ವಿಮಾನ ನಿಲ್ದಾಣಗಳನ್ನು ಗುರುತಿಸುವ ‘ಕೋಡ್' ಕಥೆ ಏನು?

ವಿಮಾನ ನಿಲ್ದಾಣಗಳನ್ನು ಗುರುತಿಸುವ ‘ಕೋಡ್' ಕಥೆ ಏನು?

ಒಂದು ಕಾಲಕ್ಕೆ ಶ್ರೀಮಂತರಿಗೆ ಮಾತ್ರ ಎಟಕುತ್ತಿದ್ದ ವಿಮಾನ ಯಾನದ ಸೌಕರ್ಯ ಈಗ ಮಧ್ಯಮ ವರ್ಗದವರಿಗೂ ಸಿಗುತ್ತಿದೆ. ಈ ವಿಶ್ವದಲ್ಲಿ ಸಾವಿರಾರು ವಿಮಾನ ನಿಲ್ದಾಣಗಳಿವೆ. ಪ್ರತೀ ದಿನ ಲಕ್ಷಾಂತರ ಮಂದಿ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ನಿಮಗೊಂದು ಸಂದೇಹ ಕಾಣಿಸಬಹುದು, ಅದೇನೆಂದರೆ ಈ ವಿಮಾನ ನಿಲ್ದಾಣಗಳನ್ನು ಗುರುತಿಸುವುದಾದರೂ ಹೇಗೆ? ಈ ಬಗ್ಗೆ ಹಿಂದೊಮ್ಮೆ ‘ವಿಶ್ವವಾಣಿ' ಪತ್ರಿಕೆಯಲ್ಲಿ ಸೊಗಸಾದ ಮಾಹಿತಿ ನೀಡಿದ್ದರು. ಅದನ್ನು ನಿಮ್ಮ ಓದಿಗಾಗಿ ಯಥಾವತ್ತಾಗಿ ಪ್ರಕಟ ಮಾಡುತ್ತಿದ್ದೇನೆ.

ಜಗತ್ತಿನಲ್ಲಿ ಸುಮಾರು ಹದಿನೇಳು ಸಾವಿರಕ್ಕೂ ಅಧಿಕ ವಿಮಾನ ನಿಲ್ದಾಣಗಳಿವೆ. ಒಂದು ಲಕ್ಷಕ್ಕೂ ಹೆಚ್ಚು ಶೆಡ್ಯೂಲ್ಡ್ ವಿಮಾನಗಳಿವೆ. ಪ್ರತೀದಿನ ವಿಶ್ವದೆಲ್ಲೆಡೆ ವಿಮಾನದಲ್ಲಿ ಅರವತ್ತು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇವೆಲ್ಲವನ್ನೂ ನಿಯಂತ್ರಿಸಲು ಇಂಟರ್ ನ್ಯಾಶನಲ್ ಏರ್ ಟ್ರಾನ್ಸ್ ಪೋರ್ಟ್ ಅಸೋಸೊಯೇಷನ್ (ಐಎಟಿಎ-ಐಯಾಟ) ಎಂಬ ಅಂತಾರಾಷ್ಟ್ರೀಯ ಸಂಸ್ಥೆಯಿದೆ. ಇದರ ಪ್ರಧಾನ ಕಚೇರಿಯಿರುವುದು ಕೆನಡಾದ ಮಾಂಟ್ರಿಯಲ್ ನಲ್ಲಿ. ಇಷ್ಟೊಂದು ವಿಮಾನ, ವಿಮಾನ ನಿಲ್ದಾಣಗಳನ್ನು ನಿಯಂತ್ರಿಸುವುದು, ಎಲ್ಲ ಏರ್ ಲೈನ್ಸ್ ಗಳು ಏಕರೂಪತೆಯನ್ನು ಕಾಪಾಡುವುದು, ಎಲ್ಲ ವಿಮಾನ ನಿಲ್ದಾಣಗಳಿಗೆ, ಪ್ರಯಾಣಕ್ಕೆ ಕೋಡ್ ಗಳನ್ನು ನಿಗದಿಪಡಿಸುವುದು, ಕಂಪ್ಯೂಟರ್ ವ್ಯವಸ್ಥೆಯನ್ನು ರೂಪಿಸುವುದು ಇದೇ. ಐಯಾಟ ಕೋಡ್ ಗಳಿಂದ ಏರ್ ಲೈನ್ಸ್ ಗಳನ್ನು ಪತ್ತೆ ಹಚ್ಚಬಹುದು. ಅದು ಯಾವ ನಿಗದಿತ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತದೆ, ಬ್ಯಾಗೇಜುಗಳು ಯಾವ ಸ್ಥಳಕ್ಕೆ ಹೋಗಬೇಕು ಮುಂತಾದ ವಿವರಗಳನ್ನೆಲ್ಲ ಈ ಕೋಡ್ ಗಳಿಂದ ನಿರ್ಧರಿಸಬಹುದು. ಮೆಕ್ಸಿಕೋ, ಜಪಾನ್ ಅಥವಾ ಜಾಂಬಿಯಾದಲ್ಲಿರುವ ಪ್ರಯಾಣಿಕರು, ವಿಮಾನ ನಿಲ್ದಾಣದಲ್ಲಿರುವ ಅಧಿಕಾರಿಗಳು, ಸಿಬ್ಬಂದಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಗುರುತಿಸುವುದು HBX ಎಂದು.  ಬೆಳಗಾವಿಯನ್ನು IXG ಎಂದೂ, ಮಂಗಳೂರು ನಿಲ್ದಾಣವನ್ನು IXE ಎಂದೂ ಗುರುತಿಸುತ್ತಾರೆ. ಲಾಸ್ ಏಂಜಲೀಸ್ ವಿಮಾನ ನಿಲ್ದಾಣ LAX ಎಂದೇ ಪ್ರಸಿದ್ಧ. 

