ವಿವಾದಾಸ್ಪದ ಪ್ರಸ್ತಾಪ

ವಿವಾದಾಸ್ಪದ ಪ್ರಸ್ತಾಪ

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಸ್ತಾಪವೊಂದು ಈಗ ವಿವಾದ ಸೃಷ್ಟಿಸಿದ್ದರಲ್ಲಿ ಅಚ್ಚರಿಯಿಲ್ಲ. ದೇಶದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆಯಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಣಾಳಿಕೆಯು, ಸಂಪತ್ತಿನ ಹಂಚಿಕೆಯಲ್ಲಿ ಎಲ್ಲರಿಗೂ ಸಮಾನತೆಯಿರಬೇಕು ಎಂಬಂತಹ ಮಾತುಗಳನ್ನಾಡಿದೆ. ಆದರೆ ಪಕ್ಷದ ಮುಖಂಡ ರಾಹುಲ್ ಗಾಂಧಿಯವರು ಶ್ರೀಮಂತರ ಸಂಪತ್ತನ್ನು ಬಡವರಿಗೆ ಮರುಹಂಚಿಕೆ ಮಾಡಬೇಕು ಎಂಬಂತಹ ಅರ್ಥದಲ್ಲಿ ಮಾತನಾಡಿರುವುದು ಈ ಪ್ರಸ್ತಾಪದ ಹಿಂದಿನ ಅಪಾಯವನ್ನು ಎತ್ತಿ ತೋರಿಸಿದೆ. ಅದೂ ಸಾಲದೆಂಬಂತೆ ಕಾಂಗ್ರೆಸ್ ನ ಓವರ್ ಸೀಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಅಮೇರಿಕಾದ ಉತ್ತರಾಧಿಕಾರ ತೆರಿಗೆ ಕಾನೂನನ್ನು ಉಲ್ಲೇಖಿಸಿ, ಮೃತ ಪಟ್ಟ ವ್ಯಕ್ತಿಗಳ ಸಂಪತ್ತಿನ ಶೇ ೫೫ರಷ್ಟು ಭಾಗವನ್ನು ಸಮಾಜಕ್ಕೆ ಹಂಚುವ ವ್ಯವಸ್ಥೆಯು ಭಾರತದಲ್ಲೂ ಜಾರಿಗೆ ಬರಬೇಕೆಂಬ ರೀತಿಯಲ್ಲಿ ಮಾತನಾಡಿರುವುದು ಈ ವಿವಾದದ ಉರಿಗೆ ಇನ್ನಷ್ಟು ಎಣ್ಣೆ ಸುರಿದಿದೆ.

ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮೊದಲಿಗೆ ಜಾತಿ ಗಣತಿ ನಡೆಸಲಾಗುವುದು. ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸಮೀಕ್ಷೆ ಮಾಡಲಾಗುವುದು. ಬಳಿಕ ಆಯಾ ಜಾತಿ ಮತಗಳವರ ಜನಸಂಖ್ಯೆಗನುಗುಣವಾಗಿ ಸಂಪತ್ತನ್ನು ಸಮಾನವಾಗಿ ಮರುಹಂಚಿಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂಬುದಾಗಿ ರಾಹುಲ್ ಗಾಂಧಿ ನುಡಿದಿರುವುದು, ಸಮಾಜದ ಹಲವಾರು ಜಾತಿಗಳು ಮತ್ತು ವರ್ಗದವರಲ್ಲಿ ಆತಂಕ ಮೂಡಿರುವುದು ಸಹಜವೇ ಆಗಿದೆ. ಸಿರಿವಂತರ ಹಣವನ್ನು ವಶಪಡಿಸಿಕೊಂಡು ಬಡವರಿಗೆ ಹಂಚುವ ಕಮ್ಯೂನಿಷ್ಟ್ ಮಾನಸಿಕತೆಯು ಇಂತಹ ನೀತಿಯು ಅದೆಷ್ಟು ಅಪಾಯಕಾರಿಯೆಂದು ವಿವರಿಸುವ ಅಗತ್ಯವಿಲ್ಲ. ತಾವು ದುಡಿದ ಹಣವನ್ನು ಹೇಗೂ ಸರಕಾರ ವಶಪಡಿಸಿಕೊಳ್ಳುವುದೆಂಬ ಭೀತಿಯಿಂದ ಜನರು ದುಡಿಯುವುದನ್ನೇ ನಿಲ್ಲಿಸಿಬಿಟ್ಟರೆ ಪರಿಸ್ಥಿತಿ ಏನಾದೀತು? ಹೇಗೂ ಸರಕಾರದಿಂದ ಹಣ ಸಿಗುವುದೆಂಬ ನೆಲೆಯಲ್ಲಿ ಇತರರೂ ದುಡಿಯುವುದನ್ನು ನಿಲ್ಲಿಸಿದರೆ ಆಗ ಏನಾದೀತು? ಈಗಾಗಲೇ ಕೆಲವು ಸಮುದಾಯದವರ ತುಷ್ಟೀಕರಣ ನಡೆಸುತ್ತಿರುವ ಪಕ್ಷವು ಈ ಸಂಪತ್ತು ಹಂಚಿಕೆ ವಿಚಾರದಲ್ಲೂ ಅದೇ ರೀತಿ ಅನುಸರಿಸಿದರೆ ಗತಿಯೇನು? ಪ್ರಧಾನಿ ಮೋದಿಯವರು ಈಗ ಇದೇ ಆಯಾಮದಲ್ಲಿ ಕಾಂಗ್ರೆಸಿಗರ ಪ್ರಣಾಳಿಕೆಯ ಔಚತ್ಯವನ್ನು ಪ್ರಶ್ನಿಸಿದ್ದಾರೆ.

ಯಾವುದೇ ಪಕ್ಷವು ರಚನಾತ್ಮಕ ಕಾರ್ಯಕ್ರಮಗಳ, ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳ ಹಿನ್ನಲೆಯಲ್ಲಿ ಜನರಿಂದ ಮತ ಯಾಚಿಸಬೇಕೇ ಹೊರತು, ಈ ಬಗೆಯ ಅಪಾಯಕಾರಿ, ಗಿಮಿಕ್ ಗಳ ಮೂಲಕ ಅಲ್ಲ, ಇಂತಹ ಪ್ರಸ್ತಾಪಗಳು ಎಲ್ಲಾ ರೀತಿಯಿಂದಲೂ ಅಪಾಯಕಾರಿ ಎಂದು ಅರಿಯಬೇಕು.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೫-೦೪-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