ವಿರೂಪಾಕ್ಷಿ ಗುಡ್ಡಬಾಳೆ ರಕ್ಷಿಸಿದ ಕೃಷಿಕರು

ವಿರೂಪಾಕ್ಷಿ ಗುಡ್ಡಬಾಳೆ ರಕ್ಷಿಸಿದ ಕೃಷಿಕರು

“ವಿರೂಪಾಕ್ಷಿ ಗುಡ್ಡಬಾಳೆ” ನಿರ್ವಂಶವಾಗುವ ಅಂಚಿಗೆ ಬಂದಿತ್ತು. ಜಗತ್ಪ್ರಸಿದ್ಧ ಪಳನಿ ಸುಬ್ರಹ್ಮಣ್ಯ ದೇವಸ್ಥಾನದ “ಪಂಚಾಮೃತ” ತಯಾರಿಗೆ ಬೇಕೇಬೇಕಾದ ಈ ಬಾಳೆ ತಳಿಯನ್ನು ಉಳಿಸಿದ್ದು ಕೃಷಿಕರ 23 ವರುಷಗಳ ಛಲ ಬಿಡದ ಶ್ರಮ.
1970ರ ವರೆಗೆ ತಮಿಳ್ನಾಡಿನ ದಿಂಡಿಗಲ್ ಜಿಲ್ಲೆಯ ಪಳನಿಯ ಗುಡ್ಡಗಳ ತಪ್ಪಲಿನಲ್ಲಿ 30,000 ಹೆಕ್ಟೇರ್ ಪ್ರದೇಶದಲ್ಲಿ ಈ ಅಪರೂಪದ ಬಾಳೆ ತಳಿಯ ವ್ಯಾಪಕ ಕೃಷಿ. ಕಾಫಿ ತೋಟಗಳಲ್ಲಿ ಎಳೆಯ ಕಾಫಿ ಸಸಿಗಳಿಗೆ ನೆರಳಿಗಾಗಿಯೂ ಈ ಬಾಳೆ ತಳಿಯ ಬಳಕೆ. ಇದರಿಂದಾಗಿ, ಕಾಫಿಗಿಡಗಳ ಫಸಲು ಕೈಗೆ ಬರುವ ತನಕ ಕೃಷಿಕರಿಗೆ ಈ ಬಾಳೆಯ ಆದಾಯದ ಒತ್ತಾಸೆ.
ಇದರ ಜೊತೆಗೆ ಸಿರುಮಲೈ ಗುಡ್ಡ ಬಾಳೆ ಎಂಬ ಇನ್ನೊಂದು ಅಪರೂಪದ ತಳಿಯನ್ನೂ ಬೆಳೆಯುತ್ತಿದ್ದರು ಅಲ್ಲಿನ ಬೆಳೆಗಾರರು. 1970ರ ದಶಕದ ಮಧ್ಯಭಾಗದಲ್ಲಿ ಭೀಕರ “ತಲೆಮುದುಡು” (ಬಂಚಿ ಟಾಪ್) ವೈರಸ್ ರೋಗದ ದಾಳಿ. ವಿದ್ಯುತ್ ವೇಗದಿಂದ ಪಸರಿಸಿದ ಆ ರೋಗದಿಂದಾಗಿ ಈ ಎರಡೂ ಅಪರೂಪದ ಬಾಳೆ ತಳಿಗಳ ಉಳಿವಿಗೇ ಕುತ್ತು.
ಇದರಿಂದಾಗಿ ಕೆಲವೇ ವರುಷಗಳಲ್ಲಿ ವಿರೂಪಾಕ್ಷಿ ಗುಡ್ಡಬಾಳೆ ಬೆಳೆಯುವ ಪ್ರದೇಶ 30,000 ಹೆಕ್ಟೇರುಗಳಿಂದ 10,000 ಹೆಕ್ಟೇರುಗಳಿಗೆ ಕುಸಿತ. 1990ರಲ್ಲಿ ಕೇವಲ 600 ಹೆಕ್ಟೇರು ಪ್ರದೇಶಕ್ಕೆ ಇದರ ಕೃಷಿ ಸೀಮಿತ.
