ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗ

ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗ

ಬರಹ

ಗಣೇಶ ಚತುರ್ಥಿಯ ಮುನ್ನಾ ದಿನ ಲಾರ್ಡ್ ವಿನಾಯಕ ಖುದ್ದಾಗಿ ಎಲ್ಲಾ ಪತ್ರಿಕಾ ಕಛೇರಿಗಳಿಗೆ ಕಳುಹಿಸಿದ ಇ-ಮೇಲನ್ನು ನಗೆ ನಗಾರಿ ಡಾಟ್ ಕಾಮ್ ಮಾತ್ರವೇ ಪ್ರಕಟಿಸುವ ಬದ್ಧತೆಯನ್ನು ತೋರಿತು. ಆ ಸಂದರ್ಭದಲ್ಲಿ ಸಾಧ್ಯವಾದರೆ ಲಾರ್ಡ್ ಗಣೇಶನ ಸಂದರ್ಶನವೊಂದನ್ನೂ ಮಾಡಿಕೊಂಡು ಬರುವ ಇರಾದೆಯನ್ನು ನಗೆ ಸಾಮ್ರಾಟರು ಹೊಂದಿದ್ದರು. ತಮ್ಮ ಚೇಲ ಕುಚೇಲನನ್ನೂ ತಮ್ಮ ಆಲ್ಟರ್ ಈಗೋವನ್ನೂ ವಿನಾಯಕನ ಸಂದರ್ಶನಕ್ಕೆ ಅಟ್ಟಿದರು. ಚತುರ್ಥಿಯ ಹಬ್ಬದ ಸಂಭ್ರಮದಲ್ಲೇ ಬಿಡುವು ಮಾಡಿಕೊಂಡು ವಿನಾಯಕ ನಗೆ ನಗಾರಿಗಾಗಿ ಎಕ್ಸ್‌ಕ್ಲೂಸಿವ್ ಸಂದರ್ಶನವನ್ನು ಕೊಟ್ಟ. ಸಂದರ್ಶನದ ಪೂರ್ಣ ಪಾಠ ಇಲ್ಲದೆ.

ನಗೆ ಸಾಮ್ರಾಟ್: ಗಜಮುಖ, ವಿನಾಯಕ, ಮೂಷಿಕವಾಹನನಿಗೆ ಶರಣು ಶರಣು.

ವಿನಾಯಕ: ನಮಸ್ಕಾರ ನಮಸ್ಕಾರ ನಮಸ್ಕಾರ!

ನ.ಸಾ: ಏನು ಲಾರ್ಡ್ ಇದು, ಸಿನೆಮಾ ಹೀರೋ ಗಣೇಶ್ ಸ್ಟೈಲಲ್ಲಿ ನಮಸ್ಕಾರ?

ವಿ: ಹೌದು, ಹೌದು ಈ ಭೂಲೋಕದವರಿಗೆ ಅವರದೇ ಧಾಟಿಯಲ್ಲಿ ಮಾತಾಡಿಸಬೇಕು. ಆಗಲೇ ಆಪ್ತತೆ ಬೆಳೆಯೋದು. ಈ ಸತ್ಯವನ್ನು ನಾನು ತುಂಬಾ ಹಿಂದೇ ಕಂಡುಕೊಂಡೆ ಆದ್ರೆ ನಮ್ಮ ಇತರ ದೇವರುಗಳಿಗೆ ಇದು ಅರ್ಥವಾಗಿಲ್ಲ. ಅದಕ್ಕೇ ಭೂಲೋಕದಲ್ಲಿ ಈ ಸ್ಥಿತಿ ಇರುವುದು.

ನ.ಸಾ: ಹಾಗಂದ್ರೆ, ಅರ್ಥ ಆಗಲಿಲ್ಲ...

ವಿ: ಅರ್ಥ ಆಗದ್ದನ್ನು ಕೇಳಿ ತಿಳ್ಕೋಬೇಕು. ನೋಡ್ರಿ, ನಿಮ್ಮ ಮಹಾತ್ಮಾ ಗಾಂಧಿ ಹೇಳಿಲ್ಲವಾ, ಪ್ರಾರ್ಥನೆ ಅನ್ನೋದು ದೇವರು ಹಾಗೂ ಮಾನವನ ನಡುವಿನ ಸೇತುವೆ ಅಂತ. ಮನುಷ್ಯರಿಗೆ ದೇವರೊಂದಿಗೆ ಮಾತನಾಡಬೇಕು ಎಂಬ ಹಂಬಲವಿದೆಯೋ ಇಲ್ಲವೋ ಕಾಣೆ. ಆದರೆ ದೇವರಿಗೆ ಮಾತ್ರ ಮನುಷ್ಯನೊಂದಿಗೆ ಮಾತಾಡಬೇಕು ಎನ್ನುವ ಆಸೆ ಇದೆ. ಅದರಲ್ಲೂ ಈ ಹಿಂದೂ ದೇವರುಗಳಿದ್ದಾರಲ್ಲ, ಅವರ ಸಂಖ್ಯೆ ಮುಕ್ಕೋಟಿಗಿಂತ ಹೆಚ್ಚು. ಎಲ್ಲರಿಗೂ ಮನುಷ್ಯರೊಂದಿಗೆ ಮಾತನಾಡಬೇಕು ಎನ್ನುವ ಆಸೆ. ಏನು ಮಾಡುವುದು, ಈ ಮನುಷ್ಯರು ಅದಕ್ಕೆ ಟೈಮೇ ಕೊಡೋದಿಲ್ಲ. ಯಾವಾಗಲೂ ತಮ್ಮ ಮನೆ, ಮಕ್ಕಳು, ಬ್ಯಾಂಕ್ ಬ್ಯಾಲನ್ಸು, ತಮ್ಮ ಕ್ರಿಕೆಟ್ ಟೀಮು, ಕನಸಿನಲ್ಲೆಂಬಂತೆ ಬಂದ ಒಲಿಂಪಿಕ್ಸ್ ಚಿನ್ನದ ಪದಕ, ನ್ಯೂಕ್ಲಿಯಾರ್ ಡೀಲು ಅಂತಲೇ ತಮ್ಮ ಸಮಯವನ್ನೆಲ್ಲಾ ಕಳೆದುಬಿಡುತ್ತಾರೆ. ದೇವರೊಂದಿಗೆ ಮಾತನಾಡಲಿಕ್ಕೆ ಸಮಯವೇ ಅವರಿಗೆ ಇರುವುದಿಲ್ಲ. ದಿನದ ಇಪ್ಪತ್ನಾಲ್ಕು ತಾಸಿನಲ್ಲಿ ಒಂದರ್ಧ ಗಂಟೆಯಾದರೂ ನಮ್ಮೊಂದಿಗೆ ಕಳೆಯಲು ಅವರಿಗೆ ಬಿಡುವು ಇರೋದಿಲ್ಲ. ಈಗ ಮಾತನಾಡಿಸ ಬಹುದು ಆಗ ಮಾತನಾಡಿಸ ಬಹುದು ಎಂದು ನಮ್ಮ ದೇವಲೋಕದಲ್ಲಿ ದೇವರು ದೇವತೆಗಳು ಕಾಯುತ್ತಾ ಕೂತಿರುತ್ತಾರೆ.

ನ.ಸಾ: ಅಲ್ಲಾ, ನಾವು ಪ್ರತೀ ದಿನ ಪ್ರಾರ್ಥನೆ ಮಾಡ್ತೀವಲ್ಲ, ನಮ್ಮಲ್ಲಿ ಇಷ್ಟು ದೇವಸ್ಥಾನಗಳಿವೆ...

