ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ 2

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ 2

ಬರಹ

(ಇಲ್ಲಿಂದ ಮುಂದುವರೆದದ್ದು)

ನ.ಸಾ: ಅಲ್ಲ ಗುರುಗಳೇ, ದೇವರು ಇದ್ದಾನೆ ಎಂದು ವೈಜ್ಞಾನಿಕವಾಗಿ ಸಾಬೀತು ಮಾಡುವುದು
ನಿಮ್ಮ ಕರ್ತವ್ಯವಲ್ಲವೇ? ಜನರು ಪ್ರಶ್ನಿಸಲೇ ಬಾರದು ಎಂದರೆ ವೈಜ್ಞಾನಿಕ ಮನೋಭಾವೆನೆ
ಹೇಗೆ ಬೆಳೆಯಲು ಸಾಧ್ಯ?

ಧರ್ಮಶ್ರೀ: ದೇವರು ಇದ್ದಾನೆ ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು? ಸಾಕ್ಷಾತ್
ಆ ಪರಮಾತ್ಮನೇ ತಾನು ಈ ಜಗತ್ತನ್ನು ಸೃಷ್ಟಿಸಿದ್ದೇನೆ, ತಾನೇ ಈ ಜಗತ್ತನ್ನು
ನಡೆಸುವವನು, ನಾಶ ಮಾಡುವವನು ಎಂದು ಹೇಳಿಲ್ಲವೇ? ಆತನಿಂದ ಬಂದ ಧಾರ್ಮಿಕ ಗ್ರಂಥಗಳಂತಹ
ಸಾಕ್ಷಿಗಳು ಸಾಕಾಗುವುದಿಲ್ಲವೇ? ವೈಜ್ಞಾನಿಕ ಮನೋಭಾವ ಎಂಬ ಹೆಸರಿನಲ್ಲಿ ಸೈತಾನ
ಆಳ್ವಿಕೆ ನಡೆಸುತ್ತಾನೆ. ಸಂಶಯ, ದ್ವೇಷಗಳು ಬೆಳೆಯುವುದು ಈ ಪ್ರಶ್ನಿಸುವ
ಮನೋಭಾವದಿಂದಲೇ. ಹಿಂದೆ ಎಷ್ಟು ಒಟ್ಟು ಕುಟುಂಬಗಳಿದ್ದವು, ಎಷ್ಟು ಶಾಂತಿಯಿತ್ತು ಈಗ
ಎಲ್ಲಿ ನೋಡಿದರೂ ಕೌಟುಂಬಿಕ ಕಲಹ, ಅಶಾಂತಿ. ಇದಕ್ಕೆಲ್ಲಾ ಕಾರಣ ಜನರು ಧರ್ಮ
ಗ್ರಂಥಗಳಲ್ಲಿ ದೇವರು ಕೊಟ್ಟ ಆಜ್ಞೆಗಳನ್ನು ಧಿಕ್ಕರಿಸಿ ಪ್ರಶ್ನೆ ಮಾಡಲು ಶುರು
ಮಾಡಿದ್ದೇ ಕಾರಣ.
ನಮ್ಮ ಜಗತ್ತು ಮಾಯೆಯಿಂದ ಕೂಡಿದ್ದು. ಪ್ರತಿಯೊಂದೂ ಇಂದ್ರಿಯಗಳ ವಿಕೃತಿಯಿಂದ
ಜನಿಸಿದ್ದು. ಈ ಭೂಮಿಯ ಮೇಲಿನ ಬದುಕು ನೀರ ಮೇಲಿನ ಗುಳ್ಳೆ ಇದ್ದಂತೆ. ಇದನ್ನು
ನೆಚ್ಚಿಕೊಂಡರೆ ಲಾಭವಿಲ್ಲ. ಯಾರೂ ಶಾಶ್ವತವಲ್ಲ ಇಲ್ಲಿ. ಹೀಗಿರುವಾಗ ಇರುವ ನಾಲ್ಕು
ದಿನವನ್ನು ದೇವರ ನಾಮ ಸ್ಮರಣೆ ಮಾಡುತ್ತಾ ಆತನ ಉಪಾಸನೆ ಮಾಡುತ್ತಾ ಕಳೆಯುವುದು ಬಿಟ್ಟು
ಬೇರೆ ಆಲೋಚನೆಗಳಲ್ಲಿ ಸಮಯ ಕಳೆಯುವುದು ದೈವ ದ್ರೋಹ.

