ವಿರೋಧಿಸುವುದು ಬೇಡ. ಎಲ್ಲವನ್ನೂ ಒಟ್ಟಾಗಿ ಅನುಭವಿಸೋಣ !

ವಿರೋಧಿಸುವುದು ಬೇಡ. ಎಲ್ಲವನ್ನೂ ಒಟ್ಟಾಗಿ ಅನುಭವಿಸೋಣ !

ಮದುವೆ ಎಂದರೆ ಕೇವಲ ಹೆಣ್ಣಿನ ಕುತ್ತಿಗೆಗೆ ತಾಳಿಯನ್ನು ಕಟ್ಟಿಸಿ "ಆಯಿತು, ಇನ್ನು ಮೇಲೆ ನೀವಿಬ್ಬರೂ ಗಂಡ ಹೆಂಡತಿ. ಹೋಗಿ..." ಎಂದು ಹೇಳಿ ಕಳಿಸಿಬಿಡುವುದಲ್ಲ. ಒಂದು ಮದುವೆ ಎಂದರೆ ಅಲ್ಲಿ "ಅಯ್ಯೋ... ಒಂದು ಶಾಸ್ತ್ರ ಇಲ್ಲಾ, ಸಂಪ್ರದಾಯ ಇಲ್ಲಾ... ನಮ್ ಕಾಲದಲ್ಲಿ ಹಿಂಗಿರಲಿಲ್ಲ" ಎನ್ನುವ ಕೆಲವು ಹಿರಿತಲೆಗಳಿರಬೇಕು. ಮದುವೆ ಅಂದರೆ ಅಲ್ಲಿ ಕೇವಲ ಅರ್ಧ ಅಡಿ ಜಾಗದ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಹತ್ತಾರು ವರ್ಷಗಳಿಂದ ದೂರ ಉಳಿದಿದ್ದ ದಾಯಾದಿ ಕುಟುಂಬದವರು ತಾವೇ ಮುಂದೆ ನಿಂತು ಲವಲವಿಕೆಯಿಂದ ಅತಿಥಿಗಳನ್ನು ಸ್ವಾಗತಿಸುತ್ತಿರಬೇಕು. ಮದುವೆ ಎಂದರೆ ಅಲ್ಲಿ  "ಹುಡುಗಿಗೆ ಇನ್ನೂ ಓದು ಮುಗಿದಿಲ್ಲ, ಈಗಲೇ ಮದುವೆ ಮಾಡಿಬಿಡೋ ಅವಸರ ಏನಿತ್ತು ಇವರಿಗೆ?" ಅಂತ ಮಾತಾಡಿಕೊಳ್ಳೋ ಹೆಂಗಸರಿರಬೇಕು. 

