ವಿಶೇಷ ಸ್ಥಾನಮಾನ ಕಾಯ್ದೆಗೆ ಸುಪ್ರೀಂ ಅಂತಿಮ ಮುದ್ರೆ!

ವಿಶೇಷ ಸ್ಥಾನಮಾನ ಕಾಯ್ದೆಗೆ ಸುಪ್ರೀಂ ಅಂತಿಮ ಮುದ್ರೆ!

೩೭೦ನೇ ವಿಧಿ ಅಥವಾ ಆರ್ಟಿಕಲ್ 370 ಎನ್ನುವುದು ನಮ್ಮ ಭಾರತದ ಸಾರ್ವಭೌಮತೆಗೆ ಒಂದು ನುಂಗಲಾರದ ತುತ್ತಾಗಿತ್ತು. ಇದರ ಅನ್ವಯ ಭಾರತದ ಯಾವುದೇ ರಾಜ್ಯಕ್ಕೆ ಇಲ್ಲದ ಸ್ಥಾನಮಾನ ಮತ್ತು ಕಾನೂನು ಕಣಿವೆಗಳ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಒದಗಿತ್ತು. ಭಾರತಕ್ಕೆ ೧೯೪೭ರಲ್ಲಿ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜರಾಗಿದ್ದ ಹರಿಸಿಂಗ್ ಹಾಗೂ ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ನಡುವೆ ನಡೆದ ಒಪ್ಪಂದದ ಪ್ರಕಾರ ಈ ವಿಧಿ ಜಾರಿಗೆ ಬಂದಿತ್ತು. ಆಗ ಇದು ತಾತ್ಕಾಲಿಕ ಎಂದೇ ದಾಖಲಾಗಿತ್ತು ಎಂಬುದು ವಿಶೇಷ. ಆದರೆ ಈ ತಾತ್ಕಾಲಿಕ ವಿಧಿಯನ್ನು ರಾಜಾರೋಷವಾಗಿ ನಂತರದ ದಿನಗಳಲ್ಲಿ ಆಡಳಿತ ನಡೆಸಿದ ಶೇಖ್ ಅಬ್ದುಲ್ಲಾ ಮತ್ತು ಮುಫ್ತಿ ಮೊಹಮ್ಮದ್ ಸಯೀದ್ ಅವರ ಕುಟುಂಬವು ಅನುಭವಿಸುತ್ತಾ ಬಂದಿತ್ತು. ಶೇಖ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಅನಧಿಕೃತ ‘ಪ್ರಧಾನಿ' ಎಂದೇ ಕರೆಯಿಸಿಕೊಳ್ಳಲು ಬಯಸುತ್ತಿದ್ದರು. ಶೇಖ್ ಅಬ್ದುಲ್ಲಾ ಅವರಂತೂ ಈ ತಾತ್ಕಾಲಿಕ ವಿಧಿಯನ್ನು ಶಾಶ್ವತ ವಿಧಿಯನ್ನಾಗಿಸಲು ಬಹಳಷ್ಟು ಶ್ರಮ ಪಟ್ಟಿದ್ದರಂತೆ.

ಭಾರತದ ಅಖಂಡತೆಗೆ ಈ ಕಾನೂನು ಶಾಪ ಎಂದೇ ಭಾವಿಸಲಾಗಿತ್ತಾದರೂ ನೆಹರೂ ನಂತರ ಆಡಳಿತ ನಡೆಸಿದ ಎಲ್ಲಾ ಪ್ರಧಾನಿಗಳು ಮತ್ತು ಅವರ ರಾಜಕೀಯ ಪಕ್ಷಗಳು ವಿವಿಧ ರಾಜಕೀಯ ಕಾರಣಗಳಿಗಾಗಿ ಈ ವಿಧಿಯನ್ನು ತೆಗೆದು ಹಾಕಲು ಮನಸ್ಸೇ ಮಾಡಲಿಲ್ಲ. ತಾತ್ಕಾಲಿಕವಾಗಿದ್ದ ಈ ೩೭೦ ನೇ ವಿಧಿ ಶಾಶ್ವತದಂತೆ ರಾಜ್ಯಭಾರ ಮಾಡಲು ತೊಡಗಿತು. ಭಾರತದ ಯಾವುದೇ ರಾಜ್ಯದ ನಾಗರಿಕರಿಗೆ ಇಲ್ಲದೇ ಇದ್ದ ವಿಶೇಷ ಅಧಿಕಾರಗಳು, ಸೌಲಭ್ಯಗಳು ಜಮ್ಮು-ಕಾಶ್ಮೀರಕ್ಕೆ ಲಭಿಸಿತ್ತು. 

