ವಿವಾದಗಳ ಸುತ್ತ ಒಂದು ನೋಟ...

ವಿವಾದಗಳ ಸುತ್ತ ಒಂದು ನೋಟ...

ಹಂಸಲೇಖ ಅವರ  ಮಾತುಗಳು - ಒಂದಷ್ಟು ವಿವಾದ - ಬಿಸಿ ಬಿಸಿ ಚರ್ಚೆ - ಪೇಜಾವರ ಶ್ರೀಗಳ ಪರ ನಿಲುವುಗಳು - ಕ್ಷಮಾಪಣೆ - ಇತ್ಯಾದಿಗಳ ಸುತ್ತ ಒಂದು ಸುತ್ತು. ಚರ್ಚೆ ಮಾಡಬೇಕಾದ ಮುಖ್ಯ ವಿಷಯ ಹಂಸಲೇಖ - ಪೇಜಾವರ -  ಕೋಳಿ ರಕ್ತ ಅಲ್ಲ, ಭಾರತದ ಜಾತಿ ವ್ಯವಸ್ಥೆ ಮತ್ತು ಅದರಿಂದ ಇಡೀ ಭಾರತೀಯ ಸಮಾಜ ದುರ್ಬಲಗೊಳ್ಳುತ್ತಿರುವ ಬಗ್ಗೆ. ಆದರೆ ಇದರ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ವಿಷಯ ಬೇರೆಲ್ಲೂ ವೈಯಕ್ತಿಕ ನೆಲೆಯಲ್ಲಿ ಹರಿದಾಡಿತು. ಕಾರಣ ನಾವೆಲ್ಲರೂ ಜಾತಿ ಪದ್ದತಿಯ ಶಿಶುಗಳು...ಮುಖವಾಡದವರು...

ಬಸವಣ್ಣನವರಲ್ಲಿದ್ದ ಒಂದು ಚೂರು ಬುದ್ದಿ, ಕನಕದಾಸರವರಲ್ಲಿದ್ದ ಒಂದು ಚೂರು ತಿಳಿವಳಿಕೆ, ಪದವಿ ಪದವಿಗಳನ್ನು ಪಡೆದು, ಪುಸ್ತಕಗಳನ್ನು ಓದಿ, ದೊಡ್ಡ ದೊಡ್ಡ ಬಂಗಲೆಗಳಲ್ಲಿ ಎಲ್ಲಾ ಆಧುನಿಕ ಸೌಕರ್ಯಗಳನ್ನು ಹೊಂದಿರುವ, ಅಧಿಕಾರ ಪಡೆದಿರುವ, ಅನೇಕ ವೃತ್ತಿಗಳನ್ನು ಮಾಡುತ್ತಿರುವ, ದೇಶದ ಬಗ್ಗೆ ಉದ್ದುದ್ದ ಮಾತನಾಡುವ ಯಾರಲ್ಲಿಯೂ ಕಾಣದೆ ಇರುವುದು ಒಂದು ಸೋಜಿಗ.

ಚರ್ಚೆ ವಿವಾದ ಸಲಹೆ ಪ್ರತಿಕ್ರಿಯೆಗಳು ಜಾತಿ ನಿರ್ಮೂಲನೆಯ ದಿಕ್ಕಿನಲ್ಲಿ ಇರಬೇಕೆ ಹೊರತು ಅನವಶ್ಯಕ ಕೆಲವು ಮಾತುಗಳ ಅಥವಾ ಭಾವೋದ್ವೇಗದ ಭಾವನೆಗಳ ಸುತ್ತ ಅಲ್ಲ. ಹೌದು, ಈ ಕ್ಷಣದಲ್ಲಿ ಜಾತಿ ವ್ಯವಸ್ಥೆಯ ನಿರ್ಮೂಲನೆ ಅಸಾಧ್ಯ ಎನಿಸಿದರೂ ಒಂದಷ್ಟು ತಿಳಿವಳಿಕೆ ಮತ್ತು ಜವಾಬ್ದಾರಿ ಹೊಂದಿರುವ ನಾವು ಕನಿಷ್ಠ ಪ್ರಮಾಣದಲ್ಲಿಯಾದರೂ ನಮ್ಮ ನಮ್ಮ ನೆಲೆಯಲ್ಲಿ ಜಾತಿ ಪದ್ದತಿಯ ದುಷ್ಪರಿಣಾಮ ಕಡಿಮೆ ಮಾಡಲು ಪ್ರಯತ್ನಿಸಬಹುದು. ಅದಕ್ಕಾಗಿ ಆಸಕ್ತಿ ಇರುವವರು ಒಂದು ಸಣ್ಣ ಸಂಕಲ್ಪವನ್ನು ಈ ರೀತಿ ಮಾಡಬಹುದೇ..

