ವಿಶ್ವತೋಮುಖ

ವಿಶ್ವತೋಮುಖ

ಪುಸ್ತಕದ ಲೇಖಕ/ಕವಿಯ ಹೆಸರು
ಕಿರಣ್ ಉಪಾಧ್ಯಾಯ
ಪ್ರಕಾಶಕರು
ವಿಕಿ ಬುಕ್ಸ್, ಹುಬ್ಬಳ್ಳಿ ರಸ್ತೆ, ಗೌಡಳ್ಳಿ, ಸಿರಸಿ - ೫೮೧೩೫೮
ಪುಸ್ತಕದ ಬೆಲೆ
ರೂ. ೩೫೦.೦೦, ಮುದ್ರಣ: ೨೦೨೨

ಹಿರಿಯ ಪತ್ರಕರ್ತ ಹಾಗೂ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಬಗ್ಗೆ ಅವರ ಅಭಿಮಾನಿಯೂ, ಆ ಪತ್ರಿಕೆಯ ಅಂಕಣಕಾರರೂ, ಬಹ್ರೈನ್ ನಿವಾಸಿಯೂ ಆಗಿರುವ ಕಿರಣ್ ಉಪಾಧ್ಯಾಯ ಇವರು ಬರೆದ ಪುಸ್ತಕವೇ ‘ವಿಶ್ವತೋಮುಖ'. ಪುಸ್ತಕ ಎಷ್ಟು ಸೊಗಸಾಗಿ ಮುದ್ರಿತವಾಗಿದೆ ಎಂದರೆ ನೋಡಿದ ಕೂಡಲೇ ಕೈಯಲ್ಲಿ ಹಿಡಿದು ಮುಟ್ಟಿ ಮುಟ್ಟಿ ನೋಡುವ ಆಸೆಯಾಗುತ್ತದೆ. ಬಹಳ ಸುಂದರ ಮುದ್ರಣ ಹಾಗೂ ಮುದ್ರಣಕ್ಕೆ ಬಳಸಿದ ಪೇಪರ್. ಈ ವಿಷಯವನ್ನು ಪುಸ್ತಕಕ್ಕೆ ‘ಶ್ರೀ ನುಡಿ' ಗಳನ್ನು ಬರೆದ ಸುತ್ತೂರು ಮಠಾಧೀಶರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬರೆದ ವಾಕ್ಯವು ಅನುಮೋದಿಸುತ್ತದೆ “ಕೃತಿಯ ಮುದ್ರಣ ವಿನ್ಯಾಸ ಸೊಗಸಾಗಿದೆ. ಇತ್ತೀಚೆಗೆ ಕನ್ನಡದಲ್ಲಿ ಪ್ರಕಟವಾದ ಸುಂದರ ಪುಸ್ತಕಗಳಲ್ಲಿ ಇದು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಇಂಥದೊಂದು ರುಚಿಶುದ್ಧಿಯುಳ್ಳ ಪುಸ್ತಕವನ್ನು ಹೊರತರುತ್ತಿರುವುದು ಅಭಿನಂದನೀಯ.” ಈ ವಾಕ್ಯಗಳು ಪುಸ್ತಕದ ಹೊರ ನೋಟದ ಬಗ್ಗೆ ಎಲ್ಲವನ್ನೂ ಹೇಳಿ ಬಿಡುತ್ತದೆ.