ನ.ಸಾ: ಹಾಗಾದರೆ ಚಂದ್ರಯಾನ ಕಾರ್ಯಕ್ರಮ ದೈವದ್ರೋಹದ್ದು ಎನ್ನುವಿರಿ...

ಧರ್ಮಶ್ರೀ: ಅಷ್ಟೇ ಅಲ್ಲ ಅದು ದೇಶ ದ್ರೋಹ ಸಹ. ನಮ್ಮ ದೇಶದಲ್ಲಿ ಕೋಟಿ ಕೋಟಿ
ಜನರಿಗೆ ತಿನ್ನುವುದಕ್ಕೆ ಕೂಳಿಲ್ಲ. ಭೂಮಿಯ ಮೇಲೆ ನಾಲ್ಕಂಗುಲ ಜಾಗ ಸಿಕ್ಕುವುದಿಲ್ಲ.
ರೈತರಿಗೆ ವ್ಯವಸಾಯಕ್ಕೆ ಸರಿಯಾಗಿ ನೀರು ಸಿಕ್ಕುವುದಿಲ್ಲ, ಪಂಪ್ ಸೆಟ್‌ಗಳಿಗೆ
ವಿದ್ಯುತ್ ಕೊಡಲು ಸಾಧ್ಯವಾಗಿಲ್ಲ ಹೀಗಿರುವಾಗ ಚಂದ್ರನ ಮೇಲೆ ಹೋಗಿ ಬಂದ್ವಿ ಅಂತ
ಸಂಭ್ರಮ ಪಡೋದು ವಿವೇಕವೇ? ಅದಕ್ಕೆ ನೂರಾರು ಕೋಟಿ ಹಣ ಚೆಲ್ಲುವುದು ಮೂರ್ಖತನವಲ್ಲದೆ
ಮತ್ತೇನು? ಅದೇ ಹಣದಲ್ಲಿ ಭಾರತದ ಎಷ್ಟೋ ಗ್ರಾಮಗಳಿಗೆ ನೀರು ಪೂರೈಕೆ ಮಾಡಬಹುದು. ಎಷ್ಟೋ
ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬಹುದು. ನಿನಗೆ ಹೊಟ್ಟೆ ಚುರುಗುಟ್ಟುವಾಗ ದೂರದ
ಚಂದ್ರನನ್ನು ನೋಡಿ ಸಂತೋಷ ಪಡುತ್ತೀಯೋ ಇಲ್ಲ ಹೊಟ್ಟೆಗೆ ಕೂಳು ಹಾಕಿಕೊಳ್ಳುತ್ತೀಯೋ?
ಹೊಟ್ಟೆ ಮಾತನ್ನು ಕೇಳುತ್ತೀಯ ಅಲ್ಲವೇ? ಹೀಗಿರುವಾಗ ನಮಗೇಕೆ ಬೇಕು ಚಂದ್ರನ ಉಸಾಬರಿ.
ಇಷ್ಟಕ್ಕೂ ಇಡೀ ವಿಶ್ವವೇ ಮಾಯೆಯಾಗಿರುವಾಗ ಚಂದ್ರನೆಂಬ ಮಾಯೆಯ ಬಗ್ಗೆ ತಿಳಿದು ಏನು
ಮಾಡುವುದು? ಅದರ ಮೇಲೆ ನೀರಿದ್ದರೆಷ್ಟು, ಜೀವಿಗಳಿದ್ದರೆಷ್ಟು? ಅದರ ಜ್ಞಾನದಿಂದ ನಮ್ಮ
ಕರ್ಮ ಫಲದಲ್ಲಿ ಯಾವ ಬದಲಾವಣೆಯೂ ಆಗದು. ಇವೆಲ್ಲಾ ನಮ್ಮನ್ನು ಭಗವಂತನ ನಾಮ ಸ್ಮರಣೆಯಿಂದ
ವಿಮುಖವಾಗಿಸುವ ಸಂಗತಿಗಳು ಅಷ್ಟೇ!