1) ಸಂಬಂಧ ಬೆಳೆಸಬೇಕಾದ ಪರಿಸ್ಥಿತಿ ಹೊರತುಪಡಿಸಿ ಇತರೆ ಲೋಕಾಭಿರಾಮ ಅಥವಾ ಸಹಜ ಪರಿಚಯದ ಸಂದರ್ಭದಲ್ಲಿ ಮನಸ್ಸು ಎಷ್ಟೇ ತಹತಹಿಸಿದರು ಆ ವ್ಯಕ್ತಿಯ ಜಾತಿಯನ್ನು ಕೇಳುವುದು ಕಡಿಮೆ ಮಾಡಿಕೊಳ್ಳೋಣ. ನಮಗೆ ಆ ವ್ಯಕ್ತಿಯ ಅಥವಾ ವ್ಯಕ್ತಿಗಳ ಜಾತಿ ಮುಖ್ಯವಲ್ಲ ಆತನ ಅಥವಾ ಆಕೆಯ ವ್ಯಕ್ತಿತ್ವ ಮತ್ತು ನಡವಳಿಕೆ ಮುಖ್ಯವಾಗಬೇಕು.

2) ಮುಖ್ಯವಾಗಿ ಜಾತಿಯ ಮೇಲ್ವರ್ಗದವರು ನಮ್ಮ ಸುತ್ತಮುತ್ತಲಿನ ಪರಿಚಯದ ಅಥವಾ  ಕೆಳವರ್ಗದ ಜನರನ್ನು ಉದ್ದೇಶಪೂರ್ವಕವಾಗಿಯೇ ಗೆಳೆತನದ ವಿಷಯದಲ್ಲಿ ಅತ್ಯಂತ ಆತ್ಮೀಯತೆ ಮತ್ತು ಪ್ರೀತಿಯಿಂದ ಮಾತನಾಡಿಸಿ ಜಾತಿ ಎಂಬುದು ನಮ್ಮಗಳ ನಡುವೆ ಒಂದು ವಿಷಯವೇ ಅಲ್ಲ. ನಾವು ಏನಿದ್ದರೂ ಮನುಷ್ಯರು ಮತ್ತು ಭಾರತೀಯರು ಎಂಬುದನ್ನು ಸ್ಪಷ್ಟವಾಗಿ ಮತ್ತು ಆತ್ಮಸಾಕ್ಷಿಯಾಗಿ ಸಾಧ್ಯವಾದಷ್ಟು ಮನವರಿಕೆ ಮಾಡಿಕೊಡಲು ನಿರಂತರ ಪ್ರಯತ್ನ ಮಾಡಬೇಕು.

3) ಇನ್ನು ಮುಂದೆ ಜನಿಸುವ ನಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಜಾತಿ ಸೂಚಕ ಅಥವಾ ಹೆಸರಿನ ಮುಂದೆ ನಿರ್ದಿಷ್ಟ ಜಾತಿ ಗುರುತಾಗುವ ಹೆಸರುಗಳನ್ನು ಇಡದಿರುವ ಸಂಕಲ್ಪ ಮಾಡಿಕೊಳ್ಳೋಣ. ರಾಜ ಪ್ರಭುತ್ವ ಅಳಿದ ಮೇಲೆ ಇಲ್ಲಿ ಯಾರೂ ರಾಜ ವಂಶಸ್ಥರು ಇಲ್ಲ. ಎಲ್ಲರೂ ಭಾರತ ಗಣರಾಜ್ಯ ಒಕ್ಕೂಟದ ಪ್ರಜೆಗಳು ಮಾತ್ರ.

4) ವಿದ್ಯಾವಂತರಾದ ನಾವು ಚುನಾವಣಾ ಸಮಯದಲ್ಲಿ  ಜಾತಿ ನೋಡದೆ ವ್ಯಕ್ತಿಯನ್ನು ನೋಡಿ ಮತ ಚಲಾಯಿಸುವ ಪ್ರತಿಜ್ಞೆ ಮಾಡೋಣ. ಹೌದು, ಈ ಕ್ಷಣದಲ್ಲಿ ಅದರಿಂದ ಹೆಚ್ಚಿನ ಪ್ರಯೋಜನ ಇಲ್ಲ. ಆದರೆ ಕನಿಷ್ಠ ಆತ್ಮತೃಪ್ತಿಯಾದರೂ ಸಿಗಲಿ.

5) ಕಾರಣ ಏನೇ ಇರಲಿ ಜಾತಿ ಸಂಘಟನೆ ಅಥವಾ ಸಮಾವೇಶಗಳ ವಿಷಯದಲ್ಲಿ ತೀರಾ ಅನಿವಾರ್ಯ ಸಂದರ್ಭ ಹೊರತುಪಡಿಸಿ ತಟಸ್ಥ ನಿಲುವು ಅಥವಾ ನಿಮಗೆ ಹೆಚ್ಚು ಆಸಕ್ತಿ ಇಲ್ಲದಿದ್ದಲ್ಲಿ ದಯವಿಟ್ಟು ಅದರಲ್ಲಿ ಭಾಗವಹಿಸುವುದನ್ನು ಕಡಿಮೆ ಮಾಡಿಕೊಳ್ಳಿ.