ವಿಶ್ವೇಶ್ವರ ಭಟ್ ಅವರನ್ನು ಹಿಂಬಾಲಿಸುತ್ತಾ (ವಿಜಯ ಕರ್ನಾಟಕ ಮತ್ತು ಕನ್ನಡ ಪ್ರಭ ಕಾಲದಿಂದ) ಹಾಗೂ ಅವರ ಪತ್ರಿಕೆಯನ್ನು ನೋಡುತ್ತಾ, ಓದುತ್ತಾ ಬಹುತೇಕರಿಗೆ ಅವರು ನಮ್ಮವರೇ ಎಂಬ ಭಾವನೆ ಬಂದಿರುತ್ತದೆ. ಇದು ಸಹಜ ಕೂಡ. ಈ ಕಾರಣದಿಂದಾಗಿ ಅವರ ಬಗ್ಗೆ ಓದುಗರಿಗೆ ಬಹಳಷ್ಟು ತಿಳಿದೇ ಇರುತ್ತದೆ ಮತ್ತು ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅದೇ ಕಾರಣದಿಂದ ಅವರ ಬಗ್ಗೆ ತಿಳಿಯದ ಇನ್ನಷ್ಟು ಅಪರೂಪದ ವಿಷಯಗಳನ್ನು ಬಹಳ ಪುಟ್ಟದಾಗಿ ಕಟ್ಟಿಕೊಡುವ ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಕಿರಣ್ ಉಪಾಧ್ಯಾಯ ಇವರು. ವಿಶ್ವವಾಣಿಯಲ್ಲಿ ಪ್ರತೀ ಸೊಮವಾರ ‘ವಿದೇಶವಾಸಿ' ಅಂಕಣವನ್ನು ಬರೆಯುವ ಕಿರಣ್ ಉಪಾಧ್ಯಾಯ ಇವರು ವಿಶ್ವೇಶ್ವರ ಭಟ್ ಅವರನ್ನು ಹತ್ತಿರದಿಂದ ಬಲ್ಲವರು. ಈ ಕಾರಣದಿಂದ ಈ ಪುಸ್ತಕ ಮಹತ್ವ ಪಡೆಯುತ್ತದೆ. ಒಂದು ವ್ಯಕ್ತಿಯ ಬಗ್ಗೆ ಪರಿಚಯ ಬರೆಯುವುದೆಂದರೆ ಅದೊಂದು ರೀತಿಯ ಬೃಹತ್ ಅಭಿನಂದನಾ ಗ್ರಂಥವಾಗುವುದು ಸಹಜ. ಆದರೆ ಕೆಲವೇ ಪುಟಗಳಲ್ಲಿ ಒಂದು ಬೃಹತ್ ವ್ಯಕ್ತಿತ್ವದ ಅನಾವರಣ ಮಾಡಿಕೊಡುವುದು ಬಹಳ ಕಷ್ಟಕರವಾದ ಕೆಲಸ. ಆ ಕೆಲಸಕ್ಕೆ ಕೈ ಹಾಕಿದ್ದು ಕಿರಣ ಅವರ ಧೈರ್ಯತನವೆಂದೇ ಹೇಳಬೇಕಾಗಿದೆ. ‘ವಿಶ್ವ ವೈಶಿಷ್ಟ್ಯ' ದ ಯಾವುದೇ ಅಧ್ಯಾಯ ಎರಡು ಪುಟಗಳನ್ನು ಮೀರಿಲ್ಲ. ಆ ಎರಡು ಪುಟಗಳಲ್ಲೇ ವಿಶ್ವೇಶ್ವರ ಭಟ್ಟರ ಒಂದೊಂದು ಗುಣ-ವಿಶೇಷತೆಗಳನ್ನು ಹರಡುತ್ತಾ ಹೋಗಿದ್ದಾರೆ ಕಿರಣ್. ಪ್ರತೀ ಅಧ್ಯಾಯದ ಕೊನೆಗೆ ಅಪರೂಪದ ಫೋಟೋವೊಂದನ್ನು ಮುದ್ರಿಸಿದ್ದಾರೆ. 

ಪುಸ್ತಕಕ್ಕೆ ‘ಶುಭ ನುಡಿ’ ಬರೆದಿದ್ದಾರೆ ಮೈಸೂರಿನ ಸಂಸ್ಕೃತ ವಿದ್ವಾಂಸರಾದ ಗ.ನಾ.ಭಟ್ಟ ಇವರು. ಇವರು ತಮ್ಮ ನುಡಿಯಲ್ಲಿ “ವಿಶ್ವೇಶ್ವರ ಭಟ್ಟರು ಪತ್ರಿಕಾ ಪ್ರಪಂಚದ ಒಬ್ಬ ದೈತ್ಯ. ಪತ್ರಿಕೋದ್ಯಮದ ಮೇರು. ಅವರೊಂದು ವಿಸ್ಮಯ. ಅವರೊಬ್ಬ ಹೊಸತನದ ಹರಿಕಾರ. ಇಂದಿನ ಪತ್ರಿಕೋದ್ಯಮದಲ್ಲಿ ಭಟ್ಟರನ್ನು ಮಹಾಭಾರತದ ಅರ್ಜುನನಿಗೆ ಹೋಲಿಸಬಹುದು. ಆ ಕಾಲದಲ್ಲಿ ಅರ್ಜುನನಿಗೆ ಬಿಲ್ವಿದ್ಯೆಯಲ್ಲಿ ಸರಿಸಾಟಿಯಾದ ವ್ಯಕ್ತಿಯೇ ಇರಲಿಲ್ಲ. ಹಾಗೆಯೇ ಈ ಕಾಲದಲ್ಲಿ ಭಟ್ಟರಿಗೆ ಸರಿಸಮನಾದ ಪತ್ರಕರ್ತರಿಲ್ಲ. ಭಟ್ಟರು ಒಬ್ಬ ಸಂಪಾದಕನಾಗಿ ಅತಿ ಹೆಚ್ಚು ಬರೆದವರು ; ಅತಿ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದವರು; ಅತಿ ಹೆಚ್ಚು ವಿದೇಶ ಪ್ರವಾಸ ಮಾಡಿದವರು ; ವೈವಿಧ್ಯಮಯ ಆಸಕ್ತಿ - ಅಭಿರುಚಿ ಉಳ್ಳವರು. ಈ ನಿಟ್ಟಿನಲ್ಲಿ ಅವರಿಗೆ ಅವರೇ ಸರಿಸಾಟಿ.

