ವಿಶಾಲ ಮನೆ, ವಿಶಾಲ ಅನುಭವ

Submitted by kvcn on Sun, 08/04/2019 - 19:35

ನನ್ನ ಊರಿನ ಗಣ್ಯರಲ್ಲಿ ಒಬ್ಬರು ಸೈಕಲ್ ಶಾಪ್ ಇಟ್ಟುಕೊಂಡಿದ್ದ ಕೃಷ್ಣಪ್ಪನವರು. ಇವರು ನನ್ನ ಅಪ್ಪನಿಗಿಂತ ಹಿರಿಯರು, ನನ್ನ ಅಜ್ಜನ ಕಿರಿಯ ಸ್ನೇಹಿತರು. ಅವರ ಮಡದಿ ಲೀಲಕ್ಕ. ಇವರು ಮದುವೆ ಯಾದ ಹೊಸತರಲ್ಲಿ ನನ್ನ ಅಜ್ಜ ಇವರನ್ನು ಮನೆಗೆ ಊಟಕ್ಕೆ ಕರೆದಿದ್ದರಂತೆ. ಆಗಿನ್ನೂ ನನ್ನ ಅಪ್ಪನಿಗೆ ಮದುವೆ ಯಾಗಿರಲಿಲ್ಲ. ಆ ಕಾರಣದಿಂದಲೇ ಕೃಷ್ಣಪ್ಪಣ್ಣ ಮತ್ತು ಲೀಲಕ್ಕ ನನ್ನ ಅಮ್ಮನನ್ನು ಪ್ರೀತಿಯಿಂದ ಏಕವಚನದಲ್ಲೇ ಹೆಸರು ಹಿಡಿದು ಕರೆಯುತ್ತಿದ್ದರು. ಅಪ್ಪ ಅಮ್ಮ ಬಿಜೈಯಲ್ಲಿ ಸಂಸಾರ ಶುರು ಮಾಡಿದಾಗ ಅಮ್ಮನಿಗೆ ಬಂಧುಗಳಂತೆ ಹೋಗಿ ಬರಲು ಇದ್ದ ಮನೆಗಳಲ್ಲಿ ಇದೂ ಒಂದು. ಕೃಷ್ಣಪ್ಪಣ್ಣನಿಗೆ ನಾವು ಮಕ್ಕಳು ಅವರ ಮಕ್ಕಳೂ ಸೇರಿದಂತೆ ಹೆದರುತ್ತಿದ್ದೆ ವಾದರೂ ಅವರು ಮಕ್ಕಳಲ್ಲಿ ಬಹಳ ಪ್ರೀತಿಯುಳ್ಳವರು. ನಮ್ಮ ಜೊತೆಗೆ ಕೇರಂ ಆಡಲು ಸೇರುತ್ತಿದ್ದವರು. ಲೀಲಕ್ಕನ ತಾಯಿ ಮನೆ ಉರ್ವಾ ಚಿಲಿಂಬಿಯಲ್ಲಿತ್ತು. ಅವರ ತಮ್ಮ ವಾಸು ಎನ್ನುವವರು ನನ್ನ ಮಾವನ ಸಹಪಾಠಿ ಸ್ನೇಹಿತರಾಗಿದ್ದು ಕೊನೆಯ ದಿನದವರೆಗೂ ನಿಕಟ ಸಂಪರ್ಕದಲ್ಲಿದ್ದರು. ವಾಸು ಅವರು ಉದ್ಯೋಗದ ನಿಮಿತ್ತ ದೂರದ ಊರಲ್ಲಿ ಇದ್ದಾಗ ಚಿಲಿಂಬಿಯ ಮನೆಯಲ್ಲಿದ್ದು ಲೀಲಕ್ಕನ ತಾಯಿಯನ್ನು ಹಾಗೂ ಕೈಮಗ್ಗದ ಕೆಲಸಗಳನ್ನು ಕೃಷ್ಣಪ್ಪಣ್ಣ ನೋಡಿ ಕೊಳ್ಳುತ್ತಿದ್ದರು. ಆಗ ನಾವು ಮಕ್ಕಳು