ವಿಶ್ವದ ಮೊದಲ ವೈಮಾನಿಕ ಅಂಚೆ ಸೇವೆ



ಭಾರತೀಯ ಅಂಚೆ ಇಲಾಖೆಯು ನೂರಾರು ವರ್ಷಗಳಿಂದ ಅವಿರತವಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಹಿಂದಿನ ಕಾಲದಲ್ಲಿ ಅಂಚೆ ಪೇದೆ (ಪೋಸ್ಟ್ ಮೆನ್) ಕೇವಲ ಕಾಗದ ಹಂಚುವ ಕೆಲಸ ಮಾತ್ರ ಮಾಡುತ್ತಿರಲಿಲ್ಲ. ಗ್ರಾಮಗಳಿಗೆ ಅವನೋರ್ವ ಸಂಪರ್ಕ ಸಾಧನವಿದ್ದಂತೆಯೇ ಆಗಿಹೋಗಿದ್ದ. ಒಂದು ಊರಿನ ಸುದ್ದಿಯನ್ನು ಮತ್ತೊಂದು ಊರಿಗೂ, ಬಂದ ಪತ್ರಗಳನ್ನು ವಿಳಾಸದಾರರ ಅನುಮತಿಯ ಮೇರೆಗೆ ಅವರಿಗೆ ಓದಿ ಹೇಳುವುದಕ್ಕೂ, ಆ ಪತ್ರಕ್ಕೆ ಉತ್ತರ ಬರೆಯುವುದಕ್ಕೂ, ದೂರದ ಊರಿನಿಂದ ಕಳುಹಿಸಿದ ಹಣವನ್ನು ಬಟವಾಡೆ ಮಾಡುವುದಕ್ಕೂ, ಎಲ್ಲದಕ್ಕೂ ಹೊಂದಾಣಿಕೆ ಮಾಡಿಕೊಂಡು ಬರುತ್ತಿದ್ದ ಓರ್ವ ಆಪದ್ಭಾಂಧವನಾಗಿದ್ದ. ಆಗ ಅವನು ಎಲ್ಲರಿಗೂ ‘ಅಂಚೆಯಣ್ಣ' ನೇ ಆಗಿ ಹೋಗಿದ್ದ.
ದೂರದ ಊರಿನಲ್ಲಿರುವ ತನ್ನ ಮಗನ ಪತ್ರ ಬರುತ್ತದೆ ಅಂಚೆಯಣ್ಣನನ್ನು ಎಂದು ಕಾದು ಕುಳಿತ ಅಮ್ಮನೂ, ಸರಕಾರದಿಂದ ಪಿಂಚಣಿ ಬರುತ್ತದೆ ಎಂದು ಕಾಯುವ ಹಿರಿಯ ವ್ಯಕ್ತಿಯೂ ಇರುತ್ತಿದ್ದರು. ಆದರೆ ಕಾಲ ಬದಲಾದಂತೆ ದೂರವಾಣಿ ಸೌಲಭ್ಯಗಳು ನಿಧಾನವಾಗಿ ಹೆಚ್ಚುತ್ತಾ ಹೋದಂತೆ ವೈಯಕ್ತಿಕ ಪತ್ರಗಳನ್ನು ಬರೆಯುವವರ ಸಂಖ್ಯೆ ಕಮ್ಮಿಯಾಯಿತು. ೨೧ನೇ ಶತಮಾನದ ಆದಿಯಲ್ಲಂತೂ ಮೊಬೈಲ್ ಎಂಬ ವಸ್ತು ಅಂಚೆಯನ್ನು ಮೂಲೆಗುಂಪಾಗಿಸಿ ಬಿಟ್ಟಿತು. ಆದರೆ ಇಂದೂ ಬಹುತೇಕ ಸೇವೆಗಳಿಗೆ ಅಂಚೆ ಇಲಾಖೆಯೇ ಅನಿವಾರ್ಯ. ಖಾಸಗಿಯಾಗಿ ಕೊರಿಯರ್ ಸೇವೆಗಳಿದ್ದರೂ ಅಂಚೆ ಇಲಾಖೆಯ ನೋಂದಾಯಿತ (ರಿಜಿಸ್ಟರ್ಡ್) ಪತ್ರಗಳ ಅನಿವಾರ್ಯತೆ ಈಗಲೂ ಸಾಕಷ್ಟಿದೆ. ಜನರಿಗೆ ಅಂಚೆ ಇಲಾಖೆ ಈಗಲೂ ವಿಶ್ವಾಸಾರ್ಹ ಇಲಾಖೆಯಾಗಿಯೇ ಉಳಿದಿದೆ. ತಾವು ಬರೆದ ಒಂದು ಪುಟ್ಟ ಅಂಚೆ ಕಾರ್ಡ್ ಸಾವಿರಾರು ಮೈಲು ದೂರದಲ್ಲಿರುವ ತಮ್ಮ ಆತ್ಮೀಯರಿಗೆ ತಪ್ಪದೇ ತಲುಪುತ್ತದೆ ಎಂದು ವಿಶ್ವಾಸವನ್ನು ಈಗಲೂ ಅಂಚೆ ಇಲಾಖೆ ಉಳಿಸಿಕೊಂಡಿದೆ ಎಂದರೆ ಇದು ಬಹುದೊಡ್ಡ ಸಾಧನೆಯೇ ಸರಿ. ಅಲ್ಲೊಂದು ಇಲ್ಲೊಂದು ಅಪವಾದ ಇದ್ದರೂ ಸರಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲದ ಇಲಾಖೆಯೆಂದರೆ ಅಂಚೆ ಇಲಾಖೆಯೇ ಸರಿ.
ಆಧಾರ್ ಕಾರ್ಡ್, ಉಳಿತಾಯ ಖಾತೆ, ಅಂಚೆ ವಿಮೆ, ಸ್ಪೀಡ್ ಪೋಸ್ಟ್ ಎಂಬ ತ್ವರಿತ ಸೇವೆ, ಅಂಚೆ ಬ್ಯಾಂಕ್, ಎಟಿಎಂ ಕಾರ್ಡ್ ಸೇವೆ, ಮೈ ಸ್ಟ್ಯಾಂಪ್ ಸೇವೆ ಹೀಗೆ ಹತ್ತು ಹಲವಾರು ಸೇವೆಗಳು ಅಂಚೆ ಇಲಾಖೆಯಲ್ಲಿವೆ. ಹೊಸ ಅಂಚೆ ಚೀಟಿಗಳಿಗಾಗಿ 'ಫಿಲಾಟೆಲಿ' ವಿಭಾಗವೂ ಇದೆ. ಇದರ ಸದಸ್ಯರಾಗಿ ಹೊಸ ಹೊಸ ಅಂಚೆ ಚೀಟಿಗಳು ಬಿಡುಗಡೆಯಾದಾಗ ಅವುಗಳನ್ನು ನೀವು ಮನೆಯಲ್ಲಿ ಕುಳಿತುಕೊಂಡೇ ಪಡೆದುಕೊಳ್ಳಬಹುದು. ಮಕ್ಕಳಲ್ಲಿ ಅಂಚೆ ಚೀಟಿಯ ಹವ್ಯಾಸವನ್ನೂ ಬೆಳೆಸಬಹುದು.
ಭಾರತೀಯ ಅಂಚೆ ಇಲಾಖೆಯ ಮತ್ತೊಂದು ಹೆಗ್ಗಳಿಕೆಯೆಂದರೆ ವಿಶ್ವದ ಮೊದಲ ವೈಮಾನಿಕ (ವಿಮಾನದ ಮೂಲಕ) ಅಂಚೆ ಸೇವೆಯನ್ನು ಆರಂಭಿಸಿದ್ದು. ನಿಮಗೆ ಗೊತ್ತೇ ಇರಬಹುದು ೧೯೦೩ರ ಡಿಸೆಂಬರ್ ೧೭ರಂದು ರೈಟ್ ಸಹೋದರರು ಮೊತ್ತ ಮೊದಲ ಬಾರಿಗೆ ಸಫಲ ವಿಮಾನ ಹಾರಾಟ ನಡೆಸಿದ್ದರು. ಆದರೆ ಅವರು ಆಗ ಯಾವ ಪತ್ರ ಅಥವಾ ವಸ್ತುವನ್ನು ವಿಮಾನದ ಮೂಲಕ ತೆಗೆದುಕೊಂಡು ಹೋಗಿರಲಿಲ್ಲ. ವಿಮಾನದಲ್ಲಿ ಪತ್ರವನ್ನು ಸಾಗಾಟ ಮಾಡುವ ಕಲ್ಪನೆ ಮೂಡಿದ್ದೇ ಒಂದು ಅಚ್ಚರಿದಾಯಕ ಸನ್ನಿವೇಶದಲ್ಲಿ.