ಭಟ್ಟರು ಬರೆಯುವ ಅಂಕಣಗಳು ಯಾವುದೋ ಒಂದು ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿರುವುದಿಲ್ಲ. ರಾಜಕೀಯ, ಸಾಂಸ್ಕೃತಿಕ, ಕೌಟುಂಬಿಕ, ಹಾಸ್ಯ, ಹೊಸ ಪುಸ್ತಕಗಳ ಪರಿಚಯ, ಜಗತ್ತಿನ ಸ್ವಾರಸ್ಯಕರ ಘಟನೆಗಳು, ವ್ಯಕ್ತಿ ಪರಿಚಯ, ಅನುವಾದ ಕೃತಿಗಳ ಪರಿಚಯ, ಊಟ-ತಿಂಡಿ, ಮಠ-ಮಾನ್ಯ, ಮನುಷ್ಯ ಸ್ವಭಾವಗಳ ವಿರಾಟ್ ರೂಪ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಅದು ತೆರೆದುಕೊಳ್ಳುತ್ತದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪುಸ್ತಕದ ಲೇಖಕರಾದ ಕಿರಣ್ ಉಪಾಧ್ಯಾಯ ಅವರು ವಿಶ್ವೇಶ್ವರ ಭಟ್ಟರನ್ನು ತಮ್ಮ ಗುರುಗಳು ಎಂದು ಕರೆದಿದ್ದಾರೆ. ಅವರು ತಮ್ಮ ‘ನನ್ನುಡಿ' ಯಲ್ಲಿ ಈ ರೀತಿ ಬರೆದಿದ್ದಾರೆ “‘ವಿಶ್ವತೋಮುಖ' ಎಂಬ ಪದಕ್ಕೆ ‘ಎಲ್ಲ ದಿಕ್ಕುಗಳು' ಎಂಬ ಅರ್ಥವಿದೆ. ಈ ಪುಸ್ತಕ ಭಟ್ಟರ ವ್ಯಕ್ತಿತ್ವದ ಎಲ್ಲ ಆಯಾಮಗಳನ್ನು ಪರಿಚಯಿಸುವ ಪ್ರಯತ್ನ. ಆದರೆ ಒಂದಂತೂ ನಿಜ, ಈ ಪುಸ್ತಕದಲ್ಲಿನ ವಿಷಯಗಳು ‘ವಿಶ್ವೇಶ್ವರ ಭಟ್' ಎಂಬ ಮಾಂತ್ರಿಕನ ವ್ಯಕ್ತಿತ್ವದ ಶರಧಿಯ ಒಂದು ಬಿಂದುವಿನ ಲವದ ಲೇಶ ಮಾತ್ರ. ನಮ್ಮ ಜೀವನದಲ್ಲಿ ಒಂದು ಅಕ್ಷರ ಕಲಿಸಿದವನೂ ಗುರುವಿನ ಸ್ಥಾನ ಪಡೆಯುತ್ತಾನಂತೆ. ಹಾಗಾದರೆ ಸಾಲು ಸಾಲು ಅಂಕಣವನ್ನೇ ಬರೆಸಿದವರಿಗೆ ಏನನ್ನೋಣ? ಮಹಾನ್ ಗುರು, ಗುರುವರೇಣ್ಯ ಎಂಬ ಪದಗಳನ್ನು ಅಲಂಕಾರಕ್ಕಾಗಿ ಬಳಸಬಹುದಾದರೂ, ಪ್ರಧಾನವಾಗಿರುವುದು ‘ಗುರು' ಎಂಬ ಪದವೇ. ಅಕ್ಷರವನ್ನೇ ಉಸಿರಾಗಿಸಿಕೊಂಡು, ತಾನೂ ಬರೆಯುತ್ತ, ಬೇರೆಯವರಿಂದಲೂ ಬರೆಯಿಸುತ್ತಿರುವ ವಿಶ್ವೇಶ್ವರ ಭಟ್ಟರಿಗೆ ಅಕ್ಕರೆಯ ಅಕ್ಷರ ಸಮರ್ಪಣೆ ಈ ಕಿರು ಹೊತ್ತಗೆ."