ಅಪ್ಪ ಅಮ್ಮನನ್ನು ಸೇರಿ ಅವರ ಮನೆಗೆ ಹೋಗಿ ತುಂಬಾ ಹೊತ್ತು ಸುಮಾರು ಅರ್ಧ ದಿನಕ್ಕಿಂತಲೂ ಹೆಚ್ಚು ಎನ್ನುವಂತೆ ಇದ್ದು ಬರುತ್ತಿದ್ದ ನೆನಪು. ಬಿಜೈ ಯಲ್ಲಿದ್ದ ಮನೆಯಲ್ಲೂ ಕೈಮಗ್ಗ ಇದ್ದು ಅವರ ಸಂಬಂಧಿ ಹೆಂಗಸರು, ಗಂಡಸರೂ ಬಂದು ರಾಟೆಯಲ್ಲಿ ನೂಲುವ, ಮಗ್ಗದಲ್ಲಿ ನೇಯುವ ಕೆಲಸ ಮಾಡುತ್ತಿದ್ದರು. ಈ ಕೆಲಸವನ್ನು ಅಂದರೆ ಸೀರೆ ತಯಾರಾಗುವುದನ್ನು ನೋಡುವುದೇ ಖುಷಿಯಾದ ವಿಚಾರವಾಗಿತ್ತು. ಮಾತ್ರವಲ್ಲ ನನ್ನ ಅಮ್ಮನೂ ಇವರ ಮನೆಯಲ್ಲಿ ತಯಾರಾದ ಸೀರೆಯನ್ನೇ ಹೆಚ್ಚಾಗಿ ಉಡುತ್ತಿದ್ದರು. ಈ ಕಾರಣದಿಂದಲೇ ನಾನೂ ಸೀರೆ ಉಡುವ ವೇಳೆ ಇಲ್ಲಿ ತಯಾರಾದ ಸೀರೆಯನ್ನೇ ಉಡುತ್ತಿದ್ದೆ. ನಾನು ಹತ್ತಿ ಬಟ್ಟೆಯ ಸೀರೆಯನ್ನು ಉಡುವುದಕ್ಕೆ ಕಾರಣವಾದುದೇ ಇಲ್ಲಿನ ಸೀರೆಗಳು. ಮುಂದೆ ಮಂಗಳೂರಿನ ಕೈಮಗ್ಗದ ಸೀರೆಗಳೆಂದು ಖ್ಯಾತಿಯಾದ ಈ ಸೀರೆಗಳಲ್ಲಿ ಹೆಚ್ಚು ವಿನ್ಯಾಸಗಳಿಲ್ಲವಾದ್ದರಿಂದ ತಮಿಳುನಾಡಿನ ಸೀರೆಗಳಿಗೆ ಬದಲಾದುದು ಇದೆ. ಹಾಗೆಯೇ ಅವು ಕೂಡಾ ಭಾರ ಎನ್ನಿಸಿದ್ದರಿಂದ ಮತ್ತು ಕಲ್ಕತ್ತಾದಿಂದ ಸೀರೆ ಮಾರುವವರು ಬಂದಾಗ ಕಲ್ಕತ್ತಾದ ಹತ್ತಿ ಸೀರೆಗಳು ತೆಳುವಾಗಿರುವುದರಿಂದ, ಬಣ್ಣಗಳ ಕಾರಣದಿಂದ ಮತ್ತು ವಿನ್ಯಾಸಗಳ ಕಾರಣದಿಂದ ಹೆಚ್ಚು ಮೆಚ್ಚುಗೆಯಾದುವು. ಹಾಗೆಯೇ ಕೃಷ್ಣಪ್ಪಣ್ಣನವರ ಮನೆಯಲ್ಲಿ ಕೈಮಗ್ಗದ ನೇಕಾರಿಕೆಯೂ ನಿಂತು ಹೋಯಿತ್ತಾದ್ದರಿಂದ ಅಮ್ಮನೂ ತಮಿಳುನಾಡು, ಉತ್ತರ ಕರ್ನಾಟಕದ ಮಗ್ಗದ ಸೀರೆಗಳನ್ನು ಉಡುತ್ತಿದ್ದರು.