ಮೊದಲೆಲ್ಲಾ ವಿದೇಶಗಳಿಗೆ ಕಾಗದ ಪತ್ರ ಕಳಿಸುವುದೆಂದರೆ ಬಹು ಸಮಯ ತಗಲುತ್ತಿತ್ತು. ಆಗೆಲ್ಲಾ ಹಡಗಿನ ಮೂಲಕ ಕಾಗದ ಪತ್ರಗಳ ಬಟವಾಡೆ ನಡೆಯುತ್ತಿತ್ತು. ೧೯೧೧ ಫೆಬ್ರವರಿ ೧೮ರಂದು ಅಲಹಾಬಾದ್ ನಲ್ಲಿ ನಡೆದ ಕುಂಭಮೇಳದ ಸಮಯದಲ್ಲಿ ಫ್ರೆಂಚ್ ವಿಮಾನ ಚಾಲಕ ಹೆನ್ರಿ ಪಿಕೆಟ್ ಎಂಬಾತ ಸುಮಾರು ಆರು ಸಾವಿರಕ್ಕೂ ಅಧಿಕ ಪತ್ರಗಳನ್ನು ತನ್ನ ‘ಹಂಬರ್ ಸೊಮ್ಮರ್' ಬೈಪ್ಲೇನ್ ನಲ್ಲಿ ಅಲಹಾಬಾದ್ ನ ಪೋಲೋ ಮೈದಾನದಿಂದ ಐದು ಮೈಲು ದೂರದಲ್ಲಿರುವ ನೈನಿ ಎಂಬ ಪ್ರದೇಶಕ್ಕೆ ಹಾರಿ ತಲುಪಿದ್ದು ಮೊದಲ ಅಂಚೆ ವೈಮಾನಿಕ ಸೇವೆ ಎಂದು ದಾಖಲಾಗಿದೆ. ಈ ಹಾರಾಟವು ಅಂಚೆ ಸೇವೆಗಳಲ್ಲಿ ನೂತನ ಆವಿಷ್ಕಾರಗಳಿಗೆ ದಾರಿ ಮಾಡಿಕೊಟ್ಟಿತು. ಅಲ್ಲಿಯ ತನಕ ಯಾರೂ ವಿಮಾನದಲ್ಲಿ ಅಂಚೆ ಪತ್ರಗಳನ್ನು ಸಾಗಿಸುವ ಬಗ್ಗೆ ಯೋಚನೆ ಮಾಡಿರಲಿಲ್ಲ. ಈ ಹಾರಾಟ ನಡೆದದ್ದು ಕೇವಲ ೧೩ ನಿಮಿಷ ಮಾತ್ರ.
