ವಿವಿಧತೆಯಿಂದ ಕೃಷಿ ಸಮೃದ್ಧ (ರೈತರೇ ಬದುಕಲು ಕಲಿಯಿರಿ-೧೬)

ವಿವಿಧತೆಯಿಂದ ಕೃಷಿ ಸಮೃದ್ಧ (ರೈತರೇ ಬದುಕಲು ಕಲಿಯಿರಿ-೧೬)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯತೆ ಇದೆ. ಬರೀ ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಉತ್ತರ ಕರ್ನಾಟಕದ ತುತ್ತತುದಿಯಲ್ಲಿರುವ ವಿಜಾಪುರದಲ್ಲಿ ಹಣ್ಣಿನ ಗಿಡಗಳು ಸಮೃದ್ಧವಾಗಿ ಬೆಳೆಯುತ್ತವೆ. ನಿಂಬೆ, ಅಂಜೂರ, ದ್ರಾಕ್ಷಿಯಂತಹ ಬೆಳೆಗಳು ಇಲ್ಲಿ ಚೆನ್ನಾಗಿ ಬರುತ್ತವೆ. ಕೊಂಚ ಕೆಳಕ್ಕೆ ಬಂದರೆ ನೀರಾವರಿ ಆಶ್ರಯದಲ್ಲಿ ಕಬ್ಬು ಮುಖ್ಯ ಬೆಳೆಯಾಗುತ್ತದೆ. ಕೊಪ್ಪಳದಂತಹ ಕಡಿಮೆ ಮಳೆ ಬೀಳುವ ಕಡೆ ಮೆಕ್ಕೆಜೋಳ (ಗೋವಿನಜೋಳ), ಜೋಳ, ಸಜ್ಜೆ ಮತ್ತು ನವಣೆಗಳ ಜತೆಗೆ ಹಣ್ಣಿನ ಬೆಳೆಗಳಾದ ದಾಳಿಂಬೆ ಮತ್ತು ಅಂಜೂರ ಮುಖ್ಯವಾಗುತ್ತವೆ.

ಪಕ್ಕದ ರಾಯಚೂರು ಮತ್ತು ಬಳ್ಳಾರಿಯ ಕಡೆ ನೀರಾವರಿ ಆಶ್ರಯದಲ್ಲಿ ಬತ್ತ ಮುಖ್ಯ ಬೆಳೆ. ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ ಮುಖ್ಯ ಬೆಳೆಗಳಾದರೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಂಬಾರ ಬೆಳೆಗಳು, ಅಡಿಕೆ, ಮೆಣಸು, ಏಲಕ್ಕಿ ಮುಖ್ಯ ಬೆಳೆಗಳು. ಇಂಥವೇ ಬೆಳೆಗಳು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರದಲ್ಲಿಯೂ ಕಾಣಸಿಗುತ್ತವೆ. ಇನ್ನು ಪೂರ್ವದ ಜಿಲ್ಲೆಗಳಾದ ದಾವಣಗೆರೆ ಮತ್ತು ಚಿತ್ರದುರ್ಗಗಳಲ್ಲಿ ಮತ್ತೆ ಮೆಕ್ಕೆಜೋಳ, ಜೋಳ, ರಾಗಿಯಂತಹ ಬೆಳೆಗಳು ಪ್ರಮುಖವಾಗಿ ಕಂಡರೆ ಕೋಲಾರದಂತಹ ಬರಪೀಡಿತ ಜಿಲ್ಲೆಯಲ್ಲಿ ತರಕಾರಿ ಮತ್ತು ಹಣ್ಣಿನ ಬೆಳೆಗಳು ವಿಜೃಂಭಿಸುತ್ತವೆ.

ಮಾರುಕಟ್ಟೆ ದೃಷ್ಟಿಯಿಂದಲೂ ಕೆಲವೊಂದು ಬೆಳೆಗಳು ನಿರ್ಧಾರವಾಗಿರಬಹುದು. ಆದರೆ ಅಲ್ಲಿರುವ ಹವಾಗುಣ, ನೀರಿನ ಲಭ್ಯತೆ ಆಧರಿಸಿಯೂ ಬೆಳೆಗಳು ಬದಲಾಗುತ್ತವೆ ಎಂಬುದೂ ಅಷ್ಟೇ ಸತ್ಯ.