ಈ ೩೭೦ನೇ ವಿಧಿ ಜಾರಿಗೆ ಬಂದ ಬಳಿಕ ಏನಾಗಿತ್ತೆಂದರೆ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಬಾವುಟ ಬಂತು. ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲು ಸುಲಭ ಸಾಧ್ಯವಿರಲಿಲ್ಲ. ಭಾರತದ ಸರಕಾರದ ಅಂಗವೇ ಆಗಿದ್ದರೂ ಆಡಳಿತಾತ್ಮಕ ವಿಷಯಗಳಲ್ಲಿ ಮೂಗು ತೂರಿಸುವಂತಿರಲಿಲ್ಲ. ಅಲ್ಲದೆ ಅಲ್ಲಿನ ಮೂಲ ನಿವಾಸಿಗಳ ಮೂಲಭೂತ ಹಕ್ಕು, ನಾಗರಿಕತೆ ಮತ್ತು ಆಸ್ತಿ ಒಡೆತನ ವಿಚಾರದಲ್ಲಿ ಪ್ರತ್ಯೇಕವಾದ ಕಾನೂನೇ ಇತ್ತು. ಇಷ್ಟೇ ಏಕೆ ಅವರಿಗೆ ಹಣಕಾಸು, ಭದ್ರತೆ, ವಿದೇಶಾಂಗ ವ್ಯವಹಾರಗಳನ್ನು ಭಾರತ ಸರಕಾರದಿಂದ ಹೊಂದುವ ಸೌಲಭ್ಯವೂ ಇತ್ತು. ಆದರೆ ಭಾರತ ಸರಕಾರಕ್ಕೆ ಜಮ್ಮು-ಕಾಶ್ಮೀರಕ್ಕೆ ಯಾವುದೇ ಕಾನೂನು ಜಾರಿ ಮಾಡುವ ಅಧಿಕಾರವೇ ಇರಲಿಲ್ಲ. ಏನಾದರೂ ಹೊಸ ಕಾನೂನು ಜಾರಿ ಮಾಡುವುದಿದ್ದಲ್ಲಿ ಅಲ್ಲಿನ ಶಾಸಕಾಂಗ ಸಭೆಯ ಅನುಮತಿ ಅಗತ್ಯವಾಗಿತ್ತು, ಇಲ್ಲದೇ ಹೋದಲ್ಲಿ ವಿಭಜನೆಗೂ ಪೂರ್ವ ಸ್ಥಿತಿಯನ್ನು ಜಾರಿಗೆ ತರುವ ಅಂದರೆ ಸ್ವತಂತ್ರ ರಾಷ್ಟ್ರವಾಗುವ ಒಪ್ಪಂದವಾಗಿತ್ತು. 