ತಮ್ಮ ಬದುಕಿಗೆ ಆಧಾರವಾದ ಈ ಬಾಳೆ ತಳಿಯನ್ನು ಉಳಿಸಲೇ ಬೇಕೆಂಬ ಸಂಕಲ್ಪ ಬೆಳೆಗಾರರದು. ಅವರು ಇದಕ್ಕಾಗಿ ಕಟ್ಟಿಕೊಂಡದ್ದು ತಮಿಳುನಾಡು ಗುಡ್ಡಬಾಳೆ ಬೆಳೆಗಾರರ ಸಂಘಟನೆ. “ಸುಮಾರು 200 ಬೆಳೆಗಾರರು ಒಟ್ಟಾಗಿ ನಮ್ಮ ಸಂಘಟನೆ ಕಟ್ಟಿದೆವು. ವಿರೂಪಾಕ್ಷಿ ಮತ್ತು ಸಿರುಮಲೈ ಬಾಳೆ ತಳಿ ಉಳಿಸಲಿಕ್ಕಾಗಿ ನಾವೆಲ್ಲರೂ ಇಪ್ಪತ್ತು ವರುಷ ಎಡೆಬಿಡದೆ ಕೆಲಸ ಮಾಡಿದ್ದೇವೆ” ಎನ್ನುತ್ತಾರೆ ಸಂಘಟನೆಯ ಉಪಾಧ್ಯಕ್ಷ ಆರ್. ಪವಲರಾಜನ್.
ಹದಿನೆಂಟು ತಿಂಗಳಿನಲ್ಲಿ ಬಾಳೆ ಗೊನೆ ನೀಡುವ ಈ ತಳಿಯನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವುದು ವಿಶೇಷ. ಇದಕ್ಕೆ 1,500 ಮಿಮೀ ವಾರ್ಷಿಕ ಮಳೆ ಅಗತ್ಯ. ಆ ಮಳೆ ಕನಿಷ್ಠ 110 ದಿನಗಳಲ್ಲಿ ಹಂಚಿ ಸುರಿದರೆ ಉತ್ತಮ.
ತಲೆಮುದುಡು ವೈರಸ್ ದಾಳಿಯಿಂದಾಗಿ ಬಾಳೆಗಿಡಗಳ ಎಲೆಗಳೆಲ್ಲ ಮುದುಡಿ ಮುದ್ದೆಯಾಗುತ್ತವೆ. ಇದರಿಂದಾಗಿ ಬಾಳೆ ಗಿಡ ಗೊನೆ ಬಿಡೋದಿಲ್ಲ. ಬಾಳೆಕಂದುಗಳ ಮೂಲಕ ಹರಡುತ್ತದೆ ಈ ಗಂಡಾಂತರಕಾರಿ ರೋಗ.
ಅದೇ ಸಮಯದಲ್ಲಿ ಬಾಳೆ ಬೆಳೆಗಾರರನ್ನು ಇನ್ನಷ್ಟು ಹೈರಾಣ ಮಾಡಿದ್ದು ಸೊರಗು ರೋಗದ ದಾಳಿ. ಇದೆಲ್ಲದರ ಪರಿಣಾಮವಾಗಿ ಬಾಳೆಹಣ್ಣಿನ ಮಾರಾಟ ಕುಸಿತ. ಸಂಘಟನೆಯ ಕಾರ್ಯದರ್ಶಿ ವೀರ ಅರಸು ಇದರ ಚಿತ್ರಣ ನೀಡಿದ್ದು ಹೀಗೆ: “1970ರ ದಶಕದಲ್ಲಿ ದಿನಕ್ಕೆ ಸುಮಾರು ಐದು ಲಕ್ಷ ಬಾಳೆಹಣ್ಣು ಮಾರಾಟ ಮಾಡುತ್ತಿದ್ದೆವು. ರೋಗ ಬಿರುಸಿನಿಂದ ಹರಡಿದ ಕಾರಣ, 1980ರಿಂದ 2000ದ ತನಕ ಮಾರುಕಟ್ಟೆಗೆ ಪೂರೈಸಿದ್ದು ದಿನಕ್ಕೆ 50,000 ಬಾಳೆಹಣ್ಣು ಮಾತ್ರ”.