ಪ್ರಕೃತಿಯಲ್ಲಿ ಏಕಬೆಳೆ ಪದ್ಧತಿ ಇಲ್ಲ. ಅಲ್ಲೇನಿದ್ದರೂ ವೈವಿಧ್ಯತೆಯೇ ಪ್ರಧಾನ.

ಪ್ರಾಣಿಗಳ ವಿಷಯದಲ್ಲಿಯೂ ಈ ಮಾತು ಸತ್ಯ. ಪ್ರಕೃತಿ ಸಮೃದ್ಧವಾಗಿರುವೆಡೆ ಇರುವ ಜೀವ ಸಂಕುಲವೂ ಸಮೃದ್ಧವೇ. ಆಯಾ ಪ್ರದೇಶದ ಹವಾಮಾನ ಹಾಗೂ ಇತರ ಜೀವಪೂರಕ ಸನ್ನಿವೇಶಗಳನ್ನು ಅವಲಂಬಿಸಿ ಜೀವಿಗಳ ವಿಧ ಮತ್ತು ವಿಸ್ತರಣೆ ನಿರ್ಧಾರವಾಗಿರುತ್ತದೆ. ಹೇಗೆ ಅರಣ್ಯದಲ್ಲಿ ಹುಲಿ ಮತ್ತು ಸಿಂಹಗಳಷ್ಟೇ ಇರದೇ ನೂರಾರು ಜಾತಿಯ ಬೇರೆ ಬೇರೆ ಪ್ರಾಣಿಗಳಿರುವಂತೆ ಒಂದು ಪ್ರದೇಶದಲ್ಲಿ ವಿವಿಧ ಜಾತಿಯ ಬೆಳೆಗಳು, ಮರಗಳು, ಕೀಟಗಳು ಇದ್ದೇ ಇರುತ್ತವೆ. 

ಇದರ ಅರ್ಥ ಇಷ್ಟೇ: ಅದು ಪ್ರಾಣಿ ಇರಲಿ ಅಥವಾ ಸಸ್ಯ ಇರಲಿ, ಏಕರೂಪತೆ ಎಲ್ಲಿಯೂ ಇಲ್ಲ. ಅದು ಸಹಜವೂ ಅಲ್ಲ. ಒಂದು ವೇಳೆ ನಿಸರ್ಗದ ಈ ನಿಯಮಕ್ಕೆ ವಿರುದ್ಧವಾಗಿ ನೀವು ಯಾವುದೇ ಒಂದು ಪ್ರದೇಶದಲ್ಲಿ ಏಕತೆ ತರಲು ಹೋದರೆ ನಿಸರ್ಗದ ಕೊಂಡಿ ಮುರಿದು ವಿವಿಧ ಸಮಸ್ಯೆಗಳು ತಲೆದೋರುತ್ತವೆ. ನಮ್ಮ ಹೊಲಗಳಲ್ಲಿ ಅಪಾಯಕಾರಿ ಕೀಟಗಳು ಉದ್ಭವವಾಗುವುದು ಈ ಕಾರಣದಿಂದ.

ಇದನ್ನು ಇನ್ನಷ್ಟು ಸ್ಪಷ್ಟವಾಗಿ ನೋಡಬಹುದು.

ಮೊದಲೆಲ್ಲ ಒಂದು ಹೊಲದಲ್ಲಿ ನಾನಾ ರೀತಿಯ ಬೆಳೆಗಳು ಇರುತ್ತಿದ್ದವು. ಒಂದು ಬೆಳೆ ಇನ್ನೊಂದರ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿತ್ತು. ಆಕಸ್ಮಾತ್ ಒಂದು ಬೆಳೆ ವಿಫಲವಾದರೂ ಉಳಿದ ಬೆಳೆಗಳು ಆ ನಷ್ಟವನ್ನು ಸರಿದೂಗಿಸುತ್ತಿದ್ದವು. ಅಲ್ಲದೇ ನಿತ್ಯ ಬೇಕಾಗುವ ಜೋಳ, ಬತ್ತ, ಗೋದಿ, ತರಕಾರಿಗಳು, ಬೇಳೆಕಾಳುಗಳನ್ನು ರೈತನೇ ಬೆಳೆದುಕೊಳ್ಳುತ್ತಿದ್ದುದರಿಂದ ಮಾರುಕಟ್ಟೆಯ ಮೇಲೆ ಅವಲಂಬನೆ ಇರಲಿಲ್ಲ. ಮನೆಯಲ್ಲಿ ದನಕರುಗಳಿರುತ್ತಿದ್ದುದರಿಂದ ಹೈನು, ಗೊಬ್ಬರ ಪುಕ್ಕಟೆಯಾಗಿ ಸಿಗುತ್ತಿತ್ತು. ಹೊಲದಲ್ಲಿದ್ದ ಬೆಳೆಗಳ ಉತ್ಪಾದನೆಯನ್ನೇ ಇವು ತಿನ್ನುತ್ತಿದ್ದುದರಿಂದ ಪಶು ಆಹಾರ ಎಂಬ ಹುಚ್ಚು ಕಲ್ಪನೆ ಇರಲಿಲ್ಲ. ತನಗೆ ಬೇಕಾಗುವ ಬಿತ್ತನೆ ಬೀಜಗಳನ್ನು ರೈತನೇ ಉತ್ಪಾದಿಸುತ್ತಿದ್ದ.  