ನ.ಸಾ: ಇಸ್ರೋದವರು ಹೇಳುವ ಪ್ರಕಾರ ಅವರು ಮಾಡಿರುವ ಖರ್ಚು ಬೇರೆ ದೇಶಗಳ ಖರ್ಚಿಗಿಂತ
ತುಂಬಾ ಕಡಿಮೆ. ಅಲ್ಲದೆ ಪ್ರತಿವರ್ಷ ಸರ್ಕಾರ ಬಿಡುಗಡೆ ಮಾಡುವ ಅನುದಾನದ ಹಣದಲ್ಲೇ ಈ
ಯೋಜನೆಯನ್ನು ನಡೆಸುತ್ತಿದೆ. ಇದರಲ್ಲಿ ತಪ್ಪೇನು? ಅಲ್ಲದೆ ಮನುಷ್ಯ ಕೇವಲ ಹೊಟ್ಟೆ
ತುಂಬಿಸಿಕೊಳ್ಳಲು ಬದುಕಿಲ್ಲ. ಆತನ ಬದುಕಿಗೆ ಅರ್ಥ ಸಿಕ್ಕುವುದು ಕನಸು ಕಾಣುವುದರಲ್ಲಿ,
ಕನಸುಗಳನ್ನು ಬೆನ್ನಟ್ಟಿ ಸತ್ಯ ಸಾಕ್ಷಾತ್ಕಾರ ಮಾಡಿಕೊಳ್ಳುವಲ್ಲಿ. ಚಂದ್ರನನ್ನು
ಮುಟ್ಟುವಷ್ಟು ನಾವು ವೈಜ್ಞಾನಿಕವಾಗಿ ಮುಂದುವರೆದಿದ್ದೇವೆ ಎಂಬುದು ನಮ್ಮ ದೇಶದ
ಯುವಕರಿಗೆ ಸ್ಪೂರ್ತಿಯ ವಿಷಯವಾಗುವುದಿಲ್ಲವೇ? ಹೆಚ್ಚೆಚ್ಚು ಮಂದಿ ಮೂಢ ನಂಬಿಕೆಗಳಿಂದ
ಮುಕ್ತರಾಗಿ ಸ್ವತಂತ್ರ ಚಿಂತನೆಯನ್ನು ಅಳವಡಿಸಿಕೊಳ್ಳುವಲ್ಲಿ ಸಫಲರಾಗುವುದಿಲ್ಲವೇ?
ಸ್ವಾಮೀಜಿಗಳು ಇಂಥ ವೈಜ್ಞಾನಿಕ ಅನ್ವೇಷಣಗಳನ್ನು ವಿರೋಧಿಸುವುದರಲ್ಲಿ ಪಟ್ಟಭದ್ರ
ಹಿತಾಸಕ್ತಿ ತೋರುತ್ತಾರೆ. ಅವರಿಗೆ ಜನರು ಜ್ಞಾನಿಗಳಾಗುವುದು ಬೇಡ, ಅವರು ಸ್ವತಂತ್ರ
ಚಿಂತನೆಯನ್ನು ಬೆಳೆಸಿಕೊಳ್ಳುವುದು ಬೇಕಿಲ್ಲ, ಪ್ರಶ್ನಿಸುವ ಮನೋಭಾವ ಗಳಿಸುವುದು ನಿಮಗೆ
ಬೇಕಿಲ್ಲ. ಇದರಿಂದ ನಿಮ್ಮ ಸಾರ್ವಭೌಮತ್ವಕ್ಕೆ, ಹಿರಿಮೆಗೆ, ಸಂಪತ್ತಿಗೆ, ಅಧಿಕಾರಕ್ಕೆ
ಸಂಚಕಾರ ಬರುತ್ತದೆ. ಎಂದು ನಾನು ಹೇಳುತ್ತಿಲ್ಲ, ಪ್ರಗತಿಪರರು, ಬುದ್ಧಿಜೀವಿಗಳು
ಹೇಳುತ್ತಿದ್ದಾರೆ. ಇದಕ್ಕೆ ಏನಂತೀರಿ?

