ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು

ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಎ.ಓ. ಆವಲ ಮೂರ್ತಿ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಕ್ರೆಸೆಂಟ್ ರಸ್ತೆ, ಬೆಂಗಳೂರು.
ಪುಸ್ತಕದ ಬೆಲೆ
ರೂ. ೨೯೫.೦೦, ಮುದ್ರಣ: ೨೦೨೪

'ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು’ ಕೃತಿಯು ಡಾ. ಎ.ಓ. ಆವಲ ಮೂರ್ತಿ ಅವರ ಭೌತವಿಜ್ಞಾನ ಚರಿತ್ರೆಯ ಒಂದು ಇಣುಕುನೋಟವಾಗಿದೆ. ಭೌತವಿಜ್ಞಾನದ ೧೪೫ ಶ್ರೇಷ್ಠ ವಿಜ್ಞಾನಿಗಳ ಸಿದ್ದಿ ಸಾಧನೆಗಳನ್ನು ಪರಿಚಯಿಸಿರುವ ಕೃತಿಯಿದು. ವಿಜ್ಞಾನ ಕ್ಷೇತ್ರದ ಆವಿಷ್ಕಾರಗಳು ಸರಪಳಿಯಿದ್ದಂತೆ. ಜಗತ್ಪಸಿದ್ಧ ಸಾಧನೆಗಳು ಒಬ್ಬನೇ ವಿಜ್ಞಾನಿಯದೆಂದು ಕಿರೀಟ ತೊಡಿಸುವಂತಿಲ್ಲ. ಆ ಸಂಶೋಧನೆಗೆ ಹಿಂದಿನ ವಿಜ್ಞಾನಿಗಳು ತಳಪಾಯ ಹಾಕಿರುತ್ತಾರೆ. ಅವರೆಲ್ಲ ಶೇಖರಿಸಿದ್ದ ಮಾಹಿತಿಯನ್ನು ಜರಡಿ ಹಿಡಿದು ಸಿದ್ಧಾಂತಗಳಲ್ಲಿನ ಅಸಮರ್ಪಕವನ್ನಳಿಸಿ ಸಮರ್ಪಕ ವನ್ನುಳಿಸಿ ತನ್ನದನ್ನೂ ಕಸಿ ಮಾಡಿ ಜಗತ್ತು ಬೆರಗಾಗುವಂಥ ವಿಶ್ವದ ರಹಸ್ಯಗಳನ್ನು ಮುಂದಿನವರು ಹೊರಗೆಡಹುತ್ತಾರೆ. ವಿಶ್ವವು ಭೂಕೇಂದ್ರಿತವೆಂಬ ಕಲ್ಪನೆಯನ್ನೊಡೆದು ಸೂರ್ಯಕೇಂದ್ರಿತವೆಂದು ಸಾಧಿಸಿದ ಕೀರ್ತಿಗೆ ಹಲವು ವಿಜ್ಞಾನಿಗಳ ಶ್ರಮವಿದೆ. ಒಬ್ಬರ ಹೆಗಲಮೇಲೆ ಇನ್ನೊಬ್ಬರು ಏರಿ ಕುಳಿತು ಆಯಾ ಶಾಖೆಯನ್ನು ಹೇಗೆ ಎತ್ತರೆತ್ತರಕ್ಕೆ ಒಯ್ದಿದ್ದಾರೆ ಎಂಬುದನ್ನು ನಿರೂಪಿಸಲಾಗಿದೆ. ಹೀಗೆ ಊಹಿಸಿದವರು. ಮಾಹಿತಿ ಕಲೆ ಹಾಕಿದವರು. ಅನುಸರಿಸಿ ಮುನ್ನಡೆದವರು ಎಲ್ಲರೂ ಯಶಸ್ಸಿನಲ್ಲಿ ಪಾಲುದಾರರೇ. ಅಂಥ ಸ್ಮರಣೀಯ ವಿಜ್ಞಾನಿಗಳ ಪರಿಚಯವನ್ನು, ಅವರ ಸಾಧನೆಗಳನ್ನು, ಆ ಮೂಲಕ ಭೌತವಿಜ್ಞಾನದ ಬೆಳವಣಿಗೆಯ ಹಾದಿಯನ್ನು ಇಲ್ಲಿ ದಾಖಲಿಸಿದ್ದಾರೆ ಡಾ. ಎ. ಓ. ಆವಲ ಮೂರ್ತಿ.

ಮೂರ್ತಿಯವರು ತಮ್ಮ ಕೃತಿಗೆ ಬರೆದ ಮುನ್ನುಡಿಯ ಆಯ್ದ ಭಾಗಗಳು… “ವಿಜ್ಞಾನಿಗಳನ್ನು ಅರ್ಥಮಾಡಿಕೊಳ್ಳುವುದೆಂದರೆ ಅವರ ವಿಜ್ಞಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೇ ಆಗಿದೆ. ಅವರು ತಮ್ಮ ವಿಜ್ಞಾನವನ್ನು ರೂಪಿಸುವುದಕ್ಕೆ ಮಾಡಿದ ಪ್ರಯತ್ನಗಳು, ಅನುಸರಿಸಿದ ಚಿಂತನ ಕ್ರಮ, ಕೇಳಿಕೊಂಡ ಪ್ರಶ್ನೆಗಳು, ಜತನದಿಂದ ಅವುಗಳಿಗೆ ಉತ್ತರ ಕಂಡುಹಿಡಿಯಲು ಹಿಡಿದ ಮಾರ್ಗಗಳು ಇವೆಲ್ಲ ಅವರ ನಿಜವಾದ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ. ಅಂತೆಯೇ ಅವರ ಸಾಧನೆಯ ಹಾದಿಗೆ, ಆ ಮೂಲಕ ವಿಜ್ಞಾನದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಳಿಗೆ, ಇಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. 'ಗಡಸು' ವಿಜ್ಞಾನವನ್ನು ಆದಷ್ಟು ಮೆದುಗೊಳಿಸಿ, ಅರ್ಥಮಾಡಿಕೊಳ್ಳಲು ಸುಲಭವಾಗುವ ರೀತಿಯಲ್ಲಿ ಅವುಗಳ ಸಾರಾಂಶವನ್ನು ನೀಡಲಾಗಿದೆ.