೧೯೩೦ರಲ್ಲಿ ವಿಶ್ವದಾದ್ಯಂತ ಏರ್ ಪೋರ್ಟ್ ಕೋಡಿಂಗ್ ವ್ಯವಸ್ಥೆ ಜಾರಿಗೆ ಬಂದಿತು. ಆಗ ಇಂಗ್ಲಿಷ್ ವರ್ಣಮಾಲೆಯ ಎರಡು ಅಕ್ಷರಗಳನ್ನು ಮಾತ್ರ ಬಳಸಲಾಗುತ್ತಿತ್ತು. ಈ ಅಕ್ಷರಗಳ ಹೊಂದಾಣಿಕೆಯಲ್ಲಿ ಸಾವಿರಾರು ವಿಮಾನ ನಿಲ್ದಾಣಗಳಿಗೆ ಕೋಡಿಂಗ್ ನೀಡಲಾಯಿತು. ೧೯೪೦ರ ಹೊತ್ತಿಗೆ ವಿಮಾನ ನಿಲ್ದಾಣಗಳ ಸಂಖ್ಯೆ ಜಾಸ್ತಿಯಾದಾಗ, ಕೋಡಿಂಗ್ ಗೆ ಮೂರು ಅಕ್ಷರಗಳನ್ನು ಬಳಸುವ ಪದ್ಧತಿಯನ್ನು ಜಾರಿಗೆ ತರಲಾಯಿತು. ಈಗಲೂ ಮೂರು ಅಕ್ಷರಗಳ ಕೋಡಿಂಗ್ ಜಾರಿಯಲ್ಲಿದೆ. ಅಮೇರಿಕಾದ ಹಲವು ವಿಮಾನ ನಿಲ್ದಾಣಗಳಿಗೆ ಮೊದಲ ಎರಡು ಅಕ್ಷರಗಳಿಗೆ ಮೂರನೇ ಅಕ್ಷರವಾಗಿ X ಸೇರಿಸಲಾಯಿತು. ಅದಕ್ಕೆ ಯಾವ ವಿಶೇಷ ಅರ್ಥವೂ ಇಲ್ಲ. LA ಎಂದು ಕರೆಯಿಸಿಕೊಳ್ಳುತ್ತಿದ್ದ ಲಾಸ್ ಏಂಜಲೀಸ್ ವಿಮಾನ ನಿಲ್ದಾಣ LAX ಆಯಿತು. ಮೂರು ಅಕ್ಷರಗಳ ಕ್ರಮಪಲ್ಲಟನೆ (Permutation) ಯಿಂದ ೧೭,೫೭೬ ವಿಮಾನ ನಿಲ್ದಾಣಗಳಿಗೆ ಕೋಡಿಂಗ್ ನೀಡಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ಜಾಸ್ತಿ ಆಗುತ್ತಿರುವುದರಿಂದ ಮತ್ತು ಮೂರು ಅಕ್ಷರಗಳ ಕೋಡ್ ಖಾಲಿಯಾಗುತ್ತಿರುವುದರಿಂದ, ಮಧ್ಯಮ ಮತ್ತು ಸಣ್ಣ ವಿಮಾನ ನಿಲ್ದಾಣಗಳಿಗೆ ನಂಬರನ್ನು ಕೋಡ್ ಆಗಿ ನೀಡುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಉದಾಹರಣೆಗೆ ಅಮೇರಿಕಾದ ವಾಷಿಂಗ್ಟನ್ ಸ್ಟೇಟ್ ನಲ್ಲಿರುವ ಕ್ಲಿ ಇಲಮ್ ವಿಮಾನ ನಿಲ್ದಾಣಕ್ಕೆ WA (S93) ಎಂಬ ಕೋಡ್ ನೀಡಲಾಗಿದೆ. ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದು ರೀತಿಯಲ್ಲಿ ಅದೃಷ್ಟಶಾಲಿ. ಅದು MIA ಎಂಬ ಕೋಡ್ ಪಡೆದಿದೆ. ಆದೇ ರೀತಿ ಅಥೆನ್ಸ್ ವಿಮಾನ ನಿಲ್ದಾಣದ ಕೋಡ್ ATH. ನ್ಯೂ ಒರ್ಲಿಯನ್ಸ್ ನಲ್ಲಿರುವ ಲೂಯಿಸ್ ಆರ್ಮ್ ಸ್ಟ್ರಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೋಡ್ ವಿಚಿತ್ರ. ಅದಕ್ಕೆ MSY ಎಂಬ ಕೋಡ್ ಹೇಗೆ ಬಂತೋ ಗೊತ್ತಿಲ್ಲ. ಅದೇ ರೀತಿ ರಷ್ಯಾದ ಬೊಲ್ಕೋಯೆ ಸ್ಯಾವಿನೋ ವಿಮಾನ ನಿಲ್ದಾಣಕ್ಕೆ PEE ಎಂದೂ, ನೆವಾಡಾದ ಡರ್ಬಿ ಫೀಲ್ಡ್ ಏರ್ ಪೋರ್ಟ್ ಗೆ LOL ಎಂದೂ, ಬ್ರೆಜಿಲ್ ನಲ್ಲಿರುವ ಫೂಕೋ ಡೇ ಕಾಲ್ಡಸ್ ವಿಮಾನ ನಿಲ್ದಾಣಕ್ಕೆ POO ಎಂದೂ ಕೋಡ್ ನೀಡಲಾಗಿದೆ.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