ವಿವೇಚನೆಯಿಂದ ಒಳಿತು

ವಿವೇಚನೆಯಿಂದ ಒಳಿತು

ನಿಂದನಾತ್ಮಕ, ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಆರೋಪದ ಮೇಲೆ ರಾಜ್ಯದಲ್ಲಿ ಎರಡೂವರೆ ವರ್ಷದಲ್ಲಿ (೨೦೨೩-೨೫ ಜೂನ್‌ವರೆಗೆ) ೧,೪೧೪ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ಗಮನ ಇಟ್ಟಿದ್ದು, ಸ್ವಯಂಪ್ರೇರಿತ ಪ್ರಕರಣವನ್ನೂ ದಾಖಲಿಸುತ್ತಿದೆ. ಇದಲ್ಲದೆ, ರಾಜ್ಯ ಗುಪ್ತಚರ ಇಲಾಖೆಯೂ ಜಾಲತಾಣಗಳ ಪೋಸ್ಟ್‌ಗಳ ಮೇಲೆ ನಿಗಾವಹಿಸಿದೆ. ಸುಮಾರು ೮೯೪ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಪೊಲೀಸರೇ ಅಳಿಸಿ ಹಾಕಿದ್ದು, ೧೭೮ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ರಾಜಕೀಯ ನಾಯಕರು, ಸಮಾಜದ ಬೇರೆ ಬೇರೆ ರಂಗಗಳ ಗಣ್ಯ ವ್ಯಕ್ತಿಗಳು ಹಾಗೂ ಚಲನಚಿತ್ರರಂಗದ ನಟ-ನಟಿಯರು ಇಂಥ ಪೋಸ್ಟ್‌ಗಳ ವಸ್ತುವಾಗುತ್ತಿದ್ದಾರೆ. ಇಷ್ಟೇ ಅಲ್ಲ, ನಕಲಿ ಪೋಸ್ಟ್, ಯುವತಿಯರ ಖಾಸಗಿ ಫೋಟೋ, ವಿಡಿಯೋ ಹಂಚಿಕೊಳ್ಳುವುದು ಮುಂತಾದ ಕೃತ್ಯಗಳೂ ನಡೆಯುತ್ತಿವೆ. ರಾಜ್ಯ ಮಟ್ಟದ ಕಮಾಂಡೋ ಸೆಂಟರ್‌ನಲ್ಲಿ ಪ್ರತ್ಯೇಕ ಜಾಲತಾಣ ನಿಗಾ ಘಟಕವಿದೆ. ರಾಜಕೀಯ ಪಕ್ಷಗಳ ಜಾಲತಾಣಗಳ ಖಾತೆಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಭಾಷಣ ಹಾಗೂ ಪ್ರಚೋದನಕಾರಿ ಹೇಳಿಕೆ ವಿರುದ್ಧ ಈಗ ಬಿಎನ್‌ಎಸ್‌, ಬಿಎನ್‌ಎಸ್‌ಎಸ್ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗುತ್ತಿದೆ. ಮೂರು ವರ್ಷ ಜೈಲು ಹಾಗೂ ದಂಡ ಅಥವಾ ಎರಡೂ ವಿಧಿಸುವ ಅವಕಾಶವಿದೆ.

