ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ

ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ

ಬರಹ

(‘ಮುದಿಯಾ’ ಸಿನೆಮಾದ ಮುಖಾಂತರ
ಕನ್ನಡ ಸಿನೆಮಾ ರಂಗವನ್ನು ಅಲ್ಲಾಡಿಸಿ ಹಾಕಿದ ಹಸಿ ಹಸಿ ಪ್ರತಿಭೆಯ ನಿರ್ದೇಶಕ ಚೂರಿ
ತಮ್ಮ ಬಯೋ ಡೇಟಾದಲ್ಲಿ ಈಗಾಗಲೇ ಮೂರು ಸಿನೆಮಾಗಳ ನಿರ್ದೇಶಕ ಎಂಬ ಸಾಲನ್ನು
ಸೇರಿಸಿಕೊಂಡಿದ್ದಾರೆ. ಮೊದಲ ಚಿತ್ರ ‘ಮುದಿಯಾ’ ಕನ್ನಡ ನಾಡಿನ ಸಿನೆಮಾ
ಮಂದಿರಗಳಲ್ಲೆಲ್ಲಾ ನೂರಾರು ದಿನ ಓಡಿತು, ಅಂತೆಯೇ ಅವರ ಎರಡನೆಯ ಸಿನೆಮಾ ‘ಲವ್ ಲೆಟರು’
ನಾಡಿನ ನೂರಾರು ಸಿನೆಮಾ ಮಂದಿರಗಳಿಂದ ಓಡಿತು, ಈಗ ಅವರು ತಮ್ಮ ಪ್ರತಿಭೆ ಹಾಗೂ
ಪ್ರೇಕ್ಷಕರ ತಾಳ್ಮೆಯನ್ನೆಲ್ಲಾ ಪ್ರಯೋಗಕ್ಕೆ ಒಡ್ಡಿ ಮೂರನೆಯ ಸಿನೆಮಾ ಮಾಡಿದ್ದಾರೆ:
‘ನುಂಗ್ಲಿ’. ವಿಪರೀತ ಮಿತಭಾಷಿ ಹಾಗೂ ಮೌನಿಯಾದ ಚೂರಿಯವರ ವಿಶೇಷ ಸಂದರ್ಶನ ನಗೆ
ನಗಾರಿಗಾಗಿ ಮಾಡಿರುವುದು ನಗೆ ಸಾಮ್ರಾಟರ ಆಲ್ಟರ್ ಈಗೋ)

ನಗೆ ಸಾಮ್ರಾಟ್: ಹೆಲೋ ಚೂರಿಯವರೇ ಸಂದರ್ಶನಕ್ಕೆ ಒಪ್ಪಿದ್ದಕ್ಕೆ ಧನ್ಯವಾದಗಳು.

ಚೂರಿ: ನಾನ್ಯಾರು... ನಾನ್ಯಾರು... ನಾನ್ಯಾರು...

ನಗೆ ಸಾಮ್ರಾಟ್: ಹೌದು, ಹೌದು. ನೀವು ಮೊದಲ ಸಿನೆಮಾ ‘ಮುದಿಯಾ’ ಮಾಡಿದಾಗ ಜನರು
ಹೀಗೇ ಕೇಳಿದ್ದರು. ‘ಇವನ್ಯಾರು ... ಇವನ್ಯಾರು...’ ಎಂದು. ಅದ್ನ
ನೆನಪಿಸಿಕೊಳ್ತಿದೀರಾ?

ಚೂರಿ: ಇಲ್ಲ. ನನ್ನೇ ನಾನು ಆಗಾಗ ಹಿಂಗೆ ಪ್ರಶ್ನೆ ಮಾಡ್ಕೋತಿರ್ತೀನಿ. ಉತ್ತರ
ಸಿಗದೆ ಇನ್ನೇನು ನನ್ನ ತಲೆ ಕೆಟ್ಟು ಹೋಗುತ್ತೆ ಅಂದಾಗ ಸಿನೆಮಾ ಮಾಡಿಬಿಡ್ತೀನಿ ಅದೇ
ಹುಳ ಬಿಟ್ಟು. ಜನರಿಗೆ ನನ್ನ ತಲೆ ನೋವು ರವಾನಿಸಿಬಿಡ್ತೀನಿ.

ನ.ಸಾ: ನಿಮ್ಮ ಮೊದಲ ಸಿನೆಮಾ ‘ಮುದಿಯಾ’ದಲ್ಲಿ ಸಾವು, ಗೋರಿ ಎಂದೆಲ್ಲಾ ದೊಡ್ಡ
ದೊಡ್ಡ ಪದಗಳನ್ನ ಬಳಸಿದ್ರಿ. ಜೊತೆಗೆ ಕ್ರೌರ್ಯವನ್ನು ಫೇರ್ ಅಂಡ್ ಲವ್ಲಿ, ಮೇಕಪ್ಪು
ಇಲ್ಲದೆ ಹಸಿಹಸಿಯಾಗಿ ತೋರಿಸಿದ್ರಿ.

ಚೂರಿ: ಹೌದು, ಕ್ರೌರ್ಯ ಅನ್ನೋದು ಪ್ರತಿಯೊಬ್ಬನಲ್ಲೂ ಇದೆ. ಅದಕ್ಕೆ ವೈಭವೀಕರಣ
ನೀಡಬಾರದು. ಹಸಿ ಹಸಿಯಾಗಿ ಹಾಗೇ ತೋರಿಸ್ಬೇಕು. ಹಸಿ ತರಕಾರಿ ಹೇಗೆ ಆರೋಗ್ಯಕ್ಕೆ
ಒಳ್ಳೆಯದೋ ಹಾಗೆಯೇ ಇದು.

ನ.ಸಾ: ನಿಮ್ಮ ಎರಡನೆಯ ಚಿತ್ರ ‘ಲವ್ ಲೆಟರ್’ ನಲ್ಲಿ ಸಾಮಾಜಿಕ ಕಳಕಳಿಯನ್ನು
ಇಟ್ಟುಕೊಂಡಿದ್ರಿ. ನಿಮ್ಮ ಹಸಿ ಹಸಿತನ ಹಾಗೂ ಹುಸಿತನಗಳೆಲ್ಲದರೆ ಜೊತೆಗೆ ಕುಡಿತವೆಂಬ
ದುಶ್ಚಟವನ್ನು ಎದುರಿಸುವ ಧೈರ್ಯ ಮಾಡಿದ್ರಿ. ಆದರೆ ನಿಮ್ಮ ಆ ಸಿನೆಮಾ ಹೀನಾಯವಾಗಿ
ಸೋತಿತು. ನೀವು ಕುಡಿತದ ಬಗ್ಗೆ ಸಿನೆಮಾ ಮಾಡಲು ಹೊರಟಿದ್ದೇ ಅದರ ಸೋಲಿಗೆ ಕಾರಣ
ಎನ್ನಬಹುದೇ? 

ಚೂರಿ: ಇಲ್ಲ. ಸಿನೆಮಾ ನಿಜವಾಗ್ಲೂ ಚೆನ್ನಾಗೇ ಇತ್ತು ಆದ್ರೆ ಪ್ರೇಕ್ಷಕರು ಸಿನೆಮಾ
ನೋಡಲಿಲ್ಲ ಅಷ್ಟೇ. ಪ್ರೇಕ್ಷಕರು ನೋಡಲಿಲ್ಲ ಎಂದ ಮಾತ್ರಕ್ಕೆ ಸಿನೆಮಾ ಸೋಲಲ್ಲ. ಕುಡಿತದ
ಬಗ್ಗೆ ಸಿನೆಮಾ ಮಾಡಿದ್ದು ಸೋಲಿಗೆ ಕಾರಣ ಅಂತ ಹ್ಯಾಗೆ ಹೇಳ್ತೀರಿ?

