ವಿಶ್ವಪ್ರಭೆಯಾದ ಯೋಗ ದಿನ

ವಿಶ್ವಪ್ರಭೆಯಾದ ಯೋಗ ದಿನ

ಸಹಸ್ರಾರು ವರ್ಷಗಳ ಭಾರತೀಯ ಪರಂಪರೆಯ ಬಹುಮುಖ್ಯ ಕೊಡುಗೆಯಾದ ಯೋಗ ಇಂದು ಅಂತಾರಾಷ್ಟ್ರೀಯವಾಗಿ ೮ನೇ ವಸಂತವನ್ನು ಆಚರಿಸಿಕೊಳ್ಳುತ್ತಿದೆ. ಈ ವರ್ಷದ ಯೋಗ ದಿನ ಐತಿಹಾಸಿಕ ಎಂದು ಬಣ್ಣಿಸಲು ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಯೋಗ ದಿನಾಚರಣೆಗೆ ಸಾಕ್ಷಿಯಾಗುತ್ತಿರುವುದು. ಭಾರತದ ಒಂದು ಪಾರಂಪರಿಕ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಪದ್ಧತಿಗೆ ಜಾಗತಿಕವಾಗಿ ಇಂಥದ್ದೊಂದು ಬೃಹತ್ ವೇದಿಕೆ ಲಭಿಸಿರುವುದು ಅಭಿಮಾನ ಪಡುವಂಥ ಸಂಗತಿ.

೨೦೧೫ರ ಪೂರ್ವದಲ್ಲಿ ಯೋಗವು ಈ ಪರಿಯ ಜಾಗತಿಕ ಸೆಳೆತವಾಗಿರಲಿಲ್ಲ. ಅಲ್ಲೋ ಇಲ್ಲೋ ಯೋಗ ಕೇಂದ್ರಗಳು ತಮ್ಮ ಪಾಡಿಗೆ ತಾವು ತರಭೇತಿಗಳನ್ನು ನೀಡುತ್ತಾ ಅದೊಂದು ವ್ಯಾಯಾಮ ಕ್ರಿಯೆ ಎಂಬ ಸೀಮಿತ ಚೌಕಟ್ಟನ್ನು ಹೊದಿಸಿದ್ದವು. ಅಲ್ಪಸ್ವಲ್ಪ ಭಾರತೀಯರು, ಆಸಕ್ತ ವಿದೇಶಿಗರನ್ನಷ್ಟೇ ಯೋಗ ಪ್ರಭಾವಿಸಿತ್ತು. ಆದರೆ, ಪ್ರಸ್ತುತ ಯೋಗದ ಬಿಳಲುಗಳು ವಿಶಾಲ ಆಲದ ಮರದಂತೆ ಜಗತ್ತಿನಾದ್ಯಂತ ಹಬ್ಬಿವೆ. ಭಾರತದ ಪಾರಂಪರಿಕ ಆಸ್ತಿಗೆ ವಿಶ್ವವ್ಯಾಪಿ ಹೊಳಪು, ಮೌಲ್ಯ ದಕ್ಕಿದ್ದರ ಹಿಂದೆ ಪ್ರಧಾನಿ ಮೋದಿ ಅವರ ಶ್ರಮವೇ ಎದ್ದುಕಾಣುತ್ತದೆ. ೨೦೧೫ ಜೂ ೨೧ರಂದು ದಿಲ್ಲಿ ರಾಜಪಥ್ ನಲ್ಲಿ ಸಹಸ್ರಾರು ಜನರೊಂದಿಗೆ ಮೋದಿ ಯೋಗ ಆಚರಣೆಯಲ್ಲಿ ಪಾಲ್ಗೊಳ್ಳುವಾಗಲೂ ಈ ದಿನಾಚರಣೆಯ ಭವಿಷ್ಯ ಇಷ್ಟು ಉಜ್ವಲಗೊಳ್ಳುತ್ತದೆಂದು ಯಾರೂ ಊಹಿಸಿರಲಿಲ್ಲ. ಅಂದಿನ ಸಮಾರಂಭವನ್ನು ೮೪ ದೇಶಗಳ ಜನರು ಆನ್ ಲೈನ್ ಮೂಲಕ ವೀಕ್ಷಿಸಿದ್ದು ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ವಿಶೇಷ ಕೂಡ. ನಂತರದ ವರ್ಷಗಳಲ್ಲಿ ಯೋಗ ಕೇವಲ ದಿಲ್ಲಿ, ಭಾರತದ ಗಲ್ಲಿಗಳಿಗಷ್ಟೇ ಸೀಮಿತಗೊಳ್ಳಲಿಲ್ಲ. ಜಗತ್ತಿನಾದ್ಯಂತ ೧೫೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯೋಗ ದಿನ ಸಂಚಲನವನ್ನೇ ಸೃಷ್ಟಿಸಿತು. ವ್ಯಕ್ತಿ ಆರೋಗ್ಯವಾಗಿರಲು ನಿಯಮಿತ ಯೋಗವು ಅತ್ಯಂತ ಪ್ರಯೋಜನಕಾರಿ ಎಂಬ ಸತ್ಯ ವಿಶ್ವದಲ್ಲಿ ಬಲವಾಗಿ ಬೇರೂರಿತು.