ವಿ: ಹೌದು ಹೌದು. ನೀವು ದಿನಕ್ಕೆ ನೂರು ಬಾರಿಯಾದರೂ ದೇವರನ್ನು ನೆನೆಯುತ್ತೀರಿ. ಆಸ್ಪತ್ರೆ, ಶಾಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಸ್ಥಾನಗಳಿಗೆ ಸುತ್ತುತ್ತೀರಿ. ಆದರೆ ಎಲ್ಲ ಕಡೆಯಲ್ಲೂ ಬರೀ ನಿಮ್ಮದೇ ಆರ್ಭಟ. ಬೆಳಿಗ್ಗೆ ಎದ್ದೇಳುತ್ತಿದ್ದಂತೆಯೇ ಕೈಗಳೆರಡನ್ನೂ ಉಜ್ಜಿ ಕೊಂಡು ಮುಖ ಹಿಡಿದು ‘ಕರಾಗ್ರೇ ವಸತೇ ಲಕ್ಷ್ಮಿ...’ ಎಂದು ಪ್ರಾರ್ಥಿಸ ತೊಡಗುತ್ತೀರಿ. ಲಕ್ಷ್ಮೀ, ಪಾರ್ವತಿ, ಸರ್ವಸ್ವತಿಯರು ನೀವು ಅವರನ್ನು ಕರೆಯುತ್ತಿದ್ದೀರಿ ಎಂದು ದೌಡಾಯಿಸುತ್ತಾರೆ, ಮಾತನಾಡಿಸಬಹುದು ಎಂದು ಕಾತರಿಸುತ್ತಾರೆ. ಆದರೆ ನೀವು ಅವರಿಗೆ ಮಾತನಾಡಲು ಕ್ಷಣ ಮಾತ್ರವೂ ಬಿಡುವು ದೊರೆಯದ ಹಾಗೆ ‘ನನ್ನನ್ನು ಕಾಪಾಡಿ, ನನ್ನ ಮನೆಯನ್ನು ಕಾಪಾಡಿ, ನನ್ನ ಅಂಗಡಿಯನ್ನು- ಬಿಸಿನೆಸ್ಸನ್ನು ಕಾಪಾಡಿ...’ ಎಂದು ಅಪ್ಪಣೆಗಳನ್ನು ಕೊಡಲು ಶುರುಮಾಡುತ್ತೀರಿ. ಸ್ನಾನ ಗೀನ ಮುಗಿಸಿ ದೇವರ ಮುಂದೆ ನಿಂತಾಗಲೂ ದೇವರಿಗೆ ಒಂದಕ್ಷರ ಮಾತಾಡಲೂ ಸಮಯ ಕೊಡದಂತೆ ನಿಮ್ಮ ಪ್ರವರವನ್ನೇ ಶುರು ಮಾಡಿಕೊಳ್ಳುತ್ತೀರಿ. ‘ನಂಗೆ ಎಂಬಿಎ ಸೀಟು ಸಿಗಲಿ, ನಂಗೆ ಮುಖದ ಮೇಲಿನ ಮೊಡವೆ ಮಾಯವಾಗಲಿ, ನನ್ನ ಮಗಂಗೆ ತಲೇಲಿ ಐನ್‌ಸ್ಟೀನನ ಮೆದುಳು ಬರಲಿ, ಅಕ್ಕನಿಗೆ ಬೇಗ ಮದುವೆಯಾಗಿ ಬಿಡಲಿ, ಗಂಡನಿಗೆ ನೌಕರಿ ಸಿಗಲಿ..’ ಹೀಗೆ ಕಿರಾಣಿ ಅಂಗಡಿಗೆ ಸಾಮಾನು ಪಟ್ಟಿಬರೆಯುವಂತೆ ದೇವರೆದುರು ನಿಮ್ಮ ಬೇಡಿಕೆ ಪಟ್ಟಿಯನ್ನು ಹೇಳುತ್ತಾ ಕೂರುತ್ತೀರಿ. ಪಾಪ ನಿಮ್ಮ ‘ಬೇಡಿಕೆ ನಿವೇದನೆ’ಯ ಮಧ್ಯೆ ದೇವರಿಗೆ ಒಂದಕ್ಷರ ಉಸುರಲೂ ಸಾಧ್ಯವಾಗುವುದಿಲ್ಲ.