ನ.ಸಾ: ನೋಡ್ರಿ ಸಿನೆಮಾ ನೋಡಲು ಥಿಯೇಟರಿಗೆ ಬರುವ ಮಂದಿಯಲ್ಲಿ ಬಹುಪಾಲು ಗಂಡಸರದು.
ಅವರು ಸಿನೆಮಾ ನೋಡಲು ಬರುತ್ತಾರೆ ಇಲ್ಲವೇ ತಮ್ಮ ಅಥವಾ ಇನ್ನೊಬ್ಬರ ಹೆಂಡತಿಯರಿಗೆ,
ಮಕ್ಕಳಿಗೆ ಸಿನೆಮಾ ತೋರಿಸಲು ಬರುತ್ತಾರೆ. ಕಾಲೇಜು ಬಂಕ್ ಮಾಡಿ, ಗೆಳೆಯರ ಗುಂಪು
ಸಂಪಾದಿಸಿ, ಪಾಕೆಟ್ ಮನಿಯ ನೆರವಿನಿಂದ ಸಿನೆಮಾ ಥಿಯೇಟರಿಗೆ ಲಗ್ಗೆ ಇಡುವ ಪಡ್ಡೆಗಳನ್ನು
ಬಿಟ್ಟರೆ ಇವರದೇ ಮೆಜಾರಿಟಿ. ಅಲ್ಲದೇ ಇವರು ಸಂಜೆಯಾಗುತ್ತಿದ್ದ ಹಾಗೆ ‘ತೀರ್ಥ ರೂಪ’
ರಾಗುವಂಥವರು. ಅವರ ‘ಮದುಬನದ’ ಸವಿಯನ್ನು ಕೀಳು ಎಂದು ತೋರಿಸಿದ ಸಿನೆಮಾಗೆ ಅವರು ಯಾಕೆ
ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ? ರಾಜಕಾರಣಗಳು ತಮ್ಮ ಹೆಂಡತಿ
ಮಕ್ಕಳನ್ನು ಮಾಸ್ಟರ್ ಹಿರಣ್ಣಯ್ಯನವರ ನಾಟಕಕ್ಕೆ ಕಳುಹಿಸಿದ ಹಾಗೆ ಇದು!

ಚೂರಿ: ಹಾಗೋ, ಅದಕ್ಕೆ ನಾನು ಈ ಸಿನೆಮಾದಲ್ಲಿ ಹಳೆಯ ಪದ್ಧತಿಯನ್ನೆಲ್ಲಾ ಬಿಟ್ಟು ಹೊಸ ಸಾಹಸಕ್ಕೆ ಕೈ ಹಾಕಿರುವೆ.

ನ.ಸಾ: ಏನದು ಸಾರ್?

ಚೂರಿ: ಕುಡಿತದ ಕಾನ್ಸೆಪ್ಟು ಇಟ್ಟುಕೊಂಡಿದ್ದಕ್ಕೆ ಗಂಡಸರು ಥಿಯೇಟರಿಗೆ ಬರುವ
ಮನಸ್ಸು ಮಾಡಲಿಲ್ಲ, ಪಡ್ಡೆಗಳು, ಹೆಣ್ಣುಮಕ್ಕಳಿಗೆ ಧೈರ್ಯ ಸಾಲಲಿಲ್ಲ ಅಂದ್ರಲ್ಲ,
ಅದಕ್ಕೆ ಈ ಬಾರಿ ವಿಭಿನ್ನವಾಗಿ ಸಿನೆಮಾ ಮಾಡಿರುವೆ. ಮದರ್ ಸೆಂಟಿಮೆಂಟು ಇಟ್ರೆ ಕಾಲೇಜು
ಹುಡುಗೀರು ನಿದ್ದೆ ಮಾಡ್ತಾರೆ, ಅಕ್ಕ ತಂಗಿ ಕಥೆ ಮಾಡಿದ್ರೆ ಹುಡುಗರು ಥಿಯೇಟರ್‌ ಕಡೆಗೆ
ಅಪ್ಪಿ ತಪ್ಪಿಯೂ ಸುಳಿಯುವುದಿಲ್ಲ. ಪಡ್ಡೆಗಳಿಗೆ ಮಾಸ್ ಸಿನೆಮಾ ಮಾಡಿದ್ರೆ ಎಲೈಟ್
ಪತ್ರಕರ್ತರು, ಟಿವಿಯವರು ಮೂಸಿಯೂ ನೋಡಲ್ಲ. ಸಾಮಾಜಿಕ ಕಳಕಳಿಯ ಕಥೆ ಇಟ್ಟುಕೊಂಡು
ಸಿನೆಮಾ ಮಾಡಿದ್ರೆ ಸಮಾಜವೇ ನೋಡಲ್ಲ. ಅದ್ಕೆ ಈ ಬಾರಿ ಎಲ್ಲಾ ವರ್ಗಕ್ಕೆ ತಲುಪುವ
ಸಿನೆಮಾ ಮಾಡಿದ್ದೇನೆ.

ನ.ಸಾ: ಹೌದು, ನಿಮ್ಮ ‘ನುಂಗ್ಲಿ’ ವಿಶಿಷ್ಟವಾಗೇ ಇದೆ. ಆದ್ರೆ ಇದರ ವಿಶಿಷ್ಟತೆ ಏನು?

