ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

ಬರಹ

(ಇ-ಲೋಕ-40)(17/9/2007)

ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ.ವಿಶ್ವದ ಅತಿಮಲಿನ ಸ್ಥಳಗಳ ಪಟ್ಟಿ ಪ್ರಕಟವಾಗಿದೆ.ದುರಂತವೆಂದರೆ,ಈ ಪಟ್ಟಿಯಲ್ಲಿ ಭಾರತದ ಎರಡು ಸ್ಥಳಗಳು ಸ್ಥಾನ ಪಡೆದಿವೆ.ಸುಕಿಂದ ಕ್ರೊಮಿಯಮ್ ಗಣಿಗಾರಿಕೆಯಿಂದ ನೀರು ಮಲಿನವಾಗಿದೆಯಂತೆ.ಇಲ್ಲಿನ ಕೆಲಸಗಾರರು ಅದೇ ನೀರನ್ನು ಕುಡಿಯಲು,ದೈನಂದಿನ ಕೆಲಸಗಳಿಗೆ ಬಳಸುವುದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಾರೆ.ಜತೆಗೆ ಬಂಜೆತನ,ವಿಕಲಾಂಗ ಮಕ್ಕಳ ಜನನ ಸಾಮಾನ್ಯ.ಪ್ರಸಿದ್ಧ ಟಾಟಾ ಸ್ಟೀಲ್ ಕಂಪೆನಿ ಈ ಗಣಿಯನ್ನು ನಡೆಸುತ್ತಿದೆ.ಜಂಶದ್‍ಪುರದ ಬಳಿ ಈ ಗಣಿಗಳಿವೆ.ಗುಜರಾತಿನ ವಪಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಂದು ಪಟ್ಟಣ.ಇದಕ್ಕೆ ಕಾರಣವಾಗಿರುವುದು ನೀರಿನ ಮಾಲಿನ್ಯವೇ ಆಗಿದೆ.ಈ ನಗರದಲ್ಲಿರುವ ಅಪಾರ ಸಂಖ್ಯೆಯ ಕೈಗಾರಿಕೆಗಳು ರಾಸಾಯಿನಿಕ,ಕ್ರಿಮಿನಾಶಕಗಳು,ಬಣ್ಣಗಳ ತಯಾರಿಯಲ್ಲಿ ತೊಡಗಿದ್ದು,ಇಲ್ಲಿನ ನೀರಿನ ಮೂಲಗಳು ಮಲಿನವಾಗಲು ಕಾರಣವಾಗಿವೆ.ಇಲ್ಲಿ ಲಭ್ಯ ನೀರಿನಲ್ಲಿ ಪಾದರಸದ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ತೊಂಭತ್ತಾರು ಪಟ್ಟು ಹೆಚ್ಚು! ಈ ಪಟ್ಟಿಯಲ್ಲಿ ರಷ್ಯಾದ ನಾಲ್ಕು ಸ್ಥಳಗಳು ಇವೆ.ಬ್ಲಾಕ್‍ಸ್ಮಿತ್ ಇನ್ಸ್‍ಸ್ಟಿಟ್ಯೂಟ್ ಎನ್ನುವ ಸ್ವತಂತ್ರ ಪರಿಸರ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ಈ ಪಟ್ಟಿಯನ್ನು ತಯಾರಿಸಲಾಗಿದೆ.ಕಲ್ಲಿದ್ದಲು ಗಣಿಗಳ ಕಾರಣ ಮಲಿನವಾಗಿರುವ ಎರಡು ಚೀನಾದ ಪಟ್ಟಣಗಳೂ ಪಟ್ಟಿಯಲ್ಲಿ ಸೇರಿವೆ.