6) ಇದು ಸ್ವಲ್ಪ ಕಷ್ಟ. ಆದರೂ, ಒಂದು ವೇಳೆ ನಿಮ್ಮ ಮಗ ಅಥವಾ ಮಗಳು ಇತರೆ ಜಾತಿಯ ಮದುವೆಗೆ ಸಂಬಂಧಿಸಿದ ಪ್ರೀತಿ ಏರ್ಪಟ್ಟಿದ್ದಲ್ಲಿ ಸಮಗ್ರ ಪರಿಶೀಲನೆಯ ನಂತರ ಜಾತಿ ಹೊರತುಪಡಿಸಿ ಎಲ್ಲವೂ ಸರಿ ಇದ್ದಲ್ಲಿ ಆ ಮದುವೆಗೆ ಒಪ್ಪಿಗೆ ಕೊಡುವ ಮೂಲಕ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಒಂದಷ್ಟು ಕೊಡುಗೆ ಕೊಡಬಹುದು.

7) ಯಾವುದೇ ರೀತಿಯ ಪ್ರತ್ಯಕ್ಷ ಅಥವಾ ಪರೋಕ್ಷ, ದೈಹಿಕ ಅಥವಾ ಮಾನಸಿಕ ಅಸ್ಪೃಶ್ಯತೆಯ ಆಚರಣೆ ಆ ಅಸ್ಪೃಶ್ಯರಿಗೆ ಮಾಡುವ ಅವಮಾನವಲ್ಲ, ಅದು ಅವರ ಶೋಷಣೆ ಜೊತೆಗೆ ನಿಜವಾದ ಅವಮಾನ ನಮ್ಮ ದೇಶದ ಸಂವಿಧಾನಕ್ಕೆ, ನಾವು ಆಚರಿಸುವ ಧರ್ಮಕ್ಕೆ, ನಮ್ಮ ಮಾನವೀಯ ಮತ್ತು ನಾಗರಿಕ ಪ್ರಜ್ಞೆಗೆ ನಾವೇ ಮಾಡಿಕೊಳ್ಳುವ ಅವಮಾನ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಅರಿತುಕೊಂಡ ಮುನ್ನಡೆಯೋಣ.

8) ನಮ್ಮ ಸುತ್ತಮುತ್ತಲಿನ ವಾಸಿಸುವ ಪ್ರದೇಶದಲ್ಲಿ ಸಾಧ್ಯವಾದರೆ ಆಗಾಗ ಜಾತಿ ಮುಕ್ತ ವ್ಯವಸ್ಥೆಯ ಬಗ್ಗೆ ಒಂದಷ್ಟು ಮಾತುಕತೆ ನಡೆಸಿ ಏನಾದರೂ ಒಂದಷ್ಟು ಪ್ರಾಮಾಣಿಕ ಪ್ರಯತ್ನ ಮಾಡೋಣ. ಹೀಗೆ ಇನ್ನೂ ಹಲವಾರು ಯೋಚನಾ ಕ್ರಮಗಳು ನಿಮಗೂ ಹೊಳೆಯಬಹುದು. ದಯವಿಟ್ಟು ಅದನ್ನು ಪಾಲಿಸುವ ಪ್ರಯತ್ನ ನಾವೆಲ್ಲರೂ ಮಾಡೋಣ.

ಮಾತುಗಳು ಕೃತಿಗಳಾಗದೆ, ವಚನಗಳು ಸಂಸ್ಕೃತಿಗಳಾಗದೆ, ಬೋಧನೆಗಳು ನಡವಳಿಕೆಗಳಾಗದೆ, ಅರಿವುಗಳು ಆಚರಣೆಗಳಾಗದೆ, ಸಂಪ್ರದಾಯಗಳು ಮಾನವೀಯ ಮೌಲ್ಯಗಳಾಗದೆ, ಕೇವಲ ಮುಖವಾಡಗಳಿಂದ ಈ ಸಮಾಜ ಉತ್ತಮ ಗೊಳ್ಳುವ ಯಾವ ಸಾಧ್ಯತೆಯೂ ಇಲ್ಲ. ಅದಕ್ಕಾಗಿಯೇ ಮನಸ್ಸುಗಳ ಈ‌ ಅಂತರಂಗದ ಚಳವಳಿ. 

ಇದು ಒಂದು ಮನವಿ ಮಾತ್ರ. ಒಪ್ಪುವ - ತಿರಸ್ಕರಿಸುವ, ನಿರ್ಲಕ್ಷಿಸುವ ಎಲ್ಲಾ ಸ್ವಾತಂತ್ರ್ಯ ನಿಮಗಿದ್ದೇ ಇದೆ. ಯೋಚಿಸಿ ನಿರ್ಧರಿಸಿ..

-ವಿವೇಕಾನಂದ ಹೆಚ್.ಕೆ., ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