ಚೂರಿ: ಕಳೆದ ಸಿನೆಮಾದಲ್ಲಿ ಮಾಡಿದ ತಪ್ಪನ್ನು ಇಲ್ಲಿ ತಿದ್ದಿಕೊಂಡಿರುವೆ. ಅಲ್ಲಿ
ಸಿನೆಮಾದ ಕಥೆಯೇ ಹಲವರಿಗೆ ಅಪಥ್ಯವಾಯಿತು. ಹೀಗಾಗಿ ಈ ಸಿನೆಮಾದಲ್ಲಿ ಅದರ ಗೋಜಿಗೇ
ಹೋಗಿಲ್ಲ. ಅವರಿವರ ಭಾವನೆಗೆ ನೋವುಂಟು ಮಾಡುವ ಹಕ್ಕು ನಮಗೆಲ್ಲಿದೆಯಲ್ವಾ ಸಾರ್?
ಹಾಗಾಗಿ ಈ ಸಿನೆಮಾದಲ್ಲಿ ಕಥೆಯನ್ನೇ ಬಳಸಿಲ್ಲ ನಾವು. ಇದು ಇತ್ತೀಚೆಗೆ
ಪ್ರಸಿದ್ಧವಾಗುತ್ತಿರುವ ತಂತ್ರ. ನಾವೂ ಇದನ್ನು ಬಳಸಿದ್ದೀವಿ.

ನ.ಸಾ: ಹೌದು, ಹೌದು, ಸೋಪೇ ಇಲ್ಲದ ಸೋಪಿನ ಡಬ್ಬಿ, ಹಾಲೇ ಇಲ್ಲದ ಹಾಲಿನ ಪಾಕೆಟು,
ಅಕ್ಕಿಯೇ ಇಲ್ಲದ ಅಕ್ಕಿಯ ಮೂಟೆ, ಮೆದುಳೇ ಇಲ್ಲದ ತಲೆ ಬುರುಡೆಗಳು
ಸಾಮಾನ್ಯವಾಗುತ್ತಿರುವ ಈ ಕಾಲದಲ್ಲಿ ಕಥೆಯಿಲ್ಲದ ಸಿನೆಮಾ ತಂತ್ರ ಯಶಸ್ವಿಯಾಗಬಹುದು.
ಅಂದ ಹಾಗೆ ನಿಮ್ಮ ಈ ತಂತ್ರದ ಮುಂದುವರಿದ ಭಾಗ ಏನು? ಪ್ರೇಕ್ಷಕರೇ ಇಲ್ಲದ ನೂರು ದಿನವಾ?

ಚೂರಿ: ಹೌದು, ಆ ತಂತ್ರವನ್ನು ಬಳಸಬೇಕು. ಈಗಾಗಲೇ ಕೆಲವರು ಆಕಾಶದ ವೀರಗನ್ನಡಿಗರು ಆ
ತಂತ್ರ ಬಳಸಿ ಯಶಸ್ವಿಯಾಗಿದಾರೆ. ಜನರೇ ಇಲ್ಲದೆಯೂ ಸಿನೆಮಾವನ್ನು ನೂರು ದಿನ ಓಡಿಸುವುದು
ಆ ತಂತ್ರ. ಅದನ್ನೂ ಮುಂದಿನ ಸಿನೆಮಾಗಳಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

ನ.ಸಾ: ‘ಲವ್ ಲೆಟರ್’ ಹಾಗೂ ‘ಮುದಿಯಾ’ದ ಮೂಲಕ ಉತ್ತಮ ಕಳಕಳಿಯನ್ನು ಹೊಂದಿರುವ
ನಿರ್ದೇಶಕ ಎಂದು ಹೆಸರು ಮಾಡಿದವರು ನೀವು ಈಗ ಇಂಥ ಸಿನೆಮಾ ಮಾಡಿದ್ದರಿಂದ ನಿಮಗೆ ಏನೂ
ಅನ್ನಿಸಲ್ವಾ?

