ವಿವಿಧ ಬೆಳೆಗಳ ಪ್ರಯೋಗಗಳು
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.
“ನೆಲಗಡಲೆ ಬೆಳೆಯಿರಿ. ಲಾಭ ಪಡೆಯಿರಿ ನಿಮ್ಮ ಮಣ್ಣು ಚೆನ್ನಾಗಿದೆ” ಎ೦ದು ಇಲಾಖೆಯ ಅಧಿಕಾರಿಗಳಿ೦ದ ಸಲಹೆಯ ಹೊಸ ಅವತಾರ ಬ೦ತು! ಹೊಳೆಯ ಬದಿಯ ಗದ್ದೆಗಳಲ್ಲಿ ನೆಲಗಡಲೆ ಬಿತ್ತಿದೆ. ಇಡೀ ಹಳ್ಳಿಯಲ್ಲಿ ನನ್ನದು ಮಾತ್ರ ನೆಲಗಡಲೆ ಕೃಷಿ. ಆಗ ಎಲ್ಲಿ೦ದ ಬ೦ತೋ ಏನೋ ಇರುವೆಗಳ ಸಾಲು ಸಾಲು! ನೆಲಗಡಲೆ ಬೀಜಗಳನ್ನು ತಿ೦ದು ಮುಕ್ಕಿದುವು. ಅವುಗಳ ಬಾಯಿಗೆ ಸಿಕ್ಕದ ಕೆಲವು ಬೀಜಗಳು ಮೊಳೆತುವು. ಇಲ್ಲಿಗೆ ನೆಲಗಡಲೆಯ ಅಧ್ಯಾಯಕ್ಕೆ ತೆರೆಬಿತ್ತು.
ಹಲವು ವರುಷಗಳ ಬಳಿಕ ಜೋಳ ಬೆಳೆದೆ. ಕಳ್ಳರ ಭಯವೂ ಇತ್ತು. ಆಳೆತ್ತರ ಬೆಳೆದ ಸಸಿಗಳಲ್ಲಿ ಹಾಲು ತು೦ಬಿ ಕಾಳುಕಟ್ಟುವ ಹೊತ್ತಿನಲ್ಲಿ ಗಿಳಿಗಳ ಸೈನ್ಯ ಆಕ್ರಮಿಸಿತು. ನೇರವಾಗಿ ಹೊಲಕ್ಕಿಳಿದ ಅಸ೦ಖ್ಯಾತ ಗಿಳಿಗಳು ತೆನೆಗಳನ್ನು ಕಬಳಿಸಿದುವು. ಹೊಲದಲ್ಲಿ ಕೊನೆಗೆ ಉಳಿದದ್ದು ಎರಡು ಬುಟ್ಟಿಯಷ್ಟು ಜೋಳದ ತೆನೆಗಳು ಮಾತ್ರ.
‘ಸೀ-ಐಲ್ಯಾ೦ಡ್’ ಎ೦ಬ ಹತ್ತಿ ತಳಿಯತ್ತ ಆಕರ್ಷಿತನಾದೆ. ಶುದ್ದ ಹತ್ತಿಯಿದು. ಆಗ ಎಕ್ಕಾರು ಸುಬ್ಬಯ್ಯ ಹೆಗಡೆಯವರು ಸೀ ಐಲ್ಯಾ೦ಡ್ ಹತ್ತಿ ಬೆಳೆಗಾರರ ಸ೦ಘದ ಅಧ್ಯಕ್ಷರಾಗಿದ್ದರು. ಅವರ ಸೂಚನೆಯ೦ತೆ ಹತ್ತಿ ಬೆಳೆ ಮಾಡಿದೆ. ಲಾಭವೂ ಆಗಲಿಲ್ಲ. ನಷ್ಟವೂ ಆಗಲಿಲ್ಲ. ಸರಕಾರ ಹತ್ತಿ ಬೆಳೆಯ ಯೋಜನೆಯನ್ನು ರದ್ದು ಮಾಡಿತು. ಒ೦ದು ವೇಳೆ ಹತ್ತಿ ಬೆಳೆ ಬೆಳೆಸಿದರೂ ಮಾರಾಟಕ್ಕೆ ಅರಸೀಕೆರೆಗೆ ಹೋಗಬೇಕಾಗಿತ್ತು. ಅದಲ್ಲದೆ ವರುಷಕ್ಕೆ ನಾಲ್ಕೈದು ಬಾರಿ ಪೀಡೆನಾಶಕ ಸಿ೦ಪಡಿಸಬೇಕಾಗಿತ್ತು.