ಮದುವೆ ಎಂದರೆ ಅಲ್ಲಿ "ಇನ್ವಿಟೇಷನ್ ವಾಟ್ಸಪ್ಪಲ್ಲಿ ಕಳಿಸಿದರೂ ಸಾಕು ಬಿಡಿ, ನಾವು ಬಂದೇ ಬರ್ತೀವಿ" ಎಂದು ಹೇಳಿ ಕುಟುಂಬ ಸಮೇತರಾಗಿ ಬಂದು ಮನಸಾರೆ ಓಡಾಡುವ ಸ್ನೇಹಿತರು,ಸಂಬಂಧಿಕರಿರಬೇಕು. ಮದುವೆ ಎಂದರೆ ಅಲ್ಲಿ "ಇನ್ವಿಟೇಷನ್ ಕೊಡೋಕೆ ತಾನೇ ಬರೋದು ಬಿಟ್ಟು ತನ್ನ ಮಗನನ್ನ ಕಳಿಸಿದ್ದಾನೆ. ನಾವೇನು ಅಷ್ಟೊಂದು ದೂರದವರಾ..?" ಎಂದು ಮುನಿಸಿಕೊಂಡು ಗೈರಾದ ಹತ್ತಿರದ ಸಂಬಂಧಿಗಳೂ ಇರಬೇಕು. ಮದುವೆ ಎಂದರೆ ಅಲ್ಲಿ "ತಾವೇ ಖುಷಿಯಿಂದ ಮೂರು ಮೂರು ದಿವಸ ರಜೆ ಹಾಕಿ ದೂರದ ಊರಿನಿಂದ ಬಂದು ಎಲ್ಲರ ಜೊತೆ ಬೆರೆಯುತ್ತಾ, ಎಲ್ಲರನ್ನೂ ಪರಿಚಯ ಮಾಡಿಕೊಳ್ಳುತ್ತಾ ಖುಷಿ ಖುಷಿಯಿಂದ ಓಡಾಡುವ ವಧೂ ವರರ ಸ್ನೇಹಿತರಿರಬೇಕು.  ಮದುವೆ ಎಂದರೆ ಅಲ್ಲಿ "ಹುಡುಗ ಕುಡೀತಾನಂತೆ, ಅವನಿಗೆ ಮೊದಲೇ ಒಂದು ಹುಡುಗಿ ಜೊತೆ ಸಂಬಂಧ ಇತ್ತಂತೆ" ಎಂದು ಯಾರೋ ಹೇಳಿದ ಅಂತೆ ಕಂತೆ ವಿಷಯಗಳನ್ನು ತಾವೇ ಖುದ್ದಾಗಿ ನೋಡಿದವರಂತೆ ಇನ್ಯಾರ ಕಿವಿಗಳಿಗೋ ತಲುಪಿಸುವ ಜವಾಬ್ಧಾರಿ ಹೊತ್ತ ಒಂದಷ್ಟು 'ಹಿತೈಷಿಗಳು' ಇರಬೇಕು. ಮದುವೆ ಎಂದರೆ ಅಲ್ಲಿ ಇದು ನಮ್ಮ ಒಡವೆ ವಸ್ತ್ರಗಳನ್ನು ತೋರಿಸೋಕೆ ಇರುವ ಒಳ್ಳೆಯ ಅವಕಾಶ" ಎಂದೇ ಭಾವಿಸಿಕೊಂಡು ಸರ್ವಾಲಂಕಾರ ಭೂಷಿತರಾಗಿ ಓಡಾಡುವ ಮಹಿಳೆಯರಿರಬೇಕು.  ಮದುವೆ ಎಂದರೆ ಅಲ್ಲಿ "ಮಗನಿಗಿನ್ನೂ ಸರಿಯಾದ ಕೆಲಸ ಸಿಕ್ಕಿಲ್ಲ, ಇವನ ವ್ಯಾಪಾರ ನೋಡಿದರೆ ಅಷ್ಟಕ್ಕಷ್ಟೇ. ಇಷ್ಟು ಖರ್ಚು ಮಾಡಿ ಮದುವೆ ಮಾಡೋದು ಬೇಕಿತ್ತಾ ಇವನಿಗೇ..." ಎನ್ನುತ್ತಾ ಕಾಳಜಿ ತೋರಿಸುವ ನೆಪದಲ್ಲಿ ಅಸೂಯೆ ಹೊರ ಹಾಕುವ ಹತ್ತಿರದ ಸ್ನೇಹಿತರಿರಬೇಕು. 

