ವಿವೇಕದಿಂದ ಆನಂದ

“ವಿವೇಕದಿಂದ ಆನಂದ” ದಲ್ಲಿ ಲೇಖಕರಾದ ಡಾ. ಎಸ್ ಎಸ್ ಓಂಕಾರ್ ಇವರು ಸ್ವಾಮಿ ವಿವೇಕಾನಂದರ ಜೀವನವನ್ನು ಮಾದರಿಯಾಗಿ ಇಟ್ಟುಕೊಂಡು ಪತಂಜಲಿ ಮಹರ್ಷಿಗಳ ಘನವಾದ 'ಯಮ' ಮತ್ತು 'ನಿಯಮ' ತತ್ತ್ವಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಯೋಗದ ಶಾರೀರಿಕ ಅಂಶಗಳಿಗೆ ಆಧುನಿಕ ದೃಷ್ಟಿಕೋನ ಹೆಚ್ಚು ಮಹತ್ವ ಕೊಟ್ಟಿದ್ದರೂ, ಈ ಮೂಲಭೂತ ತತ್ತ್ವಗಳು ಅತಿ ಮುಖ್ಯ ಹಾಗೂ ವಿವೇಕಪೂರ್ಣವಾದ, ಅರ್ಥಪೂರ್ಣವಾದ, ಸಮರಸದ ಜೀವನಕ್ಕೆ ಉತ್ತಮ ಮಾರ್ಗದರ್ಶಿ. ಈ ಪುಸ್ತಕದ ಒಂದೊಂದು ಅಧ್ಯಾಯವೂ ಈ ತತ್ತ್ವಗಳ ಆಳಕ್ಕೆ ಇಳಿದು ಅವುಗಳ ಅರ್ಥ, ಪರಿಣಾಮ ಹಾಗೂ ವ್ಯಾವಹಾರಿಕ ಉಪಯೋಗಗಳನ್ನು ಶೋಧಿಸುತ್ತದೆ. ಪತಂಜಲಿಯವರು ವಿವರಿಸಿದಂತೆ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ಸಂತೋಷ, ತಪಸ್, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ ಇವುಗಳನ್ನು ಪರಿಶೀಲಿಸಿ, ಅವನ್ನು ವಿವೇಕಾನಂದರ ಜೀವನದ ಘಟನೆಗಳಿಗೆ ಅನ್ವಯಿಸುವುದರ ಮೂಲಕ, ಓದುಗರು ಈ ಪ್ರಾಚೀನ ತತ್ತ್ವಗಳ ಆಳವಾದ ಅರ್ಥವನ್ನೂ, ಅವುಗಳ ಆಧುನಿಕ ಕಾರ್ಯಸಾಧ್ಯತೆಗಳ ಬಗ್ಗೆ ತಿಳುವಳಿಕೆಯನ್ನೂ ಪಡೆಯುತ್ತಾರೆ.
ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಎಚ್ ಆರ್ ನಾಗೇಂದ್ರ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ… “ಇಂದು ಮನುಷ್ಯ ಬಾಹ್ಯಜಗತ್ತಿನಲ್ಲಿ ವಿಜಯವನ್ನರಸುವ ಧಾವಂತದಲ್ಲಿ ತನ್ನ ಅಂತರಂಗದ ಆನಂದದಿಂದ ವಂಚಿತ ನಾಗುತ್ತಿದ್ದಾನೆ. ಇಂದು ಅನೇಕರು ಶಾಶ್ವತ ಸಂತಸದ ಹುಡುಕಾಟದಲ್ಲಿದ್ದಾರೆ. ಆದರೆ ಅದು ಕೈಗೆಟುಕುತ್ತಿಲ್ಲ. ಈ ವಿಷಯವನ್ನೇ ಕುರಿತು ಹೇಗೆ ವಿವೇಕದಿಂದ ಸರಿ-ತಪ್ಪು ಅರಿತು ನಿಜವಾದ ಜ್ಞಾನದಿಂದ ಆನಂದ ಪಡೆಯಬಹುದು ಎನ್ನುವುದನ್ನು ಎಸ್. ಎನ್. ಓಂಕಾರ್ ರವರು ತಿಳಿಸುತ್ತಾರೆ. ಸನ್ಮಾನ್ಯ ಓಂಕಾರ್ ರವರು ತಮ್ಮ ಪುಸ್ತಕ “ಆನಂದಕ್ಕಾಗಿ ವಿವೇಕ" ಸಹ ಶೀರ್ಷಿಕೆ “ಯಮ ನಿಯಮ ವಿವೇಕಾನಂದ” ಮುಖಾಂತರ ಪತಂಜಲಿ ಮಹರ್ಷಿಗಳು ಅಷ್ಟಾಂಗ ಯೋಗದ ಮೂಲ ತತ್ತ್ವದ ಸಿದ್ಧಾಂತಗಳನ್ನು ತಿಳಿಸಿ ನಿಜವಾದ ಆನಂದ ಪಡೆಯುವಲ್ಲಿ ತಪ್ಪಿಹೋಗಿದ್ದ ಕೊಂಡಿಯನ್ನು ಜೋಡಿಸಿದ್ದಾರೆ. ಅರ್ಥಪೂರ್ಣ ಬದುಕಿಗೆ ಈ ಸಿದ್ಧಾಂತಗಳು ಎಷ್ಟೊಂದು ಮೌಲ್ಯಯುತವಾದವು ಗಳೆಂದು ತಿಳಿಸುತ್ತಾರೆ. ಈ ತತ್ತ್ವ ಸಿದ್ಧಾಂತಗಳನ್ನು ದಿನ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡರೆ ನಾವು ಆನಂದ ಪಡೆಯುವಲ್ಲಿ ಜಯಶೀಲರಾಗುತ್ತೇವೆ. ಸಂತಸ ಎನ್ನುವುದು ಒಂದು ಮನಃಸ್ಥಿತಿಯೇ ಹೊರತು ನಾವೆಲ್ಲ ಅಂದುಕೊಂಡಿರುವ ಹಾಗೆ ಭೌತಿಕ ವಸ್ತುಗಳಲ್ಲಿಲ್ಲ. ಇದು ಮೌನ ಮತ್ತು ಉತ್ಕೃಷ್ಟ ಸ್ಥಿತಿ. ಪತಂಜಲಿಗಳು ಇದನ್ನು “ಚಿತ್ತ ವೃತ್ತಿ ನಿರೋಧ” ಎಂದು, ವಸಿಷ್ಠರು “ಮನಃ ಪ್ರಶಮಾನ” ಎಂದೂ ಕರೆಯುತ್ತಾರೆ. ಗುರಿಯೇನೆಂದರೆ ಆನಂದಮಯ ಕೋಶವನ್ನು ತಲುಪುವುದು. ವ್ಯಕ್ತಿ ತನ್ನನ್ನು ತಾನು ಶಿಸ್ತುಬದ್ಧ ಬದುಕಿಗೆ ಅರ್ಪಿಸಿಕೊಂಡು ಯಾವುದು ಸರಿ, ಯಾವುದು ತಪ್ಪು ಎಂದು ಅರಿತು ಯಮ ನಿಯಮಗಳನ್ನು ಪಾಲಿಸುವುದೇ ಆಗಿದೆ.
ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಪಡೆದು ಯಮ ನಿಯಮಗಳನ್ನು ಅನುಸರಿಸುವ ಪ್ರಸ್ತುತತೆಯನ್ನು ಈ ಪುಸ್ತಕ ತಿಳಿಸುತ್ತದೆ. ಓಂಕಾರ್‌ರವರು ಇವುಗಳನ್ನು ಹೇಗೆ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬುದನ್ನು ತಿಳಿಸುತ್ತಾರೆ. "ಯಮ"-ನೈತಿಕತೆ, ಸತ್ಯ, ಅಹಿಂಸೆ ಮತ್ತು ಸಕಾರಾತ್ಮಕ ತತ್ತ್ವಗಳನ್ನು ಒಳಗೊಂಡಿದೆ. ಇನ್ನು "ನಿಯಮ” -ವೈಯಕ್ತಿಕ ಅಭ್ಯಾಸಗಳಾದ ಪರಿಶುದ್ಧತೆ ಮತ್ತು ಸ್ವಯಂ ಶಿಸ್ತುಗಳು ಹೇಗೆ ನಮ್ಮನ್ನು ತೃಪ್ತಿಯೆಡೆಗೆ ಕೊಂಡೊಯ್ಯುತ್ತವೆ ಎನ್ನುವುದನ್ನು ಒಳಗೊಂಡಿದೆ.
ನೈತಿಕ ಬದುಕು ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಕುರಿತು ಯೋಗಮಾರ್ಗದಲ್ಲಿ ನಡೆಯಲು "ವಿವೇಕದಿಂದ ಆನಂದ" ಮಾರ್ಗದರ್ಶನ ಮಾಡುತ್ತದೆ. ಬದುಕಿನಲ್ಲಿ ಆನಂದವನ್ನು ಪಡೆಯಲು ಯಮ ನಿಯಮ ತತ್ತ್ವಗಳು ಎಷ್ಟು ಮುಖ್ಯ ಎಂದು ಅರಿತು ಅದರಂತೆ ನಡೆದು ಸದಾನಂದವನ್ನು ಪಡೆಯುವಂತವರಾಗಿರಿ.”