ವಿಶ್ವೇಶ್ವರ ಭಟ್ಟರ ಹುಟ್ಟಿನಿಂದ ಹಿಡಿದು ಅವರ ವಿದ್ಯಾಭ್ಯಾಸ, ಪತ್ರಿಕೋದ್ಯಮ, ಕುಟುಂಬ, ವಿದೇಶಯಾತ್ರೆಗಳು, ಕನಸುಗಳು, ಸಾಧನೆಗಳು ಇವುಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತಾ ಹೋಗುತ್ತದೆ ಈ ಪುಸ್ತಕ. ಪುಸ್ತಕದ ‘ನೆನಪಿನ ಅಂಗಳ'ದಲ್ಲಿ ವಿಶ್ವೇಶ್ವರ ಭಟ್ ಅವರ ಜೀವನದ ಬಗ್ಗೆ ಮಾಹಿತಿ ನೀಡುವ ಭಾವಚಿತ್ರಗಳಿವೆ. ಇದರ ಜೊತೆಗೆ ದಾರಿ ದೀಪೋಕ್ತಿ, ವಕ್ರತುಂಡೋಕ್ತಿ, ಭಟ್ಟರ್ ಸ್ಕಾಚ್ ಹಾಗೂ ಸಂಪಾದಕರ ಸದ್ಯಶೋಧನೆ ಗಳ ತುಣುಕುಗಳಿವೆ. ವಿಶ್ವೇಶ್ವರ ಭಟ್ಟರೇ ಗೀಚಿದ ಚಿತ್ರಗಳೂ ಪುಸ್ತಕದ ಪುಟಗಳನ್ನು ಅಲಂಕರಿಸಿವೆ. ಒಟ್ಟಿನಲ್ಲಿ ಹೇಳುವುದಾದರೆ ಇದೊಂದು ಬಹಳ ಅಚ್ಚುಕಟ್ಟಾದ ಪುಸ್ತಕ. ಪ್ರತೀ ಪುಟಗಳನ್ನು ಬಹಳಷ್ಟು ಆಸ್ಥೆಯಿಂದ ಅಲಂಕರಿಸಲಾಗಿದೆ. ಎಲ್ಲವನ್ನೂ ಓದಿದ ಬಳಿಕವೂ ವಿಶ್ವೇಶ್ವರ ಭಟ್ಟರ ಬಗ್ಗೆ ಇನ್ನೂ ಏನೋ ಬಿಟ್ಟು ಹೋಗಿದೆಯಲ್ಲಾ ಎಂದು ಅನಿಸುವುದು ಸಹಜ. ಏಕೆಂದರೆ ಕಿರಣ್ ಉಪಾಧ್ಯಾಯರು ಸಾಗರದಿಂದ ಒಂದು ಲೋಟ ನೀರನ್ನು ಮಾತ್ರ ತೆಗೆಯುವ ಪ್ರಯತ್ನ ಮಾಡಿದ್ದಾರೆ ಅಷ್ಟೇ. 

ಕಿರಣ್ ಅವರು ಪುಸ್ತಕವನ್ನು ವಿಶ್ವೇಶ್ವರ ಭಟ್ ಅವರ ಆಯಿ ಶ್ರೀಮತಿ ಗಿರಿಜಾ ಭಟ್ ಅವರಿಗೆ ಅರ್ಪಣೆ ಮಾಡಿದ್ದಾರೆ. ೨೦೦ ಪುಟಗಳ ಈ ಪುಸ್ತಕವನ್ನು ನೀವು ಕೈಗೆತ್ತಿಕೊಂಡರೆ ಓದಿ ಮುಗಿಸಲು ಬಹಳ ಸಮಯವೇನೂ ಬೇಕಾಗದು ಎಂದು ನನ್ನ ಭಾವನೆ.