೨೦೧೪ರ ಡಿಸೆಂಬರ್ ೧೧ರಂದು ಇದೇ ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಪ್ರತಿ ವರ್ಷ ಜೂನ್ ೨೧ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಬಗ್ಗೆ ನಿರ್ಣಯ ಕೈಗೊಂಡಿತು. ಕೇವಲ ಮೂರು ತಿಂಗಳಲ್ಲಿ ಅಂಗೀಕರಿಸಿದ ನಿರ್ಣಯವದು. ಸಾಮಾನ್ಯ ಸಭೆ ಇಷ್ಟು ಬೇಗ ಅಂಗೀಕರಿಸಿದ ಮೊದಲ ನಿರ್ಣಯ ಎಂಬ ಹೆಗ್ಗಳಿಕೆಗೂ ‘ಯೋಗ ದಿನ' ಪ್ರಾಪ್ತವಾಯಿತು. ಈ ಪ್ರಸ್ತಾಪಕ್ಕೆ ೧೯೫ರಲ್ಲಿ ೧೭೫ ರಾಷ್ಟ್ರಗಳು ಒಪ್ಪಿಕೊಂಡಿದ್ದು ಕೂಡ ಮಗದೊಂದು ವಿಸ್ಮಯ. ಈಗ ಅದೇ ವಿಶ್ವ ಸಂಸ್ಥೆ ಯೋಗದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

ಪ್ರಸ್ತುತ ಯೋಗ ದಿನ ಕೇವಲ ಒಂದು ದಿನದ ಆಚರಣೆಯಾಗದೆ, ಇಡೀ ವಿಶ್ವದ ದೈನಂದಿನ ಆಚರಣೆಯ ನಂಬಿಕೆಯಾಗಿದೆ. ಕೊರೊನೋತ್ತರ ಕಾಲಘಟ್ಟದಲ್ಲಿ ಯೋಗಕ್ಕೆ ಸಿಗುತ್ತಿರುವ ಮಾನ್ಯತೆಯೂ ಸಹಸ್ರಪಟ್ಟು ಹೆಚ್ಚಾಗಿದೆ. ಯೋಗದ ಜತೆಗೊಂದು ಮಾರುಕಟ್ಟೆಯೂ ಕಣ್ತೆರೆದಿದೆ. ವರ್ಷವಿಡೀ ವಿದೇಶಿ ನಂಬಿಕೆಯ ಹತ್ತಾರು ಡೇಗಳನ್ನು ಆಚರಿಸಿಕೊಳ್ಳುವ ಈ ಕಾಲಘಟ್ಟದಲ್ಲಿ ನಮ್ಮದೇ ‘ಯೋಗ ಡೇ’ ವಿಶ್ವದಲ್ಲಿ ಹಬ್ಬವಾಗಿದೆ. ಎಲ್ಲರೂ ಯೋಗ ದಿನವನ್ನು ಆಚರಿಸೋಣ. ಆರೋಗ್ಯ ಕಾಪಾಡಿಕೊಳ್ಳೋಣ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೧-೦೬-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