ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ...

ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ...

ಕನ್ನಡ ಸಾಹಿತ್ಯ ಸಮ್ಮೇಳನ - ಹಾವೇರಿ, ಜನ ಸಾಹಿತ್ಯ ಸಮ್ಮೇಳನ - ಬೆಂಗಳೂರು. ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ.. ಮುಖವಾಡಗಳ ಮರೆಯಲ್ಲಿ ಆಧುನಿಕ ಮನುಷ್ಯ ಬಚ್ಚಿಟ್ಟುಕೊಂಡಿರುವಾಗ ಎಲ್ಲವೂ ಗೋಜಲು - ಗೊಂದಲ. ಒಂದಷ್ಟು ಪ್ರೀತಿ ವಿಶ್ವಾಸ ವಿಶಾಲ ಮನೋಭಾವ ಕರುಣೆ ಕ್ಷಮಾಗುಣ ಎಲ್ಲವನ್ನೂ ಒಳಗೊಂಡ ಬುದ್ದತ್ವದಲ್ಲಿ ಎಲ್ಲವೂ ಸಹನೀಯ. ಯಾವುದೂ ವಿವಾದವೇ ಅಲ್ಲ. ಎಲ್ಲವೂ ಸಹಜ ಸ್ವಾಭಾವಿಕ.

ಆದರೆ, ಅಧಿಕಾರವೆಂಬುದು, ಹಣವೆಂಬುದು, ಪ್ರಶಸ್ತಿಯೆಂಬುದು, ಪ್ರಚಾರವೆಂಬುದು, ಜನಪ್ರಿಯತೆ ಎಂಬುದು ನೆತ್ತಿಗೇರಿ ಅಹಂಕಾರ ಮೀರಿ ದುರಹಂಕಾರವಾಗಿ ಪರಿವರ್ತನೆ ಹೊಂದಿದಾಗ ದ್ವೇಷ ಅಸೂಯೆಗಳು ಸುಲಭವಾಗಿ ನಮ್ಮನ್ನು ಆಕ್ರಮಿಸುತ್ತದೆ. ಆಗ ದೇವರೂ ಒಂದು ವಿವಾದ, ಧರ್ಮವೂ ಒಂದು ವಿವಾದ, ಭಾಷೆಯು ಒಂದು ವಿವಾದ, ಸಮ್ಮೇಳನವೂ ವಿವಾದವೇ. ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6-7-8 ನಡೆಯುತ್ತಲಿದೆ. ಅದಕ್ಕೆ ಶುಭ ಹಾರೈಸುತ್ತಾ...

ಈ ರೀತಿಯ ಬೃಹತ್ ಪ್ರಮಾಣದ ಸಮ್ಮೇಳನದಲ್ಲಿ ಎಲ್ಲರನ್ನೂ ತೃಪ್ತಿ ಪಡಿಸುವುದು ಸಾಧ್ಯವಿಲ್ಲ. ಅಸಮಾಧಾನಗಳು ಸದಾ ಇರುತ್ತವೆ. ಆದರೆ ಉದ್ದೇಶ ಪೂರ್ವಕ ಪಕ್ಷಪಾತದ ನಿಲುವುಗಳನ್ನು ಪ್ರಶ್ನಿಸುವುದು ಮತ್ತು  ವಿರೋಧಿಸುವುದು ಸಹ ಸ್ವೀಕಾರಾರ್ಹ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತದೆಯಂತೆ. ಕಾರಣ ತಾನು ಯಾರಿಗೂ ಕಾಣಬಾರದೆಂದು. ಆದರೆ ಈಗಿನ ಮನುಷ್ಯ ಸ್ವಭಾವಗಳು ಹೆಚ್ಚು ಸೂಕ್ಷ್ಮವಾಗಿದೆ. ಎಲ್ಲವನ್ನೂ ಅತಿಯಾಗಿಯೇ ಗಮನಿಸುತ್ತಾರೆ. ಈ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಮತ್ತು ಇಲ್ಲ 13 ಮುಸ್ಲಿಂ ಲೇಖಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಪ್ರತ್ಯುತ್ತರ.