ಈ ಹಾರಾಟ ಯಾವ ಕಾರಣಕ್ಕಾಗಿ ನಡೆಸಲಾಯಿತು ಎಂಬುದು ಇಲ್ಲಿ ಪ್ರಮುಖವಾದ ವಿಷಯ. ಅಲಹಾಬಾದ್ ನ ಹೋಲಿ ಟ್ರಿನಿಟಿ ಚರ್ಚ್ ನ ಮುಖ್ಯಸ್ಥರೂ, ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ಹಾಸ್ಟೆಲ್ ಗಳ ಮಾರ್ಡನ್ ರೂ ಆಗಿದ್ದ ರೆವರೆಂಡ್ ಡಬ್ಲ್ಯೂ.ಇ.ಎಸ್. ಹಾಲೆಂಡ್ ಎಂಬ ವ್ಯಕ್ತಿ ತಮ್ಮ ವಿದ್ಯಾರ್ಥಿಗಳಿಗಾಗಿ ಒಂದು ವಸತಿ ನಿಲಯವನ್ನು ಕಟ್ಟುವ ಮಹದಾಸೆಯನ್ನು ಹೊಂದಿದ್ದರು. ಈ ಕಾರಣಕ್ಕೆ ಅವರಿಗೆ ಹಣದ ಅಗತ್ಯವಿತ್ತು. ಹಣ ಸಹಾಯಕ್ಕಾಗಿ ಅವರು ಅನೇಕ ವ್ಯಕ್ತಿಗಳನ್ನು ಹಾಗೂ ಸಂಸ್ಥೆಗಳನ್ನು ಸಂಪರ್ಕಿಸಿದರು. ಅದೇ ಸಮಯದಲ್ಲಿ ಅಲಹಾಬಾದ್ ನಲ್ಲಿ ಕೈಗಾರಿಕಾ ಮೇಳವೊಂದು ನಡೆಯುತ್ತಿತ್ತು. ಬ್ರಿಟೀಷ್ ಕಮಾಂಡರ್ ವಾಲ್ಟರ್ ಜಿ. ವಿಂಡ್ ಹ್ಯಾಮ್ ಅವರ ಮೇಲ್ವಿಚಾರಕರಾಗಿದ್ದರು. ಹಾಲೆಂಡ್ ಅವರ ಧನ ಸಹಾಯ ಕ್ರೋಢೀಕರಣದ ಪ್ರಸ್ತಾಪ ಇವರ ಕಿವಿಗೂ ಬಿತ್ತು. ಈ ವಿಚಾರದಲ್ಲಿ ಅವರು ಹಾಲೆಂಡ್ ಅವರನ್ನು ಸಂಪರ್ಕಿಸಿ ತಾವು ಅವರ ಈ ಉತ್ತಮ ಕೆಲಸದಲ್ಲಿ ಸಹಕಾರ ನೀಡಬಯಸುತ್ತೇನೆ, ಹಣ ಸಂಗ್ರಹಕ್ಕೆ ಯಾವುದಾದರೂ ಯೋಜನೆಗಳು ತಮ್ಮಲ್ಲಿ ಇವೆಯೇ? ಎಂದು ಕೇಳಿದರು.
ಆಗ ಹಾಲೆಂಡ್ ಅವರು ತಮ್ಮ ಒಂದು ಯೋಜನೆಯನ್ನು ವಿಂಡ್ ಹ್ಯಾಮ್ ಅವರಿಗೆ ತಿಳಿಸಿದರು. ವಿಮಾನದಲ್ಲಿ ಜನಸಾಮಾನ್ಯರಿಗೆ ಅಗತ್ಯವಾದ ಪುಟ್ಟ ಪುಟ್ಟ ವಸ್ತುಗಳನ್ನು ಸಾಗಿಸಿದರೆ, ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದೇ ಅಲ್ಲದೇ, ಸಾಗಿಸುವ ವಸ್ತುಗಳಿಗೂ ನಾವು ಶುಲ್ಕವನ್ನು ಪಡೆದುಕೊಳ್ಳಬಹುದು ಎಂದರು. ಪುಟ್ಟ ಪುಟ್ಟ ವಸ್ತುಗಳನ್ನು ಸಾಗಿಸುವುದಕ್ಕೆ ಬದಲು ಹಗುರವಾದ ಅಂಚೆ ಪತ್ರಗಳನ್ನು ಸಾಗಿಸುವುದೇ ಉತ್ತಮ ಎಂಬ ವಿಚಾರವನ್ನು ತೀರ್ಮಾನಿಸಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ವಿಮಾನದಲ್ಲಿ ಸಾಗಿಸಲು ಅಂಚೆ ಕಾರ್ಡ್ ಗಳನ್ನೇ ಬಳಸಬೇಕು. ಒಂದು ವೇಳೆ ಕವರ್ ಬಳಸುವುದಾದರೆ ಅದರ ತೂಕ ಇಂತಿಷ್ಟೇ ಇರಬೇಕೆಂಬ ಮಿತಿಯನ್ನು ಹೇರಲಾಯಿತು.