ಧರ್ಮಶ್ರೀ: ನಮ್ಮಂತಹ ತಪಸ್ವಿಗಳನ್ನು, ಮುಮುಕ್ಷುಗಳನ್ನು, ಧರ್ಮ ರಕ್ಷಕರನ್ನು
ನಿಂದಿಸುವವರು ರೌರವ ನರಕದಲ್ಲಿ ಬೇಯುತ್ತಾರೆ. ನಮ್ಮ ಶಾಪ ಅವರನ್ನು ನಾಶ ಮಾಡದೆ
ಬಿಡುವುದಿಲ್ಲ. ದೇವರಿಂದ ಆಯ್ಕೆಯಾಗಿರುವ ನಮ್ಮ ಸಾರ್ವಭೌಮತ್ವವನ್ನು ಪ್ರಶ್ನಿಸುವುದು
ಸ್ವತಃ ಆ ದೇವರನ್ನೇ ಪ್ರಶ್ನಿಸಿದಂತೆ. ಆ ದೇವರನ್ನು ಪ್ರಶ್ನಿಸುವ, ನಿಂದಿಸುವ
ಉದ್ಧಟತನವನ್ನು ತೋರುವವರು ಬದುಕುವುದಕ್ಕೆ ಅರ್ಹರಲ್ಲ. ಅವರ ಪಟ್ಟಿಯನ್ನು ಮಾಡಿ
ಒಬ್ಬೊಬ್ಬರ ತಲೆಯನ್ನು ಎಗರಿಸಲು ಬಹುಮಾನ ಗೊತ್ತು ಮಾಡಿ ಫತ್ವಾ ಹೊರಡಿಸಲಾಗುವುದು.
ಇನ್ನು ಒಂದೇ ಒಂದು ಮಾತು ಅವರ ಬಗ್ಗೆ ಬಂದರೆ ನಿನ್ನ ತಲೆಗೂ ಸಂಚಕಾರ ಒದಗುವುದು! ಎಚ್ಚರ!

ನ.ಸಾ: ಕ್ಷಮಿಸಬೇಕು ಮಹಾಸ್ವಾಮಿ. ತಲೆ ಎಗರಿಸಿಕೊಳ್ಳುವ ಅಪರಾಧವನ್ನು ನಾನೇನು
ಮಾಡಿಲ್ಲ. ಇದುವರೆಗೂ ನಾನು ಯಾವ ಮಾನವೀಯ ಮೌಲ್ಯಕ್ಕೂ ಚ್ಯುತಿ ಬರದಂತೆ
ನಡೆದುಕೊಂಡಿಲ್ಲ. ಕೈಲಾದ ಮಟ್ಟಿಗೆ ಜನಸೇವೆ ಮಾಡಿಕೊಂಡು ನಿಸ್ವಾರ್ಥ ಬದುಕನ್ನು
ಬದುಕಿದ್ದೇನೆ. ನಾನು ನನ್ನ ನಂಬಿಕೆಯ ಪ್ರತಿಪಾದನೆಗೋಸ್ಕರ ಇದುವರೆಗೂ ಒಂದು ಚಿಕ್ಕ
ಇರುವೆಯನ್ನೂ ಸಾಯಿಸಿಲ್ಲ. ನನ್ನ ದೇವರನ್ನು ಒಪ್ಪದಿದ್ದಕ್ಕಾಗಿ ನಾನು ಒಂದು ನಾಯಿಗೂ
ಕಲ್ಲು ಬೀರಿಲ್ಲ. ನನ್ನನ್ನು ಒಪ್ಪದವನನ್ನು ನಾನೆಂದಿಗೂ ಮನಸ್ಸಿನಲ್ಲೂ ನಿಂದಿಸಿಲ್ಲ.
ನನಗೆ ಬಹುಶಃ ಆ ನಿಮ್ಮ ದೇವರೂ ನರಕಕ್ಕೆ ಕಳುಹಿಸಲು ಕಾರಣಗಳಿಲ್ಲ.