ಸರಿ ತಪ್ಪುಗಳ ಹುಡುಕಾಟ ಸರಿಯೇ ಅಥವಾ ಎಲ್ಲವನ್ನೂ ಮೌನವಾಗಿ ಸಹಿಸಬೇಕೇ ಅಥವಾ ಎಲ್ಲರ ಸ್ವಾತಂತ್ರ್ಯ ಗೌರವಿಸುತ್ತಾ ಸಮನ್ವಯ ‌ಸಾಧಿಸಬೇಕೇ ಅಥವಾ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಬೇಕೇ? ಈಗಾಗಲೇ ಒಂದಷ್ಟು ಜನ ಪರ್ಯಾಯವಾಗಿ ಇದೇ ಜನವರಿ 8 ರಂದು ಬೆಂಗಳೂರಿನಲ್ಲಿ ಜನ ಸಾಹಿತ್ಯ ಸಮ್ಮೇಳನ ನಡೆಸುವ ತಯಾರಿಯಲ್ಲಿದ್ದಾರೆ. ಒಂದು ಕಡೆ ಅತ್ಯಂತ ಮಹತ್ವದ ಐತಿಹಾಸಿಕ ಕನ್ನಡದ ನುಡಿ ಹಬ್ಬ ಇನ್ನೊಂದು ಕಡೆ ಅಷ್ಟೇ ಮಹತ್ವದ ಸಾಂಸ್ಕೃತಿಕ ಪ್ರತಿರೋಧ ಈ ಸಂಘರ್ಷ ಕನ್ನಡಿಗರ ಹಿತ ದೃಷ್ಟಿಯಿಂದ ಸಾಮಾಜಿಕವಾಗಿ ಅಷ್ಟು ಒಳ್ಳೆಯ ಬೆಳವಣಿಗೆಯಲ್ಲ.

ಆದರೆ ಈಗ ಕಾಲ ಮಿಂಚಿದೆ. ಸಮನ್ವಯ ಸಾಧ್ಯವಾಗುತ್ತಿಲ್ಲ. ಕುಳಿತು ಮಾತನಾಡಿ ಒಂದಷ್ಟು ಸರಿಪಡಿಸಿಕೊಳ್ಳುವ ವ್ಯವಧಾನ, ಆಸಕ್ತಿ ಮತ್ತು ಒಳ್ಳೆಯತನ ಕಾಣುತ್ತಿಲ್ಲ. ಈಗ ಮಾಡುವುದಾದರೂ ಏನು? ಪ್ರಗತಿಪರರು - ಬದಲಾವಣೆ ಬಯಸುವವರು - ಸಾಮರಸ್ಯ ಸೌಹಾರ್ದ ಇಷ್ಟ ಪಡುವವರು  - ಪ್ರವಾಹದ ವಿರುದ್ಧ ಈಜುವ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ಆದ ಕಾರಣ ಸಾಂಪ್ರದಾಯಿಕ ಶಕ್ತಿಗಳಿಗಿಂತ ಎರಡು ಮೂರು ಪಟ್ಟು ಹೆಚ್ಚು ತಾಳ್ಮೆ ವಿವೇಚನೆ ಪ್ರಬುದ್ದತೆ ಮತ್ತು ಪ್ರೀತಿ ಇರಬೇಕಾಗುತ್ತದೆ. ಪರ್ಯಾಯ ಹುಡುಕುವಾಗ ಸಂಘರ್ಷಕ್ಕಿಂತ ಹೆಚ್ಚು ಅಪ್ಪಿಕೊಳ್ಳುವ ಮತ್ತು ಪರಿವರ್ತಿಸುವ ಗುಣ ಇರಬೇಕಾಗುತ್ತದೆ.