ಇನ್ನು ದೇವಸ್ಥಾನಕ್ಕೆ ಹೋಗುತ್ತೀರಿ. ಅಲ್ಲಿಯೂ ನಿಮ್ಮ ಕಿರಾಣಿ ಅಂಗಡಿ ಪಟ್ಟಿಯನ್ನು ಸಲ್ಲಿಸುವ ಕೆಲಸ ಮುಗಿಯಿತು, ಇನ್ನೇನು ಸ್ವಲ್ಪ ಬಿಡುವು ಸಿಕ್ಕಿತು ಅನ್ನುವಷ್ಟರಲ್ಲಿ ಪೂಜಾರಿ ವಕ್ಕರಿಸಿ ಬಿಡುತ್ತಾನೆ. ನೀವು ದೇವರೊಂದಿಗೆ ಮಾತನಾಡಲಿಕ್ಕೆ, ದೇವರು ನಿಮ್ಮೊಂದಿಗೆ ಮಾತನಾಡಲಿಕ್ಕೆ ಅಡ್ಡಿಯಾಗಿ ನಿಂತು ಬಿಡುತ್ತಾನೆ. ದೇವರ ಹತ್ತಿರ ನಿಮ್ಮ ಪರವಾಗಿ ಮಾತನಾಡಿದಂತೆ ಮಾಡುತ್ತಾನೆ. ನಿಮ್ಮ ಹತ್ತಿರ ದೇವರ ಪರವಾಗಿ ಮಾತನಾಡುವಂತೆ ನಟಿಸುತ್ತಾನೆ. ನೀವು ಅವನ ಮಾತನ್ನು ಕೇಳಿ ದೇವರೇ ಹಿಂಗಂದ, ಹಂಗಂದ ಎಂದು ನಂಬಿಕೊಂಡು ಜಾಗ ಖಾಲಿ ಮಾಡುತ್ತೀರಿ. ನಾನೂ ಆತ ಹೇಳಿದ್ದು ಕೇಳಿಕೊಂಡು ತೆಪ್ಪಗಿರಬೇಕು ಇಲ್ಲಾಂದ್ರೆ ಮಾರನೆಯ ದಿನದಿಂದ ಹಾಲು, ತುಪ್ಪದ ಅಭಿಷೇಕ ಕಳೆದುಕೊಳ್ಳಬೇಕಾಗುತ್ತೆ.

ನ.ಸಾ: ತುಂಬಾ ಬೇಸರದ ಸಂಗತಿ ಇದು. ಹೌದು, ಎಲ್ಲಾ ಸರಿ ಆದರೆ ನೀವೇನೋ ಹೊಸ ಸಂಗತಿ ಕಂಡುಕೊಂಡಿದ್ದೀರಿ ಅಂದ್ರಿ...

ವಿ: ಹ್ಹಾ! ಅದನ್ನೇ ಹೇಳಬೇಕಿತ್ತು. ಹೀಗೆ ದೇವರೊಂದಿಗೆ ಮಾತನಾಡಲು ಮನುಷ್ಯನಿಗೆ ಸಮಯವೇ ಸಿಕ್ಕದಂತೆ ಆಗಿರುವಾಗ ಎಂದೋ ಒಮ್ಮೆಮ್ಮೊ ಅಪರೂಪಕ್ಕೆ ಮಾತನಾಡುವ ಅವಕಾಶ ಸಿಕ್ಕಾಗಲೂ ನಮ್ಮ ದೇವರುಗಳು ಅದನ್ನು ಹಾಳು ಮಾಡಿಕೊಂಡುಬಿಡುತ್ತಾರೆ. ಹೇಗೆ, ಅಂತೀರಾ? ಇಂದಿನ ಜನರು ಮಾತಾಡುವ ಶೈಲಿಯಲ್ಲಿ, ಬಳಸುವ ಭಾಷೆಯಲ್ಲಿ ಮಾತಾಡಿದರೆ ಮಾತ್ರವಲ್ಲವೇ ಅವರಿಗೆ ಅರ್ಥವಾಗುವುದು. ಅದು ಬಿಟ್ಟು ಹಳೇ ಕಾಲದವರ ಹಾಗೆಯೇ, ‘ವತ್ಸಾ... ನಿನಗೇನು ಬೇಕು ಕೇಳುವಂತವನಾಗು..’ ಅಂತ ಮಾತಾಡಿದರೆ ಯಾರು ಕೇಳುತ್ತಾರೆ? ಅದಕ್ಕೇ ನಾನು ನನ್ನ ಲಿಂಗೋ ಬದಲಾಯಿಸಿಕೊಂಡಿದ್ದೇನೆ. ಬೆಂಗಳೂರಿನ ಯುವಕರೊಂದಿಗೆ ಮಾತಾಡುವ ರೀತಿಗೂ, ಸಾಗರದ ಹೌಸ್ ವೈಫ್ ಜೊತೆಗೆ ಮಾತಾಡುವ ರೀತಿಗೂ ವ್ಯತ್ಯಾಸವಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು.