ಚೂರಿ: ನೋಡಿ ನಾನು ನನ್ನ ಪ್ರತಿಭೆಯನ್ನೆಲ್ಲ ಧಾರೆಯೆರೆದು ಲವ್ ಲೆಟರ್ ಸಿನೆಮಾ
ಮಾಡಿದೆ. ಜನರು ನೋಡಲಿಲ್ಲ. ತಪ್ಪು ಮಾಡಿದರು. ಅಂಥ ಒಳ್ಳೆಯ ಸಿನೆಮಾವನ್ನು ಅವರು
ನೋಡಲಿಲ್ಲ. ಅದಕ್ಕೆ ಅವರಿಗೆ ಶಿಕ್ಷೆಯಾಗಲೇ ಬೇಕು. ತಪ್ಪು ಮಾಡಿದವರಿಗೆ ಪನಿಶ್‌ಮೆಂಟ್
ಇರಲೇ ಬೇಕು. ಅದಕ್ಕೆ ಅವ್ರು ಈ ನನ್ನ ‘ನುಂಗ್ಲಿ’ ಸಿನೆಮಾ ನೋಡಬೇಕು. ಜನರಿಗೆ ಬುದ್ಧಿ
ಕಲಿಸುವುದಕ್ಕಾಗಿ ನಾನು ‘ನುಂಗ್ಲಿ’ ಮಾಡಿರುವೆ.

ನ.ಸಾ: ಅದೇನೋ ಸರಿ ಸಾರ್ ಆದರೆ ನಿಮ್ ಈ ಸಿನೆಮಾದಲ್ಲಿ ಸೊಂಟದ ಕೆಳಗಿನ ಡೈಲಾಗುಗಳೇ ಜಾಸ್ತಿಯಂತೆ.

ಚೂರಿ: ಯಾರ್ರಿ ಹೇಳಿದ್ದು? ಸೊಂಟದ ಕೆಳಗಿನ ಡೈಲಾಗು ಒಂದೂ ಇಲ್ಲ ನಮ್ಮ
ಸಿನೆಮಾದಲ್ಲಿ. ಒಂದನ್ನಾದರೂ ತೋರಿಸಿ ಬಿಡಿ ನೋಡೋಣ. ಎಲ್ಲವೂ ಸೊಂಟದ ಮೇಲಿನದ್ದೇ.
ಎಲ್ಲರೂ ಬಾಯಲ್ಲಿಯೇ ಡೈಲಾಗು ಹೇಳಿರುವುದು, ಯಾರೂ ಸೊಂಟದ ಕೆಳಗಿಂದ ಡೈಲಾಗು ಹೇಳಿಲ್ಲ.
ಸುಮ್ಮನೆ ಆರೋಪ ವಹಿಸಬೇಡಿ, ನೋವಾಗುತ್ತೆ.

ನ.ಸಾ: ಹೋಗ್ಲಿ ಬಿಡಿ ಸರ್. ನಿಮ್ಮ ಮುಂದಿನ ಯೋಜನೆಗಳೇನು ಸರ್? ‘ನುಂಗ್ಲಿ’ಯನ್ನು ಯಾವ ರೀತಿ ಜನರು ರಿಸೀವ್ ಮಾಡಿದ್ದಾರೆ?

ಚೂರಿ: ‘ನುಂಗ್ಲಿ’ಯನ್ನು ಕನರು ಒಪ್ಪಲೇಬೇಕು. ಅವರು ನನ್ನ ‘ಲವ್ ಲೆಟರ್’ ಮಾನ್ಯ
ಮಾಡಲಿಲ್ಲವಾದ್ದರಿಂದ ನಾನು ‘ನುಂಗ್ಲಿ’ ಮಾಡಿರುವೆ. ‘ನುಂಗ್ಲಿ’ಯನ್ನು ಜನರು
ಒಪ್ಪದಿದ್ದರೆ ಇದಕ್ಕಿಂತಲೂ ಹೆಚ್ಚಿನ ‘ಪ್ರತಿಭೆ’ ವಿನಿಯೋಗಿಸಿ ಜನರಿಗೆ ಶಿಕ್ಷೆ
ಕೊಡುವೆ. ಜನರೇ ಆಲೋಚನೆ ಮಾಡಲಿ ಏನು ಮಾಡಬೇಕು ಅಂತ...

ನ.ಸಾ: ಒಟ್ಟಿನಲ್ಲಿ ನಿಮಗೆ ಪ್ರೇಕ್ಷಕರೇ ಪ್ರಭುಗಳು ಅಂದ ಹಾಗಾಯ್ತು. ನಿಮ್ಮ
ಸಂದರ್ಶನಕ್ಕಾಗಿ ಧನ್ಯವಾದಗಳು. ಮುಂದಿನ ಸಿನೆಮಾಗೆ ಸೆಕೆಂಡ್ ಹಿರೋ ಪಾರ್ಟ್ ಇದ್ದರೆ
ನನಗೆ ಕೊಡಿಸಿ...