ಇಲ್ಲಿ ಭೌತವಿಜ್ಞಾನದ ವಿವಿಧ ಶಾಖೆಗಳ ಬೆಳವಣಿಗೆಯ ಹೆಜ್ಜೆಗಳನ್ನು ಗುರುತಿಸುವ ವಿಧಾನವನ್ನು ಅನುಸರಿಸಲಾಗಿದೆ. ಆಯಾ ಶಾಖೆಗಳ ಬೆಳವಣಿಗೆಯಲ್ಲಿ ಕೊಂಡಿಯಾದ ವಿಜ್ಞಾನಿಗಳು ಇಲ್ಲಿ ಸ್ಥಾನ ಪಡೆದಿದ್ದಾರೆ. ಒಬ್ಬರ ಹೆಗಲಮೇಲೆ ಇನ್ನೊಬ್ಬರು ಏರಿ ಕುಳಿತು ಆಯಾ ಶಾಖೆಯನ್ನು ಎತ್ತರೆತ್ತರಕ್ಕೆ ಕೊಂಡೊಯ್ದಿದ್ದಾರೆ. ಆಯಾಯಾ ಶಾಖೆಯ ಐತಿಹಾಸಿಕ ಬೆಳವಣಿಗೆಯ ಸಂಪೂರ್ಣ ಚಿತ್ರವನ್ನು ಆಯಾಯಾ ಶಾಖೆಯ ವಿಜ್ಞಾನಿಗಳ ಸಾಧನೆಗಳ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಇನ್ನಷ್ಟು ಮತ್ತಷ್ಟು ವಿಜ್ಞಾನಿಗಳು ಬಿಟ್ಟುಹೋಗಿರುವ ಸಾಧ್ಯತೆಯೂ ಉಂಟು. ಇಲ್ಲಿ ಇಸವಿಗಳ ಭಾರದಲ್ಲಿ ವಿಷಯದ ಮಹತ್ವ ಕಡಿಮೆಯಾಗದಿರಲೆಂದು ವಿಜ್ಞಾನಿಗಳ ಹುಟ್ಟು ಮತ್ತು ಸಾವಿನ ದಿನಾಂಕಗಳೊಂದಿಗೆ ಕೇವಲ ಅತಿ ಮುಖ್ಯವಾದ ದಿನಾಂಕಗಳನ್ನು ಮಾತ್ರ ನಮೂದಿಸಲಾಗಿದೆ.

ಹೆಸರಿನ ಕೆಳಗೆ ಕಂಸದಲ್ಲಿ ಅನುಕ್ರಮವಾಗಿ ವಿಜ್ಞಾನಿಯ ರಾಷ್ಟ್ರೀಯತೆ ಮತ್ತು ಕಾಲವನ್ನು ಸೂಚಿಸಲಾಗಿದೆ. ಇಲ್ಲಿ ಕಾಣಿಸಿಕೊಂಡಿರುವ ಎಲ್ಲ ವಿಜ್ಞಾನಿಗಳು ಮತ್ತು ಸ್ಥಳಗಳ ಕನ್ನಡ ರೂಪವನ್ನು ಜಾಲತಾಣದಲ್ಲಿ ಇರುವಂತೆ ಕೊಡಲಾಗಿದೆ. ಇದರಲ್ಲಿ ಒಟ್ಟು ೧೪೫ ವಿಜ್ಞಾನಿಗಳಿದ್ದಾರೆ. ಅದರಲ್ಲಿ ನೂರು ಮಂದಿ ನೊಬೆಲ್ ವಿಜೇತರಲ್ಲದವರು. ಉಳಿದ ೪೫ ಮಂದಿ ನೊಬೆಲ್ ವಿಜೇತರು. ಪ್ರತಿಯೊಬ್ಬ ವಿಜ್ಞಾನಿಯೂ, ಭೌತವಿಜ್ಞಾನದಲ್ಲಿ ಅವರ ಸ್ಥಾನಮಾನ, ಪ್ರಾಮುಖ್ಯತೆ, ಕೊಡುಗೆಯ ಮಹತ್ವ ಇತ್ಯಾದಿಗಳನ್ನು ಅವಲಂಬಿಸಿ, ಕನಿಷ್ಠ ಒಂದು ಪುಟದಿಂದ ಗರಿಷ್ಠ ಐದು ಪುಟಗಳವರೆಗೆ ವ್ಯಾಪಿಸಿಕೊಂಡಿದ್ದಾರೆ.” ಸುಮಾರು ೨೭೦ ಪುಟಗಳ ಈ ಕೃತಿಯನ್ನು ವಿಜ್ಞಾನದ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರೂ ಓದುವುದು ಉತ್ತಮ.