ವಿಮಾನಯಾನದ ಅಚ್ಚರಿ ಮೂಡಿಸುವ ಸಂಗತಿಗಳು !
ಪ್ರತಿಯೊಬ್ಬರಿಗೂ ವಿಮಾನಯಾನದ ಕನಸು ಇದ್ದೇ ಇರುತ್ತದೆ. ಅದರಲ್ಲೂ ಬಡವರಿಗೆ, ಮಧ್ಯಮ ವರ್ಗದವರಿಗೆ ವಿಮಾನದಲ್ಲಿ ಹಾರುವುದು ಬಹಳ ಅದ್ಭುತ ಸಂಗತಿಯಾಗಿರುತ್ತದೆ. ವಿಮಾನಯಾನಿಗಳಿಗೆ ನೂರಾರು ನಿಯಮಗಳು ಇರುತ್ತವೆ, ಇವು ದೇಶದಿಂದ ದೇಶಕ್ಕೆ ಬದಲಾಗುತ್ತಲೇ ಇರುತ್ತದೆ. ಇಂತಹ ಅಪರೂಪದ ಕೆಲವು ನಿಯಮಗಳು ಮತ್ತು ಸಂಗತಿಗಳು ಇತ್ತೀಚೆಗೆ ‘ವಿಶ್ವವಾಣಿ' ಪತ್ರಿಕೆಯ ಸಂಪಾದಕರ ಸದ್ಯಶೋಧನೆಯಲ್ಲಿ ಪ್ರಕಟವಾಗಿತ್ತು. ಅದನ್ನು ಕೃತಜ್ಞತಾಪೂರ್ವಕವಾಗಿ ಯಥಾವತ್ತಾಗಿ ಇಲ್ಲಿ ಬಳಸಿಕೊಳ್ಳಲಾಗಿದೆ.
ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಎಲ್ಲ ವಿಷಯಗಳನ್ನು ಹೇಳುವುದಿಲ್ಲ ಮತ್ತು ಕೆಲವು ಸಂಗತಿಗಳನ್ನು ಮುಚ್ಚಿಡುತ್ತವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಅಂಶಗಳು : ೮ ಗಂಟೆಗೂ ಹೆಚ್ಚು ಹೊತ್ತು ವಿಮಾನದಲ್ಲಿ ಪ್ರಯಾಣ ಮಾಡುವ ಪೈಲೆಟ್ ಗಳು ಊಟದ ಬಗ್ಗೆ ಎಚ್ಚರ ವಹಿಸುತ್ತಾರೆ. ಇಬ್ಬರು ಪೈಲೆಟ್ ಗಳು ಪ್ರತ್ಯೇಕವಾದ ಊಟವನ್ನು ಮಾಡುತ್ತಾರೆ. ಇಬ್ಬರುಗೂ ನೀಡಿದ ಆಹಾರ ಕಲುಷಿತವಾಗಿದ್ದರೆ ಅಥವಾ ವಿಷಯುಕ್ತವಾಗಿದ್ದರೆ, ಸಮಸ್ಯೆ ಆಗಬಹುದೆಂದು, ಪ್ರತ್ಯೇಕವಾದ ಥಾಲಿಯನ್ನು ಅವರಿಗೆ ನೀಡಲಾಗುತ್ತದೆ. ಈ ನಿಯಮವನ್ನು ಕೆಲವು ಏರ್ ಲೈನ್ಸ್ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸುತ್ತವೆ. ಒಬ್ಬರಿಗೆ ಹೊಟ್ಟೆ ಕೆಟ್ಟರೆ (Stomach Upset), ಮತ್ತೊಬ್ಬರು ಸುರಕ್ಷಿತವಾಗಿರಲಿ ಎಂಬ ದೃಷ್ಟಿಯಿಂದ ಈ ಕ್ರಮ. ಡೊಮೆಸ್ಟಿಕ್ ವಿಮಾನಗಳಲ್ಲಿ ಜಗ್ ನಲ್ಲಿ ಕುಡಿಯುವ ನೀರನ್ನು ನೀಡುತ್ತಾರೆ. ಈ ನೀರು ಸುರಕ್ಷಿತವಲ್ಲ. ಮಿನರಲ್ ವಾಟರ್ ನೀಡದಿದ್ದರೆ ನೀರನ್ನು ಕುಡಿಯದಿರುವುದೇ ವಾಸಿ. ಕಾರಣ, ವಿಮಾನದೊಳಗಿನ ಪರಿಸರ ಬ್ಯಾಕ್ಟೀರಿಯಾ ಜನಕ. ೩೭ ಬೇರೆ ಬೇರೆ ಬಗೆಯ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಆಶ್ರಯ ಪಡೆಯುವ ಸಾಧ್ಯತೆ ಇರುತ್ತದೆ.