ಕ್ರಮೇಣ, ವಿಜ್ನಾನಿಗಳ ಹಾಗೂ ಪರಿಣತರ ಸಲಹೆಯಂತೆ ಮಣ್ಣಿನ ಫಲವತ್ತತೆ ಹೆಚ್ಚಿಸಲು ಮತ್ತು ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಬಾಳೆ ಬೆಳೆಗಾರರು ಗಮನ ನೀಡಿದರು.
ಪಳನಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಧಿಕಾರಿಗಳು ದೇವರ ಪ್ರಸಾದವಾದ “ಪಂಚಾಮೃತ”ಕ್ಕೆ ಈ ಬಾಳೆಹಣ್ಣು ಸೇರಿಸಲು ನಿರ್ಧರಿಸಿದ್ದು ಇದರ ಜನಪ್ರಿಯತೆ ಹೆಚ್ಚಲು ಕಾರಣ. ಪಂಚಾಮೃತ ಒಂದು ವರುಷದ ವರೆಗೆ ಕೆಡದೆ ಉಳಿಯುತ್ತದೆ. ಹಲವು ಔಷಧೀಯ ಗುಣಗಳಿರುವ ವಿರೂಪಾಕ್ಷಿ ಗುಡ್ಡಬಾಳೆಯಲ್ಲಿ ವಿಟಮಿನ್ “ಸಿ” ಅಂಶ ಜಾಸ್ತಿ.
ಇವೆರಡೂ ಬಾಳೆ ತಳಿಗಳಿಗೆ 2012ರ ಮುಂಚೆಯೇ “ಭೌಗೋಳಿಕ ಸೂಚಕ” ನೀಡಲಾಗಿದೆ. ಇದರಿಂದಾಗಿ ಈ ಬಾಳೆಹಣ್ಣುಗಳ ಮಾರಾಟಕ್ಕೆ ಇನ್ನಷ್ಟು ಅನುಕೂಲ.
ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವಿಜ್ನಾನಿಗಳು ಪಳನಿಯ ಬಾಳೆ ಬೆಳೆಗಾರರ ಜೊತೆಗೆ ಈ ತಳಿಯ ಪುನರುಜ್ಜೀವನಕ್ಕಾಗಿ 10 ವರುಷಗಳ ಅವಧಿ ಕೆಲಸ ಮಾಡಿದ್ದಾರೆ. ಅವರು ರೋಗರಹಿತ ಬಾಳೆಸಸಿಗಳನ್ನು ಒದಗಿಸಿದ್ದರಿಂದಾಗಿ, ಕ್ರಮೇಣ ರೋಗಬಾಧೆ ಹತೋಟಿಗೆ ಬಂತು. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳೂ ಈ ಕೆಲಸದಲ್ಲಿ ಕೈಜೋಡಿಸಿದ್ದರು – ಅಂಗಾಂಶಕಸಿಯ ಬಾಳೆಸಸಿಗಳನ್ನು ಒದಗಿಸುವ ಮೂಲಕ.
ಕೃಷಿಕರು ಸಂಘಟಿತರಾದರೆ ಮತ್ತು ವಿಜ್ನಾನಿಗಳು ಕೈಜೋಡಿಸಿದರೆ ಅಳಿವಿನಂಚಿಗೆ ಬಂದಿರುವ ಉಪಯುಕ್ತ ತಳಿಗಳನ್ನೂ ಸಂರಕ್ಷಿಸಲು ಸಾಧ್ಯ ಎಂಬುದಕ್ಕೆ ಪುರಾವೆ ವಿರೂಪಾಕ್ಷಿ ಗುಡ್ದಬಾಳೆಯ ಸಂರಕ್ಷಣೆ.

ಫೋಟೋ 1: ವಿರೂಪಾಕ್ಷಿ ಗುಡ್ಡ ಬಾಳೆ  

ಫೋಟೋ 2: ಸಿರುಮಲೈ ಗುಡ್ಡ ಬಾಳೆ ... ಕೃಪೆ: ಸಾಹಸ.ಇನ್