ಧರ್ಮಶ್ರೀ: ನೀನೆಷ್ಟೇ ಒಳ್ಳೆಯವನಾಗಿರು, ಎಷ್ಟೇ ಜನಾನುರಾಗಿಯಾಗಿರು, ಎಷ್ಟೇ
ಪುಣ್ಯಕೆಲಸಗಳನ್ನು ಮಾಡಿರು ದೈವ ನಿಂದನೆಯನ್ನು, ದೇವರ ಪ್ರತಿನಿಧಿಯಾದ ನಮ್ಮ ನಿಂದನೆ
ಮಾಡುವುದರಿಂದ ನರಕವಲ್ಲದೆ ಬೇರೆಲ್ಲೂ ನಿನಗೆ ಜಾಗ ಸಿಕ್ಕದು. ನಿನ್ನನ್ನು ಬದುಕಲು
ಬಿಡುವುದು ಆ ದೇವರಿಗೂ ಇಷ್ಟವಾಗದು. ಆ ದೇವರ ಇಚ್ಚೆಯನ್ನಷ್ಟು ನಾವು ಪಾಲಿಸುವವರು.
ಇಷ್ಟಕ್ಕೂ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕೆನ್ನುವ ಹಂಬಲ
ಮೂರ್ಖತನದ್ದು ಅಲ್ಲವೇ? ಚಂದ್ರನ ಬಗ್ಗೆ ತಿಳಿದು ಆಗಬೇಕಾದದ್ದು ಏನಿದೆ? ಮನುಷ್ಯನಿಗೆ
ತನ್ನ ಬಗ್ಗೆಯೇ ಸರಿಯಾಗಿ ತಿಳಿದಿಲ್ಲ. ತನ್ನನ್ನು ತಾನು ಕಂಡುಕೊಳ್ಳುವಲ್ಲಿ ಮನುಷ್ಯ
ಸೋತಿದ್ದಾನೆ. ತಾನು ಮೂಳೆ ಮಾಂಸದ ತಡಿಕೆಯಲ್ಲಿರುವ ಆತ್ಮ ಎಂಬುದನ್ನು ಅರಿಯದೆ
ತೊಳಲಾಡುತ್ತಿದ್ದಾನೆ. ಇದನ್ನು ಅರಿತುಕೊಳ್ಳುವುದನ್ನು ಬಿಟ್ಟು ಕೋಟಿ ಕೋಟಿ ಹಣ ಚೆಲ್ಲಿ
ಚಿಲ್ಲರೆ ಕೆಲಸಗಳನ್ನು ಮಾಡುವುದು ಭಗವಂತನ ಆಶಯಕ್ಕೆ ವಿರುದ್ಧವಾದದ್ದು. ಮನುಷ್ಯ
ಆಕಾಶದಲ್ಲಿ ಹಾರಬಾರದು, ಸಮುದ್ರವನ್ನು ದಾಟಬಾರದು ಎಂತಲೇ ಆತನಿಗೆ ರೆಕ್ಕೆಯನ್ನಾಗಲೀ,
ಈಜುರೆಕ್ಕೆಯಲ್ಲಾಗಲೀ ದೇವರು ಕೊಡಲಿಲ್ಲ. ಆದರೆ ಮನುಷ್ಯ ಆತನ ಇಚ್ಛೆಯನ್ನರಿಯದೆ ಹಠಮಾರಿ
ಮಗುವಿನಂತೆ ಅದರ ವಿರುದ್ಧ ನಡೆದುಕೊಳ್ಳುತ್ತಿದ್ದಾನೆ. ಮನುಷ್ಯನ ಬದುಕು ಇರುವುದು
ಅಂತರಂಗದಲ್ಲಿ, ಹಣ, ಪ್ರಾಪಂಚಿಕ ಸುಖಗಳು ಎಲ್ಲವನ್ನೂ ತ್ಯಜಿಸಬೇಕು.

