ವಿಶಾಲ ಮನೋಭಾವದ ಕನ್ನಡಿಗರು

ವಿಶಾಲ ಮನೋಭಾವದ ಕನ್ನಡಿಗರು

ಬರಹ

ಇದರಲ್ಲಿ ಬರುವ ಪಾತ್ರಧಾರಿಗಳು ತಮ್ಮನ್ನು ತಾವು ಬ್ರಾಡ್ ಮೈಂಡೆಡ್ ಕನ್ನಡಿಗಾಸ್ ಎಂದು
ತಿಳಿದರೆ ನಾವು ಅವರನ್ನು ಕಾಸ್ಮೋಗಳು ಎನ್ನಬಹುದೇ?

ನಮ್ಮೂರು ಬೆಂಗಳೂರು, ಅಮ್ಮನ ಮರೆಯುತಿಹ ಊರು
ನಮ್ಮ ಮನೆಯಲಿರೋರೆಲ್ಲಾ ಪಕ್ಕದ ಮನೆಯವರು
ನಮ್ಮಣ್ಣ ತಮ್ಮಗಳು ಅತಿಥಿ ದೇವ ಅನ್ನುವವರು
ಬಹಳಾ ಬಹಳಾ ಉದಾರಿಗಳು
ಎಂದಿಗೂ ಯಾರಿಗೂ ಬಾ ಅನ್ನೋರು
ನಮ್ಮನೆ ತುಂಬಿದ್ದರೂ ಪರರಿಗೆ ಜಾಗ ಕೊಡುವವರು

ಅಕ್ಕ ಪಕ್ಕದ ಊರಿನೋರು
ನಮ್ಮೂರ ನೋಡಿ ಹೊಟ್ಟೆ ಉರಿಯೋರು
ತಟ್ಟೆ ಚೊಂಬು ಹಿಡಿದು ಬಂದೋರು
ನಮ್ಮ ಮನೆಗಳ ಬಾಡಿಗೆಗೆ ಹಿಡಿದೋರು
ನಮ್ಮ ಔದಾರ್ಯ ನೋಡಿ ಹಿಗ್ಗಿದವರು
ನಾವು ಮನೆಯಲ್ಲಿಲ್ಲದ ಸಮಯದಲ್ಲಿ
ತಮ್ಮದೇ ಮನೆ ಅಂದವರು

ನಾವು ಬಹಳಾ ಬಹಳಾ ಉದಾರಿಗಳು
ಜಗಳವಾಡುವುದು ಪಾಪವೆನ್ನುವವರು
ನಮ್ಮ ಮನೆ ಅವರಿಗೇ ಬಿಟ್ಟುಕೊಟ್ಟವರು
ಮನೆಯಲಿ ಅವರಿಗೆ ಉಣ್ಣಲಿಲ್ಲದಾಗ
ನಮ್ಮ ತುತ್ತಿನ ಊಟವ ಕೊಟ್ಟವರು

ನಾವು ಬಹಳ ಉದಾರಿಗಳು
ಮಕ್ಕಳಿಗೆ ಪಾಠ ಕಲಿಸುವವರು
ಅವರ ಮಕ್ಕಳ ಮನವ ಅರಿತವರು
ಅರಿತಂತೆ ನಡೆವವರು
ಅವರಿಗೆ ಬೇಕಾದಂತೆ ಪಾಠ ಕಲಿಸಿದವರು

ಅವರ ದೈವವೇ ನಮ್ಮದೆನುವೆವು
ಆ ದೈವಕೇ ಪೂಜಿಸುವೆವೆ
ನಮ್ಮ ದೈವವ ಗೂಡಿಗೆ ತಳ್ಳುವೆವು
ಅವರಂತೇ ನಾವೂ ಎಂದೆಣಿಸುವೆವು

ಮುಂದೆ ಹೋಗಲು ಹಾದಿ ತಿಳಿಯದವರಿಗೆ
ಹಾದಿಯ ತೋರಿಸಲು ಪ್ರಯತ್ನಿಸಿದವರು
ಹಾದಿ ತುಳಿಯದ ಮೊಂಡರ ಜೊತೆ
ಅವರದೇ ಹಾದಿಯ ತುಳಿದು
ಹಿಂದೆ ಹಿಂದೆ ಹೋಗುವವರು
ಹೋಗುತ್ತಲೇ ನಮ್ಮ ಹಾದಿಯ ಮರೆತವರು
ಮರೆತು ಇತರರಿಗೂ ಮರೆಸುವವರು