ಅಕ್ಟೋಬರ್ ೧೭, ೧೯೪೯ರಲ್ಲಿ ೩೭೦ ನೇ ವಿಧಿಯನ್ನು ಜಾರಿಗೆ ತರಲಾಗಿತ್ತು. ಈ ಪ್ರಕಾರ ಅಖಂಡ ಭಾರತದಿಂದ ಜಮ್ಮು-ಕಾಶ್ಮೀರ ರಾಜ್ಯವನ್ನು ಹೊರಗಿಡಲಾಯಿತು. ಈ ಕಾರಣದಿಂದ ಜಮ್ಮು-ಕಾಶ್ಮೀರ ತನ್ನದೇ ಆದ ಸಂವಿಧಾನವನ್ನು ಹೊಂದುವಂತಾಯಿತು. ಅಖಂಡ ಭಾರತದ ಕನಸು ಕಲ್ಪನೆಯಾಗಿಯೇ ಉಳಿಯಿತು. ರಕ್ಷಣೆ, ಹಣಕಾಸು ಮುಂತಾದ ವ್ಯವಹಾರಗಳಿಗೆ ಅವರಿಗೆ ಭಾರತ ಸರಕಾರದ ನೆರವು ಬೇಕಿತ್ತು ಆದರೆ ಉಳಿದ ಯಾವುದೇ ವಿಷಯಗಳಿಗೆ ಭಾರತ ಸರಕಾರ ತಲೆ ಹಾಕಬಾರದಿತ್ತು. ಇದು ಯಾವ ಸೀಮೆಯ ನ್ಯಾಯ? ಆದರೆ ಹಲವು ದಶಕಗಳಿಂದ ಇದೇ ನ್ಯಾಯ ೩೭೦ನೇ ವಿಧಿ ಪ್ರಕಾರ ಜಾರಿಯಲ್ಲಿತ್ತು. ಇದೊಂದು ತಾತ್ಕಾಲಿಕ ವಿಧಿ ಎಂದು ತಿಳಿದಿದ್ದರೂ ಅಲ್ಲಿ ಆಡಳಿತ ನಡೆಸಿದ ಸರಕಾರಗಳು ತನ್ನದೇ ಆದ ಕಾನೂನನ್ನು ರಚನೆ ಮಾಡಿ ಶಾಸಕಾಂಗದ ಅನುಮತಿಯನ್ನು ಪಡೆದುಕೊಳ್ಳುತ್ತಾ ಬಂದವು. ಕೇಂದ್ರಕ್ಕೆ ಸೀಮಿತ ಅಧಿಕಾರ ಮಾತ್ರ ದೊರೆಯುವಂತಾಯಿತು. ಅಷ್ಟೇ ಏಕೆ ದೇಶದ ಉನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ಸಹಾ ಈ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕೈಹಾಕುವಂತಿರಲಿಲ್ಲ. 

೧೯೫೦-೫೪ರ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ೩೭೦ ವಿಧಿಗೆ ಪೂರಕವಾಗಿ ೩೫ಎ ಎಂಬ ವಿಧಿಯನ್ನು ಸೇರಿಸಲಾಯಿತು. ಈ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರದ ಹೊರಗಿನವರು ಇಲ್ಲಿ ಬಂದು ಭೂಮಿಯನ್ನು ಖರೀದಿಸುವಂತಿರಲಿಲ್ಲ. ಅದೇ ರೀತಿ ಉದ್ಯೋಗವನ್ನು ಮಾಡುವುದೂ ಸಾಧ್ಯವಿರಲಿಲ್ಲ. ಆದರೆ ಜಮ್ಮು-ಕಾಶ್ಮೀರದ ನಾಗರಿಕರಿಗೆ ಭಾರತದ ಎಲ್ಲೆಡೆ ಬೇಕಾದರೂ ಉದ್ಯೋಗ ಮಾಡಬಹುದಿತ್ತು, ಆಸ್ತಿಯನ್ನು ಖರೀದಿಸಬಹುದಿತ್ತು. ಜಮ್ಮು-ಕಾಶ್ಮೀರದ ನಾಗರಿಕರಿಗೆ ಭಾರತದ ಪೌರತ್ವವೂ ಒದಗಿ ಬಂತು. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಅಧಿಕಾರವೂ ದೊರೆಯಿತು. 

ಈ ೩೭೦ ನೇ ವಿಧಿಯನ್ನು ಅನಿರೀಕ್ಷಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ೨೦೧೯ರಲ್ಲಿ ರದ್ದುಗೊಳಿಸುವ ತೀರ್ಮಾನಕ್ಕೆ ಬಂತು. ಅದರಂತೆ ಗೃಹ ಸಚಿವರಾದ ಅಮಿತ್ ಶಾ ಅವರು ಸಂಸತ್ತಿನ ಉಭಯ ಸದನಗಳಲ್ಲಿ ಈ ಮಸೂದೆಯನ್ನು ಮಂಡಿಸುವ ಮೂಲಕ ಒಪ್ಪಿಗೆಯನ್ನು ಪಡೆದುಕೊಂಡರು. ನಂತರ ರಾಷ್ಟ್ರಪತಿಗಳು ಈ ಮಸೂದೆಗೆ ಅಂಕಿತವನ್ನು ಹಾಕುವ ಮೂಲಕ ೩೭೦ನೇ ವಿಧಿ ರದ್ದಾಯಿತು. ಜಮ್ಮು-ಕಾಶ್ಮೀರವನ್ನು ವಿಧಾನ ಸಭೆ ಇರುವ ಕೇಂದ್ರಾಡಳಿತ ಪ್ರದೇಶವಾಗಿಯೂ, ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿಯೂ ಮಾಡಲಾಯಿತು. ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಕಾಲಕ್ರಮೇಣ ನೀಡುತ್ತೇವೆ ಎಂದು ಈ ಅಧ್ಯಾದೇಶದಲ್ಲಿ ತಿಳಿಸಲಾಗಿದೆ. ಇದರಂತೆ ಕಳೆದ ನಾಲ್ಕು ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ಕೇಂದ್ರದ ಆಡಳಿತವಿದೆ. ಪ್ರತೀ ದಿನ ನಡೆಯುತ್ತಿದ್ದ ಕಲ್ಲು ತೂರಾಟ, ಭಯೋತ್ಪಾದನೆಯ ಚಟುವಟಿಕೆಗಳಿಗೆ ಬಹಳಷ್ಟು ಕಡಿವಾಣ ಬಿದ್ದಿದೆ. ನಿಧಾನವಾಗಿ ಭಾರತಮಾತೆಯ ಮುಕುಟದಂತಿರುವ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಗೊಳ್ಳುತ್ತಿದೆ. ಭೂಲೋಕದ ಸ್ವರ್ಗವಾಗಿದ್ದ ಕಾಶ್ಮೀರಕ್ಕೆ ಮತ್ತೆ ಪ್ರವಾಸಿಗಳು ಬರುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮ ಚಿಗುರುತ್ತಿದೆ. ಆದಾಯ ಬರುತ್ತಿದೆ. ಹೊಸ ಹೊಸ ಖಾಸಗಿ ಹೂಡಿಕೆಗಳು ಜಮ್ಮು-ಕಾಶ್ಮೀರದಲ್ಲಿ ಮಾಡಲಾಗುತ್ತಿದೆ. ಇದರಿಂದ ನಿರೋದ್ಯೋಗ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. 

ಬರೋಬ್ಬರಿ ಮೂರು ದಶಕಗಳ ಬಳಿಕ ಕಣಿವೆ ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆಯಲ್ಪಟ್ಟಿವೆ. ಸಂಗೀತ, ಸಾಹಿತ್ಯದ ಚಟುವಟಿಕೆಗಳು ಹೆಚ್ಚುತ್ತಿವೆ. ಮೂಲಭೂತವಾದವನ್ನು ಬದಿಗೆ ಸರಿಸಿ ಹೆಣ್ಣು ಮಕ್ಕಳು ಮುಖ್ಯವಾಹಿನಿಗೆ ಬರತೊಡಗಿದ್ದಾರೆ. ಪ್ರತ್ಯೇಕವಾದಿಗಳು ಕರೆಕೊಡುತ್ತಿರುವ ಮುಷ್ಕರಗಳಿಗೆ ಜನರೇ ಬರುತ್ತಿಲ್ಲ, ಜಮ್ಮು ಕಾಶ್ಮೀರದ ಭೂಮಿ ಹೊರ ರಾಜ್ಯದವರಿಗೆ ಇಲ್ಲ ಎಂಬ ಕಾನೂನು ರದ್ದಾಗಿರುವುದರಿಂದ ಈಗಾಗಲೇ ಸುಮಾರು ಇನ್ನೂರು ಮಂದಿ ಭೂಮಿಯನ್ನು ಖರೀದಿಸಿದ್ದಾರೆ. 