ಗುಂಡು ನಿರೋಧಕ ಶಾಲಾ ಚೀಲ

ಭಾರತದಲ್ಲಿ ಶಾಲಾ ಮಕ್ಕಳು ಶಿಕ್ಷಕರ ದೌರ್ಜನ್ಯಕ್ಕೆ ತುತ್ತಾಗುವುದು ಹೆಚ್ಚಾಗುತ್ತಿದೆ.ಅಮೆರಿಕದಲ್ಲಿ ಹಾಗಿಲ್ಲ.ಬದಲಾಗಿ ಅಲ್ಲಿ ಶಾಲೆಗಳಲ್ಲಿ ಹಿಂಸಾ ಪ್ರಕರಣಗಳು ನಡೆಯುತ್ತವೆ.ಮಕ್ಕಳು ಬೇಕಾಬಿಟ್ಟಿ ಗುಂಡೆಸೆಯುವುದು,ಇರಿಯುವಂತಹ ಘಟನೆಗಳು ನಡೆಯುವುದಿದೆ.ಕೊಲಂಬಿಯಾದಲ್ಲಿ 1999ದಲ್ಲಿ ನಡೆದ ಗುಂಡೆಸೆತ ಪ್ರಕರಣದಿಂದ ಚಿಂತಿತರಾದ ಈರ್ವರು ಹೆತ್ತವರು ಮಕ್ಕಳನ್ನು ಇಂತಹ ಘಟನೆಗಳಿಂದ ರಕ್ಷಿಸಲು ಉಪಯುಕ್ತವಾದ ಗುಂಡು ನಿರೋಧಕ ಚೀಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.ಈ ಬ್ಯಾಗನ್ನು ಶರೀರದ ಅಡ್ಡ ಹಿಡಿದು ಗುಂಡೆಸೆತದಿಂದ ಬಚಾವಾಗಬಹುದಂತೆ.ಹಾಗೆಯೇ ಇದನ್ನು ಬೆನ್ನಿಗೆ ನೇತು ಹಾಕಿಕೊಂಡರೆ,ಹಿಂದಿನಿಂದ ಬಂದು ಇರಿಯುವ ಪ್ರಕರಣ ನಡೆದರೆ ರಕ್ಷಣೆ ಸಿಗುತ್ತದೆ.ಚೀಲವನ್ನು ಶಾಲೆಯಲ್ಲೂ ತೆಗೆದಿರಿಸುವುದರಿಂದ ಗುಂಡು ನಿರೋಧಕ ಚೀಲಗಳಿಂದ ಪ್ರಯೋಜನ ಸಿಗದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.ಈ ಚೀಲ ನೂರೆಪ್ಪತ್ತೈದು ಡಾಲರಿಗೆ ಮಾರಾಟವಾಗುತ್ತಿದೆ.ಮಕ್ಕಳು ಬಂದೂಕ,ಚೂರಿಯನ್ನು ಶಾಲೆಗೆ ತರುವುದನ್ನು ತಡೆಯಲು ಪಾರದರ್ಶಕ ಶಾಲಾ ಚೀಲಗಳನ್ನು ಕಡ್ಡಾಯಗೊಳಿಸಿದ ಶಾಲೆಗಳೂ ಅಲ್ಲಿವೆ!

