ವಿಮಾನಯಾನ ಸೇವೆ ವ್ಯತ್ಯಯ; ಕಂಪೆನಿಗಳ ನಿರ್ಲಕ್ಷ್ಯ ಅಕ್ಷಮ್ಯ

ವಿಮಾನಯಾನ ಸೇವೆ ವ್ಯತ್ಯಯ; ಕಂಪೆನಿಗಳ ನಿರ್ಲಕ್ಷ್ಯ ಅಕ್ಷಮ್ಯ

ಹೊಸದಿಲ್ಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಇಂಡಿಯಾ ವಿಮಾನ ೨೦ ಗಂಟೆಗಳಿಗೂ ಅಧಿಕ ಕಾಲ ವಿಳಂಬಗೊಂಡ ಪರಿಣಾಮ ಯಾನಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿ ಬಂದುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಮಾನ ಹಾರಾಟದಲ್ಲಿನ ವ್ಯತ್ಯಯಗಳು ದೇಶದ ವೈಮಾನಿಕ ಸೇವೆಯಲ್ಲಿ ಈಗ ಸರ್ವೇಸಾಮಾನ್ಯ ಎಂಬಂತಾಗಿದ್ದು ಪ್ರಯಾಣಿಕರು ಇನ್ನಿಲ್ಲದ ಬವಣೆ ಪಡುವಂತಾಗಿದೆ. ವಾರದ ಹಿಂದೆಯಷ್ಟೇ ಮುಂಬಯಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ವಿಮಾನದ ಹಾರಟವೂ ವಿಳಂಬಗೊಂಡಿದ್ದರಿಂದಾಗಿ ಯಾನಿಗಳೂ ಬಹಳ ಸಂಕಷ್ಟ ಅನುಭವಿಸುವಂತಾಗಿತ್ತು. ಇದರ ಬೆನ್ನಲ್ಲೇ ದಿಲ್ಲಿಯ ಘಟನೆ ನಡೆದಿದ್ದು ದೇಶ-ವಿದೇಶಗಳ ವಿಮಾನಯಾನಿಗಳು ಏರ್ ಇಂಡಿಯಾದ ಬಗೆಗೆ ಸಾರ್ವತ್ರಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಸಕ್ತ ವರ್ಷದ ಮೊದಲ ನಾಲ್ಕು ತಿಂಗಳ ಅಂಕಿ ಅಂಶಗಳ ಪ್ರಕಾರ ಶೇ .೩೬ರಷ್ಟು ವಿಮಾನಯಾನಿಗಳು ವಿಮಾನ ಸೇವೆಯಲ್ಲಿನ ವ್ಯತ್ಯಯದಿಂದಾಗಿ ತೊಂದರೆ ಅನುಭವಿಸಿದ್ದಾರೆ. ವಿಮಾನ ಹಾರಾಟ ವಿಳಂಬ, ದಿಢೀರ್ ವಿಮಾನ ಹಾರಾಟ ಸ್ಥಗಿತ, ಹವಾಮಾನ ವೈಪರೀತ್ಯ, ಸಮಯ ಬದಲಾವಣೆ ಮತ್ತಿತರ ಕಾರಣಗಳಿಂದಾಗಿ ಈ ವ್ಯತ್ಯಯಗಳಾಗಿವೆ. ಎಪ್ರಿಲ್ ನಲ್ಲಿ ವಿಸ್ತಾರ ಕಂಪೆನಿಯ ೧೦೦ಕ್ಕೂ ಅಧಿಕ ವಿಮಾನಗಳು ಸಿಬ್ಬಂದಿ ಕೊರತೆ ಹಿನ್ನಲೆಯಲ್ಲಿ ಒಂದೋ ವಿಳಂಬವಾಗಿ ಇಲ್ಲವೇ ಕೊನೇ ಕ್ಷಣದಲ್ಲಿ ಪ್ರಯಾಣ ರದ್ದುಗೊಳಿಸಿದ ಪರಿಣಾಮ ಸಹಸ್ರಾರು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು. ಮೇ ಆರಂಭದಲ್ಲಿ ಏರ್ ಇಂಡಿಯಾ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಕಂಪೆನಿಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ ಪರಿಣಾಮ ಕಂಪೆನಿಯ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಸಮಯವಷ್ಟೇ ವ್ಯರ್ಥವಾಗುವುದಲ್ಲದೇ, ಪ್ರಯಾಣ ಅನಿಶ್ಚಿತತೆ, ಆರ್ಥಿಕ ನಷ್ಟ ಮತ್ತು ಅವರ ಮುಂದಿನ ಪ್ರಯಾಣ ಯೋಜನೆಯ ಮೇಲೂ ತೀವ್ರತರನಾದ ಪರಿಣಾಮ ಬೀರುತ್ತದೆ. ಇದರ ಜತೆಯಲ್ಲಿ ತಾಸುಗಟ್ಟಲೆ ವಿಮಾನ ನಿಲ್ದಾಣದಲ್ಲಿ ಕಾಯುವ ಅನಿವಾರ್ಯತೆಯಲ್ಲಿ ಸಿಲುಕಿ, ಮಾನಸಿಕವಾಗಿಯೂ ಒತ್ತಡಕ್ಕೊಳಗಾಗುತ್ತಾರೆ.

ಇನ್ನು ಗುರುವಾರ ಹೊಸದಿಲ್ಲಿಯಲ್ಲಿ ಏರ್ ಇಂಡಿಯಾ, ವಿಮಾನ ವಿಳಂಬಗೊಂಡ ಪ್ರಕರಣದಲ್ಲಂತೂ ವಿಮಾನದ ಕ್ಯಾಬಿನ್ ಒಳಗೆ ಸಮರ್ಪಕವಾದ ಹವಾ ನಿಯಂತ್ರಣದ ವ್ಯವಸ್ಥೆಯೂ ಇಲ್ಲದೆ ಉಸಿರಾಡಲೂ ಸಾಧ್ಯವಾಗದೆ ಮೂರ್ಛೆ ಹೋಗುವ ಸ್ಥಿತಿ ಬಂದೊದಗಿದುದು ಕಂಪೆನಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯ ಪರಮಾವಧಿಯೇ ಸರಿ. ವಿಮಾನ ಯಾನ ಸಂಸ್ಥೆಗಳ ಈ ತೆರನಾದ ಕಾರ್ಯವೈಖರಿ ನಿಜಕ್ಕೂ ಪ್ರಶ್ನಾರ್ಹ. ಸುರಕ್ಷಿತ ಪ್ರಯಾಣ ಮತ್ತು ತ್ವರಿತ ಸೇವೆಯ ಜತೆಗೆ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಒದಗಿಸಬೇಕಾದ ಕಂಪೆನಿಗಳ ಇಷ್ಟೊಂದು ಬೇಜವಾಬ್ದಾರಿ ನಡವಳಿಕೆ ಖಂಡನಾರ್ಹ.

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಈಗ ಏರ್ ಇಂಡಿಯಾಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದೆ. ತನಿಖೆ, ಪರಿಶೀಲನೆ, ಸ್ಪಷ್ಟನೆ, ಪ್ರಯಾಣಿಕರಿಗೆ ಪರಿಹಾರ, ಕಂಪೆನಿಗೆ ದಂಡ ಹಾಕುವ ಪ್ರಕ್ರಿಯೆಗಳು ನಡೆಯುವುದರೊಂದಿಗೆ ಈ ಪ್ರಕರಣ ಅಂತ್ಯ ಕಾಣುತ್ತದೆ. ಆದರೆ ಇದು ಈ ಪ್ರಕ್ರಿಯೆಗಳಿಗೆ ಮಾತ್ರ ಸೀಮಿತವಾಗಿರದೆ ಕಂಪೆನಿ ಮತ್ತದರ ಸಿಬಂದಿಯ ಪ್ರಮಾದದಿಂದಾಗುವ ಇಂತಹ ವಿಮಾನ ಯಾನ ವ್ಯತ್ಯಯಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಯಾವುದೇ ವಿಮಾನಯಾನ ಕಂಪೆನಿಯಿಂದ ಇಂತಹ ಘಟನೆಗಳು ಮರುಕಳಿಸಿದಲ್ಲಿ ಅಂತಹ ಕಂಪೆನಿಗಳ ಪರವಾನಿಗೆಯನ್ನೇ ರದ್ದುಗೊಳಿಸುವ ಕಠಿನತಮ ನಿರ್ಧಾರ ಕೈಗೊಳ್ಳಬೇಕು. ವಿಮಾನಯಾನ ಕಂಪೆನಿಗಳು ಕೇವಲ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಸೀಮಿತವಾಗದೆ ಯಾನಿಗಳ ಸುರಕ್ಷೆಗೆ ಗರಿಷ್ಟ ಆದ್ಯತೆಯನ್ನು ನೀಡಬೇಕು. ಹಾಗಾದಲ್ಲಿ ಮಾತ್ರವೇ ವಿಮಾನಯಾನದ ಬಗೆಗಿನ ಜನರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಸಾಧ್ಯ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೧-೦೬-೨೦೨೪