ನ.ಸಾ: ಹೌದೌದು. ದೇವರೂ ಸಹ ಅಪ್ ಡೇಟ್ ಆಗುತ್ತ ಇರಬೇಕಲ್ಲವೇ? ಅಂದ ಹಾಗೆ ಈ ಸಲದ ಭೂಲೋಕದ ಟೂರ್ ಹೇಗಿತ್ತು?

ವಿ: ಪ್ರತೀ ವರ್ಷದ ಹಾಗೆಯೇ ಇದೆ ಮೈ ಸನ್! ಭಾರತ ಅಮೇರಿಕಾ ಆಗುವುದು ಯಾವಾಗ , ಬೆಂಗಳೂರು ಸಿಂಗಾಪುರವಾಗುವುದು ಯಾವಾಗ ಎಂದು ಸರಕಾರಗಳು ಕನಸುತ್ತಿದ್ದರೆ, ನಮ್ಮ ಹುಡುಗ ಅಮೇರಿಕಾಗೆ ಹೋಗುವುದು ಯಾವಾಗ, ತಾನು ಸಿಂಗಾಪುರದ ಪ್ರಜೆಯಾಗುವುದು ಯಾವಾಗ ಅಂತ ಜನರು ಕನಸುತ್ತಿದ್ದಾರೆ. ಇದರಲ್ಲಿ ಒಂದಿನಿತೂ ಬದಲಾವಣೆಯಾಗಿಲ್ಲ. ಅದೇ ಬೆಲೆ ಏರಿಕೆ, ಬಡವರು ಬಡತನದಲ್ಲಿ ಪ್ರಗತಿ ಸಾಧಿಸುವುದು ಧನಿಕರು ಸಿರಿತನದಲ್ಲಿ ಪ್ರಗತಿಸಾಧಿಸುವುದು, ಇದನ್ನೇ ಶೇ ೮ರ ರಾಷ್ಟ್ರೀಯ ಪ್ರಗತಿ ಎಂದು ಸಂಭ್ರಮಿಸುವುದು - ಏನೂ ವ್ಯತ್ಯಾಸ ಕಂಡಿಲ್ಲ. ಆದರೆ ಒಂದು ಬಹುಮುಖ್ಯವಾದ ಬದಲಾವಣೆ ನಡೆದಿದೆ. ಇದರಿಂದ ನನ್ನ ಅಸ್ತಿತ್ವಕ್ಕೇ ಪೆಟ್ಟು ಬೀಳುತ್ತಿರುವುದರಿಂದ ನನಗೆ ಆತಂಕವಾಗಿದೆ.

ನ.ಸಾ: ಅದ್ಯಾವ ಸಂಗತಿ ಮೈಲಾರ್ಡ್!

ವಿ: ನಿಮ್ಮ ನಾಡಿನಲ್ಲಿ ಮಣ್ಣಿಗೆ ಹೊನ್ನಿನ ಬೆಲೆ ಬರುತ್ತಿದೆ ಅಲ್ಲವಾ? ಮಣ್ಣಿನಿಂದ ಕಬ್ಬಿಣ ಸಿಕ್ಕುತ್ತದೆ ಅಂದಕೂಡಲೇ ಮಣ್ಣು ಚಿನ್ನದ ಬೆಲೆಯನ್ನು ಪಡೆದುಕೊಂಡು ಬಿಟ್ಟಿದೆ. ರಿಯಲ್ ಎಸ್ಟೇಟು ದಾಂಢಿಗರು ಮಣ್ಣಿಗೆ ಉಕ್ಕಿನ ಬೇಲಿಯನ್ನು ಹಾಕಿ, ಹರಿತವಾದ ಚಾಕುವಿನಿಂದ ಕೇಕ್ ಕಟ್ ಮಾಡಿದ ಹಾಗೆ ತುಂಡು ತುಂಡು ಮಾಡಿ ಚಿನ್ನದ ಬೆಲೆಗೆ ಮಾರುತ್ತಿದ್ದಾರೆ. ಸರಕಾರಗಳು ಮಣ್ಣಿರುವುದು ಸಿರಿವಂತರು ತಮ್ಮ ಕಾರ್ಖಾನೆ ಸ್ಥಾಪಿಸುವುದಕ್ಕೇ ಹೊರತು ರೈತರು ಉಳುಮೆ ಮಾಡುವುದಕ್ಕಲ್ಲ ಎಂದು ವರ್ತಿಸುತ್ತಾ ಬಡವರ ಬಾಯಿಗೆ ಮಣ್ಣು ಹಾಕುತ್ತಿವೆ. ಇಷ್ಟೆಲ್ಲಾ ಸಂಗತಿ ಮಣ್ಣಿನ ವಿಚಾರವಾಗಿಯೇ ನಡೆಯುತ್ತಿರುವುದು.