೩೭೦ ವಿಧಿಯನ್ನು ರದ್ದು ಮಾಡುವ ಮಸೂದೆಯನ್ನು ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ತೆಗೆದುಕೊಂಡು ರಾಷ್ಟ್ರಪತಿಗಳ ಅಂಕಿತ ಬಿದ್ದಿದ್ದರೂ ಕೆಲವರು ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು. ಕೆಲವು ವರ್ಷಗಳ ವಾದ -ವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ತಂಡ ಕೆಲವು ದಿನಗಳ ಹಿಂದೆ ಒಮ್ಮತದ ತೀರ್ಮಾನವನ್ನು ಪ್ರಕಟಿಸಿದೆ. ಈ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ರದ್ದು ಮಾಡಿದ ಕೇಂದ್ರದ ಕ್ರಮ ಸರಿಯಾಗಿದೆ ಎನ್ನುವ ತೀರ್ಮಾನಕ್ಕೆ ಬಂದಿದೆ. ಈ ತಂಡದಲ್ಲಿ ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಇದ್ದರು. ಇವರೆಲ್ಲಾ ಸೇರಿ ಒಮ್ಮತದ ಮೂರು ಪ್ರತ್ಯೇಕ ತೀರ್ಪುಗಳನ್ನು ೪೭೬ ಪುಟಗಳಲ್ಲಿ ನೀಡಿದ್ದಾರೆ. ಅವರು ತೀರ್ಪಿನಲ್ಲಿ ಹೇಳಿದ ಪ್ರಮುಖ ಅಂಶ ಮುಂದಿನ ಸೆಪ್ಟೆಂಬರ್ ೩೦ರ ಒಳಗಾಗಿ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಿ ಅಲ್ಲಿ ಚುನಾವಣೆಗಳನ್ನು ನಡೆಸಬೇಕು ಎನ್ನುವುದಾಗಿದೆ. ಇದರ ಜೊತೆಗೆ ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ನಿಧಾರ ಸರಿಯಾದದ್ದು ಎಂದಿದ್ದಾರೆ. ಈ ಎಲ್ಲಾ ತೀರ್ಮಾನಗಳಿಂದ ಕೊನೆಗೂ ಭಾರತದ ಅಖಂಡ ಸಾರ್ವಭೌಮತೆಯ ಕಲ್ಪನೆ ನಿಜವಾಗುವತ್ತ ಸಾಗಿದೆ ಎನ್ನಬಹುದು. 

ಇನ್ನು ಭವಿಷ್ಯದಲ್ಲಾದರೂ ರಾಜಕೀಯ ಕಾರಣಗಳಿಗಾಗಿ ದೇಶವನ್ನು ಒಡೆಯುವ ಕಾರ್ಯಕ್ಕೆ ಕೈಹಾಕದೇ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಇದರಿಂದ ಜಮ್ಮು-ಕಾಶ್ಮೀರ ನಿಜಕ್ಕೂ ಭೂಲೋಕದ ಸ್ವರ್ಗವಾಗಲಿದೆ. ಸ್ವತಂತ್ರ ಭಾರತದ ಪ್ರಥಮ ಗೃಹ ಮಂತ್ರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು ಕಂಡ ಅಖಂಡ ಭಾರತದ ಕನಸು ನನಸಾಗತೊಡಗಿದೆ.     

ಚಿತ್ರ ಕೃಪೆ: ಅಂತರ್ಜಾಲ ತಾಣ