ವಿಶ್ವದ ಮದ ಮಾಯಾ ಸುಂದರಿ...

ವಿಶ್ವದ ಮದ ಮಾಯಾ ಸುಂದರಿ...

ಕವನ

ವಿಶ್ವದ ಮದ ಮೋಹ ಮಾಯಾ ಸುಂದರಿ ಇವಳು

ಜಗದಲಿ ಎಂತಹ ಕುಪ್ರಸಿದ್ಧಿಯನು ಪಡೆದವಳು!

 

ಯಾರನೂ ಬಿಡದೆ ಬಣ್ಣದ ಸೆರಗ ಹಾಸಿದವಳು

ಯುವ ಪೀಳಿಗೆಯನೇ ಕೈ ಬೀಸಿ ಬೀಸಿ ಕರೆದವಳು

ಒಮ್ಮೆ ಇವಳ ಕಡು ಕಾಕ ಪಾಕ ದೃಷ್ಟಿಗೆ ಬಿದ್ದವರು

ಬಿಡುಗಡೆಯೆಂಬ ಪದದ ಅರ್ಥವನೇ ಕಾಣದವರು

 

ಅದೇನು ಮದವುಕ್ಕಿಸುವ ಚೆಲುವೋ ಗೆಳೆಯಾ

ಸದಾ ಕಲಕಲ ಎಂದು ನಗುತ ಹರಿಯುವವಳು

ಪ್ರತಿ ಗ್ಲಾಸಿನಲೂ ಮಿರ ಮಿರ ಮಿಂಚುವವಳು

ಹೊಂಬಣ್ಣವ ಹೊರ ಸೂಸಿ ಘಂ ಎನುವವಳು

 

ಎಲ್ಲ ಇವಳನೇ ಎರಡನೆಯ ಹೆಂಡತಿ ಎನ್ನುವವರೇ

ಇವಳೇ ಸದ್ದಿಲ್ಲದೆ ಮೋಹ ಮದ ಆವರಿಸುವವಳು

ಪಾರ್ಟಿಯ ಮೋಜು ಮಸ್ತಿ ಕುಸ್ತಿಯ ಹೆಸರಿನಲಿ

ಇಡೀ ರಾತ್ರಿಯನೇ ಮತ್ತಿನಲಿ ಬೆಚ್ಚಗಿರಿಸುವವಳು

 

ಅತಿರಥ ಮಹಾರಥರನೇ ಅಡ್ಡಡ್ಡ ಬೀಳಿಸಿದವಳು

ನವ್ಯ ನವ್ಯೋತ್ತಮರೆಂಬ ಭಾವವ ಬೆರೆಸಿದವಳು

ಸಭ್ಯತೆಯ ಸೋಗಿನ ಹೊಸ ಬಟ್ಟೆ ಧರಿಸುವವಳು

ಒಮ್ಮೆ ತೆಕ್ಕೆಗೆ ಬಿದ್ದರೆ ಬಂಧನದ ತಂತ್ರ ಹೆಣೆವವಳು

 

ನೀ ಬಾ ತಾಯಿ ಎಂದು ಕರೆಯದೇ ಬಂದವಳು

ಒಲ್ಲದ ಸ್ನೇಹಿತರನೂ ಬಳಿ ಸಾರಿ ಸಾರಿ ಕರೆವವಳು

ಭಾರ್ಯೆ ಕೂಗಿಗೂ ಯಾವ ಸೊಪ್ಪೂ ಹಾಕದವಳು

ಅವರವರ ಸಾಧನೆಗೂ ಮೋಜ ಮೆರಗ ತಂದವಳು

 

ಸ್ವರ್ಗ ಲೋಕದಿಂದಲೇ ನೇರ ಧರೆಗೆ ಇಳಿದವಳಿವಳು

ಇಂದ್ರನಾದಿಯಾಗಿ ಪ್ರಮುಖ ನೆಲೆ ಆಕ್ರಮಿಸಿದವಳು

ವಿಚ್ಛೇದನಕೇ ಪ್ರತಿ ಸೆಡ್ಡು ಹೊಡೆದು ನಿಂತವಳಿವಳು

ಈ ಜಗದಲಿ ನೀನದೆಂತಹ ಮೋಹ ಪಾಶ ಸುಂದರಿಯೆ?

 

ಓ ಮದ ಸುಂದರಿಯೇ ಕೊನೆಯವರೆಗೂ ಕಾಡಿದವಳೇ

ಕೊನೆಗೂ ಪಾಶ್ಚಾತ್ತಾಪದ ಸುಳಿಗೆ ಸಿಲುಕದವಳೇ...

ಅಂತ್ಯದಲಿ ಕಾಯಿಲೆ ಕೂಪಕೆ ತಳ್ಳಿ ಹೊರಡುವವಳೇ

ಮತ್ತದೇ ಗತ್ತಲಿ ಹೊಸ ಬೇಟೆ ಸಂಚಿಗೆ ತೆರಳುವವಳೆ..!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್