ಆಸ್ಟ್ರೇಲಿಯಾದ ಕ್ವಾಂಟಾಸ್ ಏರ್ ಲೈನ್ಸ್ ಆರಂಭವಾಗಿ ೧೦೪ ವರ್ಷಗಳಾದವು. ಆದರೆ ಅದು ಇಲ್ಲಿ ತನಕ ಒಂದೇ ಒಂದು ಸಲ ಅಪಘಾತಕ್ಕೀಡಾಗಿಲ್ಲ. ಪ್ರಯಾಣದ ಸುರಕ್ಷತೆಗೆ ಈ ವಿಮಾನಯಾನ ಸಂಸ್ಥೆ ಗರಿಷ್ಟ ಮಹತ್ವವನ್ನು ನೀಡುತ್ತದೆ. ಆದರೆ ಈ ಅಂಶವನ್ನು ಅದು ಡಂಗುರ ಸಾರಿಲ್ಲ, ಒಂದು ವೇಳೆ ಅಪಘಾತಕ್ಕೀಡಾದರೆ ತಾನು ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿದಂತಾಗಬಹುದು ಎಂಬ ಕಾರಣಕ್ಕೆ ಹಾಗೆ ಮಾಡಿಲ್ಲ. ಜಾಹೀರು ಮಾಡದಿರುವುದೂ ಒಂದು ಜಾಹೀರಾತು ತಂತ್ರವೇ. ಸಾಕಷ್ಟು ವಿಮಾನ ಪ್ರಯಾಣ ಮಾಡಿದವರಿಗೂ ಈ ವಿಷಯ ಗೊತ್ತಿರುವುದಿಲ್ಲ. ಅದೇನೆಂದರೆ ವಿಮಾನದಲ್ಲಿರುವ ಟಾಯ್ಲೆಟ್ ಒಳಗೆ ಹೋಗಿ, ನೀವು ಬಾಗಿಲು ಲಾಕ್ ಮಾಡಿಕೊಂಡರೂ ಹೊರಗಿನಿಂದ ತೆಗೆಯಬಹುದು ಎಂಬುದು. ಒಳಗಿನಿಂದ ಲಾಕ್ ಮಾಡಿಕೊಂಡರೆ, ಬೇರೆಯವರಾರೂ ತೆಗೆಯಲಾರರು ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ಪ್ರಯಾಣಿಕರು ವಿಮಾನದ ಟಾಯ್ಲೆಟ್ ಒಳಗೆ ಹೋದಾಗ ಹೃದಯಾಘಾತವಾದರೆ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಯಾದರೆ, ತಕ್ಷಣ ನೆರವು ನೀಡಲೆಂದು ಈ ಕ್ರಮ. Lavatory ಅಥವಾ Toilet ಎಂದು ಬರೆದ ದೀಪದ ಸೂಚನಾ ಫಲಕದ ಬಳಿ ಒಂದು ಸಣ್ಣ ಸ್ವಿಚ್ ಇರುವುದು ಯಾರಿಗೂ ಕಾಣಿಸುವುದಿಲ್ಲ. ಗಗನಸಖಿಯರಿಗೆ ಮಾತ್ರ ಅದು ಗೊತ್ತಿರುತ್ತದೆ. ಅಂಥ ಪ್ರಸಂಗ, ಟಾಯ್ಲೆಟ್ ಒಳಗೆ ಹೋದ ಪ್ರಯಾಣಿಕ ಬಹಳ ಹೊತ್ತಾದರೂ ಹೊರಗೆ ಬರದಿದ್ದರೆ, ಆಗ ಹೊರಗಿನಿಂದ ಬಾಗಿಲನ್ನು ತೆಗೆಯಲಾಗುತ್ತದೆ.