ಅಂದ ಹಾಗೆ ಇವರ ಮನೆ ವಿಶಾಲವಾದುದು. ಒಂದೊಮ್ಮೆ ಮೂರು ಸಂಸಾರಗಳು ಇದ್ದುದೂ ಇದೆ. ಪೂರ್ವದಿಕ್ಕಿಗೆ ಪಡಸಾಲೆಯಿದ್ದ ಮನೆಯ ಹಿಂಬದಿ ಕಾಪಿಕಾಡು ರಸ್ತೆಗೆ ಮುಖ ಮಾಡಿಕೊಂಡು ಇದ್ದು ಅಲ್ಲಿಯೂ ಮನೆಯ ಒಳಪ್ರವೇಶ ಸಾಧ್ಯವಿತ್ತು. ಪಡಸಾಲೆಯ ಎರಡೂ ಬದಿಗಳಲ್ಲಿ ಸುಮಾರು ಹತ್ತು ಹನ್ನೊಂದು ಮೆಟ್ಟಿಲುಗಳು ಅದರ ಅಂಚಿನಲ್ಲಿ ಇಳಿಜಾರಾದ ಮೇಲ್ಬದಿಗಳು ನಮ್ಮ ಆಟದ ಸ್ಥಳಗಳು ಆಗಿದ್ದವು. ಮೇಲಿನ ಮೆಟ್ಟಿಲಿನ ಬದಿಯಲ್ಲಿ ಕುಳಿತು ಕೆಳಗೆ ಜಾರುವುದೆಂದರೆ ನಮಗೆ ಖುಷಿಯೊ ಖುಷಿ. ಹಾಗೆಯೇ ಮೆಟ್ಟಿಲುಗಳು ಹಾರಿ ಇಳಿಯುವುದಕ್ಕೆ. ಚೆಂಡು ಹಾಕಿ ಆಟವಾಡುವುದಕ್ಕೆ ಸರಿಯಾದ ಜಾಗವಾಗಿತ್ತು. ಪಡಸಾಲೆಯ ಒಳಗೆ ಮೂರೂ ಬದಿಗಳಲ್ಲಿ ಕುಳಿತುಕೊಳ್ಳುವುದಕ್ಕೆ ಮರದ ಕುಸುರಿನಿಂದ ಕೂಡಿದ ಬೆಂಚುಗಳಿತ್ತು. ಅವುಗಳನ್ನು `ವಕೀಲ್ ಬೆಂಚ್' ಎನ್ನುತ್ತಿದ್ದರು. ಪಡಸಾಲೆಯಿಂದ ಒಳಗೆ ನಡುಕೋಣೆ. ಎರಡೂ ಬದಿಗಳಲ್ಲಿ ಕೋಣೆಗಳು. ಅವುಗಳಿಂದ ಒಳಗೆ ಮತ್ತೆ ಕೋಣೆಗಳು. ಹಾಗೆಯೇ ಒಳಗಿಂದ ಬಂದು ರಸ್ತೆಯ ಬದಿಯ ಉದ್ದದ ಚಾವಡಿಯಂತಹ ಕೋಣೆಗೆ, ಓದುವ ಕೋಣೆಗಳಿಗೆ ತಲುಪುತ್ತಿದ್ದೆವು. ಓದುವ ಕೋಣೆಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕೋಣೆಗಳಲ್ಲಿ ಓಡಾಡಿ ಕಣ್ಣು ಮುಚ್ಚಾಲೆಯಾಡುತ್ತಿದ್ದೆವು. ನಾನು, ನನ್ನ ಸಹಪಾಠಿ ದಯಾ ಹಾಗೂ ಅವನ ತಮ್ಮ, ನನ್ನ ತಂಗಿ ಮತ್ತು ದಯಾನ ತಂಗಿ ಗೀತಾ ನಾವು ಐವರು ಆಟದ ಜೊತೆಗಾರರು. ದೊಡ್ಡವರಾದ ದಯಾನ ಅಣ್ಣಂದಿರು ರವಿಯಣ್ಣ ಮತ್ತು ಚಂದ್ರಹಾಸಣ್ಣ ತಮ್ಮ ಕೋಣೆಯೊಳಗೆ ಓದುತ್ತಾ ಇರುತ್ತಿದ್ದರು. ನನ್ನ ತಮ್ಮ ದಯಾನ ಚಿಕ್ಕ ತಮ್ಮ, ತಂಗಿಯರು ಚಿಕ್ಕವರಾಗಿದ್ದು ಅವರ ಗುಂಪು ಬೇರೆಯಾಗಿ ಆಟವಾಡುತ್ತಿದ್ದರು. ಇವರ ಮನೆಯಲ್ಲಿದ್ದ ಇತರ ಆಟದ ಸಾಮಾನುಗಳನ್ನು ನಾವು ಬೇರೆಲ್ಲೂ ಅಂದು ನೋಡಿರಲಿಲ್ಲ. ಒಂದು ಲೂಡಾ, ಇನ್ನೊಂದು ಕೇರಂ ಬೋರ್ಡು ಒಳ ಆಟಗಳಾದರೆ, ಕ್ರಿಕೆಟ್ ಆಡಲು ಬ್ಯಾಟ್, ಬಾಲ್ ಹಾಗೂ ಟೆನಿಸ್ ಆಡಲು ಬ್ಯಾಟ್, ಬಾಲ್‍ಗಳಿದ್ದುವು. ಕೃಷ್ಣಪ್ಪಣ್ಣ ತಮ್ಮ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಮಾರ್ಗದ ಬದಿಯ ಚಾವಡಿಯ ಬದಿಗಿದ್ದ ಒಳ ಕೋಣೆಯಲ್ಲಿ ಶಾಲೆಯಲ್ಲಿರುವಂತಹ ಗೋಡೆಯಲ್ಲಿನ ಕರಿಹಲಗೆ. ಇದರಲ್ಲಿ ಯಾವಾಗಲೂ ನನ್ನ ಸಹಪಾಠಿಯಾಗಿದ್ದ ದಯಾ ಸುಂದರವಾದ ಚಿತ್ರ ಬಿಡಿಸುತ್ತಿದ್ದ. ಈಗಲೂ `ದಯಾ ಆರ್ಟ್ಸ್' ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಅವನು ಬಿಡಿಸುತ್ತಿದ್ದ ದೇವರ ಚಿತ್ರಗಳು, ಪ್ರಾಣಿಗಳ, ಪಕ್ಷಿಗಳ ಚಿತ್ರಗಳು ಇವೆಲ್ಲಾ ನಿಜವೋ ಎನ್ನುವಷ್ಟು ಚೆನ್ನಾಗಿರುತ್ತಿತ್ತು. ಚಿತ್ರಕಲೆ ಅವನಿಗೆ ಹುಟ್ಟಿನಿಂದ ಬಂದುದು. ಒಂದನೆಯ, ಎರಡನೆಯ ತರಗತಿಗಳಲ್ಲಿರುವಾಗಲೇ ಆತ ಚಿತ್ರ ಬಿಡಿಸುತ್ತಿದ್ದ. ಈ ಕರಿ ಹಲಗೆಯ ನೆನಪಿನಲ್ಲಿ ನಾವು ಮನೆ ಕಟ್ಟಿಸುವಾಗಲೂ ನಮ್ಮ ಮನೆಯ ಗೋಡೆಯಲ್ಲೊಂದು ಕರಿ ಹಲಗೆ ನಿರ್ಮಿಸಿದ್ದೇವೆ. ನಮ್ಮ ಮಕ್ಕಳು ಅದರಲ್ಲಿ ಚಿತ್ರ ಬಿಡಿಸುತ್ತಿದ್ದರು.
ಮನೆಯಿಂದ ಹೊರಗೆ ರಸ್ತೆಯ ಬದಿಯಲ್ಲಿ ರಸ್ತೆಯಿಂದ ಮನೆಗಿರುವ ಅಂತರದಲ್ಲಿ ತುಂಬಾ ಜಾಗವಿದ್ದು ಅಲ್ಲಿ ಸೈಕಲ್ ರಿಪೇರಿ ಕೆಲಸ ನಡೆಯುತ್ತಿತ್ತು. ಹಾಗೆಯೇ ದೊಡ್ಡವರಿಗೆ, ಮಕ್ಕಳಿಗೆ ಬಾಡಿಗೆಗೆ ಸೈಕಲ್ ಸಿಗುತ್ತಿತ್ತು. ಇವುಗಳನ್ನು ಗಂಟೆಗಿಷ್ಟು ಎಂದು ಬಾಡಿಗೆಗೆ ಪಡೆದುಕೊಂಡು ಹೋಗುತ್ತಿದ್ದರು. ಮಕ್ಕಳು ಸೈಕಲ್ ಕಲಿಯಲು ಕೊಂಡು ಹೋಗುತ್ತಿದ್ದರು. ಆ ಕಾಲದಲ್ಲಿ ಸೈಕಲ್ ಇರುವುದು, ಸೈಕಲ್ ಕಲಿಯುವುದು ಎರಡೂ ಶ್ರೀಮಂತಿಕೆಯ ವಿಷಯಗಳಾಗಿತ್ತು. ಜೊತೆಗೆ ನನ್ನೂರಿನ ಯಾವ ಹೆಣ್ಣು ಮಕ್ಕಳೂ ಸೈಕಲ್ ಕಲಿಯಲಿಲ್ಲ ವಲ್ಲಾ ಎಂದು ಈಗ ಯೋಚನೆಯಾಗುತ್ತಿದೆ. ಬಹುಶಃ ಹೆತ್ತವರಿಗೆ ಹೆಣ್ಣು ಮಕ್ಕಳು ಸೈಕಲ್ ಕಲಿಯುವುದು ಸಂಪ್ರದಾಯಕ್ಕೆ ವಿರೋಧವಾದುದು ಎಂದು ಅನ್ನಿಸಿರಬೇಕು. ಬಿಜೈ ಊರಿನಲ್ಲಿರುವ ಹೆಣ್ಣು ಮಕ್ಕಳು ಸೈಕಲ್ ಕಲಿತಿದ್ದರೆ ಮಂಗಳೂರಿನ ಅಂದಿನ ಸರಕಾರಿ ಕಾಲೇಜಿಗೆ ಹೋಗುತ್ತಿದ್ದ ಹೆಣ್ಣು ಮಕ್ಕಳು ಬೆರಳೆಣಿಕೆಯವರಾದ ನಾವು ಬಸ್ಸಿಗೆ ಕೊಡಲು ಕಾಸಿಲ್ಲದೆ ನಡೆದೇ ಹೋಗುತ್ತಿದ್ದವರು ಸೈಕಲಲ್ಲಿ ಹೋಗುತ್ತಿದ್ದೆವೋ ಏನೋ? ಇರಲಿ. ಇಂದಿನ ಹೆಣ್ಣು ಮಕ್ಕಳಿಗೆ ಸರಕಾರವೇ ಸೈಕಲ್ ಕೊಡಿಸಿ ಆತ್ಮವಿಶ್ವಾಸ ಹೆಚ್ಚಿಸಿದೆಯಲ್ಲಾ. ಅವರು ಭಾಗ್ಯಶಾಲಿಗಳು.