ನ.ಸಾ: ಅದೇನೋ ಸರ್ ಲಾರ್ಡ್ ಆದರೆ ಇದರಿಂದ ನಿಮಗೇನು ತೊಂದರೆ?

ನ.ಸಾ: ತೊಂದರೆ ಇದೆ. ನೋಡಿ, ನಾನು ಹುಟ್ಟಿದ್ದು ಮಣ್ಣಿನಿಂದ. ನಮ್ಮ ತಾಯಿ ಪಾರ್ವತಿ ಪರ್ವತ ರಾಜನ ಮಗಳು. ಆಕೆಯ ಮೈಯಿಂದ ತೆಗೆದ ಮಣ್ಣಿನಿಂದಲೇ ನಾನು ಹುಟ್ಟಿದ್ದು. ನನ್ನ ದೇಹದ ಪ್ರತಿಯೊಂದು ಕಣಕಣವೂ ಮಣ್ಣೇ. ಹೀಗಾಗಿ ನಾನು ಮಣ್ಣಿನ ಮಗ! ಮಣ್ಣಿನಿಂದಾಗಿ ಇಷ್ಟೆಲ್ಲಾ ಅನ್ಯಾಯ, ಅನಾಹುತ, ಅತ್ಯಾಚಾರ, ಶೋಷಣೆ ನಡೆಯುತ್ತಿರುವುದು ನನಗೆ ಅಪಮಾನ ಮಾಡಿದ ಹಾಗೇ ಅಲ್ಲವೇ? ಪರಿಸ್ಥಿತಿ ಯಾವ ಹಂತಕ್ಕೆ ಬಂದಿದೆಯೆಂದರೆ ಚೌತಿಯ ದಿನ ನನ್ನ ಮೂರ್ತಿಯನ್ನು ಮಾಡಲೂ ಜನರಿಗೆ ಮಣ್ಣು ಸಿಕ್ಕುತ್ತಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ್ನು ಕಲೆಸಿ ನಿರ್ಜೀವವಾದ ಮೌಲ್ಡಿಗೆ ಸುರಿದು ನನ್ನನ್ನು ಮಾಡುತ್ತಿದ್ದಾರೆ. ಹೀಗಾದರೆ ನಾನು ಮಣ್ಣಿನ ಮಗ ಹೇಗಾದೇನು? ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮಗನಾಗಬಹುದು ಅಷ್ಟೇ! (ಇದೇ ಸುಸಂಧಿಯನ್ನು ಬಳಸಿಕೊಂಡು ‘ಮಣ್ಣಿನ ಮಗ’ ಟೈಟಲನ್ನು ಯಾರ್ಯಾರೋ ಹೈಜಾಕ್ ಮಾಡುತ್ತಿದ್ದಾರೆ)

ನ.ಸಾ: ಹೌದು ಲಾರ್ಡ್ ಇದು ನಿಜಕ್ಕೂ ದುಃಖದ ಸಂಗತಿ. ಆದರೆ ನಮ್ಮಗಳ ಕೈಗಳೂ ಕಟ್ಟಿಹೋಗಿವೆ. ನಾವೇನೂ ಮಾಡಲು ಸಾಧ್ಯವಿಲ್ಲ. ನಮ್ಮ ಅಧಿಕಾರಗಳನ್ನೆಲ್ಲಾ ಸರಕಾರಗಳ ಕೈಗೆ ಕೊಟ್ಟು ಸುಮ್ಮನಾಗಿದ್ದೇವಲ್ಲ?