ತಂತ್ರಜ್ಞಾನ ಹೊಂದುತ್ತ ಬೆಳವಣಿಗೆ ಹೋದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಭಾಗವಹಿಸುವಿಕೆಯೂ ಹೆಚ್ಚುತ್ತಲೇ ಇದೆ. ಇದು ಆಯಾ ಕಾಲಕ್ಕೆ ನಡೆಯುವ ವಿದ್ಯಮಾನ. ಮೂಲೆಯ ಹಳ್ಳಿಗಳಲ್ಲೂ ಈಗ ಮೊಬೈಲ್ ಫೋನ್ ಇರುವುದರಿಂದ ಹಿಂದೆ ಕಲ್ಪನೆಯನ್ನೂ ಮಾಡಲಾಗದ್ದು ಈಗ ವಾಸ್ತವ ಆಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನದ ೧೯ನೇ ವಿಧಿಯ ಮೂಲಕ ಎಲ್ಲರಿಗೂ ಲಭ್ಯವಾಗಿದೆ. ಹಕ್ಕುಗಳ ಜೊತೆಗೆ ಕರ್ತವ್ಯವೂ ಇರುತ್ತದೆ ಎಂಬುದನ್ನು ಮರೆಯಬಾರದು. ಸ್ವಾತಂತ್ರ್ಯವು ಸ್ಟೇಚ್ಛೆ ಆಗದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಹೊಣೆಗಾರಿಕೆ. ಹೀಗಾಗಿ, ಸಾಮಾಜಿಕ ಮಾಧ್ಯಮಗಳು ಆರೋಗ್ಯಕರ ವೇದಿಕೆಯಾಗಿ ಮುಂದುವರಿಯುವಲ್ಲಿ ಬಳಕೆದಾರರ ಪಾತ್ರವೂ ಪ್ರಮುಖವಾದುದು. ಸಾಮಾಜಿಕ ಹಿತಾಸಕ್ತಿಗೆ ಭಂಗತರುವಂಥ ಪೋಸ್ಟ್‌ಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಸರಿಯಾದುದೇ. ಅದೇ ಹೊತ್ತಿನಲ್ಲಿ, ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತೊಂದರೆ ಆಗದ ಹಾಗೆಯೂ ಪ್ರಭುತ್ವ ಎಚ್ಚರವಹಿಸಬೇಕಾಗುತ್ತದೆ. ಆದಿಲ್ಲವಾದಲ್ಲಿ ಜನರು ಭಯಭೀತರಾಗುವ ಅಥವಾ ನಿರುತ್ಸಾಹಗೊಳ್ಳುವ ಅಪಾಯವೂ ಇರುತ್ತದೆ. ಅಶ್ಲೀಲ, ಪ್ರಚೋದನಕಾರಿ ಪೋಸ್ಟ್ ಹಾಕುವುದು, ಹಂಚುವುದು ಅಪರಾಧ; ವ್ಯಕ್ತಿ, ಸಂಸ್ಥೆ ಬಗ್ಗೆ ಅವಹೇಳನಕಾರಿ, ನಿಂದನಾತ್ಮಕ ಭಾಷೆ ಬಳಸುವಂತಿಲ್ಲ; ಸತ್ಯಾಸತ್ಯತೆ ಇಲ್ಲದ ಮಾಹಿತಿ ಹಂಚಿಕೊಳ್ಳಬಾರದು ಎಂಬಿತ್ಯಾದಿ ಸಲಹೆಯನ್ನು ಪೊಲೀಸರು ನೀಡಿದ್ದಾರೆ. ಸರ್ಕಾರಿ ಇಲಾಖೆಗಳಿಂದಲೂ ಈ ಬಗ್ಗೆ ಮಾಹಿತಿ ಬಿತ್ತರಿಸಲಾಗುತ್ತಿದೆ. ಇದಲ್ಲದೆ, ಸಾಮಾಜಿಕ ಜಾಲತಾಣ ಕಾನೂನು ಆಯಾಮದ ಕುರಿತು ಅಂತರ್ಜಾಲದಲ್ಲೂ ಸಾಕಷ್ಟು ಮಾಹಿತಿ ಲಭ್ಯವಿದೆ. ಹೀಗಾಗಿ ಜಾಲತಾಣ ಬಳಕೆದಾರರು ಮೊದಲು ಇದರ ಕಾನೂನು ಹಾಗೂ ನೀತಿನಿಯಮಗಳ ಬಗ್ಗೆ ಅರಿವು ಹೊಂದಿ, ವಿವೇಚನೆಯಿಂದ ಬಳಕೆ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಜಾಲತಾಣ ಸಂಸ್ಥೆಗಳ ಹೊಣೆಗಾರಿಕೆಯಂತೂ ಇದ್ದೇ ಇದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೨-೦೭-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