ಈ ವೈಮಾನಿಕ ಸೇವೆಗೆ ಆರು ಆಣೆಯ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಈ ರೀತಿಯಾಗಿ ಸಂಗ್ರಹವಾಗುವ ಹಣ ಹಾಲೆಂಡ್ ಅವರ ವಸತಿ ನಿಲಯ ನಿರ್ಮಾಣದ ಉದ್ದೇಶಕ್ಕೆ ಬಳಕೆಯಾಗುವುದಿತ್ತು. ಈ ವಿಚಾರಕ್ಕೆ ಬಹುವಾದ ಪ್ರಚಾರ ದೊರೆಯಿತು. ಆ ಸಮಯದ ಖ್ಯಾತ ವಕೀಲರಾದ ಮೋತೀಲಾಲ್ ನೆಹರೂ ಅವರು ತಮ್ಮ ಮಗನಾದ ಜವಾಹರಲಾಲ್ ನೆಹರೂಗೆ ಬರೆದ ಪತ್ರ, ಅಂದಿನ ಬ್ರಿಟೀಷ್ ರಾಜರಾಗಿದ್ದ ಐದನೇ ಜಾರ್ಜ್ ಇವರಿಗೆ ಬರೆದ ಪತ್ರಗಳು ಎಲ್ಲವೂ ಈ ವಿಮಾನದಲ್ಲಿ ಹಾರಾಟ ನಡೆಸಿದವು. ಈ ಹಾರಾಟದಿಂದ ಇತಿಹಾಸ ಸೃಷ್ಟಿಯಾಯಿತು, ವಿಶ್ವದಾದ್ಯಂತ ದೊಡ್ದ ಸುದ್ದಿಯಾಯಿತು. ಅಂಚೆ ಪತ್ರಗಳ ಸಾಗಾಟಕ್ಕೆ ಹೊಸದಾದ ದಾರಿ ತೆರೆದುಕೊಂಡಿತು.
ಪೂರಕ ಮಾಹಿತಿ: ವಿಮಾನದಲ್ಲಿ ಅಂಚೆ ಸೇವೆ ಪ್ರಾರಂಭವಾದದ್ದು ೧೯೧೧ರಲ್ಲೇ ಆದರೂ ಆಕಾಶ ಮಾರ್ಗದಲ್ಲಿ ಅಂಚೆ ಪತ್ರಗಳು ಮೊದಲ ಬಾರಿ ರವಾನೆಯಾದದ್ದು ೧೮೫೯ರ ಆಗಸ್ಟ್ ತಿಂಗಳಲ್ಲಿ. ‘ಜ್ಯೂಪಿಟರ್' ಎಂಬ ಹೆಸರಿನ ಬಿಸಿಗಾಳಿಯ ಬಲೂನ್ ಮುಖಾಂತರ ಅಮೇರಿಕಾದ ಜಾನ್ ವೈಸ್ ಎಂಬಾತ ೧೨೩ ಪತ್ರಗಳು ಹಾಗೂ ೨೩ ಸುತ್ತೋಲೆಗಳನ್ನು ಸಾಗಾಟ ಮಾಡಿದ್ದ.
ಚಿತ್ರ ೧: ಮೊದಲು ಅಂಚೆ ಪತ್ರಗಳನ್ನು ಸಾಗಿಸಿದ ಹಂಬರ್ ಸೊಮ್ಮರ್ ವಿಮಾನ
ಚಿತ್ರ ೨: ಅಲಹಾಬಾದ್ ವೈಮಾನಿಕ ಅಂಚೆಯ ಮುದ್ರೆ
ಚಿತ್ರ ೩: ವೈಮಾನಿಕ ಅಂಚೆಯಲ್ಲಿ ಸಾಗಿಸಲ್ಪಟ್ಟ ಒಂದು ಪತ್ರ
ಚಿತ್ರ ಕೃಪೆ: ಪ್ರದೀಪ್ ಜೈನ್ ಹಾಗೂ ಅಂತರ್ಜಾಲ ಚಿತ್ರಗಳು