ವಿ: ನೀವೆಂಥಾ ಮಡ್ಡಿಗಳು! ನಿಮ್ಮನ್ನು ನೀವು ಪ್ರಾಮಾಣಿಕರು, ಅಸಹಯಾಕರು, ಶೋಷಿತರು ಎಂದು ಅದೆಷ್ಟು ಕಾಲ ನಂಬಿಕೊಂಡು ಕಾಲ ಕಳೆಯುತ್ತೀರಿ? ನಡೆಯುತ್ತಿರುವ ಎಲ್ಲಾ ಅಕ್ರಮ, ಅನ್ಯಾಯಗಳಲ್ಲಿ ನೀವೂ ಪಾಲುದಾರರು ಎಂಬುದನ್ನು ನೆನೆಪಿಟ್ಟುಕೊಳ್ಳಿ. ಸರಕಾರವೇನು ದೇವರು ಮಾಡಿದ ವ್ಯವಸ್ಥೆಯಲ್ಲ. ನೀವೇ ಕಟ್ಟಿಕೊಂಡದ್ದು. ಅದರ ಮಂತ್ರಿಗಳೇನೂ ದೇವರ ಆಯ್ಕೆಯಲ್ಲ. ನೀವೇ ಐದು ವರ್ಷಕ್ಕೊಮ್ಮೆ ಆರಿಸಿ ಕಳುಹಿಸಿದ್ದು. ಅವರು ಲೂಟಿ ಮಾಡಿದ ರಖಮಿನಲ್ಲಿ ಸಾಧ್ಯವಾದಷ್ಟನ್ನು ಚುನಾವಣೆಯ ಸಮಯದಲ್ಲಿ ಗೆಬರಿಕೊಂಡು ಓಟು ಹಾಕುತ್ತೀರಿ. ಮತ್ತದೇ ಸರಕಾರವನ್ನು ತಂದುಕೊಳ್ಳುತ್ತೀರಿ. ಪಾಪ, ನಾಡಿನಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕಾಳಜಿ ನಿಮಗೆ! ಹೆಚ್ಚು ಬೈಯ್ಯುವುದಕ್ಕೆ ಹೋಗುವುದಿಲ್ಲ, ಈ ಬಾರಿ ಬೆಲೆಯೇರಿಕೆಯ ಸಂಕಷ್ಟದಲ್ಲೂ ಸಹ ನನಗೆ ಹೊಟ್ಟೆ ತುಂಬಾ ಭಕ್ತಿಯ, ಶ್ರದ್ಧೆಯ ಕಾಯಿ ಕಡುಬು, ಮೋದಕಗಳನ್ನು ಪ್ರೀತಿಯಿಂದ ತಿನ್ನಿಸಿದ್ದೀರಿ. ನಿಮಗೆ ನಾನು ವಿದ್ಯಾ, ಬುದ್ಧಿಯನ್ನು ಕರುಣಿಸುತ್ತೇನೆ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಿ.

ನ.ಸಾ: ಧನ್ಯವಾದಗಳು ಲಾರ್ಡ್ ವಿಘ್ನೇಶ್ವರ, ನಗೆ ನಗಾರಿಯೊಂದಿಗಿನ ನಿಮ್ಮ ಸಂದರ್ಶನಕ್ಕಾಗಿ ಧನ್ಯವಾದಗಳು.

ವಿ: ಹ್ಹ! ಹಾಗೆ ಈ ಸಂದರ್ಶನದ ಬಗ್ಗೆ ಏನಾದರೂ ಡಿಬೇಟ್ ಮಾಡುವುದಿದ್ದರೆ ನನ್ನ ಮೇಲ್ ಐಡಿ(vnk_gaja@gmail.com) ಗೆ ಒಂದು ಮೇಲ್ ಒಗಾಯಿಸಿ.