ಕೃಷ್ಣಪ್ಪಣ್ಣ ತನ್ನ ಕೆಲಸ ಮುಗಿಸಿ ಸಂಜೆಯ ವೇಳೆಗೆ ಸುಮಾರು 7ರಿಂದ 9ರ ವರೆಗೆ ಕಾರ್ಡ್ಸ್ ಆಡುವುದು ಅವರ ಹವ್ಯಾಸ. ಅವರ ಜೊತೆಗೆ ಆಟವಾಡಲು ಜೊತೆ ಯಾಗುತ್ತಿದ್ದವರು ಸ್ವಲ್ಪ ಕಾಲ ಅವರ ಮನೆಯಲ್ಲಿ ಬಿಡಾರವಾಗಿದ್ದ ವಕೀಲರು. ಇನ್ನುಳಿದಂತೆ ಅವರ ಬಂಧುಗಳು ಬಂದವರು ಸೇರಿಕೊಳ್ಳುತ್ತಿದ್ದರು. ನನ್ನ ಅಪ್ಪ ಹಾಗೂ ನನ್ನ ಮಾಸ್ತರರಾಗಿದ್ದ ಗುರುವಪ್ಪ ಮಾಸ್ತರರು ಬಂದರೆ ಎಲೆಗಳು ಡ್ರವರ್ ಒಳ ಸೇರಿ ಮಾತುಗಳು ಹೊರ ಬರುತ್ತಿತ್ತು. ಅವರ ಮಾತುಕತೆಯನ್ನು ವ್ಯರ್ಥವಾದ ಹರಟೆ ಎನ್ನುವಂತಿಲ್ಲ. ಅದು ನೆಹರೂ ಸಂಪುಟದ ಕಾರ್ಯವೈಖರಿಯ ಚರ್ಚೆ, ನಿಜಲಿಂಗಪ್ಪನವರ ರಾಜ್ಯಭಾರದ ವಿಷಯಗಳೇ ಅಲ್ಲದೆ ಎಲ್ಲೋ ನಡೆದ ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯ ವಿಮರ್ಶೆಗಳು ಇರುತ್ತಿತ್ತು. ಆಗಾಗ ಅವರ ಮನೆಗೆ ಬರುತ್ತಿದ್ದ ಯುವಕ ಯಕ್ಷಗಾನದಲ್ಲಿನ ಆಸಕ್ತರಾದ ಕುಂಬ್ಳೆ ಸುಂದರ ರಾಯರು ಕೃಷ್ಣಪ್ಪನವರ ಸಮೀಪದ ಬಂಧುಗಳು. ಇನ್ನೊಬ್ಬರು ಇವರ ಮನೆಗೆ ಬರುತ್ತಿದ್ದ ಹಿರಿಯರು ಕುಂಞಕಣ್ಣ ಮಾಸ್ಟ್ರು. ಇವರು ಹರಿಕಥೆ ಮಾಡುತ್ತಿದ್ದರು. ಇವರ ಹರಿಕಥೆಯನ್ನೂ ಈ ಗೆಳೆಯರು ಸೇರಿ ಏರ್ಪಡಿಸುತ್ತಿದ್ದರು. ಹಾಗೆಯೇ ಕೃಷ್ಣಪ್ಪಣ್ಣನವರ ಮನೆಯ ಮುಂದೆ ರಸ್ತೆ ಬದಿಯ ವಿಶಾಲವಾದ ಜಾಗದಲ್ಲಿ ಆಗಾಗ ಯಕ್ಷಗಾನ ತಾಳಮದ್ದಳೆ ನಡೆದುದುಂಟು. ಹಾಗೆ ನಡೆದ ತಾಳಮದ್ದಳೆಯಲ್ಲಿ ಮಂದಾರ ಕೇಶವ ಭಟ್ಟರು ಭಾಗವತರಾಗಿ, ಡಿ. ಶಿವರಾವ್ ಮೃದಂಗ ವಾದಕರಾಗಿ, ಎಫ್.