ಯಾವ ಕಾರಣಕ್ಕೂ ವಿಮಾನದೊಳಗೆ ಲೇಸರ್ ಪಾಯಿಂಟರ್ ಅನ್ನು ಬಳಸುವಂತಿಲ್ಲ. ಅಮೇರಿಕಾದ ಕೆಲವು ವಿಮಾನಗಳಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ಬರೆದಿರುತ್ತಾರೆ. ಅದನ್ನು ಬಳಸಿದ ಪ್ರಯಾಣಿಕರನ್ನು ಐದು ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಪಡಿಸುತ್ತಾರೆ. ಅದನ್ನು ಯಾಕೆ ಬಳಸಬಾರದು ಎಂದು ಹೇಳುವುದಿಲ್ಲ. ವಿಮಾನ ಹಾರುವ ಮುನ್ನ, ಪ್ರಯಾಣದುದ್ದಕ್ಕೂ ಪಾಲಿಸಬೇಕಾದ ನಿಯಮ/ಸೂಚನೆಗಳನ್ನು ಗಗನಸಖಿಯರು ಆಂಗಿಕವಾಗಿ ತಿಳಿಸಿಕೊಡುತ್ತಾರೆ. ಆ ಪೈಕಿ, ಯಾವ ಕಾರಣಕ್ಕೂ ವಿಮಾನದ ಎಮರ್ಜೆನ್ಸಿ ಬಾಗಿಲನ್ನು ತೆರೆಯಬಾರದು ಎಂಬುದೂ ಒಂದು. ಅಸಲಿಗೆ ಆ ಬಾಗಿಲನ್ನು ಏನೇ ಮಾಡಿದರೂ ತೆಗೆಯಲು ಆಗುವುದಿಲ್ಲ. ವಿಮಾನದೊಳಗಿನ ಪ್ರೆಶರ್ (ನಾಲ್ಕರಿಂದ ಹದಿನಾರು ಪಿಎಸ್ ಐ) ಜಾಸ್ತಿಯಿರುವುದರಿಂದ ಬಲವಂತವಾಗಿ ಪ್ರಯತ್ನಿಸಿದರೂ ಬಾಗಿಲು ತೆರೆಯುವುದು ಅಸಾಧ್ಯ. ವಿಮಾನ ಲ್ಯಾಂಡ್ ಆಗುವಾಗ ಕಡಿಮೆ ಎತ್ತರದಲ್ಲಿ ಹಾರುವ ಸಂದರ್ಭದಲ್ಲಿ ಬಾಗಿಲನ್ನು ತೆಗೆಯಬಹುದು. ವಿಮಾನ ಪ್ರಯಾಣದಲ್ಲಿ ಟೇಕಾಫ್ ಆಗುವುದಕ್ಕಿಂತ ಹೆಚ್ಚು ಅಪಘಾತಗಳು ಲ್ಯಾಂಡ್ ಆಗುವಾಗ ಆಗುತ್ತವೆ. ಟೇಕಾಫ್ ಆಗುವಾಗಿನ (ಮೊದಲು ಮೂರು ನಿಮಿಷ) ಸಾಧ್ಯತೆ ಶೇ. ೧೪ರಷ್ಟು. ಲ್ಯಾಂಡ್ ಆಗುವಾಗಿನದ್ದು (ಕೊನೆಯ ೮ ನಿಮಿಷ) ಶೇ. ೪೮ ರಷ್ಟು.
ಕೃಪೆ: ವಿಶ್ವವಾಣಿ
ಚಿತ್ರ ಕೃಪೆ: ಅಂತರ್ಜಾಲ ತಾಣ