ನ.ಸಾ: ಸ್ವಾಮಿಗಳೇ ಚಂದ್ರಯಾನ ಜುಟ್ಟಿಗೆ ಮಲ್ಲಿಗೆಯಾಗುವುದು ಎಂಬುದನ್ನು ಹಲವರು
ಒಪ್ಪುವುದಿಲ್ಲ. ಜ್ಞಾನ ಸಾಕ್ಷಾತ್ಕಾರವೇ ನಮ್ಮ ದೇಶದ ಪರಮ ಪವಿತ್ರ ಆದರ್ಶವಾಗಿರುವಾಗ
ಚಂದ್ರನ ಬಗ್ಗೆ ತಿಳಿಯುವುದು ಆ ಆದರ್ಶದೆಡೆಗಿನ ನಡಿಗೆಯೇ ಆಗುತ್ತದೆ. ಒಂದು ಚಂದ್ರಯಾನ
ಸಾವಿರಾರು ಮಂದಿಯಲ್ಲಿ ಹೊಸ ಸ್ಪೂರ್ತಿಯನ್ನು, ಜೀವನೋತ್ಸಾಹವನ್ನು ತುಂಬುವುದಾದರೆ
ಅದನ್ನ್ ಹಿಯಾಳಿಸುವುದೇಕೆ ಎಂಬುದು ಅವರ ವಾದ. ನಿಮ್ಮ ದೇವರು, ಧರ್ಮ ಗ್ರಂಥಗಳು
ಕೊಡಲಾಗದ ಜೀವನ ಮುಖೀ ಧೋರಣೆಯನ್ನು ವೈಜ್ಞಾನಿಕ ಸಾಹಸಗಳು, ಯಶೋಗಾಥೆಗಳು, ಕ್ರಿಕೆಟ್
ಸರಣಿಗಳು ಕೊಡುವುದಾದರೆ ಅವನ್ನು ವಿರೋಧಿಸುವುದೇಕೆ ಎನ್ನುತ್ತಾರೆ.
ಅಲ್ಲದೆ ಹಣದ ವಿಷಯದ ಬಗ್ಗೆ ಅವರು ನಿಮ್ಮ ಬಗ್ಗೆಯೇ ತಕರಾರು ಎತ್ತುತ್ತಾರೆ. ಸರ್ವವನ್ನೂ
ಪರಿತ್ಯಾಗ ಮಾಡಿದ ಸಂನ್ಯಾಸಿಗಳಿಗೆ, ಧರ್ಮ ಗುರುಗಳಿಗೆ ಯಾಕೆ ಅಷ್ಟಷ್ಟು ದೊಡ್ಡ
ಸಂಸ್ಥೆಗಳ ಒಡೆತನದ ಬಗ್ಗೆ ಆಸಕ್ತಿ? ಓಡಾಡಲು ದುಬಾರಿ ಕಾರುಗಳೇಕೆ? ವೈಭಯುತವಾದ
ದೇವಾಲಯಗಳೇಕೆ? ಅಸಲಿಗೆ ದೇವರೆದುರು ಹುಂಡಿ ಇಡುವುದೇ ತಪ್ಪಲ್ಲವೇ? ಎಲ್ಲಿಯ ದೇವರು
ಎಲ್ಲಿಯ ಹಣ? ಎಂದು ಕೇಳುತ್ತಾರೆ. ಅಲ್ಲದೇ ಸ್ವಾಮಿಗಳ ವಿಲಾಸಗಳ ಬಗ್ಗೆಯೂ ಅಲ್ಲಲ್ಲಿ
ಗುಸುಗುಸು ದಟ್ಟವಾಗುತ್ತಿದೆ.

ಧರ್ಮಶ್ರೀ: ಖಬರ್‌ದಾರ್! ಇನ್ನೊಂದು ಪದ ಉಸುರಿದರೆ ನಿನ್ನ ಜೀವವನ್ನು ಇಲ್ಲವಾಗಿಸಲು
ಭಗವಂತನ ಅಪ್ಪಣೆಯಾಗಿದೆ. ಯಾರಲ್ಲಿ, ಈ ಕ್ಷುದ್ರ ಜಂತುವನ್ನು ಆ ಭಗವಂತ ಭಸ್ಮ ಮಾಡುವ
ಮೊದಲು ಇಲ್ಲಿಂದ ಎತ್ತಿ ಹೊರಗೆ ಹಾಕು. ಇನ್ನೆಂದೂ ಈತನನ್ನು ನಮ್ಮ ಸಮೀಪಕ್ಕೆ ಬರಲು
ಬಿಡಬೇಡಿ...