ಎಚ್. ಒಡೆಯರ್, ನನ್ನ ಅಪ್ಪ ಕೊಂಡಾಣ ವಾಮನ ಮಾಸ್ಟರ್, ನನ್ನ ಗುರುಗಳಾದ ಗುರುವಪ್ಪ ಮಾಸ್ಟರ್ ಪ್ರಾರಂಭದಲ್ಲಿ ಇದ್ದರೆ, ಮುಂದೆ ಕುಂಬ್ಳೆ ಸುಂದರ ರಾಯರೂ ಸೇರಿಕೊಳ್ಳುತ್ತಿದ್ದರು. ಇನ್ನೊಬ್ಬರು ಬೋಳೂರಿನ ಮುಂಡಪ್ಪ ಮಾಸ್ಟರ್. ಇವರೂ ಕೂಡಾ ಕೃಷ್ಣಪ್ಪನವರ ಬಂಧುಗಳು, ಶಿಕ್ಷಕರು. ಅವರು ಮುಂದೆ ದೂರದ ಊರಿಗೆ ಹೋದಾಗ, ಹಾಗೆಯೇ ನಾವೂ ಬಿಜೈ ಊರು ಬಿಟ್ಟಾಗ ತಾಳಮದ್ದಳೆ ಗಳು ನಿಂತುಹೋಯಿತು. ದೊಡ್ಡ ಬಂಗಲೆಯಂತಿದ್ದ ಮನೆಯ ಸುತ್ತ ತುಂಬಾ ಮಾವಿನ ಮರಗಳು. ಅದೂ ಕಸಿ ಮಾವು. ಶಾಲೆಯ ದೊಡ್ಡ ರಜೆ ಅಂದರೆ ಬೇಸಗೆ ರಜೆ. ಮಾವಿನ ಹಣ್ಣಿನ ಕಾಲ. ನಾವು ಇಡೀ ದಿನ ಅವರ ಮನೆಯಲ್ಲೇ ಇದ್ದು ಆಟವಾಡುತ್ತಿದ್ದುದೂ ಇತ್ತು. ಆಗೆಲ್ಲಾ ಊಟ, ಕಾಫಿ, ತಿಂಡಿ ಅವರ ಮನೆಯಲ್ಲೇ. ಶಾಲೆಗೆ ಹೋಗುವಾಗ ಬೆಳಗ್ಗೆ ಅವರ ಮನೆಗೆ ಹೋಗಿ ದಯಾ ನಾನು ಜತೆಯಾಗಿ ಹೋಗುತ್ತಿದ್ದೆವು. ಸಂಜೆ ಶಾಲೆ ಮುಗಿಸಿ ಜೊತೆಯಾಗಿ ಅವರ ಮನೆಗೆ ಬಂದು ಶಾಲೆಯಲ್ಲಿ ಕೊಟ್ಟ ಲೆಕ್ಕ. ಕಾಪಿ ಬರೆಯುವುದು ಇವುಗಳನ್ನು ಮುಗಿಸಿ ಆಟವಾಡುತ್ತಿದ್ದೆವು. ಆಗೆಲ್ಲಾ ನನ್ನನ್ನು ಮನೆಗೆ ಕರೆದೊಯ್ಯಲು ಅಜ್ಜಿ ಅಥವಾ ಅಮ್ಮ ಬಂದರೆ ಅವರೂ ಮಾತಾಡುತ್ತಾ ಅಪ್ಪ ಬರುವ ವರೆಗೆ ಅಲ್ಲೇ ಇರುತ್ತಿದ್ದುದೂ ಇತ್ತು.