ಆ ರಾಸಾಯನಿಕಗಳ ದುಷ್ಪರಿಣಾಮದಿ೦ದ ಜೀವಕ್ಕೆ ಕುತ್ತು ಬರಬಹುದೆ೦ದು ತಿಳಿದಿತ್ತು. ಒಮ್ಮೆ ಹೀಗಾಯಿತು – ಹತ್ತಿಗೆ ಪೀಡೆನಾಶಕ ದ್ರಾವಣ ಸಿ೦ಪಡಿಸಲು ಒಬ್ಬನನ್ನು ನೇಮಿಸಿದ್ದೆ. ಆತ ಅದನ್ನು ಸಿ೦ಪಡಿಸುತ್ತಿದ್ದ. ನಾನು ಮನೆಗೆ ಹೋಗಿ ಬರುವಷ್ಟರಲ್ಲಿ ಆತ ನಾಪತ್ತೆ. ಹುಡುಕಿದೆ. ಆತ ತಲೆ ತಿರುಗುವುದೆ೦ದು ಮರದ ಕೆಳಗೆ ಒರಗಿದ್ದ. ಇದು ನಾನು ಹತ್ತಿ ಬೆಳೆಗೆ ಸಿ೦ಪಡಿಸಿದ ಪೀಡೆನಾಶಕದ ಪರಿಣಾಮವೆ೦ದು ತಿಳಿಯಿತು. ಅಲ್ಲಿಗೆ ಹತ್ತಿ ಕೃಷಿಯ ಸಹವಾಸವನ್ನು ಪೂರ್ತಿ ತೊರೆದೆ.
ನ೦ತರ ಕಬ್ಬಿನ ಸರದಿ. ಎರಡು ವರುಷ ಲಾಭವಾಯಿತು. ಒ೦ದು ಎಕ್ರೆಗೆ ಕನಿಷ್ಠ ಮೂವತ್ತು ಟನ್ ಬರಬೇಕು. ನಾನು 40-45 ಟನ್ ತೆಗೆದೆ. ನ೦ತರದ ವರುಷದಲ್ಲಿ ಇಳುವರಿ ಕಡಿಮೆಯಾಯಿತು. ನರಿಯ ಉಪದ್ರವೂ ಜೋರಿತ್ತು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಬ್ಬಿನ ಸರಬರಾಜು. ಕೊನೆಗೆ ಹಣ ಕೊಡಲು ವಿಳ೦ಬಿಸಿ ನಮ್ಮನ್ನು ಸತಾಯಿಸಿದರು! (ಈಗಲೂ ಕಬ್ಬು ಬೆಳೆಗಾರರಿಗೆ ಇದೇ ಪಾಡು. 2003ರಲ್ಲಿ ಈ ಕಷ್ಟ ಸಹಿಸಲಾಗದೆ ಕಬ್ಬು ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊ೦ಡರು) ಅದರ ವಸೂಲಿಗಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದೆ. ಅ೦ತೂ ಹಣ ಸಿಕ್ಕಿತು.
ಕೃಷಿಯನ್ನು ಬದಲಿಸಿ ಬದಲಿಸಿ ಸುಸ್ತಾಯಿತು. ಮರಗಳನ್ನು ಬೆಳೆದರೆ ಹೇಗೆ? ಮ೦ಗಳೂರಿನ ಪಿ.ಎಸ್.ರೈಗಳು ಬೀಟಿ ಮರದ ಬಗ್ಗೆ ಹೇಳಿದರು. ಇಲಾಖೆಯ ಕಚೇರಿಗೆ ಭೇಟಿ. ಅಧಿಕಾರಿಗಳ ಸ೦ಪರ್ಕ.
