ವಿಶ್ವಕವಿ ರವೀದ್ರನಾಥ ಟಾಗೋರ್

ವಿಶ್ವಕವಿ ರವೀದ್ರನಾಥ ಟಾಗೋರ್

ಜಗತ್ತಿನ ಬಹುಪಾಲು ಜನಸಂಖ್ಯೆ ಹೊಂದಿರುವ ಏಷ್ಯಾ ಖಂಡದಲ್ಲಿ ಪ್ರಪ್ರಥಮವಾಗಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತರಾದವರು ಎಂಬ ಹೆಗ್ಗಳಿಕೆ ವಿಶ್ವಕವಿ ರವೀಂದ್ರನಾಥ ಟಾಗೋರ್ ಅವರದು.

ಕೊಲ್ಕತಾದಲ್ಲಿ ೭ ಮೇ ೧೮೬೧ರಲ್ಲಿ ಜನಿಸಿದ ಟಾಗೋರರ ೧೫೯ನೇ ಜನ್ಮ ಜಯಂತಿ ಇವತ್ತು ನಮ್ಮ ದೇಶದಲ್ಲಿ ರವೀಂದ್ರ ಜಯಂತಿಯಾಗಿ ಆಚರಿಸಲ್ಪಡುತ್ತಿದೆ. ಪಶ್ಚಿಮ ಬಂಗಾಳದ ಜನರಿಗಂತೂ ಬೈಸಾಕಿಯ ಇಂದಿನ ದಿನ ಸಂಭ್ರಮದ ದಿನ.

ಟಾಗೋರರು ಕವನಗಳನ್ನು ಮಾತ್ರವಲ್ಲ, ಹಲವಾರು ಸಣ್ಣಕತೆ, ಕಾದಂಬರಿ ಮತ್ತು ನಾಟಕಗಳನ್ನು ಬರೆದಿದ್ದಾರೆ. ಜನಸಾಮಾನ್ಯರ ಬದುಕು, ಸಾಮಾಜಿಕ ಸಂಗತಿಗಳು, ಸಾಹಿತ್ಯ ವಿಮರ್ಶೆ ಮತ್ತು ತತ್ವಶಾಸ್ತ್ರ ಅವರ ಬರಹಗಳ ಹೂರಣ.ಅವರ ಬಹುಪಾಲು ಬರವಣಿಗೆ ಮೂಲತಃ ಬಂಗಾಳಿ ಭಾಷೆಯಲ್ಲಿದೆ. ಅನಂತರ, ಪಾಶ್ಚಾತ್ಯ ದೇಶಗಳ ಜನರಿಗೂ ಅವು ಓದಲು ಲಭ್ಯವಾಗಲೆಂದು ಅವನ್ನು ಇಂಗ್ಲಿಷಿಗೆ ಅನುವಾದಿಸಲಾಯಿತು.

“ಗೀತಾಂಜಲಿ” ಕವನ ಸಂಕಲನಕ್ಕಾಗಿ "ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ”ಯಿಂದ ಅವರು ಗೌರವಿಸಲ್ಪಟ್ಟದ್ದು ೧೯೧೩ರಲ್ಲಿ. ಈ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಎಂಬ ಸಾಧನೆ ಅವರದು. ಅವರಿಗೆ ಪ್ರಶಸ್ತಿ ನೀಡಿದ ನೊಬೆಲ್ ಸಮಿತಿಯ ಹೇಳಿಕೆ ಹೀಗಿದೆ: “ಟಾಗೋರರಿಗೆ ಪ್ರಶಸ್ತಿ ನೀಡಲು ಕಾರಣ ಅವರ ಅಗಾಧ ಸಂವೇದನಾಶೀಲ, ಹೊಸತನದ ಮತ್ತು ಮನಮೋಹಕ ಕಾವ್ಯ. ಇದರ ಮೂಲಕ, ಪರಿಪೂರ್ಣ ಕೌಶಲ್ಯದಲ್ಲಿ ತನ್ನದೇ ಇಂಗ್ಲಿಷ್ ಪದಗಳಲ್ಲಿ ಅಭಿವ್ಯಕ್ತಿಸಿರುವ ಕಾವ್ಯ ಲಹರಿಯನ್ನು ಅವರು ಪಾಶ್ಚಾತ್ಯ ಸಾಹಿತ್ಯದ ಭಾಗವಾಗಿ ಮಾಡಿದ್ದಾರೆ.”

ಶಾಲೆಗಳ ಪಾಠದ ಕೋಣೆಗಳಲ್ಲಿ ನೀಡುವ ಸಾಂಪ್ರದಾಯಿಕ ಶಿಕ್ಷಣ ವಿಧಾನಗಳಿಗೆ ಸವಾಲೆಸೆದ ಟಾಗೋರರು ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ವಿಶ್ವಭಾರತಿ ವಿಶ್ವವಿದ್ಯಾಲಯ ಸ್ಥಾಪಿಸಿದರು. ಈಗಲೂ ಅಲ್ಲಿ ಹಲವು ತರಗತಿಗಳನ್ನು ಮರಗಳ ನೆರಳಿನಲ್ಲಿ ತೆರೆದ ಬಯಲಿನಲ್ಲಿ ನಡೆಸಲಾಗುತ್ತಿದೆ. ೧೯೫೧ರಲ್ಲಿ ವಿಶ್ವಭಾರತಿ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಘೋಷಿಸಲಾಯಿತು.