ಯಾರದೋ ಒಬ್ಬ ವ್ಯಕ್ತಿಯ ಸೈದ್ಧಾಂತಿಕ ವಿರೋಧಕ್ಕಾಗಿ ಅಥವಾ ಅಸಮರ್ಪಕ ನಿರ್ವಹಣೆಗಾಗಿ ಆತನನ್ನು ಟೀಕಿಸುವುದು ಸರಿ ಇದೆ. ಆದರೆ ಕನ್ನಡದ ನುಡಿ ತೇರನ್ನು  ಬಹಿಷ್ಕರಿಸಿದರೆ ಅದು ಉತ್ತಮ ನಡೆಯಾಗುವುದಿಲ್ಲ.  ಬದಲಾವಣೆ ಮೂಲದಲ್ಲೇ ಆಗಬೇಕೆ ಹೊರತು ಸಮ್ಮೇಳನದ ಸಂದರ್ಭದಲ್ಲಿಯಲ್ಲ.

ಪರ್ಯಾಯ ಜನ ಸಾಹಿತ್ಯ ಸಮ್ಮೇಳನ ಮಾಡುವುದು ಸಹ ಭಾಷಾ ಸಾಹಿತ್ಯದ ದೃಷ್ಟಿಯಿಂದ ಉತ್ತಮ ನಡೆ.  ಆದರೆ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ನಂತರ ಮಾಡಬೇಕು. ಅದು ನಡೆಯುವಾಗಲೇ ಇಲ್ಲಿ ಮತ್ತೊಂದು ನೆಡದರೆ ಸಂಘರ್ಷ ಹೆಚ್ಚಾಗುತ್ತದೆ. ಭಾಗವಹಿಸುವವರಿಗೂ ತೊಂದರೆಯಾಗುತ್ತದೆ. ಪರ್ಯಾಯ ಮಾರ್ಗಗಳು ಸೇಡಿನ ರೂಪದಲ್ಲಿರದೆ ಸಹಬಾಳ್ವೆಯ ರೂಪ ಪಡೆದರೆ ಹೆಚ್ಚು ಆದರ್ಶ ಮತ್ತು ಅನುಕರಣೀಯವಾಗಿರುತ್ತದೆ. ತಪ್ಪು ಮಾಡಿದವರು ತಿದ್ದಿಕೊಳ್ಳಲು ಯೋಚಿಸುವಂತಿರಬೇಕು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಆರೋಪಗಳನ್ನು ಸಹಿಸಿಕೊಳ್ಳಬೇಕು. ಪ್ರತ್ಯಾರೋಪಗಳು ವೈಯಕ್ತಿಕ ಸಂಬಂಧಗಳನ್ನು ಘಾಸಿಗೊಳಿಸುವಂತಿರಬಾರದು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಚಿಂತನಾ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಸಬೇಕೆ ಹೊರತು ರಾಜಕೀಯ ಪ್ರೇರಿತ ಸಂಕುಚಿತ ಮನೋಭಾವ ಬೆಳೆಸಬಾರದು. ಆದ್ದರಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದ ಹಾವೇರಿ ಸಮ್ಮೇಳನವೂ ಯಶಸ್ವಿಯಾಗಲಿ ಮತ್ತು ಅದರ ಕಾರ್ಯಕ್ರಮದ ರೂಪರೇಷೆಗಳ ಪಕ್ಷಪಾತದ ವಿರುದ್ಧ ಪ್ರತಿರೋಧದ ಜನ ಸಾಹಿತ್ಯ ಸಮ್ಮೇಳನವೂ ಯಶಸ್ವಿಯಾಗಲಿ. ಸಾಧ್ಯವಾದರೆ ಆಸಕ್ತಿ ಇರುವವರು, ಅವಕಾಶ ಸಿಕ್ಕರೆ ಎರಡೂ ಕಡೆ ಭಾಗವಹಿಸಿ. ತಪ್ಪುಗಳು ನಡೆಯುತ್ತಲೇ ಇರುತ್ತದೆ. ಕಸ ಬೀಳುತ್ತಲೇ ಇರುತ್ತದೆ. ಕೆಲವರಾದರೂ ಪೊರಕೆ ಹಿಡಿದು ಗುಡಿಸುತ್ತಾ ಸಾಗೋಣ ಮತ್ತೆ ಮತ್ತೆ...

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