ಆದರೆ ಈಗ ಏನಾಗಿದೆ? ಲಾಭದ ಆಸೆಗೆ ಬಿದ್ದು ಏಕಬೆಳೆಗೆ ರೈತ ಗಂಟು ಬಿದ್ದಿದ್ದಾನೆ. ಏನಾದರೂ ಮಾಡಿ ಲಾಭ ಪಡೆದುಕೊಳ್ಳಬೇಕು ಎಂಬ ಹುಚ್ಚಿಗೆ ಬಿದ್ದು ಭೂಮಿಗೆ ಸುರಿಯಬಾರದ್ದನ್ನೆಲ್ಲ ಸುರಿಯುತ್ತಿದ್ದಾನೆ. ಅದಕ್ಕಾಗಿ ಎಷ್ಟೇ ಖರ್ಚಾದರೂ ಪರವಾಗಿಲ್ಲ. ಹೀಗಾಗಿ ಎಕರೆಗಟ್ಟಲೇ ಒಂದೇ ಬೆಳೆಯನ್ನು ಬೆಳೆಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೆಳೆಗೆ ಸಣ್ಣ ರೋಗವೇ ಬಂದರೂ ಇಡೀ ಬೆಳೆಯೇ ತೊಂದರೆಗೆ ಸಿಲುಕುತ್ತದೆ. ಇದೊಂದು ರೀತಿ ಲಾಟರಿ ಇದ್ದಂತೆ. ಬಂದರೆ ರೈತ ಲಕ್ಷಾಧೀಶ. ಇಲ್ಲದಿದ್ದರೆ ಭಿಕ್ಷಾಧೀಶ. 

ಆದ್ದರಿಂದ ಬೆಳೆ ವೈವಿಧ್ಯತೆ ಕಡೆಗೆ ರೈತರು ಗಮನ ಕೊಡಬೇಕು. ಫಲ ಕೊಡುವ ಮರಗಳ ಜತೆಗೆ, ನಿತ್ಯ ಬಳಕೆಗೆ ಬೇಕಾಗುವ ಔಷಧೀಯ ಸಸ್ಯಗಳನ್ನೂ ಬೆಳೆಸಿ. ಮನೆ ಬಳಕೆಗೆ ಬೇಕಾಗುವ ಆಹಾರ ಧಾನ್ಯಗಳಾದ ಜೋಳ, ಬತ್ತ, ಗೋದಿ, ರಾಗಿಯಂತಹ ಬೆಳೆಗಳ ಜತೆಗೆ ತರಕಾರಿ, ಹೂಗಿಡಗಳನ್ನೂ ಹಾಕಿ. ಇದರಿಂದ ನಿಮ್ಮ ನಿತ್ಯದ ಬಳಕೆಗೆ ಬೇಕಾದ ಧಾನ್ಯಗಳು ಹೊಲದಲ್ಲಿಯೇ ದೊರಕುತ್ತವೆ. ಜತೆಗೆ ಹೆಚ್ಚುವರಿ ಫಸಲನ್ನು ಮಾರಾಟ ಮಾಡುವ ಮೂಲಕ ದುಡ್ಡೂ ಬರುತ್ತದೆ. ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಳಂತೂ ವರ್ಷಪೂರ್ತಿ ಲಾಭ ತಂದುಕೊಡುತ್ತವೆ. ಉಳಿದಂತೆ ದವಸಧಾನ್ಯಗಳ ಫಸಲಿನಿಂದ ಆದಾಯ ಇದ್ದೇ ಇರುತ್ತದೆ.

(ಮುಂದುವರಿಯುವುದು)

- ಚಾಮರಾಜ ಸವಡಿ