ಸೆಲ್‍ಪೋನ್ ಸ್ಥಳೀಯ ಕರೆಗಳನ್ನು ಉಚಿತವಾಗಿಸುವ ತಾಂತ್ರಿಕತೆ

ನೆಟ್‍ವರ್ಕ್ ಲಭ್ಯವಿಲ್ಲದ ಕಡೆ ಸಮೀಪದಲ್ಲೇ ಇರುವ ಇನ್ನೊಂದು ಮೊಬೈಲಿಗೆ ಕರೆ ಮಾಡಬೇಕೇ? ಇಂತಹ ಒಂದು ಪೋನಿನಿಂದ ಇನ್ನೊಂದಕ್ಕೆ ನೇರ ಕರೆ ಮಾಡುವ ಸಮಾನಸ್ಕಂಧರ ನಡುವಣ ಕರೆ ಮಾಡುವ ತಾಂತ್ರಿಕತೆಯನ್ನು ಟೆರಾನೆಟ್ ಎನ್ನುವ ಸ್ವೀಡಿಶ್ ಕಂಪೆನಿ ಅಭಿವೃದ್ಧಿ ಪಡಿಸಿದೆ.ಈ ತಾಂತ್ರಿಕತೆಯು ಕಂಪ್ಯೂಟರ್ ಜಾಲಗಳಲ್ಲಿ ವಿಡಿಯೊ,ಸಂಗೀತ ಮತ್ತಿತರ ಕಡತಗಳ ವಿತರಣೆಗೆ ಬಳಕೆಯಾಗುತ್ತಿದೆ.ಸೆಲ್‍ಪೋನಿನಿಂದ ಈ ತೆರನ ಕರೆ ಮಾಡಿದಾಗ,ಅದು ತನ್ನ ಸುತ್ತ ಬೇಕಾದ ನಂಬರಿನ ಮೊಬೈಲ್‍ನ ಸಂಕೇತ ಬರುತ್ತಿದೆಯೇ ಎಂದು ಪರೀಕ್ಷಿಸುತ್ತದೆ.ಬರುತ್ತಿದ್ದರೆ,ಆ ಪೋನಿಗೆ ಸಂಕೇತ ರವಾನಿಸಿ,ಕರೆಯೇರ್ಪಡುತ್ತದೆ.ಒಂದು ವೇಳೆ ಆ ನಂಬರಿನ ಫೋನ್ ಇಲ್ಲವಾದರೆ,ಲಭ್ಯವಿರುವ ಇತರ ಪೋನುಗಳ ಮೂಲಕ ಸಂಕೇತಗಳನ್ನು ದೂರಕ್ಕೆ ರವಾನಿಸಿ,ಕರೆಯೇರ್ಪಡಿಸುವ ಪ್ರಯತ್ನ ನಡೆಯುತ್ತದೆ.ಪ್ರತಿ ಮೊಬೈಲ್ ಕೂಡಾ ತನ್ನ ಸುತ್ತಲಿನ ಒಂದು ಕಿಲೋಮೀಟರ್ ತ್ರಿಜ್ಯದ ಪ್ರದೇಶಕ್ಕೆ ಸಂಕೇತಗಳನ್ನು ರವಾನಿಸಬಲ್ಲುದು.ಇತರ ಮೊಬೈಲುಗಳ ಸಹಾಯ ಪಡೆದು,ಜಾಲವೇರ್ಪಡಿಸಿಕೊಂದು ಕರೆಗಳನ್ನು ದೂರದಲ್ಲಿರುವ ಮೊಬೈಲುಗಳಿಗೆ ಮಾಡುವ ಪ್ರಯತ್ನ ಇಲ್ಲಿ ನಡೆಯುತ್ತದೆ.ಕಂಪೆನಿಯ ನೆಟ್‍ವರ್ಕ್‍ನ ಸಹಾಯ ಪಡೆಯದೆ ಈ ಕರೆ ಮಾಡಲಾಗುವ ಕಾರಣ,ಕರೆಗೆ ಶುಲ್ಕವಿರದು.ಹಳ್ಳಿಗಾಡಿನ ಪ್ರದೇಶಗಳಲ್ಲಿ ಈ ತಾಂತ್ರಿಕತೆ ಹೆಚ್ಚು ಉಪಯುಕ್ತವಾಗಲಿದೆ. ಮೊಬೈಲ್ ವ್ಯಾಪ್ತಿಯಿಲ್ಲದೆ,ಜನರಲ್ಲಿ ಮೊಬೈಲ್ ಸಾಧನ ಇದ್ದಾಗಲಷ್ಟೇ ತಂತ್ರಜ್ಞಾನ ಪ್ರಯೋಜನಕಾರಿ.ಕರೆಗಳ ಒತ್ತಡ ಹೆಚ್ಚಿದ್ದರೆ ವ್ಯವಸ್ಥೆ ವಿಫಲವಾಗಬಹುದು.ಆದರೆ ಹಳ್ಳಿಗಾಡಿನ ಸ್ಥಳಗಳಲ್ಲಿ ಅಧಿಕ ಕರೆಗಳ ಒತ್ತಡ ಏರ್ಪಡುವ ಸಾಧ್ಯತೆ ಕಡಿಮೆ ತಾನೇ?ಇಂತಹ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಸೆಲ್‍ಕಂಪೆನಿಗಳಿಗೆ ಉತ್ಸಾಹ ಇಲ್ಲ.ಆದಾಯಕ್ಕೆ ಕೊರೆಯೊಡ್ಡುವ ತಾಂತ್ರಿಕತೆಯನ್ನು ಅವೇಕೆ ಬಯಸುತ್ತವೆ?