೨೦೧೧ರಲ್ಲಿ ಟಾಗೋರರ ೧೫೦ನೇ ಜನ್ಮ ಜಯಂತಿಯ ಸಂದರ್ಭದಲ್ಲಿ ಲಂಡನಿನ ಗೊರ್ಡನ್ ಚೌಕದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಜಗತ್ಪ್ರಸಿದ್ದ ವಿಜ್ನಾನಿ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಟಾಗೋರರದ್ದು ಅವಿನಾಭಾವ ಸಂಬಂಧ. ನೊಬೆಲ್ ಪ್ರಶಸ್ತಿ ಪುರಸ್ಕೃತದಾದ ಇಬ್ಬರೂ ಹಲವು ಬಾರಿ ಭೇಟಿಯಾಗಿದ್ದರು. ಇಬ್ಬರಿಗೂ ಸಂಗೀತದಲ್ಲಿ ಅಪ್ಪಟ ಆಸಕ್ತಿ. ಮೊದಲ ಭೇಟಿಯ ನಂತರ ಐನ್‌ಸ್ಟೀನರ ಬಗ್ಗೆ ಟಾಗೋರ್ ಹೀಗೆ ಬರೆದಿದ್ದರು: "ಅವರಲ್ಲಿ ಯಾವುದೇ ದೊಡ್ಡಸ್ತಿಕೆ ಕಾಣಿಸಲಿಲ್ಲ - ಬೌದ್ಧಿಕ ಗತ್ತು ಇರಲಿಲ್ಲ. ಅವರು ಮಾನವೀಯ ಸಂಬಂಧಗಳನ್ನು ಗೌರವಿಸುವ ವ್ಯಕ್ತಿಯಾಗಿ ಕಾಣಿಸಿದರು ಮತ್ತು ನಿಜವಾದ ಆಸಕ್ತಿ ಹಾಗೂ ಮನಗಾಣುವಿಕೆ ತೋರಿದರು.”

೧೯೧೫ರಲ್ಲಿ ರವೀಂದ್ರನಾಥ ಟಾಗೋರರಿಗೆ ಬ್ರಿಟನ್ ದೇಶ “ನೈಟ್ ಪದವಿ” ನೀಡಿತು. ಆದರೆ, ೩೧ ಮೇ ೧೯೧೯ರಂದು ಅಮೃತಸರದ ಜಲಿಯಾನಾವಾಲಾಬಾಗ್‌ನಲ್ಲಿ ಬ್ರಿಟಿಷ್ ಅಧಿಕಾರಿಗಳು ನೂರಾರು ಅಸಹಾಯಕ ಭಾರತೀಯರ ಮೇಲೆ ಗುಂಡು ಹಾರಿಸಿ ಕಗ್ಗೊಲೆ ಮಾಡಿದ್ದನ್ನು ಪ್ರತಿಭಟಿಸಿ ಟಾಗೋರರು ನೈಟ್ ಪದವಿ ಹಿಂತಿರುಗಿಸಿದರು.

ಈ ಬಗ್ಗೆ ಲಾರ್ಡ್ ಚೆಮ್ಸ್-ಫೋರ್ಡರಿಗೆ ಪ್ರತಿಭಟನಾ ಪತ್ರದಲ್ಲಿ ಟಾಗೋರ್ ಹೀಗೆ ಬರೆದಿದ್ದರು: "ಈಗಿನ ದೈನೇಸಿ ಸ್ಥಿತಿಯ ಅಸಂಬದ್ಧ ಸನ್ನಿವೇಶದಲ್ಲಿ, ಈ ಗೌರವದ ಬ್ಯಾಜುಗಳು ನಮ್ಮ ಅವಮಾನವನ್ನು ಎದ್ದು ಕಾಣುವಂತೆ ಮಾಡುತ್ತವೆ. ನಾನು ಎಲ್ಲ ವಿಶೇಷ ಗೌರವಗಳನ್ನು ತ್ಯಜಿಸಿ, ತಮ್ಮ ನಿಕೃಷ್ಟ ಸ್ಥಿತಿಯಿಂದಾಗಿ, ಮನುಷ್ಯರಿಗೆ ಯೋಗ್ಯವಲ್ಲದ ತೇಜೋವಧೆ ಅನುಭವಿಸ ಬೇಕಾಗಿರುವ ನನ್ನ ದೇಶಬಾಂಧವರ ಜೊತೆಗೆ ನಿಲ್ಲಲು  ಬಯಸುತ್ತೇನೆ."

ಅಬ್ಬ, ನಮ್ಮ ದೇಶಕ್ಕೆ ರಾಷ್ಟ್ರಗೀತೆಯನ್ನು ನೀಡಿದ ವಿಶ್ವಕವಿಯಿಂದ ಎಂತಹ ಧೀರೋದಾತ್ತ ಮಾತು!

ಫೋಟೋ ಕೃಪೆ: ವಿಕಿಪಿಡಿಯಾ