ಮದುವೆ ಎಂದರೆ ಅಲ್ಲಿ "ಬನ್ನಿ ಅಂಕಲ್, ಒಂದು ಸೆಲ್ಫಿ ತಗೋಳ್ಳೋಣ, ಬನ್ನಿ ಆಂಟಿ, ಒಂದು ಸೆಲ್ಫಿ ತಗೋಳ್ಳೋಣ" ಎನ್ನುತ್ತಾ ಎಲ್ಲರನ್ನೂ ಕರೆಕರೆದು ಸೆಲ್ಫಿ ತೆಗೆದುಕೊಳ್ಳುವ ಸುಂದರ ಹುಡುಗಿಯರಿರಬೇಕು. ಮದುವೆ ಎಂದರೆ ಭುಜದ ಮೇಲೆ ಕೈಯಿಟ್ಟು "ಒಳ್ಳೆ ಊಟ ಹಾಕಿಸಿದಿರಿ ಸರ್, ನಾವಿನ್ನು ಬರ್ತೀವಿ" ಎಂದು ಹೇಳಿ ಹೋಗುವ ಸಹೋದ್ಯೋಗಿಗಳಿರಬೇಕು. ಮದುವೆ ಎಂದರೆ ಅಲ್ಲಿ "ಕೊನೇ ಪಂಕ್ತಿಯಲ್ಲಿ ಕೂತವರಿಗೆ ತೊಂಡೆ ಕಾಯಿ ಪಲ್ಯ ಬರಲೇ ಇಲ್ಲ" ಎನ್ನುತ್ತಾ ಆ ಮದುವೆಯ ಇತಿಹಾಸವನ್ನು ಇನ್ನೊಂದು ತಲೆಮಾರಿನ ವರೆಗೂ ದಾಟಿಸುವವರಿರಬೇಕು. ಮದುವೆ ಎಂದರೆ ಅಲ್ಲಿ ಹತ್ತಿರದ ಸಂಬಂಧಿ ಮಹಿಳೆಯೊಬ್ಬರು "ಮಂಟಪದ ಪಕ್ಕದ ರೂಮಿನಲ್ಲಿಟ್ಟಿದ್ದ ನನ್ನ ಬ್ಯಾಗ್ ಒಳಗಿದ್ದ ಚಿನ್ನದ ಚೈನು ಕಾಣಿಸ್ತಿಲ್ಲ..." ಎಂದು ಹೇಳಿ ಎಲ್ಲರನ್ನೂ ಆತಂಕಕ್ಕೆ ದೂಡಿ, ಎಲ್ಲರ ಮೇಲೂ ಒಂದು ಅನುಮಾನ ಹುಟ್ಟಿಸಿ, ಕೊನೆಗೆ ಅದು ಅಲ್ಲೇ ಎಲ್ಲೋ ಸಿಗುವ ಮೂಲಕ ಪ್ರಕರಣ ಸುಖಾಂತ್ಯಗೊಂಡು ಆ ಮದುವೆಯ ನೆನಪುಗಳನ್ನು ಶಾಶ್ವತಗೊಳಿಸಬೇಕು. ಮದುವೆ ಎಂದರೆ "ಈ ಛತ್ರದಲ್ಲಿ ಯಾಕಿಟ್ಟುಕೊಂಡರೋ ಗೊತ್ತಿಲ್ಲ, ಇಲ್ಲಿ ಪಾರ್ಕಿಂಗಿಗೆ ಜಾಗಾನೇ ಇಲ್ಲ" ಎಂದು ಹೊರಗೆ ನಿಂತು ಮಾತಾಡುವ ಒಂದಷ್ಟು ಗಂಡಸರಿರಬೇಕು. ಕೊನೆಯಲ್ಲಿ ಛತ್ರದವರ ಮೇಲೆ ಒಂದು ಸಣ್ಣ ದೂರು, ಫೋಟೋಗ್ರಾಫರ್ ಮೇಲೆ ಒಂದು ಸಣ್ಣ ಅಸಮಾಧಾನ, ಬಾಳೆ ಎಲೆ ಎತ್ತಿದವರ ಜೊತೆಗೆ ಒಂದು ಸಣ್ಣ ಚೌಕಾಶಿ... ಇವೆಲ್ಲವೂ ಇರಬೇಕು. ಇವೆಲ್ಲವೂ ಇದ್ದಾಗ ಮಾತ್ರವೇ ಮದುವೆ ಅನ್ನೋದು ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಉಳಿಯೋದು.  

ಇದು ಕೇವಲ ಮದುವೆಗೆ ಮಾತ್ರ ಸೀಮಿತವಲ್ಲ. ಮಂದಿರದ ಉದ್ಘಾಟನೆ, ಪುನರ್ ಪ್ರತಿಷ್ಠಾಪನೆ ಮುಂತಾದವುಗಳಲ್ಲೂ ಹೀಗೆಯೇ.. ಎಲ್ಲವೂ/ಎಲ್ಲರೂ ಒಟ್ಟಿಗೆ ಸೇರಿದಾಗಲೇ ಅದಕ್ಕೊಂದು ಕಳೆ! ಹಾಗಾಗಿ ಯಾರನ್ನೂ/ಯಾವುದನ್ನೂ ವಿರೋಧಿಸುವುದು ಬೇಡ. ಎಲ್ಲವನ್ನೂ ಒಟ್ಟಾಗಿ ಅನುಭವಿಸೋಣ, ಸ್ಮರಣೀಯವಾಗಿಸೋಣ. 

-ಪ್ರವೀಣ್ ಕುಮಾರ್ ಮಾವಿನಕಾಡು

ಚಿತ್ರ ಕೃಪೆ: ಇಂಟರ್ನೆಟ್ ತಾಣ