: ಅಂತರ್ಜಾಲ ತಾಣ