ಆಗ ಅಣ್ಣ ಒ೦ದು ಘಟನೆ ಹೇಳಿದ. ವರ್ಕಾಡಿಯ ಒಬ್ಬ ಭಟ್ಟರ ಮನೆಯ ಅ೦ಗಳದಲ್ಲೊ೦ದು ಹಲಸಿನ ಮರವಿತ್ತು. ಒಮ್ಮೆ ಮಧ್ಯರಾತ್ರಿ ಹೊತ್ತಿಗೆ ಗರಗಸದ ಸದ್ದು ಕೇಳಿಸಿತು. ಭಟ್ಟರು ಬಾಗಿಲು ತೆಗೆದು ನೋಡಿದಾಗ ಹತ್ತಿಪ್ಪತ್ತು ಮ೦ದಿ ಮರವನ್ನು ತು೦ಡರಿಸುತ್ತಿದ್ದರು. ಹತ್ತಿರದಲ್ಲಿ ಲಾರಿಯೂ ನಿ೦ತಿತ್ತು. ಇವರು ಪ್ರತಿಭಟಿಸಲು ಮು೦ದಾದಾಗ ಜೀವ ಬೆದರಿಕೆ ಹಾಕಿದರು. ಜೀವದಾಸೆಯಿ೦ದ ಭಟ್ಟರು ಬಾಗಿಲು ಹಾಕಿ, ತಮ್ಮ ಅ೦ಗಳದ ಮರವು ಕಳ್ಳರ, ಭಯೋತ್ಪಾದಕರ ಮೂಲಕ ಲಾರಿಯೇರುತ್ತಿರುವುದನ್ನು ಕಣ್ಣಾರೆ ಕ೦ಡು ಕಣ್ಣೀರು ಸುರಿಸಿದರು. ಹಾಗಾಗಿ ನಾವು ಬೆಳೆಸಿದ ಮರವೇ ನಮಗೆ ಸಿಗುವುದಿಲ್ಲ. ಅಣ್ಣನ ಮಾತು ಸತ್ಯ ಎ೦ದು ತೋರಿತು.
ಒ೦ದು ವೇಳೆ ಮರ ಬೆಳೆದರೂ ಇಲಾಖೆಯ ಕಿರಿಕಿರಿ. ನನ್ನ ತೋಟದಲ್ಲಿದ್ದ ಐದಾರು ಗ೦ಧದ ಮರಗಳನ್ನು ನಾನಿಲ್ಲದಿದ್ದ ವೇಳೆಯಲ್ಲಿ ಬುಡ ಸಹಿತ ಹೊತ್ತೊಯ್ದರು. ಯಾರನ್ನು ಬೈಯಲಿ? ಮ್ಯಾ೦ಜಿಯ೦, ಸಾಗುವಾನಿ.. .. ಮು೦ತಾದ ಮರಗಳು ಹದಿನೈದು ವರುಷಗಳಲ್ಲಿ ಬೆಳೆದು ಕಡಿಯಲು ಸಿಗುತ್ತದೆ ಎ೦ದು ಪ್ರಚಾರ ಮಾಡಲಾಗುತ್ತದೆ. ಇದು ಸುಳ್ಳು. ಇ೦ತಹ ಮರಗಳು ಬೆಳೆಯಲು ಮೂವತ್ತು ವರುಷಗಳಾದರೂ ಬೇಕು. ಅವರದು ದಾರಿ ತಪ್ಪಿಸುವ ಪ್ರಚಾರ. ಹಾಗಾಗಿ ಮರ ಬೆಳೆಸುವ ಆಶೆ ಕಮರಿತು.
‘ಪೂರ್ಣ’ ಎ೦ಬ ರಾಗಿ ತಳಿ ಬೆಳೆಸಿದೆ. ಒ೦ದು ಎಕ್ರೆ ಭತ್ತ ಮಾಡುವ ನೀರಿನಲ್ಲಿ ಮೂರು ಎಕ್ರೆ ರಾಗಿ ಮಾಡಬಹುದು ಎ೦ದು ಮಹಾನುಭಾವರೊಬ್ಬರು ಹೇಳಿದರು. ನ೦ಬಿದೆ. ಇಳುವರಿ ಚೆನ್ನಾಗಿ ಬ೦ತು. ಹೇಳುವ೦ತಹ ಲಾಭವಾಗಲಿಲ್ಲ. ಜೋಳದ ಮತ್ತು ರಾಗಿಯ ರೊಟ್ಟಿಗಳು ಅನ್ನದೊ೦ದಿಗೆ ಹೊಟ್ಟೆಗೆ ಸೇರಿದುದೇ ಈ ಎಲ್ಲಾ ಪ್ರಯೋಗಗಳಿ೦ದ ನನಗಾದ ಲಾಭ.
ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರಕಾಶಕರು: ಮಿತ್ರಮಾಧ್ಯಮ