ಖಾಸಗಿ ಚಂದ್ರಾಯಾನದ ಸ್ಪರ್ಧೆ

ಗೂಗಲ್ ಮತ್ತು ಎಕ್ಸ್-ಸ್ಪೇಸ್ ಫೌಂಡೇಶನ್ ಎಂಬ ಸಂಸ್ಥೆಗಳು ಜಂಟಿಯಾಗಿ ಖಾಸಗಿ ಚಂದ್ರಾಯಾನ ಕೈಗೊಳ್ಳಲು ಪ್ರೋತ್ಸಾಹಿಸಲೋಸುಗ ಸ್ಪರ್ಧೆ ಏರ್ಪಡಿಸಿವೆ.2012ರ ವರೆಗೆ ತೆರೆದಿರುವ ಸ್ಪರ್ಧೆಯ ಪ್ರಥಮ ಬಹುಮಾನ ಇಪ್ಪತ್ತು ದಶಲಕ್ಷ ಡಾಲರುಗಳು.ಐದು ದಶಲಕ್ಷ ಡಾಲರಿನ ದ್ವಿತೀಯ ಬಹುಮಾನವೂ ಇದೆ.ಬಹುಮಾನ ಪಡೆಯಲು ಚಂದ್ರನಲ್ಲಿಗೆ ಬಾಹ್ಯಾಕಾಶ ವಾಹನವನ್ನು ಉಡ್ಡಯಿಸಿ,ಅಲ್ಲಿ ಯಶಸ್ವಿಯಾಗಿ ಇಳಿಯಬೇಕು.ಚಂದ್ರನ ನೆಲದ ಮೇಲೆ ಐನೂರು ಅಥವ ಹೆಚ್ಚು ದೂರ ಸಾಗಿ,ನಿಗದಿತ ದತ್ತಾಂಶ,ವಿಡಿಯೋ ಚಿತ್ರೀಕರಣ ಮತ್ತು ಪರೀಕ್ಷಾ ಕಾರ್ಯಗಳನ್ನು ಕೈಗೊಳ್ಳಬೇಕು.ದ್ವಿತೀಯ ಬಹುಮಾನ ಗೆಲ್ಲಲು ಬಾಹ್ಯಾಕಾಶ ವಾಹನ ಚಂದ್ರನಲ್ಲಿಳಿದು,ಕೆಲವು ಚಿತ್ರಗಳನ್ನು ತೆಗೆಯಬೇಕು.ವಾಹನದಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೋ ಕ್ಯಾಮರಾವನ್ನು ಅಳವಡಿಸಿರಬೇಕೆಂಬ ನಿಯಮವೂ ಇದೆ.ಒಂದು ವೇಳೆ 2012ರ ವರೆಗೂ ಬಹುಮಾನ ವಿಜೇತರು ಹೊರಹೊಮ್ಮದಿದ್ದರೆ,ಮತ್ತೆರಡು ವರ್ಷ ಕಾಲ ಸ್ಪರ್ಧೆಯ ಅವಧಿಯನ್ನು ವಿಸ್ತರಿಸಲಾಗುತ್ತದೆ.

*ಅಶೋಕ್‍ಕುಮಾರ್ ಎ