ಅವರ ಮನೆಯ ಪೂರ್ವ ದಿಕ್ಕಿನಲ್ಲಿ ಮನೆಯ ಮುಂದೆ ವಿಶಾಲವಾದ ಜಾಗವಿದ್ದು ಅಲ್ಲಿ ಮಲ್ಲಿಗೆ ತೋಟವಿತ್ತು. ತೆಂಗಿನ ಮರಗಳು ಇದ್ದುವು. ಪೇರಳೆ, ಚಿಕ್ಕು ಮರಗಳೂ ಇದ್ದುವು. ಹಾಗೆಯೇ ಚೆರಿ ಹಣ್ಣು ಎಂದು ಹೇಳುವ ಹಣ್ಣಿನ ಮರವೂ ಇತ್ತು. ಅದರಲ್ಲಿರುವ  ಹಣ್ಣು ತಿನ್ನಲು ತುಂಬಾ ಹಕ್ಕಿಗಳು ಬರುತ್ತಿದ್ದವು. ಬಾಳೆಯ ಗಿಡಗಳೂ ಇದ್ದುವು. ಗೊನೆ ಬಿಟ್ಟಾಗ ಗಿಳಿ ಮೊದಲಾದ ಹಕ್ಕಿಗಳು ಬರುತ್ತಿದ್ದುವು. ಬೇಸಗೆಯಲ್ಲಾದರೆ ಮಲ್ಲಿಗೆ ಕೊಯ್ಯುತ್ತಿದ್ದೆವು. ನನ್ನ ಅಮ್ಮನೂ ಬಂದರೆ ಲೀಲಕ್ಕನ ಜೊತೆಗೆ ಮಲ್ಲಿಗೆ ಗಿಡಗಳಿಗೆ ನೀರು ಸೇದಿ ಹಾಕುತ್ತಿದ್ದರು. ನಾವು ಕೊಯ್ದ ಹೂವುಗಳನ್ನು ಕಟ್ಟುತ್ತಿದ್ದರು. ಲೀಲಕ್ಕ ಅದೆಷ್ಟು ಕೆಲಸ ಮಾಡುತ್ತಿದ್ದರೆನ್ನುವುದೇ ಇವತ್ತು ನನಗೆ ಆಶ್ಚರ್ಯವಾಗುತ್ತದೆ. ಯಾಕೆಂದರೆ ಅವರ ಮನೆಯಲ್ಲಿ ತುಂಬಾ ದನ ಕರುಗಳಿದ್ದುವು. ಮನೆ ಮಂದಿಗೆ, ಕೆಲಸದವರಿಗೆ ಬಂದು ಹೋಗುವವರಿಗೆಂದು ಅವರ ಮನೆಯಲ್ಲಿ ಚಹಾ, ಕಾಫಿ, ಮಕ್ಕಳಿಗೆ ಹಾಲು ಎಂದು ಸಾಕಷ್ಟು ಹಾಲು ಖರ್ಚಾಗುತ್ತಿತ್ತು. ಅವರ ದನಗಳನ್ನು ಹೊರಗೆ ಮೇಯಲು ಬಿಡುತ್ತಿರಲಿಲ್ಲ. ದನಗಳಿದ್ದ ಕೊಟ್ಟಿಗೆಗೆ ಮನೆಯಂತೆಯೇ ಸಿಮೆಂಟಿನ ನೆಲ, ಹಂಚಿನ ಚಾವಣಿ ಇತ್ತು. ಹಟ್ಟಿಯ ಸೆಗಣಿ, ಗಂಜಳ ಎಲ್ಲಾ ಒಂದು ಗುಂಡಿಗೆ ಹೋಗಿ ಬೀಳುವ  ವ್ಯವಸ್ಥೆ ಇತ್ತು. ಆ ಗುಂಡಿಯಿಂದ ಗ್ಯಾಸ್ ಪೈಪ್ ಮೂಲಕ ಅಡುಗೆ ಕೋಣೆಗೆ ಬರುತ್ತಿತ್ತು. ಇದನ್ನು ಗೋಬರ್ ಗ್ಯಾಸ್ ಎನ್ನುತ್ತಾರೆ. ನನ್ನ ಬಾಲ್ಯದಲ್ಲಿಯೇ ಗೋಬರ್ ಗ್ಯಾಸನ್ನು ಮೊದಲ ಬಾರಿಗೆ ನೋಡಿದ ಮನೆ ಅದು. ಹಿತ್ತಲಲ್ಲಿ ಎರಡು ಬಾವಿಗಳಿದ್ದು ಒಂದಕ್ಕೆ ಪಂಪ್ ಹಾಕಿದ್ದು ಅಲ್ಲಿಂದ ನೀರು ಬಚ್ಚಲಿಗೆ, ಅಡುಗೆ ಕೋಣೆಗೆ ನೇರವಾಗಿ ಬರುತ್ತಿತ್ತು. ಹಾಗೆಯೇ ವಿದ್ಯುದ್ದೀಪದ ವ್ಯವಸ್ಥೆಯೂ ಇತ್ತು. ಆಧುನಿಕ ಸೌಲಭ್ಯಗಳಿಂದ ಕೂಡಿದ ಈ ಮನೆ ಮಂದಿ ನಿಜವಾಗಿಯೂ ಶ್ರೀಮಂತರು ಮನಸ್ಸಿ ನಿಂದಲೂ. ಇವರ ಮನೆಯಲ್ಲಿ ಇವರ ಹಲವಾರು ಬಂಧುಗಳು ಇದ್ದು ಶಾಲೆ, ಕಾಲೇಜುಗಳಿಗೆ ಹೋಗುತ್ತಿದ್ದರು. ಗಂಡ ಹೆಂಡತಿ ಇಬ್ಬರೂ ಪರೋಪಕಾರಿಗಳು. ಮಕ್ಕಳೂ ವಿನಯಶೀಲರು, ಸ್ನೇಹಶೀಲರು. ನಮ್ಮ ಎರಡೂ ಮನೆಗಳೂ ತಮ್ಮ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡವರು. ನಿನ್ನೆ ಮೊನ್ನೆ ಎನ್ನುವಂತೆ ಬಂಗ್ಲೆಯಂತಹ ಮನೆ ಹಿತ್ತಲು ಮಾರಾಟವಾಗಿದೆ. ಅಂದು ನಾವು ಹೆಕ್ಕಿ ತಿನ್ನುತ್ತಿದ್ದ ಮಾವಿನ ಮರದೊಂದಿಗೆ, ಆ ಮನೆಯಲ್ಲಿ ಮನೆ ಮಕ್ಕಳೊಂದಿಗೆ ತುಪ್ಪ ಹಾಕಿದ ಗಂಜಿ ಊಟ ಮಾಡಿದ, ಕಾಫಿ, ಚಹಾ ಕುಡಿದ, ಆಟವಾಡಿದ ಕ್ಷಣಗಳೆಲ್ಲವೂ ನೆನಪಾಗುತ್ತವೆ. ಇಂದು ಇಲ್ಲದ ಆ ಹಿರಿಯ ಚೇತನಗಳೊಂದಿಗೆ, ಸಣ್ಣ ವಯಸ್ಸಿನಲ್ಲೇ ನಮ್ಮಿಂದ ದೂರವಾದ ಸಂತ ಆಲೋಶಿಯಸ್ ಕಾಲೇಜಿನಲ್ಲಿ ವಾಣಿಜ್ಯದ ಉಪನ್ಯಾಸಕರಾಗಿದ್ದ ಚಂದ್ರಹಾಸಣ್ಣ, ಓದುತ್ತಿರುವಾಗಲೇ ತನ್ನ ಬದುಕನ್ನು ಕೊನೆಗಾಣಿಸಿಕೊಂಡ ನನ್ನ ಪ್ರೀತಿಯ ರವಿಯಣ್ಣ ಇವರ ನೆನಪುಗಳು ಕಾಡುತ್ತಾ ಕಣ್ಣು ಮಂಜಾಗುತ್ತವೆ. ನೆನಪಾಗುತ್ತಿರುವುದೇ ನೆನಪುಗಳಿಗೂ ಹಂಗು ಇದೆ ಎನ್ನುವುದಕ್ಕೆ ಸಾಕ್ಷಿ. ಬದುಕಿನಲ್ಲಿ ನಾವು ಅನುಭವಿಸಿದ ಸಂತಸದ, ದುಃಖದ ಕ್ಷಣಗಳಿಗೆ ಕಾರಣರಾದವರೆಲ್ಲ ನಮ್ಮ ಬಂಧುಗಳೇ ಅಲ್ಲವೇ? ಈ ಬಂಧುತ್ವಕ್ಕೆ ಜಾತಿಗಳ ಭೇದವಿದೆಯೇ? ಮೂರು ತಲೆಮಾರಿನ ಈ ಆತ್ಮೀಯತೆ, ಪ್ರೀತಿ, ವಿಶ್ವಾಸಗಳು ಇಂದಿನ ಆಧುನಿಕ ಬದುಕಿಗೆ ಸಾಧ್ಯವೇ? ವಿಂಗಡದ ಮನೆಯಲ್ಲಿದ್ದರೂ ಕೂಡು ಕುಟುಂಬದ ಸವಿಯನ್ನು ನೀಡಿದ ನೆರೆಕರೆಯ ಬಂಧುಗಳಿಗಿಂತ ಆತ್ಮೀಯರು ಬೇರೆ ಯಾರಿರಲು ಸಾಧ್ಯ?